
- ಕಾಂಗ್ರೆಸ್ನವರು ದೂರು ನೀಡಿದರೆ, ಅದರ ವಿರುದ್ಧ ತನಿಖೆ ನಡೆಸಲಾಗುವುದು
- ತನಿಖೆಯಲ್ಲಿ ಆರೋಪಗಳ ಸತ್ಯಾಸತ್ಯತೆ ಹೊರಬರುತ್ತದೆ: ಬೊಮ್ಮಾಯಿ ಹೇಳಿಕೆ
ವೋಟರ್ ಐಟಿ ಹೆಸರಿನಲ್ಲಿ ಮತದಾರರ ಸೂಕ್ಷ್ಮ ದಾಖಲೆಗಳನ್ನು ಬಿಜೆಪಿ ಸರ್ಕಾರ ಕಳ್ಳತನ ಮಾಡುತ್ತಿದೆ ಎಂದು ವಿಪಕ್ಷ ಕಾಂಗ್ರೆಸ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಅಕ್ರಮದ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, "ಕಾಂಗ್ರೆಸ್ ಆರೋಪವನ್ನು ಪರಿಶೀಲಿಸಲಾಗುತ್ತಿದೆ. ಜೊತೆಗೆ ಆರೋಪಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆಗೆ ಸೂಚಿಸುತ್ತೇನೆ" ಎಂದು ತಿಳಿಸಿದರು.
ರಾಜ್ಯ ಬಿಜೆಪಿಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹವಾಗಿದೆ ಎಂಬ ಕಾಂಗ್ರೆಸ್ ನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಅವರ ವೈಚಾರಿಕ ದಿವಾಳಿತನವನ್ನು ತೋರಿಸುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಈ ರೀತಿ ಹಂಚಿಕೆಯಾದ ಮಾಹಿತಿಯನ್ನು ಎನ್.ಜಿ.ಒ. ಗಳು ದುರ್ಬಳಕೆ ಮಾಡಿದ್ದಲ್ಲಿ ಅದರ ಸಮಗ್ರ ತನಿಖೆಗೆ ಆದೇಶಿಸುತ್ತೇನೆ.@BJP4Karnataka pic.twitter.com/2FlIKjchSb
— Basavaraj S Bommai (@BSBommai) November 17, 2022
"ಕಾಂಗ್ರೆಸ್ ನಾಯಕರು ಈ ಸಂಬಂಧ ದೂರು ನೀಡಿದರೆ ಅದರ ವಿರುದ್ಧ ತನಿಖೆ ನಡೆಸಲಾಗವುದು. ತನಿಖೆಯಲ್ಲಿ ಆರೋಪದ ಸತ್ಯಾಸತ್ಯತೆ ಹೊರಬರುತ್ತದೆ" ಎಂದು ಬೊಮ್ಮಾಯಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿಗಳು, "ಕಾಂಗ್ರೆಸ್ನವರು ಮತದಾರರ ಪಟ್ಟಿಯ ಮಾಹಿತಿ ಸಂಗ್ರಹದ ವಿಚಾರದಲ್ಲಿ ದಿವಾಳಿಯಾಗಿದ್ದಾರೆ ಎನ್ನುವುದು ಕಾಣಿಸುತ್ತಿದೆ. ಇದು ಹಾಸ್ಯಾಸ್ಪದ. ಇದು ಸರ್ಕಾರ ಕೊಟ್ಟ ಜವಾಬ್ದಾರಿಯಲ್ಲ. ಖಾಸಗಿ ಸಂಸ್ಥೆಗೆ ಎಲೆಕ್ಷನ್ ಕಮಿಷನ್ ಮತ್ತು ಬಿಬಿಎಂಪಿಯವರು ನೀಡಿರುವ ಜವಾಬ್ದಾರಿ ಅದು. ಅದನ್ನು ಅವರು ನಿಭಾಯಿಸಿದ್ದಾರೆ" ಎಂದರು.
ಈ ಸುದ್ದಿ ಓದಿದೀರಾ? :ವೋಟರ್ ಐಡಿ ನೆಪದಲ್ಲಿ ಮತದಾರರ ಮಾಹಿತಿ ಕದ್ದ ಬೊಮ್ಮಾಯಿ ಸರ್ಕಾರ; ಕಾಂಗ್ರೆಸ್ನಿಂದ ಪೊಲೀಸ್ ಕಮಿಷನರ್ಗೆ ದೂರು
"2018ರಲ್ಲೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಜವಾಬ್ದಾರಿ ನೀಡಿತ್ತು. ಅದೇ ರೀತಿ ಈ ಎನ್ಜಿಓ ಕೂಡ ಮತದಾರರ ಮಾಹಿತಿ ಕಲೆಹಾಕುವ ಕೆಲಸ ಮಾಡಿದೆ. ಈಗ ಕಾಂಗ್ರೆಸ್ ಈ ವಿಚಾರದಲ್ಲಿ ಆರೋಪ ಮಾಡಿದೆ, ಇದು ಆಧಾರರಹಿತವಾಗಿದೆ" ಎಂದ ಮುಖ್ಯಮಂತ್ರಿಗಳು, "ವಿಪಕ್ಷದವರು ದೂರು ನೀಡಿದರೆ ನಾನೇ ಕಮೀಷನರ್ಗೆ ಹೇಳುತ್ತೇನೆ" ಎಂದರು.
ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ
"ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ" ಎಂದು ಬೊಮ್ಮಾಯಿ ಹೇಳಿದರು. "ಅವರು ಸಂಬಂಧವಿಲ್ಲದ್ದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಇಲ್ಲಿಯವರೆಗೆ ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಇದೊಂದು ಆಧಾರರಹಿತ ಆರೋಪ" ಎಂದರು.