
- ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮ
- ಶೀಘ್ರವೇ ಆಯೋಗಕ್ಕೆ ಸಮರ್ಥ ವಕೀಲರ ನೇಮಕಕ್ಕೆ ಕ್ರಮ
ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳಾ ಆಯೋಗದಿಂದ ಸ್ವೀಕಾರವಾಗುವ ದೂರುಗಳನ್ನು ಏಳರಿಂದ ಎಂಟು ಗಂಟೆಗಳೊಳಗೆ ನೋಂದಣಿ ಮಾಡಿಕೊಂಡು, ತಕ್ಷಣದಿಂದಲೇ ತನಿಖೆ ಪ್ರಾರಂಭಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶರಿಗೆ ಸೂಚಿಸಿರುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವದ ಅಂಗವಾಗಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಯೋಗಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ತರುತ್ತಿದೆ. ಮಹಿಳಾ ಆಯೋಗಕ್ಕೆ ಸಮರ್ಥ ವಕೀಲರ ನೇಮಕ ಮಾಡಲು ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹಿಳಾ ಆಯೋಗಕ್ಕೆ ಇನ್ನಷ್ಟು ಅಧಿಕಾರದ ಜೊತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲು ಸಿದ್ಧವಿದೆ ಎಂದರು. ನಿರ್ಭಯಾ ಯೋಜನೆಯಡಿ ಜಾರಿ ಮಾಡಿರುವ ಕಾನೂನಿನ ಬಗ್ಗೆ ಪುರುಷರಿಗೆ ಜಾಗೃತಿ ಮೂಡಿಸುವುದು ಅಗತ್ಯ. ಅನ್ಯಾಯ ಆಗುವ ಮೂಲದಿಂದಲೇ ಅರಿವು ಮೂಡಿಸಬೇಕು ಎಂದರು.
ನಿರ್ಭಯಾ ಯೋಜನೆ ಅಡಿ ಬೆಂಗಳೂರಿನಲ್ಲಿ 7,500 ಕೃತಕ ಬುದ್ಧಿಮತ್ತೆಯ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯಾರಿಗೆ ಇದು ಸುರಕ್ಷತೆ ಒದಗಿಸುತ್ತದೆ. ಮಹಿಳಾ ಪೊಲೀಸ್ ಒಳಗೊಂಡ ಪಿಂಕ್ ಹೊಯ್ಸಳ ವಾಹನಗಳು ಮಹಿಳೆಯರನ್ನು ರಕ್ಷಿಸಲು ಸಂಚರಿಸುತ್ತವೆ. ಶಾಲಾ ಕಾಲೇಜುಗಳ ಹಾಸ್ಟೆಲ್ ಗಳಲ್ಲಿ ಅಲ್ಪಾವಧಿ ಸ್ವಯಂ ರಕ್ಷಣಾ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? : ಮಹಿಳಾ ಪತ್ರಕರ್ತೆಗೆ ಹಣೆ ಬೊಟ್ಟು ಧರಿಸಬೇಕು ಎಂದ ಸಂಭಾಜಿ ಭಿಡೆ | ಮಹಿಳಾ ಆಯೋಗ ನೋಟಿಸ್
ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಶಾಸಕಿ ರೂಪಾಲಿ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಂಜುಳಾ ಹಾಗೂ ಮತ್ತಿತರರು ಹಾಜರಿದ್ದರು.