
- ಯಾರ ಯಾರ ಮನದಲ್ಲಿ ಏನೇನಿದೆಯೋ ಅದನ್ನೆಲ್ಲ ಮಾಡುತ್ತಿದ್ದಾರೆ
- ಗುಂಬಜ್ ಇರುವ ಕಾರಣಕ್ಕೆ ಬಸ್ ನಿಲ್ದಾಣಗಳ ಶೈಲಿ ಬದಲಾಯಿಸಲಾಗುತ್ತಾ?
"ಭಾನುವಾರ ಬಿಡುಗಡೆಯಾದ 'ಟಿಪ್ಪು ನಿಜ ಕನಸುಗಳು' ಪುಸ್ತಕದ ವಿರುದ್ಧ ಮೊಕದ್ದಮೆ ದಾಖಲಿಸುತ್ತೇನೆ" ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತನ್ವೀರ್ ಸೇಠ್, "ಭಾನುವಾರ ಬಿಡುಗಡೆಯಾದ 'ಟಿಪ್ಪು ನಿಜ ಕನಸುಗಳು' ಪುಸ್ತಕ ನನ್ನ ಕೈ ಸೇರಿದೆ. ನಾನದನ್ನು ಓದಿದ್ದೇನೆ. ಅಲ್ಲಿ ಇತಿಹಾಸ ತಿರುಚುವ ಕೆಲಸವಾಗಿದೆ. ಹೀಗಾಗಿ ವಕೀಲ ರಂಗನಾಥ್ ಅವರ ಮೂಲಕ ಇದರ ವಿರುದ್ಧ ಮೊಕದ್ದಮೆ ದಾಖಲಿಸುತ್ತೇನೆ" ಎಂದು ತಿಳಿಸಿದರು.
'ಟಿಪ್ಪು ಕನಸುಗಳು' ನಾಟಕದ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, "ನಾಟಕ ಪ್ರದರ್ಶನ ನ.20ರಿಂದ ಪ್ರಾರಂಭವಾಗಲಿದೆ. ಹೀಗಾಗಿ ಸೋಮವಾರ ಸಂಜೆಯೊಳಗೆ ಈ ಎರಡೂ ವಿಚಾರಗಳ ಬಗ್ಗೆ ಮೊಕದ್ದಮೆ ದಾಖಲಿಸುತ್ತೇವೆ. ಅದನ್ನು ಯಾವಾಗ ಮತ್ತು ಎಲ್ಲಿ ದಾಖಲಿಸಬೇಕು ಎನ್ನುವುದನ್ನು ವಕೀಲರು ನೋಡಿಕೊಳ್ಳುತ್ತಾರೆ" ಎಂದರು.
ಇದೇ ವೇಳೆ ಸಂಸದ ಪ್ರತಾಪ್ ಸಿಂಹ ನೀಡಿದ್ದ ಗುಂಬಜ್ ಮಾದರಿಯ ಬಸ್ ನಿಲ್ದಾಣ ಧ್ವಂಸ ಮಾಡುವೆ ಎನ್ನುವ ವಿಡಿಯೋ ಹೇಳಿಕೆಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, "ಯಾರ ಯಾರ ದೃಷ್ಟಿಗೆ ಏನೇನು ಕಾಣುತ್ತದೋ ಅದನ್ನವರು ಹೇಳುತ್ತಾರೆ. ಹಾಗೆಂದ ಮಾತ್ರಕ್ಕೆ ಬಸ್ ನಿಲ್ದಾಣಗಳ ಶೈಲಿಯನ್ನು ಬದಲಾಯಿಸಲು ಆಗತ್ತಾ? ಅದನ್ನು ಒಡೆದು ಹಾಕಲು ಸಾಧ್ಯವಾ" ಎಂದು ಪ್ರಶ್ನಿಸಿದರು.
"ಪ್ರತಾಪ್ ಸಿಂಹ ಅವರು ಗುಂಬಜ್ ರೀತಿ ಇರುವ ಎಲ್ಲವನ್ನೂ ಒಡೆದು ಹಾಕ್ತಾರಾ? ಬಸ್ ನಿಲ್ದಾಣ ಆಗಿರುವುದು ಸರ್ಕಾರದ ಹಣದಲ್ಲಿ. ಆ ಶೆಲ್ಟರ್ಗಳನ್ನು ಯಾರು ವಿನ್ಯಾಸ ಮಾಡಿದರು ಎಂಬುವುದು ನನಗೆ ಗೊತ್ತಿಲ್ಲ, ಅವರೇ ಹೇಳಿದಂತೆ ಗುಂಬಜ್ ಮಾದರಿಯ ಬಸ್ ನಿಲ್ದಾಣ ಹೊಡೆದು ಹಾಕುವುದಾದರೆ ಅದೆಷ್ಟು ಗುಂಬಜ್ಗಳನ್ನು ಒಡೆದು ಹಾಕುತ್ತಾರೋ ಒಡೆದು ಹಾಕಲಿ. ನಾವೂ ನೋಡುತ್ತೇನೆ" ಎಂದು ಸವಾಲೆಸೆದರು.
ಈ ಸುದ್ದಿ ಓದಿದ್ದೀರಾ? : ಈ ದಿನ ವಿಶೇಷ | ಕೆಂಪೇಗೌಡ ಆಯ್ತು ಈಗ ಟಿಪ್ಪು ಸುಲ್ತಾನ್; ತಲೆ ಎತ್ತಲಿದೆ ಮೈಸೂರು ಹುಲಿಯ 100 ಅಡಿ ಪ್ರತಿಮೆ
ಇನ್ನು ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, "ಯಾರ ಯಾರ ಮನದಲ್ಲಿ ಏನೇನಿದೆಯೋ ಅದನ್ನೆಲ್ಲ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇವೆಲ್ಲವನ್ನು ಮಾಡುವುದು ಸಹಜ" ಎಂದು ಹೇಳಿದರು.