ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ | ಸ್ವಾಗತಿಸಿದ ಕಟೀಲ್

Amit sha
  • ವಿವಾದದಿಂದ ನಲುಗಿರುವ ಪಕ್ಷಕ್ಕೆ ಬಲ ತುಂಬುವರೇ ಅಮಿತ್ ಶಾ?
  • ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖಂಡರ ಜತೆಗೆ ಚರ್ಚೆ

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ
ಬೆಂಗಳೂರಿಗೆ ಆಗಮಿಸಿದ್ದಾರೆ.

ಬುಧವಾರ ರಾತ್ರಿ 11 ಗಂಟೆಗೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬರಮಾಡಿಕೊಂಡರು.

ಗುರುವಾರ (ಆ.4) ಬೆಂಗಳೂರಿನಲ್ಲಿ ನಿಗದಿಯಾಗಿರುವ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೇಂದ್ರ ಸಾಂಸ್ಕೃತಿಕ ಇಲಾಖೆ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ, ಅವರು ಮದರ್ ಡೈರಿಗೆ ಭೇಟಿ ನೀಡಲಿದ್ದಾರೆ. ನಿಗದಿತ ಕಾರ್ಯಕ್ರಮಗಳ ಬಳಿಕ ಕೆಲಹೊತ್ತು ರಾಜ್ಯದ ಬಿಜೆಪಿ ನಾಯಕರ ಜೊತೆ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ರಾಜ್ಯ ಬಿಜೆಪಿಗೆ ಬಲ ತುಂಬಲು ಆಗಮಿಸಿದ ಅಮಿತ್ ಶಾ!

ಶೇ.40 ಕಮಿಷನ್, ಪಿಎಸ್ಐ ಹಗರಣ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ನಂತರ ಪಕ್ಷದ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಈ ವಿವಾದಗಳಿಂದ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಿದ್ದು, ರಾಜ್ಯ ನಾಯಕರಿಗೆ ಬಲ ತುಂಬುವ ಸಲುವಾಗಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ?: ಹುಬ್ಬಳ್ಳಿ | ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಜತೆಗೆ ಚರ್ಚಿಸಿ ರಾಜ್ಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಅಮಿತ್ ಶಾ ಸಂಪೂರ್ಣ ವರದಿ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರವೀಣ್ ನೆಟ್ಟಾರು ಹತ್ಯೆ ಮತ್ತು ಈಶ್ವರಪ್ಪ, ಜಿ ಎಂ ಸಿದ್ದೇಶ್ವರ ಹೇಳಿಕೆಯಿಂದ ಪಕ್ಷದೊಳಗೆ ಉಂಟಾಗಿರುವ ಅಸಮಧಾನ ಶಮನಕ್ಕೆ ಅಮಿತ್ ಶಾ ಕ್ರಮ ಕೈಗೊಳ್ಳವ ಸಾಧ್ಯತೆ ಇದೆ.

ಬಿಜೆಪಿಯೊಳಗೆ ಭುಗಿಲೆದ್ದಿರುವ ಅಸಮಾಧಾನವನ್ನು ಈಗಲೇ ಶಮನಗೊಳಿಸದೇ ಇದ್ದರೆ ಮುಂದಿನ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರತಿಪಕ್ಷಗಳು ಇದನ್ನೇ ಲಾಭವಾಗಿ  ಬಳಸಿಕೊಳ್ಳವ ಸಾಧ್ಯತೆ ಇರುವುದರಿಂದ ಅಮಿತ್ ಶಾ ಯಾವ ತಂತ್ರ ಹೂಡಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

ನಿಮಗೆ ಏನು ಅನ್ನಿಸ್ತು?
2 ವೋಟ್