
- ಕಾಂಗ್ರೆಸ್ ಎಸ್ ಸಿ, ಎಸ್ ಟಿ ಜನಾಂಗವನ್ನು ಕೇವಲ ಮತಬ್ಯಾಂಕ್ ಆಗಿ ಮಾಡಿಕೊಂಡಿತ್ತು
- ಭಾರತೀಯ ಜನತಾ ಪಕ್ಷದ ಸುನಾಮಿಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದ ಸಿಎಂ
"ತಳಸಮುದಾಯಗಳಿಗೆ ರಕ್ಷಣೆ ನೀಡದೇ, ಕೇವಲ ಸುಳ್ಳು ಭರವಸೆಗಳು ನೀಡುತ್ತಾ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದ ಕಾಂಗ್ರೆಸ್ನ ವೋಟ್ ಪಾಲಿಟಿಕ್ಸ್ ಇನ್ನು ಮುಂದೆ ನಡೆಯುವುದಿಲ್ಲ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾ ಬಳ್ಳಾರಿಯಲ್ಲಿ ಆಯೋಜಿಸಿದ್ದ 'ನವಶಕ್ತಿʼ ಸಮಾವೇಶವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿದರು.
"ಸಿದ್ದರಾಮಯ್ಯನವರ ‘ಅಹಿಂದʼ ಎಲ್ಲಿದೆ? ಆ ಸಮುದಾಯದವರ ಬಡತನ ನಿರ್ಮೂಲನೆ ಮಾಡಲಿಲ್ಲ, ಸ್ವಾಭಿಮಾನದ ಬದುಕನ್ನು ನೀಡಲಿಲ್ಲ. ಹಾಗೆಯೇ ಕಾಂಗ್ರೆಸ್ನವರು 60 ವರ್ಷ ದೇಶವಾಳಿದರು. ಎಸ್ಸಿ, ಎಸ್ಟಿ ನಮ್ಮ ಬಾಂಧವರು ಎಂದು ಬಾಯಿಮಾತಿನಲ್ಲಿ ಹೇಳಿದರೆ ಹೊರತು ಅವರ ಬಡತನ ನಿರ್ಮೂಲನೆಗೆ ಶ್ರಮಿಸಲಿಲ್ಲ. ಕಾಂಗ್ರೆಸ್ನವರು ಎಸ್ ಸಿ , ಎಸ್ ಟಿ ಜನಾಂಗದವರನ್ನು ಕೇವಲ ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದರು" ಎಂದು ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

"ಸಣ್ಣದೊಂದು ಮೈದಾನದಲ್ಲಿ ಕಾರ್ಯಕ್ರಮ ನಡೆಸಿ, ಕಾಂಗ್ರೆಸ್ನವರ ಭಾರತ್ ಜೋಡೋ ಯಾತ್ರೆ ಸುನಾಮಿ ಎಬ್ಬಿಸಿದೆ ಎಂದು ಸುಳ್ಳು ಹೇಳುತ್ತಾರೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಶ್ರಮಿಸಲಿದ್ದು, ಸ್ವಾಭಿಮಾನದ ಬದುಕನ್ನು ನಿಮ್ಮದಾಗಿಸಲಿದೆ" ಎಂದರು.
"ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಳ್ಳಾರಿಯಿಂದ ಲೋಕಸಭೆಗೆ ಹೋದ ಸೋನಿಯಾ ಗಾಂಧಿ ಬಳ್ಳಾರಿಗೆ 3 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ಆದರೆ, ಅವರು ಮೂರು ಕಾಸನ್ನು ನೀಡದೆ ಬಳ್ಳಾರಿ ಜನರಿಗೆ ಮೋಸ ಮಾಡಿದರು. ಇದೇ ಕಾಂಗ್ರೆಸ್ ಪಕ್ಷದ ನೀತಿ" ಎಂದರು.
ಅಹಿಂದ ಎಂದು ಹೇಳಿ ಎಸ್ಸಿ ಎಸ್ಟಿ ಸಮುದಾಯಗಳನ್ನು ಹಿಂದೆ ಬಿಟ್ಟು ತಾವೊಬ್ಬರೇ ಮುಂದೆ ಹೋಗಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಯ, ದ್ರೋಹದ, ಮೋಸದ ಆಟಗಳು ಇನ್ನು ಮುಂದೆ ನಡೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ನವಶಕ್ತಿ ಸಮಾವೇಶ ನೀಡಲಿದೆ.#BJPNavashaktiSamavesha pic.twitter.com/0RLUEQmowO
— Basavaraj S Bommai (@BSBommai) November 20, 2022
"ಕಾಂಗ್ರೆಸ್ಗೆ ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ಜನ ಸರಿಯಾದ ಪಾಠ ಕಲಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಸುನಾಮಿಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಈಗ ಪರಿವರ್ತನೆಯ ಕಾಲ ಬಂದಿದೆ" ಎಂದು ಬೊಮ್ಮಾಯಿ ಹೇಳಿದರು.
ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕುವ ಕಾಲ ಬಂದಿದೆ; ಎಸ್ ಟಿ ಸಮಾವೇಶದಲ್ಲಿ ಬಿಎಸ್ವೈ ಗುಡುಗು
ಇಂದಿನ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಎಸ್ಟಿ ಇಲಾಖೆಗಳ ಸಚಿವ ಬಿ. ಶ್ರೀರಾಮುಲು, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಪ್ರಭು ಚೌಹ್ವಾಣ್, ಶಾಸಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ, ರಾಜು ಗೌಡ ಹಾಗೂ ಮತ್ತಿತರರು ಹಾಜರಿದ್ದರು.