ರಾಷ್ಟ್ರಧ್ವಜ ಹಾರಿಸಲು ಸರ್ಕಾರ ಜನರನ್ನು ಪ್ರೇರೇಪಿಸುತ್ತಿರುವ ರೀತಿ ಆಕ್ಷೇಪಾರ್ಹ" ಪ್ರೊ.ಬಿ.ಕೆ.ಚಂದ್ರಶೇಖರ್

  • ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಬಿ ಕೆ ಚಂದ್ರಶೇಖರ್ ಅಸಮಾಧಾನ
  • ಧ್ವಜವು ಎಂದೂ ದೇಶಭಕ್ತಿ ಹೆಸರಲ್ಲಿ ಅಧಿಕಾರ ರಾಜಕಾರಣದ ಸಾಧನವಾಗಿರಲಿಲ್ಲ

“ಮನೆಗಳು, ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸ್ಥಳಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು ಎನ್ನುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮ ಸ್ವಾಗತಾರ್ಹವಾದರೂ, ಅದಕ್ಕೆ ಅನುಸರಿಸುತ್ತಿರುವ ಮಾರ್ಗಗಳು ಹಾಗೂ ಜನರನ್ನು ಪ್ರೇರೇಪಿಸುತ್ತಿರುವ ರೀತಿ ಸಮಂಜಸವಾದದ್ದಲ್ಲ” ಎಂದು ಕಾಂಗ್ರೆಸ್ ಮುಖಂಡ ಪ್ರೊ. ಬಿ ಕೆ ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಭಾರತ ಆಜಾದಿ ಕ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು “ಹರ್ ಘರ್ ತಿರಂಗಾ” ಅಭಿಯಾನ ಆರಂಭಿಸಿವೆ. ರಾಷ್ಟ್ರೀಯ ಹಬ್ಬಗಳ ದಿನ ಹಿಂದಿನಿಂದಲೂ ಸ್ವಯಂಪ್ರೇರಣೆಯಿಂದ ರಾಷ್ಟ್ರಧ್ವಜ ಹಾರಿಸುತ್ತಾ ಬರಲಾಗಿದೆ. ರಾಷ್ಟ್ರಧ್ವಜ ಹಾರಿಸುವ ವಿಷಯ, ದೇಶಭಕ್ತಿಯ ಹೆಸರಲ್ಲಿ ಹಿಂದೆಂದೂ ಅಧಿಕಾರ ರಾಜಕಾರಣದ ಸಾಧನವಾಗಿ ಬಳಕೆ ಆಗಿರಲಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು |‌ ಧ್ವಜ ಕಟ್ಟಲು ಟೆರೇಸ್‌ ಹತ್ತಿದ್ದ ಯುವಕ ಕೆಳಗೆ ಬಿದ್ದು ಸಾವು

“ಗಾಂಧಿ ತತ್ವಕ್ಕೆ ವಿರುದ್ಧವಾಗಿ ಬಸವನಗುಡಿಯಲ್ಲಿ ಪಾಲಿಸ್ಟರ್ ರಾಷ್ಟ್ರಧ್ವಜಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡುತ್ತಿರುವುದು ಅಸಹ್ಯ ಮೂಡಿಸಿತು. ಸರ್ಕಾರಿ ಇಲಾಖೆಗಳು, ನಗರಸಭೆ, ಕಾರ್ಪೊರೇಷನ್, ನಿಗಮ ಮಂಡಳಿಗಳಿಗೆ ರಾಷ್ಟ್ರಧ್ವಜಗಳ ಮಾರಾಟಕ್ಕೆ ಗುರಿ ನಿಗದಿ ಮಾಡಿರುವುದು ಸೇರಿ ಎಲ್ಲ ಘಟನೆಗಳು ರಾಷ್ಟ್ರಧ್ವಜದ ಬಗ್ಗೆ ಜನರಿಗಿದ್ದ ಭಾವನಾತ್ಮಕ ಗೌರವ, ಹೆಮ್ಮೆಗೆ ಧಕ್ಕೆ ತಂದಿವೆ” ಎಂದು ಆರೋಪಿಸಿದ್ದಾರೆ.

“ಯಾವುದೇ ಸರ್ಕಾರ ಅಥವಾ ಪ್ರಭುತ್ವದಿಂದ ಜಾರಿಗೊಳಿಸಲ್ಪಟ್ಟ ದೇಶಭಕ್ತಿ, ತನ್ನದೇ ಆದ ಸ್ವಹಿತಾಸಕ್ತಿ ಸಾಧನೆಗೆ ರಾಜಕೀಯವಾಗಿ ಪಕ್ಷಪಾತದ ಸಾಧನವಾಗಲಿದೆ” ಎಂದು ಅವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್