ಕೋಲು ಕೊಡುವವರೂ ಇವರೇ, ಹೊಡೆಸಿಕೊಳ್ಳುವವರೂ ಇವರೇ: ಬಿಜೆಪಿ ಲೇವಡಿ ಮಾಡಿದ ಕಾಂಗ್ರೆಸ್

  • ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ: ಬಿಜೆಪಿ ಟೀಕಿಸಿದ ಕಾಂಗ್ರೆಸ್ 
  • ಸ್ಪಷ್ಟತೆ ಇಲ್ಲದಿರುವುದು ಬಿಜೆಪಿಗೇ ಹೊರತು ಕಾಂಗ್ರೆಸ್ ಗೆ ಅಲ್ಲ ಎಂದ ಕೈ ಪಡೆ

ಸಿದ್ದರಾಮೋತ್ಸವದ ಬಳಿಕ ರಾಜ್ಯ ಬಿಜೆಪಿ ಪಾಳಯ ನಿಜಕ್ಕೂ ಕಂಗೆಟ್ಟು ನಿಂತಂತೆ ಕಾಣಲಾರಂಭಿಸಿದೆ. ಪಕ್ಷದೊಳಗೆ ಹಲವು ಬದಲಾವಣೆ ವಿಚಾರಗಳ ಗುಸುಗುಸು ಆರಂಭವಾಗಿ, ಮುಂದೇನು? ಮುಂದೆ ಯಾರು? ಎನ್ನುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಇದೇ ವಿಚಾರವನ್ನೀಗ ವಿಪಕ್ಷ ಕಾಂಗ್ರೆಸ್ ಯಶಸ್ವಿಯಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡಿದೆ.

ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಎನ್ನುವ ಹೇಳಿಕೆ ನೀಡಿ ಪಕ್ಷದೊಳಗೆ ಬದಲಾವಣೆ ನಿಶ್ಚಿತ ಎನ್ನುವ ಮಾತನ್ನು ಹೇಳಿದ್ದಾರೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂಬ ವಿಚಾರ ಬಿಜೆಪಿ ಪಾಳಯದಲ್ಲಿ ಮುನ್ನೆಲೆಗೆ ಬಂದಿತ್ತು. ಆದರೆ ಅದಕ್ಕೂ ಮೊದಲೇ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಅವರ ಪಕ್ಷದ ಪ್ರಮುಖರಿಂದಲೇ ಬಂದಿರುವುದು ಕಾಂಗ್ರೆಸ್ ಪಾಲಿನ ಟೀಕಾಸ್ತ್ರವಾಗಿ ಬದಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯ ಬಿಜೆಪಿ ಗೊಂದಲಗಳಿಗೆ ಕಾಂಗ್ರೆಸ್ ಹೊಣೆಯೇ? ಸಿಎಂ ಬದಲಾವಣೆ ವಿಚಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆಯ ಗೊಂದಲ. ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ನಳಿನ್‌ ಕುಮಾರ್‌ ಕಟೀಲ್‌ ಈ ವಿಚಾರ ಯಾರು ಹೇಳಿದ್ದು ಎನ್ನುತ್ತಾರೆ. ಸ್ಪಷ್ಟತೆ ಇಲ್ಲದೆ ಕಾಂಗ್ರೆಸ್ ಕೈಗೆ ಕೋಲು ಕೊಡುವವರೂ ಇವರೇ, ಹೊಡೆಸಿಕೊಂಡ ನಂತರ ಗೋಳಾಡುವವರೂ ಇವರೇ!" ಎಂದು ಲೇವಡಿ ಮಾಡಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್