ಸಿದ್ದರಾಮಯ್ಯ ಮಾಡಿದ್ದು ಜನ್ಮೋತ್ಸವವಲ್ಲ ಮಜೋತ್ಸವ- ನಳಿನ್‌ಕುಮಾರ್ ಕಟೀಲ್ 

  • ಜನಪರ ಕಾಳಜಿ ಇಲ್ಲದ ವ್ಯಕ್ತಿ ಸಿದ್ದರಾಮಯ್ಯ: ನಳಿನ್ ಕುಮಾರ್ ಆಕ್ರೋಶ
  • ಸಿದ್ದರಾಮಯ್ಯನವರದ್ದು ಮುಖ್ಯಮಂತ್ರಿ ಆಗುವ ಏಕೋದ್ದೇಶ: ಕಟೀಲ್ ಕಿಡಿ

"ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಜನರನ್ನು ಮರೆತು ತಮ್ಮ ಜನ್ಮದಿನ ಆಚರಣೆ ಮೂಲಕ ಸಿದ್ದರಾಮಯ್ಯ ಮಜೋತ್ಸವದಲ್ಲಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಟೀಕಿಸಿದ್ದಾರೆ.‌ ಸಿದ್ದರಾಮಯ್ಯ ಅಮೃತ ಮಹೋತ್ಸವದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಾರ್ಯಕ್ರಮ ಆಯೋಜನೆ ಬಗ್ಗೆ ಕಿಡಿಕಾರಿದ್ದಾರೆ.

"ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಮಜಾವಾದಿ ಸಿದ್ದರಾಮಯ್ಯರವರು ಸುಮಾರು 75 ಕೋಟಿಗಿಂತ ಅಧಿಕ ಖರ್ಚು ಮಾಡಿ ತಮ್ಮ ಬೆಂಬಲಿಗರಿಂದ ಜನ್ಮದಿನೋತ್ಸವ ಆಚರಿಸಿಕೊಳ್ಳುತ್ತಿರುವುದು ಎಷ್ಟು ಸರಿ" ಎಂದು ನಳಿನ್‌ಕುಮಾರ್‌ ಪ್ರಶ್ನಿಸಿದ್ದಾರೆ.

"ಬಿಜೆಪಿ ಸರ್ಕಾರ ಕರ್ನಾಟಕದ ಜನರ ಸಂಕಷ್ಟ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ “ಜನೋತ್ಸವ” ಆಚರಣೆಯನ್ನೇ ರದ್ದು ಮಾಡಿತ್ತು. ಆದರೆ, ಕಾಂಗ್ರೆಸ್ಸಿಗರ ಒಂದು ಬಣವು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಲು ಈ ಅದ್ಧೂರಿ ಹಾಗೂ ಸಂಭ್ರಮದ ಕಾರ್ಯಕ್ರಮಕ್ಕೆ ದುಂದುವೆಚ್ಚ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ" ಎಂದು ನಳಿನ್‌ಕುಮಾರ್‌ ದೂರಿದರು.

"ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸದ್ಯ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು. ಅದರ ಬದಲಾಗಿ ಅವರು ತಮ್ಮದೇ ಜನ್ಮದಿನವನ್ನು ಆಚರಿಸಿಕೊಂಡು ವಿಜೃಂಭಿಸುವ ಅವಶ್ಯಕತೆ ಇತ್ತೇ" ಎಂದೂ ನಳಿನ್‌ಕುಮಾರ್‌ ಕಟೀಲ್  ಪ್ರಶ್ನಿಸಿದರು.

"ತಮ್ಮ ಆಡಳಿತದ ಅವಧಿಯಲ್ಲಿ ಹಿಂದೂ ವಿರೋಧಿ ಧೋರಣೆಯನ್ನೇ ಅನುಸರಿಸಿದ್ದ ಸಿದ್ದರಾಮಯ್ಯ, ಪಿಎಫ್ಐ ಮತ್ತು ಎಸ್‌ಡಿಪಿಐ ಪಕ್ಷಗಳ ನೂರಾರು ಮುಖಂಡರ ಕೇಸುಗಳನ್ನು ರದ್ದು ಮಾಡಿ ಆ ಸಂಘಟನೆಗಳ ಮೂಲಕ ಕೋಮುವಾದಕ್ಕೆ ಪುಷ್ಟಿ ನೀಡಿದ್ದರು. ಅಲ್ಪಸಂಖ್ಯಾತರ ಓಲೈಸಿ, ಹಿಂದೂಗಳ ಹತ್ಯಾಕಾಂಡಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ್ದರು. ಕಾಂಗ್ರೆಸ್ಸಿಗರು ಈಗ ಅಧಿಕಾರ ಕಳೆದುಕೊಂಡಿದ್ದು, ಅಲ್ಲಲ್ಲಿ ಗಲಭೆ ಹಾಗೂ ಮತೀಯ ಭಾವನೆಗಳನ್ನು ಹುಟ್ಟು ಹಾಕುವ ಕಾರ್ಯಕ್ಕೆ ಪ್ರೋತ್ಸಾಹ ಕೊಡುವ ಕೆಲಸ ಮುಂದುವರಿಸಿದ್ದಾರೆ" ಎಂದು ನಳಿನ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? : ಒಂದು ನಿಮಿಷದ ಓದು: ಅಮಿತ್ ಶಾ- ನಳಿನ್‌ ಕುಮಾರ್ ಕಟೀಲ್ ಭೇಟಿ; ಎನ್‌ಐಎ ತನಿಖೆ ಚುರುಕುಗೊಳಿಸುವಂತೆ ಮನವಿ

"ರಾಜ್ಯದ ಕಾಂಗ್ರೆಸ್ ಪಕ್ಷದೊಳಗಡೆ ಮುಖ್ಯಮಂತ್ರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಜಮೀರ್ ಅಹ್ಮದ್, ಮಲ್ಲಿಕಾರ್ಜುನ ಖರ್ಗೆ- ಹೀಗೆ ಅನೇಕರು ರೇಸ್‌ನಲ್ಲಿದ್ದಾರೆ. ದಿನ ಕಳೆದಂತೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಆದರೆ, ಡಬಲ್ ಇಂಜಿನ್ ಸರ್ಕಾರಗಳ ಅಭಿವೃದ್ಧಿಯ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್