ಮಳೆಗಾಲದ ಅಧಿವೇಶನ| ನಗುಮೊಗದ ಸಹೃದಯಿ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ: ಸಿದ್ದರಾಮಯ್ಯ

  • ವರ್ಣರಂಜಿತ ವ್ಯಕ್ತಿತ್ವದ ನಾಯಕ ಉಮೇಶ್ ಕತ್ತಿ
  • ರಾಜಕಾರಣ ಮೀರಿ ಸ್ನೇಹಜೀವಿಯಾಗಿದ್ದ ಸಹೃದಯಿ

ಉಮೇಶ್ ಕತ್ತಿ ನಡೆನುಡಿಯಲ್ಲಿ ಒರಟನಾದರು ಸಹೃದಯಿ, ಸದಾ ನಗುಮೊಗದಿಂದಲೇ ಮಾತನಾಡುತ್ತಿದ್ದ ಹಸನ್ಮುಖಿ. ಇಂತಹ ವ್ಯಕ್ತಿಯೋರ್ವನನ್ನು ಕಳೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಂದಿನಿಂದ (ಸೆ.12) ಆರಂಭವಾದ ವಿಧಾನಮಂಡಲ ಮಳೆಗಾಲ ಅಧಿವೇಶನದಲ್ಲಿ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ದಿವಂಗತ ಸಚಿವ ಉಮೇಶ್ ಕತ್ತಿಯವರನ್ನೂ ಒಳಗೊಂಡಂತೆ ಅಗಲಿದ ಪ್ರಭಾಕರ ರಾಣೆ, ಜಿ ವಿ ಶ್ರೀರಾಮರೆಡ್ಡಿ, ಕೆ ಕೆಂಪೇಗೌಡ, ಸಿ ಎಂ ದೇಸಾಯಿ, ಎ ಜಿ ಕೊಡ್ಗಿ, ಈಶಣ್ಣ ಗುಳಗಣ್ಣವರ, ಶಿವಮೊಗ್ಗ ಸುಬ್ಬಣ್ಣ ಅವರಿಗೆ ನುಡಿನಮನ ಸಲ್ಲಿಸಿದರು.

ಉಮೇಶ್ ಕತ್ತಿ ಮತ್ತು ತಮ್ಮ ಒಡನಾಟದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅಗಲಿದ ಸ್ನೇಹಿತನನ್ನು ಸ್ಮರಿಸಿದರು.

ಉಮೇಶ್ ಕತ್ತಿ, ಹಿರಿಯ ಮುತ್ಸದ್ಧಿ ರಾಜಕಾರಣಿಯಾಗಿದ್ದವರು. ಸ್ನೇಹ ಜೀವಿ, ಹಾಸ್ಯ ಪ್ರವೃತ್ತಿಯನ್ನು ಹೊಂದಿದ್ದರು. ಅವರ ಕ್ಷೇತ್ರದಲ್ಲಿ ಅಪಾರ ಪ್ರೀತಿ ವಿಶ್ವಾಸಗಳಿಸಿದ್ದರು. ನಾನು ವಿರೋಧ ಪಕ್ಷದಲ್ಲಿದ್ದರೂ ಕಳೆದ ಚುನಾವಣೆಯಲ್ಲಿ ಮನೆಗೆ ಊಟಕ್ಕೆ ಕರೆದಿದ್ದರು. ನಾನೂ ಹೋಗಿದ್ದೆ. ಎರಡು ಗಂಟೆ ಅವರ ಮನೆಯಲ್ಲಿದ್ದೆ. ಅವರು ಏನು ಮಾತನಾಡಿದ್ದರು ಎಂದು ಬಹಿರಂಗ ಮಾಡಲು ಆಗಲ್ಲ. ಅಂತಹ ವಿಶಾಲ ಹೃದಯವನ್ನು ಉಮೇಶ್ ಕತ್ತಿ ಹೊಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯಲ್ಲಿ ಉಮೇಶ್ ಕತ್ತಿ ಅವರದ್ದೇ ಆದ ಶಕ್ತಿ ಗಳಿಸಿದ್ದರು. ಉದ್ಯಮ, ರಾಜಕಾರಣ, ಸಹಕಾರಿ ಕ್ಷೇತ್ರದಲ್ಲಿಯೂ ಯಶಸ್ಸು ಕಂಡಿದ್ದರು. ಬೆಳಗಾವಿ ಜಿಲ್ಲೆಯ ವರ್ಣರಂಜಿತ ರಾಜಕಾರಣಿಯಾಗಿದ್ದರು. ಒಂದರ್ಥದಲ್ಲಿ ಅಜಾತಶತ್ರು ಆಗಿದ್ದವರು ಉಮೇಶ್ ಕತ್ತಿ ಎಂದು ವಿಪಕ್ಷ ನಾಯಕರು ಹೇಳಿದರು.

ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡಿ, ಆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಉಮೇಶ್ ಕತ್ತಿ ಹೇಳಿಕೆ ನೀಡಿದ ಸಂದರ್ಭದಲ್ಲಿ ನಾನು ಅವರೊಂದಿಗೆ ಮಾತನಾಡಿ ನಿಮ್ಮ ಉದ್ದೇಶ ಸರಿಯಾಗಿದೆ ಆದರೆ ಪ್ರತ್ಯೇಕ ರಾಜ್ಯದ ವಿಚಾರ ಕೇಳಬೇಡಿ ಎಂದಿದ್ದೆ ಎಂದು ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ವಿಧಾನಮಂಡಲ ಅಧಿವೇಶನ ಆರಂಭ; ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ

ಉಮೇಶ್ ಕತ್ತಿಯಂತೆ ನಮ್ಮನ್ನಗಲಿದ ಇತರ ಪ್ರಮುಖರು ಅವರವರ ಕ್ಷೇತ್ರದಲ್ಲಿ ಹೆಸರು ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟವರು. ಇಂತಹ ಮಹನೀಯರನ್ನು ನಾವು ಕಳೆದುಕೊಂಡಿರುವುದು ನೋವಿನ ವಿಚಾರ. ಮೃತರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಸಿದ್ದರಾಮಯ್ಯ ಹೇಳಿದರು.

ಸದನದಲ್ಲಿ ಸಿದ್ದರಾಮಯ್ಯ ಬಳಿಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜೆಡಿಎಸ್ ಹಿರಿಯ ನಾಯಕ ಎಚ್ ಕೆ ಕುಮಾರಸ್ವಾಮಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್