
- ಅಧಿಕಾರಿಗಳೊಂದಿಗಿನ ಸಭೆ ಬಳಿಕ ಪರಿಹಾರ ಮೊತ್ತ ಘೋಷಿಸಿದ ಸಿಎಂ
- ಗರಿಷ್ಟ ಎರಡು ಹೆಕ್ಟೇರ್ ನಿಗದಿಗೊಳಿಸಿ ಬೆಳೆ ಪರಿಹಾರ ನೀಡಲು ನಿರ್ಧಾರ
ನೆಟೆ ರೋಗದ ಕಾರಣದಿಂದ ತೊಗರಿ ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಪ್ರತಿ ಹೆಕ್ಟೇರಿಗೆ 10 ಸಾವಿರ ರೂ.ಗಳ ಪರಿಹಾರ ಮೊತ್ತ ನಿಗದಿ ಮಾಡಿದೆ.
ಇಂದು ಸಂಜೆ ಮುಖ್ಯಮಂತ್ರಿಗಳು ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ , ಬೆಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಮೊತ್ತ ಘೋಷಿಸಿದೆ.
ಪರಿಹಾರ ಮೊತ್ತವನ್ನು ಪ್ರತಿ ಹೆಕ್ಟೇರಿಗೆ 10,000 ರೂ. ಗಳಂತೆ ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಗರಿಷ್ಟ 2 ಹೆಕ್ಟೇರಿಗೆ ಸೀಮಿತಗೊಳಿಸಿ ಬಾಧಿತ ರೈತರಿಗೆ ನೀಡಲಾಗುತ್ತಿದೆ. ಒಟ್ಟಾರೆ ಇದಕ್ಕಾಗಿ ರೂ. 223 ಕೋಟಿಗಳ ಮೊತ್ತ ಅಂದಾಜಿಸಲಾಗಿದೆ.
ಇಂದು ಮುಂಜಾನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ಜಿಲ್ಲಾ ಪ್ರವಾಸದಲ್ಲಿದ್ದ ವೇಳೆ ಸಂಜೆಗೆ ಬೆಳೆಪರಿಹಾರ ಘೋಷಿಸಲಾಗುವುದು ಎಂದು ತಿಳಿಸಿದ್ದರು.

ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ತದನಂತರ ನವೆಂಬರ್ ತಿಂಗಳಿನಲ್ಲಿ ತಲೆದೋರಿದ ಒಣ/ ಶುಷ್ಕ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಸಂಕೀರ್ಣ ನೆಟೆ ರೋಗ ಮೇಲಿನ ಮೂರು ಜಿಲ್ಲೆಗಳಲ್ಲಿ ಉಲ್ಬಣಗೊಂಡಿತ್ತು.
ಈ ಪರಿಣಾಮ ಕಲಬುರಗಿಯಲ್ಲಿ ಸುಮಾರು 1.98 ಲಕ್ಷ ಹೆಕ್ಟೇರ್, ಬೀದರ್ ಜಿಲೆಯಲ್ಲಿ ಸುಮಾರು 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 0.1028 ಲಕ್ಷ ಹೆಕ್ಟೇರ್ ಒಟ್ಟಾರೆಯಾಗಿ 2.2278 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ತೊಗರಿ ಬೆಳೆ ಸಂಕೀರ್ಣ ನೆಟೆ ರೋಗಕ್ಕೆ ಹಾನಿಯಾಗಿರುವುದು ವರದಿಯಾಗಿತ್ತು.
ಸಮಸ್ಯೆ ಹಿನ್ನೆಲೆ;
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಭಾಗಗಳಲ್ಲಿ ಬಹುತೇಕ ತೊಗರಿ ನೆಟೆರೋಗಕ್ಕೆ ಹಾನಿಯಾಗಿವೆ. ಅಲ್ಲದೆ, ಅತಿವೃಷ್ಟಿಯಿಂದ ಬೆಳೆ ನಷ್ಟ, ನೆಟೆ ರೋಗ, ಉತ್ಪನ್ನಗಳ ದರ ಕುಸಿತ, ಸಾಲಭಾದೆ, ಸಾಲಗಾರರ ಕಿರುಕುಳ, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಮನನೊಂದು ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದರು.
ಈ ಸುದ್ದಿ ಓದಿದ್ದೀರಾ? :ಕಲಬುರಗಿ | ತೊಗರಿ ಬೆಳೆಗಾರರ ಸಾವಿಗಿಲ್ಲ ಕೊನೆ; ನೆಟೆರೋಗ, ಸಾಲಬಾಧೆಗೆ ಮತ್ತೊಂದು ಜೀವ ಬಲಿ
ಕಲಬುರಗಿ ಜಿಲ್ಲಾ ಅಪರಾಧ ದಾಖಲೆ ಬ್ಯೂರೋ (ಡಿಸಿಆರ್ಬಿ) ಪ್ರಕಾರ, 2022ರ ಜೂನ್ನಿಂದ 2023ರ ಜನವರಿ 15ರವರೆಗೆ ಬೆಳೆ ನಷ್ಟ ಕಾರಣದಿಂದಲೇ ಜಿಲ್ಲೆಯಲ್ಲಿ ಒಟ್ಟು 61 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ದಾಖಲಾಗಿವೆ.