ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಚಿಂತನೆ : ಸಿಎಂ ಬೊಮ್ಮಾಯಿ 

CM BOMMAI BJP MEETING
  • ರಾಜ್ಯಮಟ್ಟದ ಸಂಘಟನೆ ಬಲಪಡಿಸಿ, ಚುನಾವಣಾ ಸಮರಕ್ಕೆ ಸಿದ್ಧರಾಗಿ
  • ಅನಿವಾರ್ಯವಾದರೂ ಕೆಲ ದಿಟ್ಟ ನಿರ್ಧಾರಗಳನ್ನು ಪಕ್ಷ ತೆಗೆದುಕೊಂಡಿದೆ

ಎಲ್ಲರಿಗೂ ಸಮಾನ ಅವಕಾಶಗಳನ್ನು ತರುವ ಉದ್ದೇಶದಿಂದ ರಾಜ್ಯದಲ್ಲಿಯೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ರಾಜ್ಯ ಬಿಜೆಪಿ ವತಿಯಿಂದ ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ರಾಜ್ಯ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯನ್ನು ಗಟ್ಟಿಗೊಳಿಸಿ ಚುನಾವಣಾ ಸಮರಕ್ಕೆ ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಆದರ್ಶ, ಸಾಮಾಜಿಕ ಗುರಿಗಳನ್ನಿಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ಆ ಮೂಲಕ ಸಂಘಟನೆಯನ್ನು ಮೇಲ್ದರ್ಜೆಗೇರಿಸುತ್ತದೆ ಎಂದ ಮುಖ್ಯಮಂತ್ರಿಗಳು, ಜನಸೇವೆಯ ಮುಖಾಂತರ ಪಕ್ಷ ಜನಮನ್ನಣೆ ಗಳಿಸಿದೆ ಎಂದರು. 

ದೇಶ ಮೊದಲು, ನಂತರ ಪಕ್ಷ ಎಂಬ ಧ್ಯೇಯ ನಮ್ಮದು. ಮೌಲ್ಯಾಧಾರಿತ ರಾಜಕಾರಣ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ವಿಷಯಾಧಾರಿತ ಹೋರಾಟಗಳಿಗೆ ನ್ಯಾಯ ಒದಗಿಸುವ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ಈ ಕಾರಣದಿಂದ ಕೆಲ ದಿಟ್ಟ ನಿರ್ಧಾರಗಳನ್ನು ನಮ್ಮ ಪಕ್ಷ ತೆಗೆದುಕೊಂಡಿದೆ ಎಂದು ಬೊಮ್ಮಾಯಿ ಹೇಳಿದರು. 

AV Eye Hospital ad

ಈ ಸುದ್ದಿ ಓದಿದ್ದೀರಾ? : ಏಕರೂಪ ನಾಗರಿಕ ಸಂಹಿತೆ ಜಾರಿ; ಮತ್ತೆ ಸುದ್ದಿ ಮಾಡಿದ ಅಮಿತ್ ಶಾ

ಭಾರತವನ್ನು ಬಲಿಷ್ಠವಾಗಿಸುವ ಶಕ್ತಿ ಬಿಜೆಪಿ ಪಕ್ಷಕ್ಕೆ ಮಾತ್ರ ಇದೆ. ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಬಿಜೆಪಿ ಮಾತ್ರ ಪ್ರಜಾಪ್ರಭುತ್ವ ಒಂದು ಮಂದಿರ ಎಂಬ ಭಾವನೆಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಡಾ ಬಿ ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಮಾನ ಅವಕಾಶ, ಪ್ರತಿಯೊಬ್ಬರು ಸ್ವಾಭಿಮಾನದ ಬದುಕು ನಡೆಸಬೇಕೆಂಬುದು ನಮ್ಮ ಪಕ್ಷದ ಗುರಿಯಾಗಿದೆ. ಆ ಹಿನ್ನೆಲೆಯಲ್ಲಿ ಏಕರೂಪ ಕಾನೂನನ್ನು ದೇಶ ಹಾಗೂ ರಾಜ್ಯದಲ್ಲಿ ಜಾರಿ ತರಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. 

ಈ ಸುದ್ದಿ ಓದಿದ್ದೀರಾ? : ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ?

"ಬಿಜೆಪಿ ಸರ್ಕಾರದ ಕೆಲಸದ ರಿಪೋರ್ಟ್ ಕಾರ್ಡ್ ಹಾಗೂ ಮುಂದಿನ ಗುರಿಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುವ ಸಕಾಲ ಬಂದಿದೆ. ಸಂಘಟನೆಯನ್ನು ಗಟ್ಟಿಗೊಳಿಸಿ, ಬೂತ್ ಮಟ್ಟ, ಮಂಡಲ, ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಘಟನೆ ಬಲಪಡಿಸಿ, ಚುನಾವಣಾ ಸಮರಕ್ಕೆ ಸಿದ್ಧರಾಗಬೇಕು" ಎಂದು ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app