ಪ್ರೇಮ್ ಸಿಂಗ್ ಆರೋಗ್ಯ ವಿಚಾರಣೆ | ಬಿ ಎಲ್‌ ಸಂತೋಷ್ ಮೆಗ್ಗಾನ್ ಆಸ್ಪತ್ರೆ ಭೇಟಿ ಹಿಂದಿನ ಅಸಲಿ ಕಾರಣವೇನು ಗೊತ್ತೇ?

ಪ್ರವೀಣ್ ನೆಟ್ಟಾರು ಕೊಲೆ ವಿಚಾರದಲ್ಲಿ ತನ್ನ ಕಾರ್ಯಕರ್ತರ ನಂಬಿಕೆಗೆ ಪೆಟ್ಟು ಕೊಡುವಂತೆ ನಡೆದುಕೊಂಡಿದ್ದ ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರ ಮರಳಿ ತಮ್ಮವರ ವಿಶ್ವಾಸ ಗಳಿಸಿಕೊಳ್ಳಲು ಹೊರಟಿವೆ. ಅದರ ಒಂದು ಭಾಗವೇ ಬಿ ಎಲ್ ಸಂತೋಷ್‌ ಮೆಗ್ಗಾನ್ ಆಸ್ಪತ್ರೆ ಭೇಟಿ ಕಾರ್ಯಕ್ರಮ. ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸುವುದರ ಜೊತೆಗೆ ಮರಳಿ ತಮ್ಮೆಲ್ಲ ಹಿಂದೂ ಕಾರ್ಯಕರ್ತರ ಮನ ಗೆಲ್ಲುವುದು ಸಂತೋಷ್ ಭೇಟಿಯ ಹಿಂದಿನ ಉದ್ದೇಶ.

ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಯುವಕರ ಮೇಲಿನ ದಾಳಿ ಪ್ರಕರಣಗಳ ವಿಚಾರದಲ್ಲಿ ಕೇವಲ ಹೇಳಿಕೆಗಳನ್ನೇ ನೀಡುತ್ತಾ ದೂರದಲ್ಲೇ ನಿಂತು ಘಟನಾವಳಿಗಳನ್ನು ಗಮನಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೊದಲ ಬಾರಿಗೆ ರಂಗ ಪ್ರವೇಶ ಮಾಡಿದೆ. ಹಿಂದೂ ಯುವಕರ ಮೇಲಿನ ಹಲ್ಲೆಗಳ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಖುದ್ದು ಅದರ ಪರಿವೀಕ್ಷಣೆಗಿಳಿದಿದೆ.

ಅದರ ಭಾಗವಾಗಿಯೇ ಇಂದು (ಬುಧವಾರ) ಸಾವರ್ಕರ್‌ ಫ್ಲೆಕ್ಸ್ ತೆರವು ವಿಚಾರದಲ್ಲಿ ಚಾಕು ಇರಿತಕ್ಕೊಳಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ ಎಲ್ ಸಂತೋಷ್ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ತೆರಳಿದ್ದರು. ಇವರಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಸಂಸದ ಬಿ ವೈ ರಾಘವೇಂದ್ರ ಜೊತೆಯಾಗಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಹಿಂದೂ ಕಾರ್ಯಕರ್ತರಿಗೆ ತೊಂದರೆಯಾದರೂ, ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದು, ಅವರ ಜೊತೆ ಒಂದಷ್ಟು ಸಮಯ ಕಳೆಯುವುದು ಬಿಜೆಪಿ ನಾಯಕರ ಸಾಮಾನ್ಯ ಕಾರ್ಯಶೈಲಿ. ಆದರೆ, ಈ ಬಾರಿ ಬಿಜೆಪಿ ನಾಯಕರ ಜೊತೆಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು ಗಮನಾರ್ಹ ವಿಚಾರ.

ಬಿ ಎಲ್‌ ಸಂತೋಷ್ ಬಿಜೆಪಿ ಪಕ್ಷದ ಸಂಘಟನಾ ಪ್ರಮುಖರು; ರಾಜ್ಯ ಸಂಘ ಪರಿವಾರದ ನಿರ್ಣಾಯಕ ಶಕ್ತಿ. ಹೀಗಿರುವಾಗ ಸಂತೋಷ್ ಅವರು ಆಸ್ಪತ್ರೆ ಬಾಗಿಲು ಎಡತಾಕಿದರು ಎಂದರೆ, ಅದರ ಅರ್ಥ ಆರ್‌ ಎಸ್‌ ಎಸ್ ರಂಗಪ್ರವೇಶ ಮಾಡಿದಂತೆಯೇ.

ಅಸಲಿ ವಿಚಾರ ಶುರುವಾಗುವುದು ಇಲ್ಲಿಂದಲೇ. ಕೆಲದಿನಗಳ ಹಿಂದಷ್ಟೇ ರಾಜ್ಯವನ್ನೇ ನಡುಗಿಸಿದ್ದ ಕೋಮುಹತ್ಯೆಗಳ ಸಂದರ್ಭದಲ್ಲಿ ಸುಮ್ಮನಿದ್ದ ಸಂಘ ಈಗ ದಿಢೀರ್‌ ಸಾವರ್ಕರ್‌ ವಿಚಾರ ಬಂದಾಕ್ಷಣಕ್ಕೆ ಖುದ್ದು ಅಖಾಡಕ್ಕಿಳಿದಿರುವುದು ಏಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಸಂಘ ನೆಲೆ ನಿಂತಿರುವುದೇ ಕೋಮು ಭಾವನೆಗಳ ಮೇಲೆ. ಆದರೆ ಕರಾವಳಿಯ ಸರಣಿ ಕೊಲೆಗಳ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಇದೇ ಭಾವನೆಗೆ ಪೆಟ್ಟು ಬೀಳುವಂತೆ ನಡೆದುಕೊಂಡಿದ್ದು ಸಂಘದ ಮುಖವಾಣಿಯಾದ ಬಿಜೆಪಿ ಸರ್ಕಾರ. ಬಳಿಕ ಅದರ ಪರಿಣಾಮವನ್ನೂ ಆ ಸರ್ಕಾರ ಮತ್ತದರ ಪಕ್ಷದ ಅಧ್ಯಕ್ಷರು ಎದುರಿಸಿದ್ದೆಲ್ಲವೂ ಈಗ ಇತಿಹಾಸ.

ಈ ಸುದ್ದಿ ಓದಿದ್ದೀರಾ? : ಶೂಟೌಟ್ ಬರೀ ಸ್ಯಾಂಪಲ್, ಅಗತ್ಯ ಬಿದ್ದರೆ ರಾಜ್ಯದಲ್ಲಿ ಯೋಗಿ ಮಾದರಿ ಜಾರಿ: ಕೆ ಎಸ್‌ ಈಶ್ವರಪ್ಪ

ಹೀಗೆ ತಮ್ಮ ಕಾರ್ಯಕರ್ತ ಪಡೆಯೊಳಗಿನ ನಂಬಿಕೆಗೆ ಪೆಟ್ಟು ಕೊಡುವಂತೆ ನಡೆದುಕೊಂಡ ಬಿಜೆಪಿ ಮತ್ತು  ಸಂಘ ಪರಿವಾರ ಮರಳಿ ತಮ್ಮವರ ವಿಶ್ವಾಸ ಗಳಿಸಿಕೊಳ್ಳಲು ಬಿ ಎಲ್ ಸಂತೋಷ್‌ ಅವರನ್ನು ಆಸ್ಪತ್ರೆ ಬಾಗಿಲವರೆಗೂ ಕರೆತಂದಿದೆ. ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸುವುದರ ಜೊತೆಗೆ ಮರಳಿ ತಮ್ಮೆಲ್ಲ ಹಿಂದೂ ಕಾರ್ಯಕರ್ತರ ಮನ ಗೆಲ್ಲುವುದು ಸಂತೋಷ್ ಭೇಟಿಯ ಹಿಂದಿನ ಉದ್ದೇಶ. 'ಸಂಘಕ್ಕಾಗಿ ನಾವು' ಎನ್ನುತ್ತಿದ್ದ ಯುವಕರಿಗೆ ಸ್ಫೂರ್ತಿ ತುಂಬಿ 'ಮರಳಿ ನಿಮ್ಮೊಂದಿಗೆ ಸಂಘ' ಎನ್ನುವುದನ್ನು ತೋರಿಸುವುದು ಸಂತೋಷ್‌ ಆಸ್ಪತ್ರೆ ಭೇಟಿ ಹಿಂದಿನ ಉದ್ದೇಶ. 

ಈ ಸಣ್ಣ ಪ್ರಯತ್ನದ ಮೂಲಕ ನೆಟ್ಟಾರು ಕೊಲೆ ಪ್ರಕರಣದ ವೇಳೆ ಕಳೆದುಕೊಂಡ ಮಾನವನ್ನು ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸುವ ಮೂಲಕ ಪಡೆದುಕೊಳ್ಳಲು ಸಂಘ ಪರಿವಾರ ಮತ್ತು ಬಿಜೆಪಿ ಯೋಜಿಸಿವೆ.        

ನಿಮಗೆ ಏನು ಅನ್ನಿಸ್ತು?
0 ವೋಟ್