ಲೋಕಾಯುಕ್ತ ಮರುಸ್ಥಾಪನೆ: ಹೈಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಲೇಬೇಕು; ಬಿಜೆಪಿ ಶಾಸಕ ಎಚ್.ವಿಶ್ವನಾಥ್

H Vishwanath
  • ಮೂರು ರಾಜಕೀಯ ಪಕ್ಷಗಳ ವಿರುದ್ದ ಕಿಡಿಕಾರಿದ  ಹೆಚ್ ವಿಶ್ವನಾಥ್ 
  • ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅವಶ್ಯ ಎಂದ ಬಿಜೆಪಿ ಶಾಸಕ

ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಬರಖಾಸ್ತುಗೊಳಿಸಿ ಲೋಕಾಯುಕ್ತವನ್ನು ಮರಳಿ ಸ್ಥಾಪಿಸುವಂತೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್‌ ವಿಶ್ವನಾಥ್‌ ಆಗ್ರಹಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್ ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿದರು.

ಈ ವೇಳೆ ಸ್ವಪಕ್ಷಕ್ಕೂ ಸೇರಿದಂತೆ ಚಾಟಿ ಬೀಸಿದ ವಿಶ್ವನಾಥ್, "ಮೂರು ರಾಜಕೀಯ ಪಕ್ಷಗಳೂ ಈ ವಿಚಾರದಲ್ಲಿ ಬೆತ್ತಲಾಗಿವೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಮಾತನಾಡಿ ಎಂದರೆ, ಆದೇಶ ಪ್ರತಿ ಗಮನಿಸಿ ಪ್ರತಿಕ್ರಿಯೆ ನೀಡುತ್ತೇನೆ ಎನ್ನುತ್ತಾರೆ. ರಾಜ್ಯದ ಚುಕ್ಕಾಣಿ ಹಿಡಿದವರೇ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಮತ್ತೊಂದು ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಎಸಿಬಿ ರದ್ದು ಸ್ವಾಗತಾರ್ಹ ಎಂದಿದ್ದಾರೆ. ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಸಿಬಿ ರದ್ದಿನಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. ಇವರ ಮಾತುಗಳಲ್ಲೇ ಎಲ್ಲವೂ ಅರ್ಥವಾಗುತ್ತದೆ" ಎಂದು ವಿಶ್ವನಾಥ್‌ ಕಿಡಿಕಾರಿದರು.

"2016 ರಲ್ಲಿ ಲೋಕಾಯುಕ್ತವನ್ನ ತಿರುಚಿ ಎಸಿಬಿ ತರಲಾಗಿತ್ತು. ಒಂದು ಕಾನೂನು ಇರುವಾಗಲೇ ಮತ್ತೊಂದು ಸಂಸ್ಥೆಯನ್ನು ಹುಟ್ಟುಹಾಕುವುದು ಕಾನೂನಿಗೆ ವಿರೋಧ ಎಂದು ಜಸ್ಟೀಸ್ ಗೋಪಾಲರಾವ್ ಅವರು ಹೇಳಿದ್ದರು. ಈಗ ಎಸಿಬಿ ಹೋಗಿದೆ, ಲೋಕಾಯುಕ್ತ ಬಂದಿದೆ. ಇದನ್ನ ಅತ್ಯಂತ ಗೌರವದಿಂದ ನಾನು ಸ್ವಾಗತಿಸುತ್ತೇನೆ" ಎಂದು ಎಚ್‌ ವಿಶ್ವನಾಥ್‌ ಹೇಳಿದರು.

ಈ ಸುದ್ದಿ ಓದಿದ್ದೀರಾ? : ಈದಿನ ಸಂದರ್ಶನ| ಎಸಿಬಿ ರದ್ದು: ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕ ನ್ಯಾಯ: ಎಸ್ ಆರ್ ಹಿರೇಮಠ್

ಮರುಜೀವ ಪಡೆದುಕೊಳ್ಳುತ್ತಿರುವ ಲೋಕಾಯುಕ್ತ ಸಂ‍ಸ್ಥೆ ಬಲಪಡಿಸುವ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ವಿಶ್ವನಾಥ್, "ಲೋಕಾಯುಕ್ತಕ್ಕೆ ಮತ್ತೆ ತಿದ್ದುಪಡಿ ಆಗಬೇಕು. ಅಲ್ಲಿಗೆ ಬರುವ  ಅಧಿಕಾರಿಗಳು ಕನಿಷ್ಠ ಮೂರು ವರ್ಷ ಅಲ್ಲೇ ಕೆಲಸ ಮಾಡಬೇಕು. ಹಾಗೆಯೇ ಲೋಕಾಯುಕ್ತ ಅಧಿಕಾರಿಗಳ ತನಿಖೆಗೂ ಪೂರ್ಣ ಸ್ವತಂತ್ರ ಇರಬೇಕು" ಎಂದು ಅಭಿಪ್ರಾಯಪಟ್ಟರು. ಜೊತೆಗೆ "ಇವೆಲ್ಲವೂ ಸಾಧ್ಯವಾಗಬೇಕು ಎಂದಾದರೆ ಪ್ರಸ್ತುತ ಸರ್ಕಾರ ಕೋರ್ಟ್ ಕೊಟ್ಟಿರುವ ಆದೇಶವನ್ನ ಪಾಲಿಸಬೇಕು" ಎಂದು ಹೇಳಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app