ಮಳೆಗಾಲ ಅಧಿವೇಶನ | ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳ ಗುಣಮಟ್ಟ ನೋಡಿದರೆ ಭಯವಾಗುತ್ತದೆ; ಸ್ಪೀಕರ್ ಕಾಗೇರಿ ಆತಂಕ

  • ಶಿಕ್ಷಣ ಮತ್ತು ವಿಶ್ವ ವಿದ್ಯಾನಿಲಯಗಳ ಗುಣಮಟ್ಟ ಕಾಪಾಡಿ
  • ಹೊಸ ವಿವಿಗಳ ಸ್ಥಾಪನೆ ಸಂತೋಷದಾಯಕ ವಿಚಾರ

ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳು ಮತ್ತು ಅವುಗಳ ಸ್ಥಿತಿಗತಿಗಳು ಭಯಾನಕವಾಗಿವೆ. ಸರ್ಕಾರ ಅವುಗಳ ಸುಧಾರಣೆಯತ್ತ ಗಮನ ಹರಿಸಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರಕ್ಕೆ ಸೂಚಿಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ ಎಸ್ ಅಶ್ವಥ್ ನಾರಾಯಣ ವಿಧಾನಸಭೆಯಲ್ಲಿ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ ಬಳಿಲ ಅದರ ಸಾಧಕ-ಬಾಧಕಗಳ ಬಗ್ಗೆ ಸದನಕ್ಕೆ ಮಾಹಿತಿ ಒದಗಿಸುತ್ತಿದ್ದರು.

ಸಚಿವರ ಮಾತಿನ ನಡುವೆ ಮದ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಹೊಸ ವಿವಿಗಳ ಸ್ಥಾಪನೆಯ ವಿಚಾರ ಸಂತೋಷವಾದದ್ದೇ. ಆದರೆ ಅವುಗಳ ಗುಣಮಟ್ಟ ಮತ್ತು ಸೌಕರ್ಯಗಳ ವಿಚಾರದಲ್ಲಿ ನಾವು ಇನ್ನಷ್ಟು ಗಮನ ವಹಿಸಬೇಕು. ಸದ್ಯದ ವಿವಿಗಳನ್ನು ಗಮನಿಸಿದರೆ ಅವುಗಳ ಗುಣಮಟ್ಟದ ಬಗ್ಗೆ ಭಯವಾಗುತ್ತಿದೆ ಎಂದರು.

"ನಾನು ಇತ್ತೀಚೆಗೆ ಕೆನಡಾ ಪ್ರವಾಸಕ್ಕೆ ಹೋಗಿದ್ದೆ. ಈ ವೇಳೆ ನಮ್ಮ ರಾಜ್ಯದ ಬಹುಪಾಲು ವಿದ್ಯಾರ್ಥಿಗಳು ಅಲ್ಲಿ ಶಿಕ್ಷಣಕ್ಕಾಗಿ ಬಂದಿದ್ದರು. ಇದನ್ನು ನೋಡಿ ಆಶ್ಚರ್ಯದ ಜೊತೆಗೆ ಕಳವಳವೂ ಆಯಿತು. ಇವರೆಲ್ಲ ಇಲ್ಲಿಗೆ ಬರುತ್ತಿದ್ದಾರೆ ಎಂದಾದರೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ, ಅದರ ಗುಣಮಟ್ಟ ಮತ್ತು ಮೂಲಭೂತ ಸೌಕರ್ಯ ಒದಗಿಸುವ ವಿಚಾರದಲ್ಲಿ ಏನಾಗುತ್ತಿದೆ ಎಂಬ ಆತಂಕ ನನ್ನನ್ನು ಕಾಡಿತು" ಎಂದು ಸ್ಪೀಕರ್  ಹೇಳಿದರು.

AV Eye Hospital ad

ನಾನೂ ನಮ್ಮ ಕ್ಷೇತ್ರಕ್ಕೊಂದು ವಿವಿ ಕೊಡಿ ಎಂದು ಮನವಿ ಮಾಡಿದ್ದೇನೆ. ಆದರೆ ಅದರ ಗುಣಮಟ್ಟ ಹೇಗಿರುತ್ತದೆ ಎನ್ನುವುದೇ ಈಗ ಚಿಂತೆಯ ವಿಚಾರ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಗಮನ ಹರಿಸಬೇಕು. ಹೊಸ ವಿವಿಗಳ ಸ್ಥಾಪನೆಗೆ ತೋರುವ ಆಸಕ್ತಿಯನ್ನು ಇರುವ ವಿದ್ಯಾನಿಲಯಗಳ ಅಭಿವೃದ್ಧಿಗೆ ಕೊಡಬೇಕು ಎಂದು ಸ್ಪೀಕರ್‌ ಹೇಳಿದರು. 

ಈ ಸುದ್ದಿ ಓದಿದ್ದೀರಾ? : ಮಳೆಗಾಲ ಅಧಿವೇಶನ | ಏಳು ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಸೂದೆಗೆ ಅಂಗೀಕಾರ 

ಹಾಗೆಯೇ  ಶಿಕ್ಷಣದ ಜೊತೆಗೆ ವಿಶ್ವವಿದ್ಯಾನಿಲಯಳ ಗುಣಮಟ್ಟ ಹೆಚ್ಚಿಸುವುದು ಹೇಗೆ ಎನ್ನುವುದರ ಬಗ್ಗೆ ಗಮನ ಕೊಡಬೇಕು. ಇಲ್ಲದಿದ್ದಲ್ಲಿ ಭವಿಷ್ಯ ಆತಂಕಕಾರಿ ಎಂದು ಸ್ಪೀಕರ್ ಸರ್ಕಾರಕ್ಕೆ ತಿಳಿ ಹೇಳಿದರು. ಇದರ ಬಳಿಕ ನಡೆದ ಚರ್ಚೆಯಲ್ಲಿ ಶಾಸಕರನೇಕರು ವಿವಿಗಳ ದು‍ಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app