ಎಸ್‌ಟಿ ಮೀಸಲಾತಿ | ಅತಿ ಶೀಘ್ರ ಸಿಹಿ ಸುದ್ದಿ ಕೊಡಿಸುತ್ತೇನೆ; ಕೆಣಕಿದ ಸಿದ್ದರಾಮಯ್ಯಗೆ ಉತ್ತರ ನೀಡಿದ ಶ್ರೀರಾಮುಲು

  • ನಿಜವಾಗಿಯೂ ಸಿದ್ದರಾಮಯ್ಯ ಅಹಿಂದ ಪರ ಇದ್ದಾರೆಯೇ?
  • ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ: ಶ್ರೀರಾಮುಲು 

ಎಸ್ ಟಿ ಮೀಸಲಾತಿ ವಿಚಾರದಲ್ಲಿ ತಮ್ಮನ್ನು ಕೆಣಕಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಚಿವ ಬಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಟ್ವೀಟ್‌ ಮೂಲಕ ಕುಟುಕಿದ ಮಾಜಿ ಮುಖ್ಯಮಂತ್ರಿಗಳಿಗೆ ಅದರಲ್ಲೇ ಉತ್ತರ ಕೊಟ್ಟಿರುವ ಬಿ ಶ್ರೀರಾಮುಲು, ಅತಿ ಶೀಘ್ರದಲ್ಲೇ ಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಹಿಸುದ್ದಿ ಕೊಡಿಸುತ್ತೇನೆ ಎಂದಿದ್ದಾರೆ. 

ಶ್ರೀರಾಮುಲು ಅವರ ಟ್ವೀಟ್‌ ಪೂರ್ಣಪಾಠ ಈ ಕೆಳಗಿನಂತಿದೆ: 

"ಎಸ್ ಟಿ ಮೀಸಲಾತಿ ವಿಚಾರದಲ್ಲಿ ಈಗಲೂ ನನ್ನ ಮಾತಿಗೆ ‌ನಾನು ಬದ್ಧವಾಗಿದ್ದೇನೆ. ನನ್ನ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು 3% ರಿಂದ 7.5%ಗೆ ಹೆಚ್ಚಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇನೆ‌. ಅಧಿಕಾರಕ್ಕಿಂತ ಸಮುದಾಯದ ಹಿತ ಮುಖ್ಯ ಎಂಬುದು ನನಗೂ ಗೊತ್ತಿದೆ. ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು 3% ರಿಂದ 7.5% ಹೆಚ್ಚಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುಂತೆ ನಮ್ಮ ಜನಪ್ರಿಯ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ನ್ಯಾ. ಸುಭಾಷ್ ಆಡಿ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ವರದಿ ಪರಿಶೀಲನಾ ಹಂತದಲ್ಲಿದೆ. ಅದಷ್ಟು ಶೀಘ್ರ ನಮ್ಮ ಸಮುದಾಯಕ್ಕೆ ಸಿಹಿ ಸುದ್ದಿಯನ್ನು ನಮ್ಮ ಸರ್ಕಾರವೇ ಕೊಡಲಿದೆ" ಎಂದು ರಾಮುಲು ಹೇಳಿದ್ದಾರೆ.

"ಈ ಬಗ್ಗೆ ಯಾರಿಗೂ ಸಂಶಯವೇ ಬೇಡ. ಮೀಸಲಾತಿ ಸಂಬಂಧ ನಾನು ಹೇಳಿರುವ ಮಾತಿನಿಂದ ಒಂದು ಇಂಚು ಹಿಂದೆ ಸರಿಯಲ್ಲ. ನಾನು ಅದಕ್ಕೆ ಬದ್ಧನಾಗಿದ್ದೇನೆ. ಇದು ಕಾನೂನಿನ ವಿಷಯವಾಗಿದ್ದು, ಸ್ವತಃ ವಕೀಲರಾಗಿರುವ ನಿಮಗೆ ಅರ್ಥವಾಗದಿರುವುದಕ್ಕೆ ನನಗೆ ವಿಷಾದವಿದೆ! ಚುನಾವಣೆ ಸಮೀಪಿಸುತ್ತಿರುವಾಗ ಇದನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳುತ್ತಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಹಿಡಿದ ಕೈಗನ್ನಡಿ. ಕಡೆ ಪಕ್ಷ 5 ವರ್ಷ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಒಂದು ಸಣ್ಣ ಆಲೋಚನೆ ನಿಮ್ಮ ತಲೆಯಲ್ಲಿ ಹೊಳೆದಿತ್ತೇ?
ವರದಿ ಬಿಡುಗಡೆ ಮಾಡದಂತೆ ನಿಮ್ಮ ಸಂಪುಟದ ಸಹೋದ್ಯೋಗಿಗಳೇ ಒತ್ತಡ ಹಾಕಿ ಕಾಂತರಾಜು ಅವರ ವರದಿಯನ್ನು ಶೈತ್ಯಾಗಾರಕ್ಕೆ ಹಾಕಿದ್ದು ವಚನಭ್ರಷ್ಟತೆ ಅಲ್ಲದೆ ಮತ್ತೇನು? ಇದನ್ನು ಮಾಧ್ಯಮಗಳಲ್ಲಿ ವ್ಯವಸ್ಥಿತ ಸೋರಿಕೆ ಮಾಡಿ, ಕೊನೆಗೆ ನಮಗೇ ತಿರುಗಬಾಣವಾದೀತು ಎಂದು ಮುಚ್ಚಿ ಹಾಕಿದ ಪ್ರಖರ ಪಂಡಿತರು ನೀವಲ್ಲವೇ?" ಎಂದು ಶ್ರೀರಾಮುಲು ಕುಟುಕಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕಾನೂನಾತ್ಮಕ ಸಹಕಾರ: ಸಂಸದ ಪ್ರಲ್ಹಾದ್ ಜೋಶಿ ಭರವಸೆ

"ನಿಮ್ಮ ಅಧಿಕಾರವಧಿಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ₹160 ಕೋಟಿ ಖರ್ಚು ಮಾಡಿ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿ ಪೂರ್ಣಗೊಂಡಿದ್ದರೂ ಅದನ್ನು ಬಹಿರಂಗಗೊಳಿಸದೆ ಕಸದ ಬುಟ್ಟಿಗೆ ಹಾಕಿದ್ದು ಯಾವ ವಚನಭ್ರಷ್ಟತೆ? ಉತ್ತರ ಕೊಡುತ್ತೀರಾ ಸಿದ್ದರಾಮಯ್ಯನವರೇ? ನೀವು ಆಡಳಿತದಲ್ಲಿ ಇದ್ದಾಗ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಇಂದು ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಜನರ ಕಣ್ಣಿಗೆ ಮಂಕುಬೂದಿ ಎರಚುವ ಕಲೆ ನಿಮಗಲ್ಲದೆ ಬೇರೆಯವರಗೆ ಹೇಗೆ ಬರಲು‌ ಸಾಧ್ಯ? ದೇವರಾಜ್ ಅರಸ್ ನಂತರ ನಾನೇ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಎಂದು ಹಿಂಬಾಲಕರಿಂದ ಜೈಕಾರ ಹಾಕಿಸಿಕೊಳ್ಳುವ ಬುರಡೆ ರಾಮಯ್ಯನವರೇ, 5 ವರ್ಷದ ಅವಧಿಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯಕ್ಕೆ ನಿಮ್ಮಷ್ಟು ಚೂರಿ ಹಾಕಿದ ಸಿಎಂ ಮತ್ತೊಬ್ಬರಿಲ್ಲ ಎಂಬುದನ್ನು ಬಿಡಿಸಿ ಹೇಳಬೇಕೇ?" ಎಂದು ಸಿದ್ದರಾಮಯ್ಯ ಅವರನ್ನು ರಾಮುಲು ಪ್ರಶ್ನಿಸಿದ್ದಾರೆ.

"ಹೆಸರಿನಲ್ಲಿ ʼರಾಮʼ! ಉಂಡ ಮನೆಗೆ ಪಂಗನಾಮ! ಸ್ವಯಂಘೋಷಿತ ಸತ್ಯಹರಿಶ್ಚಂದ್ರ, ಎಷ್ಟೇ ಆದರೂ ಸತ್ಯ ನಿಮಗೆ ಅಪಥ್ಯ ಅಲ್ಲವೇ? ಕಳ್ಳ ಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂಬ ಹುಂಬುತನವೇ? ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣದ ನಿಜಸ್ವರೂಪ. ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ʼಬ್ರೂಟಸ್ ಮನಸ್ಥಿತಿ, ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ದುಃಸ್ಥಿತಿ. ಅಧಿಕಾರ ಕೊಟ್ಟ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವ ಸ್ವಯಂಘೋಷಿತ ಮಹಾನಾಯಕರು ನೀವಲ್ಲವೇ?  ಅಹಿಂದ ನಾಯಕರನ್ನು ಮುಗಿಸಿರುವ ನಿಮ್ಮ ಮುಂದಿನ ಗುರಿ ಒಕ್ಕಲಿಗರಾ? ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಇರಬಹುದೇ? ಎಲ್ಲಿ ನನಗೆ ಸ್ಪರ್ಧೆಯೊಡ್ಡಬಹುದು ಎಂಬ ಆತಂಕದಿಂದ ಅವರನ್ನೂ ಮೂಲೆಗುಂಪು ಮಾಡುವ ನಿಮ್ಮ ಯತ್ನ ಮುಗಿದಿಯೇ ಇಲ್ಲ ಮುಂದುವರೆಯುವುದೋ?" ಎಂದು ರಾಮುಲು ಕೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಒಂದು ನಿಮಿಷದ ಓದು | ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಲಂಬಾಣಿ ಸಮುದಾಯದ ಬೆಂಬಲ

"ಯಾರೋ ಕಟ್ಟಿದ ಹುತ್ತಕ್ಕೆ ಕರಿ ನಾಗನಂತೆ ಸೇರಿಕೊಂಡವರು ನೀವು. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ.ಹೆಚ್ .ಮುನಿಯಪ್ಪ, ಅಲ್ಪಸಂಖ್ಯಾತ ಸಮುದಾಯದ ಜಾಫರ್ ಷರೀಫ್ ಸೇರಿದಂತೆ ಹಲವರನ್ನು ಮುಗಿಸಿಯೇ ಮೇಲಕ್ಕೆ ಬಂದ ನಿಮ್ಮದು ಯಾವ ಸೀಮೆಯ ಅಹಿಂದ? ಬಿಡಿಸಿ ಹೇಳುತ್ತೀರಾ? ಮಾತೆತ್ತಿದರೆ ಅಹಿಂದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವವರು ನೀವು; 2018 ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಅವರಿಗೆ ಕೊರಟಗೆರೆಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಯಾವ ಯಾವ ಸಂದರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಎಂಬುದನ್ನು ಬಹಿರಂಗ ಪಡಿಸಲೇ ಚೂರಿ ರಾಮಯ್ಯನವರೇ?" ಎಂದು ರಾಮುಲು ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ. 

ಮೀಸಲಾತಿ ವಿಚಾರದಲ್ಲಿ ಸೋಮವಾರ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, "ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಎಸ್.ಟಿ ಸಮುದಾಯಕ್ಕೆ 7.5% ಮೀಸಲಾತಿ ಕಲ್ಪಿಸಿಕೊಡುತ್ತೇವೆ, ಇದನ್ನು ಬೇಕಾದರೆ ರಕ್ತದಲ್ಲಿ ಬರೆದುಕೊಡ್ತೇನೆ ಎಂದಿದ್ದ ಶ್ರೀರಾಮುಲು ಮಹಾ ವಚನಭ್ರಷ್ಟ" ಎಂದು ಕುಟುಕಿದ್ದರು. 

ನಿಮಗೆ ಏನು ಅನ್ನಿಸ್ತು?
1 ವೋಟ್