ಗುಂಡಿ ಮುಚ್ಚದ ಬಿಬಿಎಂಪಿ | ಗಡುವಿನೊಳಗೆ ಕೆಲಸ ಮಾಡದ ಅಧಿಕಾರಿಗಳ ಅಮಾನತು ಮಾಡಿ; ಶಾಸಕ ಶರವಣ ಆಗ್ರಹ

T A SARAVANA JDS MLA
  • ಗುಂಡಿ ಸಮಸ್ಯೆ ಪರಿಹಾರಕ್ಕೆ ಬೆಂಗಳೂರು ಜನಪ್ರತಿನಿಧಿಗಳ ಸಭೆ ಕರೆಯಿರಿ ಎಂದ ಶರವಣ
  • ನಿಗದಿತ ಅವಧಿಯೊಳಗೆ ಕೆಲಸ ಮಾಡದ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಆಗ್ರಹ

ನವೆಂಬರ್ 15ರೊಳಗೆ ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತವಾಗಿಸುವ ವಾಗ್ದಾನ ಮಾಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಜೆಡಿಎಸ್ ಶಾಸಕ ಟಿ ಎ ಶರವಣ ಕಿಡಿ ಕಾರಿದರು. 

ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬಿಬಿಎಂಪಿ ಹಾಗೂ ಅಧಿಕಾರಿ ವರ್ಗದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಗಡುವಿನೊಳಗೆ ಕೆಲಸ ಮಾಡಲು ಅಸಮರ್ಥರಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು. 

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶರವಣ, "ಬೆಂಗಳೂರು ತುಂಬೆಲ್ಲ ಮೃತ್ಯು ಸ್ವರೂಪಿ ಗುಂಡಿ ಗಟಾರಗಳು ಕಣ್ಣಿಗೆ ರಾಚುತ್ತಿವೆ. ಇಷ್ಟಿದ್ದರೂ ಪಾಲಿಕೆ ಆಯುಕ್ತರು ಬರೀ ಒಂದು ಸಾವಿರ ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ ಎಂದು ಹೇಳಿಕೆ ಕೊಡುತ್ತಾರೆ. ಅಪ್ಪಟ ದಪ್ಪ ಚರ್ಮದ ಜನದ್ರೋಹಿ ಪಾಲಿಕೆ" ಎಂದು ಅವರು ವಾಗ್ದಾಳಿ ನಡೆಸಿದರು.

"ಪಾಲಿಕೆ ಅಧಿಕಾರಿಗಳ ವಿರುದ್ಧ ಗುಡುಗಿದ ಶಾಸಕ ಶರವಣ ನಿಗದಿತ ಅವಧಿಯಲ್ಲಿ ಕೊಟ್ಟ ಗಡುವಿನ ಅನುಸಾರ ಕಾರ್ಯನಿರ್ವಹಿಸದೆ ಗುಂಡಿಗಳನ್ನು ಮುಚ್ಚದೆ ಹಾಗೇ ಬಿಟ್ಟ ಅಧಿಕಾರಿಗಳನ್ನು ಪಟ್ಟಿ ಮಾಡಿ, ಅವರ ಸಮಗ್ರ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ" ಎಂದು ಒತ್ತಾಯಿಸಿದರು.

"ಪಾಲಿಕೆಯ ಬೇಜವಾಬ್ದಾರಿತನಕ್ಕೆ ನಿನ್ನೆ ಇನ್ನೊಂದು ಬಲಿಯಾಗಿದೆ. ಗುಂಡಿಗಳಿಂದಾಗಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇವು ಅಪಘಾತಗಳಲ್ಲ. ಸರಕಾರ, ಪಾಲಿಕೆಯ ನಿರ್ಲಕ್ಷದ ಕಾರಣಕ್ಕೆ ನಡೆಯುತ್ತಿರುವ ರಸ್ತೆ ಹತ್ಯೆಗಳಾಗಿವೆ" ಎಂದು ಶರವಣ ಕಿಡಿಕಾರಿದರು.

ಇದೇ ವೇಳೆ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಶರವಣ, ಈ ಸರ್ಕಾರದ ಏಳು ಮಂದಿ ಮಂತ್ರಿಗಳು ಬೆಂಗಳೂರಿನವರಾಗಿದ್ದಾರೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ಉಸ್ತುವಾರಿ ಆಗಿದ್ದರೂ, ಹೇಳುವವರು, ಕೇಳುವವರು ಗತಿ ಇಲ್ಲದವರಂತೆ ಬೆಂಗಳೂರಿನ ಆಡಳಿತ ನಡೆಯುತ್ತಿದೆ. ಇವೆಲ್ಲವನ್ನೂ ನೋಡುತ್ತಿದ್ದರೆ, ಬೆಂಗಳೂರು ರಸ್ತೆಗಳಲ್ಲಿ ಸಂಭವಿಸಿರುವ ಸಾವಿನ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕಾಗುತ್ತದೆ ಎಂದು ಶರವಣ ಹೇಳಿದರು.

ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಮತ್ತೆ ರಸ್ತೆ ಗುಂಡಿ ಮುಚ್ಚುವ ಗಡುವು ವಿಸ್ತರಿಸಿಕೊಂಡ ಪಾಲಿಕೆ; ಜನರ ಆಕ್ರೋಶ

"ಗುಂಡಿ ವಿಚಾರದ ಬಗ್ಗೆ ಸರ್ಕಾರ ತೀಕ್ಷ್ಣ ನಿರ್ಧಾರ ತೆಗೆದುಕೊಳ್ಳಬೇಕು. ಹೇಳಿಕೆ ಕೊಟ್ಟು ಕಾಲ ಹರಣ ಮಾಡುವ ವಿಚಾರ ಇದಲ್ಲ. ಹೀಗಾಗಿ ಮುಖ್ಯಮಂತ್ರಿಗಳು ತಕ್ಷಣವೇ ಬೆಂಗಳೂರು ಶಾಸಕರ ಸಭೆ ಕರೆದು ಚರ್ಚೆ ನಡೆಸಬೇಕು" ಎಂದು ಶರವಣ ಆಗ್ರಹಿಸಿದರು.                

ನಿಮಗೆ ಏನು ಅನ್ನಿಸ್ತು?
0 ವೋಟ್
eedina app