ಕ್ಷೇತ್ರ ಬಿಟ್ಟುಕೊಡುವ ಮಾತಿನ ಹಿಂದಿರುವ ಮರ್ಮವೇನು? ಯಡಿಯೂರಪ್ಪ ಮುಂದಿರುವ ‘ಶಿಕಾರಿ’ ಯಾವುದು?

ವಯಸ್ಸಿನ ಕಾರಣ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗಿದೆ. ಈಗ ಅವರು, ಅದೇ ವಯಸ್ಸಿನ ಕಾರಣ ನೀಡಿ ಮುಂದಿನ ಚುನಾವಣೆ ವೇಳೆಗೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಹಾಗೇನಾದರೂ ಯಡಿಯೂರಪ್ಪ ಚುನಾವಣಾ ಕಣದಿಂದ ಹಿಂದೆ ಸರಿದರೆ ಮತ್ತೊಮ್ಮೆ ಬಿಜೆಪಿಗೆ ಪೆಟ್ಟು ಬೀಳುವ ಎಲ್ಲ ಸಾಧ್ಯತೆಗಳಿವೆ.
B S Yediyurappa

ದಕ್ಷಿಣ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಅಧಿಕಾರಕ್ಕೆ ತಂದ ಬಿ ಎಸ್ ಯಡಿಯೂರಪ್ಪ ಈಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಸ್ವಕ್ಷೇತ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ತಮ್ಮ ಎರಡನೇ ಪುತ್ರ ಬಿ ವೈ ವಿಜಯೇಂದ್ರನಿಗೆ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿ ಪಕ್ಷದ ಮಟ್ಟಿಗೆ ‘ಮಾಸ್ಟರ್ ಸ್ಟ್ರೋಕ್’ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಿದವರಲ್ಲಿ ‘ಮೊದಲನೇ ಸಾಲಿನ ಮೊದಲಿಗರು’ ಯಡಿಯೂರಪ್ಪ. ಕೇವಲ ನಗರ ಮತ್ತು ಪ್ರಬಲ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಪಕ್ಷವನ್ನು ಇಂದು ರಾಜ್ಯದ ಹಿಂದುಳಿದ ಮತ್ತು ದಲಿತ ಸಮುದಾಯಗಳವರೆಗೆ ತಲುಪಿಸಿದ, ದೊಡ್ಡ ಮಟ್ಟದ ‘ವೋಟ್ ಬ್ಯಾಂಕ್’ ಸೃಷ್ಟಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಅವರ ಶಕ್ತಿ ಮತ್ತು ಮಿತಿ ಏನೆಂಬುದರ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟವಾಗಿ ಗೊತ್ತಿದೆ.

79 ವರ್ಷದ ಯುಡಿಯೂರಪ್ಪ ಈಗ ದೈಹಿಕವಾಗಿ ದಣಿದಿದ್ದಾರೆ. ವಯೋಸಹಜ ದೈಹಿಕ ಸಮಸ್ಯೆಗಳು ಅವರನ್ನು ಬಾಧಿಸುತ್ತಿವೆ. ಇದೆಲ್ಲದರ ನಡುವೆಯೂ ರಾಜಕಾರಣ ಮಾಡುವ ಅವರ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ವೇದಿಕೆಯಿಂದ ಕೆಳಗಿಳಿದು “ರಾಜ್ಯದಾದ್ಯಂತ ಪ್ರವಾಸ ಮಾಡಿ 2023ರ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವಂತೆ ಮಾಡುತ್ತೇನೆ, ಪಕ್ಷ ಸಂಘಟನೆ ಮಾಡುತ್ತೇನೆ” ಎಂಬ ಧಾಟಿಯಲ್ಲಿ ಮಾತನಾಡಿದ್ದರು.

ಅಧಿಕಾರದಿಂದ ಕೆಳಗಿಳಿದು ಒಂದು ವರ್ಷವಾದರೂ ಅವರ ‘ರಾಜ್ಯ ಪ್ರವಾಸ'ಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಎರಡು ತಿಂಗಳ ಹಿಂದೆ ರಾಜ್ಯ ಬಿಜೆಪಿ ನಡೆಸಿದ ವಿಭಾಗಾವಾರು ಪಕ್ಷದ ಸಭೆಯ ನೇತೃತ್ವವನ್ನೂ ಅವರಿಗೆ ಕೊಡಲಿಲ್ಲ. ಎಂಎಲ್‌ಸಿ ಟಿಕೆಟ್ ಹಂಚಿಕೆ, ಸಂಪುಟ ವಿಸ್ತರಣೆ, ಪದಾಧಿಕಾರಿಳ ನೇಮಕ ಸೇರಿದಂತೆ ಪ್ರಮುಖ ನಿರ್ಧಾರಗಳ ಸಮಯದಲ್ಲಿ ಯಡಿಯೂರಪ್ಪ ಅವರನ್ನು ದೂರವಿಟ್ಟಂತೆ ಕಾಣಿಸುತ್ತಿದೆ.

ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ನಂತರ ಪಕ್ಷ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಅರೋಪವಿದೆ. ಇದಕ್ಕೆ ಇಂಬು ನೀಡುವಂತೆ ಪಕ್ಷದ ಯಾವುದೇ ಪ್ರಮುಖ ವೇದಿಕೆಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. 

ಈ ಸುದ್ದಿ ಓದಿದ್ದೀರಾ?: ‘ಸಹಿಷ್ಣು ಹಿಂದೂ’ ಹೆಸರಲ್ಲಿ ಸಾಹಿತಿಗಳಿಗೆ ಬೆದರಿಕೆ-ಭಾಗ 1 | ಒಂದೇ ಕೈಬರಹ, ಒಂದೇ ಶೈಲಿ, ಒಂದೇ ಪ್ರದೇಶದಿಂದ ಬರುತ್ತಿವೆ ಪತ್ರಗಳು!

ವಿಜಯೇಂದ್ರನಿಗೆ  ಸಿಗದ ಸ್ಥಾನಮಾನ; ಹೊಸ ದಾಳ ಉರುಳಿಸಿದ ಯಡಿಯೂರಪ್ಪ

ಈಗಾಗಲೇ ಒಂದು ಭಾರಿ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪನವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಆದರೆ, ಬಿಜೆಪಿಗೆ ಮಾತ್ರ 2013ರಲ್ಲಿ ಭಾರೀ ಪೆಟ್ಟು ಕೊಟ್ಟಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಾತಾಳ ಕಂಡಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಮೋದಿ ಅಲೆ ಜೋರಾಗಿದ್ದಾಗಲೂ ಕೂಡಾ ಕರ್ನಾಟಕದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಯಡಿಯೂರಪ್ಪ ಕೊಟ್ಟ ಪೆಟ್ಟಿನ ಗಾಯ ಮಾಯುವ ಮನ್ನವೇ ಎಚ್ಚೆತ್ತ ಹೈಕಮಾಂಡ್, ಅವರನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿತ್ತು.

ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲನ್ನಾಗಿ ಕರ್ನಾಟಕವನ್ನು ಯಡಿಯೂರಪ್ಪ ರೂಪಿಸಿದ್ದಾರೆ. ಮೈತ್ರಿ ಸರ್ಕಾರವನ್ನು ಉರುಳಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಬಿ ವೈ ವಿಜಯೇಂದ್ರ ಪಾಲೂ ದೊಡ್ಡದಿದೆ. ಪಕ್ಷಕ್ಕಾಗಿ ಇಷ್ಟೆಲ್ಲ ದುಡಿದ ತಂದೆ-ಮಗನನ್ನು ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಕೋಪ ಅವರ ಆಂತರ್ಯದಲ್ಲಿ, ಬೆಂಬಲಿಗರ ಮನಸ್ಸಿನಲ್ಲಿ ಇದೆ. ಒಂದು ವೇಳೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರೆ ಬಿಜೆಪಿಗೆ ಹಿನ್ನಡೆಯಾಗುವ ಎಲ್ಲ ಸಾಧ್ಯತೆಗಳಿವೆ.

ಪಕ್ಷದಲ್ಲಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿಯಂತಹ ಲಿಂಗಾಯತ ನಾಯಕರಿದ್ದರೂ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತ ಛಾತಿ ಅವರ್‍ಯಾರಿಗೂ ಇಲ್ಲ. ಆದ್ದರಿಂದಲೇ ಯಡಿಯೂರಪ್ಪ ಈಗ ಹೊಸ ದಾಳ ಉರುಳಿಸಿ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಡುವ ಹೇಳಿಕೆ ನೀಡಿ, ನಿವೃತ್ತಿ ದಾಳ ಉರುಳಿಸಿದ್ದಾರೆ. ಕ್ಷೇತ್ರ ಬಿಡುವ ಹೇಳಿಕೆ ನೀಡುವ ಮೂಲಕ ಯಡಿಯೂರಪ್ಪ ಕಣ್ಣಿಟ್ಟಿರುವ 'ಶಿಕಾರಿ' ಯಾವುದು ಎಂಬ ಬಗ್ಗೆ ಬಿಜೆಪಿ ಗಂಭೀರವಾಗಿ ಯೋಚಿಸುವಂತಾಗಿದೆ.

ವಯಸ್ಸಿನ ಕಾರಣ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗಿದೆ. ಈಗ ಅವರು, ಅದೇ ವಯಸ್ಸಿನ ಕಾರಣ ನೀಡಿ ಮುಂದಿನ ಚುನಾವಣೆ ವೇಳೆಗೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಹಾಗೇನಾದರೂ ಯಡಿಯೂರಪ್ಪ ಚುನಾವಣಾ ಕಣದಿಂದ ಹಿಂದೆ ಸರಿದರೆ ಮತ್ತೊಮ್ಮೆ ಬಿಜೆಪಿಗೆ ಪೆಟ್ಟು ಬೀಳುವ ಎಲ್ಲ ಸಾಧ್ಯತೆಗಳಿವೆ.

ಈ ಸುದ್ದಿ ಓದಿದ್ದೀರಾ?: ‘ಸಹಿಷ್ಣು ಹಿಂದೂ’ ಹೆಸರಲ್ಲಿ ಸಾಹಿತಿಗಳಿಗೆ ಪ್ರಾಣ ಬೆದರಿಕೆ ಭಾಗ-2 | 61 ಮಂದಿಗೆ ಜೀವ ಬೆದರಿಕೆ ಇದ್ದರೂ ಸರ್ಕಾರದ ಗಾಢ ಮೌನ!

ಸಂಪುಟ ವಿಸ್ತರಣೆ; ನಿಗಮ-ಮಂಡಳಿಗಳ ಮೇಲೆ ಕಣ್ಣು!

ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಂಪುಟ ವಿಸ್ತರಣೆಯಾಗಿ ಮೂರ್ನಾಲ್ಕು ತಿಂಗಳು ಆಗಬೇಕಿತ್ತು. ಉಪ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಪರಿಷತ್ ಚುನಾವಣೆ ಕಾರಣ ನೀಡಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಅನುಮತಿ ನೀಡಿಲ್ಲ. ಚುನಾವಣೆಗೆ ಏಳೆಂಟು ತಿಂಗಳು ಮಾತ್ರ ಬಾಕಿ ಇರುವುದರಿಂದ ಹೆಚ್ಚಿನ ದಿನ ಹೀಗೆ ಕಾಲ ದೂಡುವ ಹಾಗಿಲ್ಲ. ಈಗ ದೆಹಲಿ ಭೇಟಿಯಲ್ಲಿರುವ ಬೊಮ್ಮಾಯಿಗೆ ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿ ನೇಮಕಕ್ಕೆ ಅನುಮತಿ ಪಡೆದುಕೊಂಡು ಬರುವ ಸಾಧ್ಯತೆಗಳಿವೆ. 

ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿ ನೇಮಕಾತಿಗಳ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ, ತಮ್ಮ ಆಪ್ತ ಬಳಗಕ್ಕೆ ಹೆಚ್ಚಿನ ಅವಕಾಶ ಕೊಡಿಸಲು ಕ್ಷೇತ್ರ ಬಿಡುವ ಮಾತುಗಳನ್ನಾಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. 

ಹೈಕಮಾಂಡ್ ಮೇಲೆ ಒತ್ತಡ ತಂತ್ರ; ವಿರೋಧಿಗಳಿಗೆ ಸಂಕಟ 

ಕಳೆದವಾರ ದೇವನಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಚಿಂತನಾ ಶಿಬಿರದಲ್ಲೂ ಯಡಿಯೂರಪ್ಪ ಅವರ ಅನುಭವವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕೆಂಬ ಚರ್ಚೆಯಾಗಿದೆ ಎಂಬ ಮಾತುಗಳಿವೆ. 79ರ ಇಳಿವಯಸ್ಸಿನಲ್ಲಿ ಯಡಿಯೂರಪ್ಪ ಅವರಿಗೆ ಪಕ್ಷಕ್ಕಾಗಿ ದುಡಿಯಬೇಕೆಂಬ ಅನಿವಾರ್ಯತೆ ಇಲ್ಲ. ಅವರಿಗೆ ಇರುವ ಏಕೈಕ ಉದ್ದೇಶವೇ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯ ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆಯೂರಿಸುವುದು. ಈಗಾಗಲೇ ವಿಜಯೆಂದ್ರ ಪಕ್ಷದೊಳಗೆ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿದ್ದಾರೆ. 

ಈಗ ತಮ್ಮ ಸ್ವಕ್ಷೇತ್ರವನ್ನು ಪುತ್ರನಿಗೆ ಬಿಡುವ ಮಾತುಳನ್ನಾಡಿರುವ ಯಡಿಯೂರಪ್ಪ ಪರ ಅವರ ಬೆಂಬಲಿಗರು ಪಕ್ಷದ ವೇದಿಕೆಯಲ್ಲಿ ಮಾತನಾಡುವ ಸಾಧ್ಯತೆಗಳಿವೆ. ಯಡಿಯೂರಪ್ಪ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂಬ ವಾದ ಮಂಡಿಸುವವರೂ ಇದ್ದಾರೆ. ಆ ಮೂಲಕ ಪಕ್ಷದಿಂದ ತಪ್ಪಿರುವ ತಮ್ಮ ಹಿಡಿತವನ್ನು ಮರು ಸ್ಥಾಪನೆ ಮಾಡಿಕೊಂಡು, ತಮ್ಮ ಪುತ್ರನ ರಾಜಕೀಯ ಜೀವನವನ್ನು ಹಸಿರಾಗಿಸುವ ಯೋಚನೆಯಲ್ಲಿದ್ದಾರೆ ಯಡಿಯೂರಪ್ಪ.

ಯಡಿಯೂರಪ್ಪ ಅವರ ಬಲ, ಮಾರ್ಗದರ್ಶನ ಇರಲಿದೆ: ಬೊಮ್ಮಾಯಿ

ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಡುವ ಯಡಿಯೂರಪ್ಪ ಮಾತಿನ ಒಳಮರ್ಮ ಬಸವರಾಜ ಬೊಮ್ಮಾಯಿ ಅವರಿಗೆ ಚೆನ್ನಾಗಿ ಗೊತ್ತಿದೆ. ತನ್ನ ಅತ್ಯಾಪ್ತನಾದ ಬಸವರಾಜ ಬೊಮ್ಮಾಯಿ, ಅವರ ನೀರೀಕ್ಷೆಗೂ ಮೀರಿ ಸಂಘದ ಹಿರಿಯ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿರುವ ಬೇಸರ ಯಡಿಯೂರಪ್ಪ ಅವರಿಗಿದೆ ಎಂಬ ಮಾತು ಬಿಜೆಪಿ ವಲಯದಿಂದ ಕೇಳಿಬಂದಿವೆ.

ಈ ಸುದ್ದಿ ಓದಿದ್ದೀರಾ?: ‘ಸಹಿಷ್ಣು ಹಿಂದೂ’ ಹೆಸರಲ್ಲಿ ಸಾಹಿತಿಗಳಿಗೆ ಪ್ರಾಣ ಬೆದರಿಕೆ ಭಾಗ-3 | ಸರ್ಕಾರದ ವಿರುದ್ಧ ಸಾಹಿತಿಗಳ ಆಕ್ರೋಶ

ಯಡಿಯೂರಪ್ಪ ಕ್ಷೇತ್ರ ಬದಲಾವಣೆ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಮುಂದಿನ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಬಲ, ಮಾರ್ಗದರ್ಶನ ಇರಲಿದೆ. ಅವರಿಗೆ ಸುಸ್ತು, ನಿವೃತ್ತಿ ಇಲ್ಲ. ಅವರು ನಿರಂತರ ಹೋರಾಟಗಾರರು. ಅವರು ಪಕ್ಷದೊಂದಿಗೆ ಸದಾ ಇದ್ದಾರೆ. ಅವರಿಗೆ ತಮ್ಮದೇ ಆದ ಮಹತ್ವವಿದ್ದು, ಪಕ್ಷದ ವರಿಷ್ಠರಿಗೂ ಅವರ ಮಹತ್ವದ ಅರಿವಿದೆ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು” ಎಂದು ಹೇಳಿದ್ದಾರೆ.

ಆದರೆ, ಯಡಿಯೂರಪ್ಪ ಮಾತ್ರ ಈ ಬಗ್ಗೆ ಮೌನವಾಗಿದ್ದಾರೆ. 'ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹೊಡೆತ ಬೀಳುತ್ತಾ' ಎಂಬ ಪತ್ರಕರ್ತರ ಪ್ರಶ್ನೆಗೂ ಅವರಿಂದ ಮೌನವೇ ಉತ್ತರವಾಗಿದೆ. “ಈ ಬಗ್ಗೆ ಮುಂದೆ ಮಾತನಾಡುತ್ತೇನೆ" ಎಂದು ಹೇಳಿದ್ದಾರೆ.

ಯಡಿಯೂರಪ್ಪ ಕ್ಷೇತ್ರ ಬಿಡುವ ಹೇಳಿಕೆಯನ್ನು ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ನಾಯಕರು ಹೇಗೆ ಸ್ವೀಕರಿಸುತ್ತಾರೆ. ಅವರ ಈ ಹೇಳಿಕೆಯಿಂದ ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿ ನೇಮಕದಲ್ಲಿ ಅವರ ಆಪ್ತರಿಗೆ ಹೆಚ್ಚಿನ ಅವಕಾಶ ಸಿಗುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್