'ನಾನು ಜಾತಿ ನಿಂದನೆ ಮಾಡಿಲ್ಲ, ಜೀವ ಬೆದರಿಕೆ ಹಾಕಿಲ್ಲ': ಸಚಿವ ಆನಂದ್ ಸಿಂಗ್

  • ಸಚಿವ ಆನಂದ್ ಸಿಂಗ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು
  • ವಿಜಯನಗರ ಎಸ್‌ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಪೋಲಪ್ಪ ಕುಟುಂಬ

“ಜಾಗದ ವಿಚಾರವಾಗಿ ಮಡಿವಾಳ ಸಮಾಜ ಮತ್ತು ಹಾಲಪ್ಪ ಅವರ ನಡುವೆ ವಿವಾದ ಇತ್ತು. ಈ ಸಂಬಂಧ ಪೋಲಪ್ಪ ಅವರಿಗೆ ಕರೆ ಮಾಡಿ ಸಮಾಜದವರನ್ನು ಕರೆದುಕೊಂಡು ಸ್ಥಳ ಪರಿಶೀಲನೆಗೆ ಹೋಗಿದ್ದೆ. ಈ ವೇಳೆ ನಾನು ಯಾವುದೇ ಜಾತಿ ನಿಂದನೆ ಮಾಡಿಲ್ಲ. ಅವರೇ ನಮ್ಮ ವಿರುದ್ಧ ಮಾತನಾಡಿದರು” ಎಂದು ಪ್ರವಾಸೋದ್ಯಮ ಸಚಿವ ತಮ್ಮ ವಿರುದ್ಧ ದಾಖಲಾದ 'ಅಟ್ರಾಸಿಟಿ ಪ್ರಕರಣ'ಕ್ಕೆ ಸಂಬಂಧಿಸಿ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್, “ಮಂಗಳವಾರ ಪೋಲಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದೆ, ನಂತರ ಮಡಿವಾಳ ಸಮಾಜದವರೊಂದಿಗೆ ದಾಖಲೆ ಹಾಗೂ ಸ್ಥಳ ಪರಿಶೀಲನೆಗೆ ಹೋಗಿದ್ದೆ. ಈ ವೇಳೆ ನಗರಸಭೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನಾನು ಯಾವುದೇ ಬೆದರಿಕೆಯಾಗಲಿ, ಜಾತಿ ನಿಂದನೆಯಾಗಲಿ ಮಾಡಿಲ್ಲ. ಮಾತುಕತೆ ವೇಳೆ ನಮ್ಮ ವಿರುದ್ಧವಾಗಿ ಮಾತನಾಡಿ ದೌರ್ಜನ್ಯ ಮಾಡಬಾರದು ಎಂದು ಅವರೇ ಮಾತನಾಡಿದ್ದರು. ಅದು ಪೋಲಪ್ಪ ಪಿತ್ರಾರ್ಜಿತ ಆಸ್ತಿ ಅಲ್ಲ. ಪೋಲಪ್ಪನ ಪತ್ನಿಯ ಕುಟುಂಬಕ್ಕೆ ಸೇರಿದ ಆಸ್ತಿ ಎಂದು ಹೇಳಿದ್ದೆ” ಎಂದು ತಿಳಿಸಿದ್ದಾರೆ.

“ಸಮಾಜದ ಜನರು ಹೆಚ್ಚಿದ್ದ ಹಿನ್ನೆಲೆ ಎಲ್ಲರೂ ಮಾತನಾಡುವ ವೇಳೆ ನಗರಸಭೆ ಅಧಿಕಾರಿಗಳಿಗೆ ದಾಖಲೆಗಳನ್ನು ಪರಿಶೀಲನೆ ನಡೆಸಲು ತಿಳಿಸಿದ್ದೆ. ಸಂಜೆ ನಂತರ ಪೋಲಪ್ಪ ಕುಟುಂಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿದುಬಂದಿದೆ. ಪೋಲಪ್ಪ ಯಾವ ಜಾತಿ ಅನ್ನುವುದು ಕೂಡ ಸಹ ನನಗೆ ಗೊತ್ತಿಲ್ಲ. ನಾನು ಜಾತಿ ನಿಂದನೆ ಮಾಡಿಲ್ಲ. ಕಾನೂನಿಗಿಂತ ನಾನು ದೊಡ್ಡವನಲ್ಲ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರೆ ದಾಖಲೆಗಳನ್ನ ಕೊಡಲಿ, ನಾನು ಜಾತಿ ನಿಂದನೆ ಮಾಡಿದ್ದು ನಿಜ ಆಗಿದ್ದರೆ ಕ್ರಮ ಕೈಗೊಳ್ಳಲಿ” ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಿಜಯನಗರ| ಸಚಿವ ಆನಂದ್ ಸಿಂಗ್ ವಿರುದ್ಧ 'ಅಟ್ರಾಸಿಟಿ ಕೇಸ್' ದಾಖಲು

“ಸಚಿವನಾದರೂ ಪೊಲೀಸರು ತನಿಖೆ ನಡೆಸಲಿ, ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲನೆ ನಡೆಸಲಿ. ನಾನು ಅವರನ್ನ, ಅವರ ಮಕ್ಕಳನ್ನ ಸುಡುವ ಮಾತುಗಳನ್ನ ಹೇಳಿಲ್ಲ. ಇಂತಹ ಅವಕಾಶಗಳನ್ನ ಅವರು ಬಳಸಿಕೊಳ್ಳಲು ಮುಂದಾಗಿದ್ದಾರೆ. ನಾನು ಈ ಪ್ರಕರಣವನ್ನು ಬೆಳೆಸಲು ಇಷ್ಟಪಡುವುದಿಲ್ಲ" ಎಂದರು.

ನಿಮಗೆ ಏನು ಅನ್ನಿಸ್ತು?
2 ವೋಟ್