ವೋಟರ್ ಗೇಟ್ ಅಕ್ರಮ | ಅಧಿಕಾರಿಗಳಷ್ಟೇ ಅಲ್ಲ, ಶಾಸಕರ ಪಾತ್ರದ ಬಗ್ಗೆಯೂ ತನಿಖೆಯಾಗಲಿ; ಡಿಕೆಶಿ ಒತ್ತಾಯ

DK SHIVAKUMAR BYTE
  • ಅಕ್ರಮದ ವಿಚಾರದಲ್ಲಿ ಪಾರದರ್ಶಕ ತನಿಖೆಯಾಗಬೇಕು
  • ಕಾಂಗ್ರೆಸ್‌ ಮೇಲೆ ಅನುಮಾನವಿದ್ದರೂ ತನಿಖೆ ನಡೆಸಿ 

ಚಿಲುಮೆ ವೋಟರ್ ಗೇಟ್ ಅಕ್ರಮದಲ್ಲಿ ಬರೀ ಅಧಿಕಾರಿಗಳಷ್ಟೇ ಅಲ್ಲ, ಶಾಸಕರೂ ಶಾಮೀಲಾಗಿದ್ದಾರೆ. ಹೀಗಾಗಿ ಅವರ ಪಾತ್ರದ ಬಗೆಗೂ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿನ ತಮ್ಮ ನಿವಾಸದೆದುರು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಕುಮಾರ್, ಚಿಲುಮೆ ಸಂಸ್ಥೆ ಪರಿಶೀಲನೆ ವೇಳೆ ಬಿಜೆಪಿಯ ಹಲವು ಶಾಸಕರುಗಳ ಲೆಟರ್ ಹೆಡ್ಗಳು, ಮನವಿ ಪತ್ರಗಳು ಸಿಕ್ಕಿವೆ. ಹೀಗಾಗಿ ಅಕ್ರಮದ ಹಿಂದೆ ಶಾಸಕರೂ ಇರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಚುನಾವಣಾ ಆಯೋಗ ತ್ವರಿತ ಸಮಗ್ರ ತನಿಖೆ ಕೈಗೊಂಡು ಸತ್ಯ ಹೊರಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಮತದಾರರ ಪಟ್ಟಿ ದುರ್ಬಳಕೆ, ಬಿಎಲ್ಓ ಕಾರ್ಡ್‌ ಅಕ್ರಮ ಬಳಕೆ, ಖೋಟಾ ನೋಟು ಮುದ್ರಿಸಿದಂತಹ ಪ್ರಕರಣಕ್ಕೆ ಸಮನಾಗಿದ್ದು. ಒಬ್ಬರ ಗುರುತಿನ ಚೀಟಿ ಮತ್ತೊಬ್ಬರು ಬಳಸುವುದು ಹೇಗೆ ಅಪರಾಧವೋ ಅದೇ ರೀತಿ ಮತದಾರಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸುವ ಮತ್ತು ತೆಗೆದುಹಾಕುವ ವಿಚಾರವೂ ಅಷ್ಟೇ ಗಂಭೀರ ಎಂದು ಶಿವಕುಮಾರ್ ಹೇಳಿದರು.

ಮತದಾರರಪಟ್ಟಿ ಮಾಹಿತಿ ಕಳುವಿನ ವಿಚಾರವನ್ನು ನಮ್ಮ ಪಕ್ಷ ಇಷ್ಟು ಗಂಭೀರವಾಗಿ ಪರಿಗಣಿಸಿರುವುದು ಕೇವಲ ರಾಜಕೀಯ ಕಾರಣಕ್ಕಲ್ಲ, ಬದಲಾಗಿ ಮತದಾರರಿಗೆ ಆದ ಮೋಸ ಮತ್ತು ದ್ರೋಹ ಸರಿಪಡಿಸಿಕೊಳ್ಳಲು ಎಂದು ಶಿವಕುಮಾರ್ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ಚಿಲುಮೆ ವೋಟರ್‌ ಗೇಟ್‌ | ಹಗರಣದಲ್ಲಿ ಕೇಂದ್ರ ಸರ್ಕಾರವೂ ಭಾಗಿ: ರಣದೀಪ್ ಸಿಂಗ್ ಸುರ್ಜೆವಾಲ ಆರೋಪ

ಅಕ್ರಮದ ವಿಚಾರದಲ್ಲಿ ಪಾರದರ್ಶಕ ತನಿಖೆಯಾಗಬೇಕು. ನಮ್ಮ ಕಾಲದಲ್ಲಾಗಿದೆ ಎನ್ನುವುದಾದರೆ ಅದರ ಬಗೆಗೂ ತನಿಖೆ ಮಾಡಲಿ ಎಂದ ಶಿವಕುಮಾರ್, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 'ಗೌಡ' ಎನ್ನುವ ಸಮುದಾಯ ಸೂಚಕ ಪದವಿರುವ ಅಲ್ಲಿನ ಬಹುಪಾಲು ಹೆಸರುಗಳನ್ನು ತೆಗೆದು ಹಾಕಿರುವ ಬಗ್ಗೆ ನನಗೆ ಅಧೀಕೃತ ದಾಖಲೆಗಳು ಸಿಕ್ಕಿವೆ. ಇದೇ ಮಾದರಿ ನಗರದ 28 ಕ್ಷೇತ್ರಗಳಲ್ಲೂ ಅಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಆಯೋಗ ಈ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಏಕರೂಪ ನಾಗರೀಕ ಸಂಹಿತೆ ಜಾರಿಗೆ ಸರ್ಕಾರ ಚಿಂತಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್‌, ಈ ವಿಚಾರವಾಗಿ ಮೊದಲು ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ನಂತರ ಪಕ್ಷದ ನಾಯಕರುಗಳ ಜೊತೆ ಕುಳಿತು ಚರ್ಚಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಶಿವಕುಮಾರ್‌ ಹೇಳಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app