ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ಬಿಜೆಪಿ ಸೇರಿದಂತೆ ರಾಜಕೀಯ ನಾಯಕರಿಂದ ಖಂಡನೆ

  • ಮೊಟ್ಟೆ ಎಸೆಯುವಂತಹ ನಡೆವಳಿಕೆಯನ್ನು ಸಹಿಸಲ್ಲ ಎಂದ ಮಾಜಿ ಸಿಎಂ ಬಿಎಸ್‌ವೈ
  • ಮೊಟ್ಟೆ ಎಸೆಯುವುದು ಮತ್ತೆ ಮರುಕಳಿಸಬಾರದು: ಎಚ್‌.ಡಿ.ಕುಮಾರಸ್ವಾಮಿ

ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ಮಡಿಕೇರಿಗೆ ಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿರುವುದಕ್ಕೆ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ನಾಯಕರು ಸೇರಿದಂತೆ ಹಲವು ರಾಜಕೀಯ ಮುಖಂಡರು ಘಟನೆಯನ್ನು ಖಂಡಿಸಿದ್ದಾರೆ.

ಘಟನೆಯ ಬಗ್ಗೆ ತಿರುಪತಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಹಿರಿಯ ಬಿಜೆಪಿ ಮುಖಂಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ಸರಿಯಲ್ಲ. ಇಂತಹ ನಡೆವಳಿಕೆಯನ್ನ ಸಹಿಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಸಿದ್ದರಾಮಯ್ಯ ಇರಬಹುದು, ಯಡಿಯೂರಪ್ಪವೇ ಇರಬಹುದು. ಇಂಥ ಘಟನೆ ನಡೆಯಬಾರದು. ಸಿದ್ದರಾಮಯ್ಯ ವಿಪಕ್ಷ ನಾಯಕರು. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಇಂತಹ ನಡವಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಕೂಡದು' ಎಂದು ಖಂಡಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ಟ್ವೀಟ್:

ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವರು, ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ  ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ,  ವಿಪಕ್ಷ ನಾಯಕರಿಗೆ ಭದ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದಿದ್ದಾರೆ.

ಮೊಟ್ಟೆ ಎಸೆಯುವುದು ಮತ್ತೆ ಮರುಕಳಿಸಬಾರದು: ಎಚ್‌.ಡಿ.ಕುಮಾರಸ್ವಾಮಿ

ಜನರ ಸಮಸ್ಯೆ ಆಲಿಸಲು ತೆರಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಇಂತಹ ಕೃತ್ಯ ಮರುಕಳಿಸಬಾರದು. ಮೊಟ್ಟೆ ಎಸೆದಿರುವುದಕ್ಕೆ ನಾನು ಖುಷಿ ಪಡುವುದಿಲ್ಲ ಎಂದು ಜೆಡಿಎಸ್‌ ಶಾಸಕಾಂಗದ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಚಿತ್ರದುರ್ಗದ ಹಿರಿಯೂರಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ಹಲವಾರು ಅನಾಹುತಗಳು ಸಂಭವಿಸಿದೆ. ಅದನ್ನು ವೀಕ್ಷಿಸಲು ಬಂದ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ತೋರಿದರೆ ಅದನ್ನು ಸರಿಪಡಿಸಲು ಸಾಧ್ಯವೇ? ನಿಮ್ಮ ಸರ್ಕಾರ ನಿಮಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ? ಯಾವುದೇ ಪ್ರಾಮಾಣಿಕ ಕೆಲಸಗಳಾಗಿಲ್ಲ. ನೀವು ಅದಕ್ಕಾಗಿ ಹೋರಾಟ ಮಾಡಬೇಕಿತ್ತು. ಆದರೆ ಈ ಥರ ವಿಷಯಕ್ಕೆ ಹೋರಾಟ ಮಾಡುವುದರಿಂದ ನಿಮ್ಮ ಬದುಕು ಏನಾಗುತ್ತದೆ ಎಂದು ಯೋಚಿಸಿ ಎಂದು ಮೊಟ್ಟೆ ಎಸೆದ ಪ್ರತಿಭಟನಾಕಾರರಲ್ಲಿ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಸಂಪ್ರದಾಯದವಲ್ಲ: ಸಚಿವ ಅಶೋಕ್ ಟ್ವೀಟ್

ಘಟನೆಯ ಬಗ್ಗೆ ಕಂದಾಯ ಸಚಿವ ಆರ್ ಅಶೋಕ ಟ್ವೀಟ್ ಮಾಡಿದ್ದು, ಮೊಟ್ಟೆ ಎಸೆಯುತ್ತಿರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಸಂಪ್ರದಾಯದವಲ್ಲ ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್