ರಕ್ತದೋಕುಳಿ ಹರಿಸಿದವನೇ ರಕ್ತದಾನ ಮಾಡಲು ನಿಂತಾಗ | ವಿವಾದದ ಮಡುವಿನಲ್ಲಿ ʻಸೈಲೆಂಟ್ʼ ರಕ್ತ ಚರಿತ್ರೆ

ಸೈಲೆಂಟ್‌ ಸುನೀಲ, ಖಾದಿ ತೊಡಲು ಸಿದ್ಧನಾದ ಪಾತಕಲೋಕದ ಹೊಸ ತಲೆಮಾರಿನ ನಾಯಕ. 'ಸೈಲೆಂಟ್‌' ಆಗಿಯೇ ರಂಗಪ್ರವೇಶ ಮಾಡಲು ನಿಂತಿದ್ದ ಸುನೀಲನ ರಾಜಕೀಯ ಎಂಟ್ರಿ ವಿಚಾರ ಪಾತಕ ಲೋಕದ ಮಾದರಿಯಲ್ಲೇ ವಾಗ್ವಾದದ 'ವೈಯಲೆನ್ಸ್‌' ಸೃಷ್ಟಿಸಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಟಾಕ್‌ವಾರ್‌ ಹುಟ್ಟು ಹಾಕಿದೆ.
silent sunila

2,4,6, ಮತ್ತು 17. ಇದು ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಭಾರೀ ಸುದ್ದಿಗೆ ಈಡಾಗಿ, ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆ ಹಾಕಿಕೊಟ್ಟ ಸೈಲೆಂಟ್ ಸುನೀಲನ ಓನ್ ಲೈನ್ ಲೈಫ್ ಲಿಸ್ಟ್.

ಸರಳವಾಗಿ ಹೇಳುವುದಾದರೆ, ಸೈಲೆಂಟ್ ಸುನೀಲನೆಂಬ ವ್ಯಕ್ತಿಯ ವೈಲೆಂಟ್ ಲೈಫ್ ಹಿಸ್ಟರಿ ಪೊಲೀಸ್ ಡೈರಿಯಲ್ಲಿ ದಾಖಲಾಗಿರುವ ಪರಿ ಇದು.

Eedina App

ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯ ಆರಂಭಿಸಿ, ಬದಲಾವಣೆಯ ಬದುಕಿಗೆ ಹೊರಳಲು ಸಿದ್ಧವಾಗುತ್ತಿದ್ದವನು ಸುನೀಲ ಕುಮಾರ್, ಅಲಿಯಾಸ್ ಸೈಲೆಂಟ್ ಸುನೀಲ.

ಪಾತಕ ಲೋಕದ ಪಾಪದ ಕೊಳೆ ತೊಳೆದುಕೊಂಡು ಖಾದಿ ತೊಟ್ಟು ಜನಸಾಮಾನ್ಯರ ಸೇವೆಗೆ ಸಿದ್ಧನಾಗಲು ನಿಂತ ಸುನೀಲನಿಗೆ, ಅವನ ಕೈ ಹಿಡಿದಿದ್ದ ನಸೀಬು ಅದ್ಯಾಕೋ ಕೈ ಕೊಟ್ಟು ಬಿಟ್ಟಿದೆ. ಪರಿಣಾಮ ಅವನ ಜೊತೆ ಇದ್ದ ಜನಪ್ರತಿನಿಧಿಗಳೆಲ್ಲರೂ ಈಗ ಕಳಂಕದ ಪಟ್ಟ ಹೊತ್ತು ಜನರೆದುರು ಕೈ ಮುಗಿದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.

AV Eye Hospital ad
silent sunila with bjp mp

ಇಷ್ಟಕ್ಕೂ ಮೀಡಿಯಾದಲ್ಲಿ ಸೆನ್ಸೇಷನ್ ಹುಟ್ಟುಹಾಕಿ, ರಾಜಕಾರಣಿಗಳ ಟಾಕ್‌ವಾರ್‌ಗೆ ಕಾರಣವಾಗಿರುವ ಈ ಸುನೀಲನ ಕಥೆ ಕೇಳಿದ್ರೆ, ಒಂದು ಕ್ಷಣ ಓ ಅವನೇನಾ ಇವನು ಎನ್ನುವ ಉದ್ಘಾರ ಹೊರ ಹೊಮ್ಮುವುದು ಗ್ಯಾರಂಟಿ.

ಸೈಲೆಂಟ್ ಸುನೀಲ ಅಂದ್ರೆ ಎಷ್ಟು ಜನರಿಗೆ ಗೊತ್ತಾಗುತ್ತೋ ಇಲ್ಲವೋ. ಆದರೆ 2004ರಲ್ಲಿ ಬೆಂಗಳೂರಿನ ಫೇಮಸ್ ಚಾಲುಕ್ಯ ಹೊಟೇಲ್ ಬಳಿ ಬೆಕ್ಕಿನಕಣ್ಣು ರಾಜೇಂದ್ರ ಎಂಬ ಭೂಗತ ಪಾತಕಿಯನ್ನು ಹೊಡೆದುರುಳಿಸಿ, ಬೆಂದಕಾಳೂರಿನ ಪಾತಕ ಲೋಕದ ಹೊಸ ತಲೆಮಾರಿಗೆ ಶ್ರೀಕಾರ ಹಾಡಿದವನು ಇದೇ ಸೈಲೆಂಟ್ ಸುನೀಲ ಅಲಿಯಾಸ್ ಗಾಯತ್ರಿ ನಗರ ಸುನೀಲ. ಸುನೀಲ ಕುಮಾರ್ ಅಲಿಯಾಸ್ ಗಾಯತ್ರಿ ನಗರ ಸುನೀಲನಿಗೆ 'ಸೈಲೆಂಟ್ ಸುನಿ' ಅನ್ನೋ ಹೆಸರು ಬಂದಿದ್ದೂ ಕೂಡ ಕುತೂಹಲಕಾರಿ ಸಂಗತಿಯೇ.

ಗಾಯತ್ರಿ ನಗರ ಸುನೀಲ, ಸೈಲೆಂಟ್‌ ಸುನೀಲನಾಗಿದ್ದು
ರೌಡಿಶೀಟರ್ ಪಟ್ಟವೇರಿದ ಬಳಿಕ ಪ್ರಕರಣಗಳ ಸಲುವಾಗಿ ಸ್ಟೇಷನ್ ಎಂಟ್ರಿ ಹಾಕುತ್ತಿದ್ದ ಸುನೀಲ, ಖಾಕಿ ವಿಚಾರಣೆ ವೇಳೆ ಉತ್ತರ ಕೊಡದೆ ಒದೆ ತಿನ್ನುತ್ತಿದ್ದನೇ ಹೊರತು, ಬಾಯಿ ಬಿಡುತ್ತಿರಲಿಲ್ಲ. ಹೀಗೆ ಕೇಳಿದ್ದೆಲ್ಲಕ್ಕೂ ಸೈಲೆಂಟ್ ಆಗಿ ನಿಲ್ಲುತ್ತಿದ್ದದ್ದು ಒಂದು ಕಾರಣವಾದರೆ, ಹಾಕೋ ಸ್ಕೆಚ್‌ ಅನ್ನ ಸದ್ದಿಲ್ಲದೆ ಮಾಡಿ ಮುಗಿಸ್ತಿದ್ದ ಅನ್ನೋದು ಮತ್ತೊಂದು ಕಾರಣ. ಆ ಹಂತದ ಸೈಲೆನ್ಸಿನ ಕಾರಣಕ್ಕೇ 'ಸೈಲೆಂಟ್ ಸುನೀಲ' ಎನ್ನುವ ಪರ್ಯಾಯ ನಾಮ ಸೇರಿಕೊಂಡಿತು.

ಹೆಸರಿಗಷ್ಟೇ ಸೈಲೆಂಟ್ ಆಗಿದ್ದ ಸುನೀಲ ಜೀವನದುದ್ದಕ್ಕೂ ಹಾದು ಬಂದಿದ್ದು ವೈಲೆಂಟ್ ಹಾದಿಯನ್ನು. ಗಾಯತ್ರಿ ನಗರದ ಗಲ್ಲಿಯಲ್ಲಿ ಕ್ರಿಕೆಟ್ ಆಡಿಕೊಂಡು ಬೆಳೆಯುತ್ತಿದ್ದ ಕಾಲದಲ್ಲಿ ಆಟದ ವಿಚಾರವಾಗಿ ಹುಡುಗನೊಬ್ಬನಿಗೆ ವಿಕೆಟ್‌ನಿಂದ ಬಡಿದ ವಿಚಾರದಿಂದ ಆರಂಭವಾದ ಸುನೀಲನ ಕ್ರೈಂ ಎಂಟ್ರಿ, ಆನಂತರ ಬಂದು ನಿಂತಿದ್ದು 2,4,6, ಮತ್ತು 17ರ ಲೆಕ್ಕಕ್ಕೆ. ಅಂದರೆ ತನ್ನ 41ನೇ ವರ್ಷಕ್ಕೆ 2 ಡಬಲ್ ಮರ್ಡರ್, 4 ಕೊಲೆ ಯತ್ನ, 6 ಕೊಲೆ ಸಹಿತ ಒಟ್ಟು 17 ಪ್ರಕರಣಗಳನ್ನು ಸುನೀಲ ತನ್ನ ಮೇಲೆ ಎಳೆದುಕೊಂಡಿದ್ದಾನೆ.

ಸೈಲೆಂಟ್ ಚರಿತ್ರೆ
ಕ್ರಿಕೆಟ್ ಆಟದ ವೇಳೆ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಬಾಲಾಪರಾಧಿಯಾಗಿ ಗುರುತಿಸಿಕೊಂಡು ಸುನೀಲ, ಪಾತಕ ಲೋಕಕ್ಕೆ ಪದಾರ್ಪಣೆ ಮಾಡಿದ್ದು 1996ರಲ್ಲಿ. ಗೆಳೆಯರ ಜೊತೆ ಸೇರಿಕೊಂಡು ಹೆಡ್ ಕಾನ್‌ಸ್ಟೇಬಲ್ ಶೆಟ್ಕಾಳಪ್ಪ ಎನ್ನುವವರ ಕೈ ಕತ್ತರಿಸಿ ಹತ್ಯೆ ಮಾಡಿದ್ದ. ಇಲ್ಲಿಂದ ಆರಂಭವಾದ ಈತನ ಕ್ರೈಂ ಎಂಟ್ರಿ ಆತನನ್ನು, ಏರಿಯಾದೊಳಗಿನ ಲೋಕಲ್ ವಾರ್‌ಗಳ ಮೂಲಕ ಪಾತಕಲೋಕದೊಳಗೆ ತಂದು ನಿಲ್ಲಿಸಿತು. 

sunila with chandrashekara swamiji

ಜೈಲಿನಲ್ಲಿ ಜೊತೆಯಾದವರೊಂದಿಗೆ ಸೇರಿಕೊಂಡು 2001ರಲ್ಲಿ ವಿಜಯನಗರದ ವೀರೇಶ್ ಥಿಯೇಟರ್ ಬಳಿ ಬೈಲುರವಿ ಎನ್ನುವ ರೌಡಿಯೊಬ್ಬನನ್ನು ಕೊಚ್ಚಿಹಾಕಿದ್ದ ಕೇಸ್‌ನಲ್ಲಿ ʼಎʼ ಒನ್ ಆಗಿದ್ದರೂ, ಜಾಣತನದಿಂದ ಅದರಿಂದ ತಪ್ಪಿಸಿಕೊಂಡ ಸುನೀಲ ಕೆಲಕಾಲ ತಲೆಮರೆಸಿಕೊಂಡಿದ್ದ. ಬಳಿಕ ಮತ್ತೊಂದು ಬಡಿದಾಟದ ಪ್ರಕರಣದಲ್ಲಿ ತನ್ನ ಗೆಳೆಯ ಒಂಟೆ ರೋಹಿತನ ಪರ ನಿಂತು, ಪೊಲೀಸರಿಂದ ಕೋಳ ತೊಡಿಸಿಕೊಂಡಿದ್ದ. ಇದಾದ ಬಳಿಕ ಸುನೀಲನಿಗೆ ಯಂಗ್ ರೌಡಿ ಇಮೇಜ್ ತಂದುಕೊಟ್ಟಿದ್ದು 2004ರ ಚಾಲುಕ್ಯ ಹೋಟೆಲ್ ಮರ್ಡರ್ ಕೇಸ್.

ಬೆಂಗಳೂರಿನ ಪಾತಕ ಲೋಕದ ಬಹುದೊಡ್ಡ ಹೆಸರುಗಳಾಗಿದ್ದ ಕೊತ್ವಾಲ್, ಜೈರಾಜ್ ಟೀಮುಗಳು ಕೋಸ್ಟಲ್ ಡಾನ್ ಮುತ್ತಪ್ಪ ರೈ ಗ್ಯಾಂಗ್ ಎದುರು ಅಧಿನಾಯಕರುಗಳಿಲ್ಲದೆ ಅಸ್ತಿತ್ವಕ್ಕೆ ಹೋರಾಟ ನಡೆಸುತ್ತಿದ್ದ ಕಾಲದಲ್ಲಿ, ಸುನೀಲ ಪ್ರೈಂ ಪಾತಕ ಲೋಕಕ್ಕೆ ಕಾಲಿಟ್ಟ. ದೊಡ್ಡ ಹೆಸರು ಮಾಡಲು ಕಾದಿದ್ದ ಸುನೀಲನಿಗೆ ಅವಕಾಶದ ಹಾದಿಯಾಗಿ ಬಂದಿದ್ದು ಬೆಕ್ಕಿನಕಣ್ಣು ರಾಜೇಂದ್ರನ ಕೊಲೆ ಸುಪಾರಿ.

ದೊಡ್ಡವರು ಕೊಟ್ಟ ಡೀಲ್ ಅನ್ನು ಡೇರ್ ಆಗಿ ಮುಗಿಸಲು ಮುಹೂರ್ತ ಫಿಕ್ಸ್‌ ಮಾಡಿದ್ದ ಸುನೀಲ ಆ್ಯಂಡ್‌ ಟೀಮ್, 2004ರ ನವೆಂಬರ್‌ನಲ್ಲಿ ಚಾಲುಕ್ಯ ಹೊಟೇಲ್ ಆವರಣದಲ್ಲಿ ಬೆಕ್ಕಿನಕಣ್ಣು ರಾಜೇಂದ್ರನನ್ನು ತನ್ನ ಗೆಳೆಯರಾದ ಒಂಟೆ ರೋಹಿತ್ ಸೇರಿದಂತೆ ನಾಲ್ವರ ಜೊತೆಗೂಡಿ ಹತ್ಯೆ ಮಾಡಿದ್ದ. ಇಲ್ಲಿಂದ ಸೈಲೆಂಟ್ ಸುನೀಲ, ವೈಲೆಂಟ್ ಸುನೀಲನಾಗಿ ಬೆಂಗಳೂರಿನ ಪಾತಕಲೋಕದ ಹೊಸ ತಲೆಮಾರಿನ ಆರಂಭಿಕನಾಗಿ ಗುರುತಿಸಿಕೊಂಡ.

ಹತ್ಯೆ ಹಿನ್ನೆಲೆಯಲ್ಲಿ 2007ರವರೆಗೂ ಸುನೀಲ ಜೈಲಿನಲ್ಲಿದ್ದ. ಜೈಲಿನಿಂದ ಹೊರಬಿದ್ದ ಮೇಲೆ ಬಡ್ಡಿ ವ್ಯವಹಾರ, ವಿಡಿಯೋ ಗೇಮ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಸುನೀಲ, 2009ರಲ್ಲಿ ಜಮೀನು ವ್ಯಾಜ್ಯದ ವಿಚಾರದಲ್ಲಿ ಯಲಹಂಕದ ರೌಡಿ ಬುಲೆಟ್ ರವಿಯನ್ನು 'ಎತ್ತಿ' ಮತ್ತೆ ಸುದ್ದಿ ಮಾಡಿದ. ಇದಾದ ಬಳಿಕ ಹೆಣ್ಣೂರು ಡಬಲ್ ಮರ್ಡರ್ ಕೇಸಿನಲ್ಲೂ ಸುನೀಲ ಮತ್ತವನ ಗ್ಯಾಂಗ್ ಮೇಲೆ ಕೇಸ್ ದಾಖಲಾಗಿತ್ತು.

sunila alokkumar

ಈ ಎಲ್ಲ ಕೇಸ್‌ಗಳ ಹಿನ್ನೆಲೆಯಲ್ಲಿ 2010ರಲ್ಲಿ ಪೊಲೀಸರು ಸುನೀಲನನ್ನು ಕಂಬಿ ಹಿಂದೆ ಕೂರಿಸಿದ್ದರು. ಮತ್ತೆ ಅಲ್ಲಿಂದ ಹೊರ ಬಂದ ಸುನೀಲ ಆ್ಯಂಡ್‌ ಟೀಮ್, 2012ರಲ್ಲಿ ಎಲೆಕ್ಟ್ರಾನಿಕ್ ಸಿಟಿ ರೌಡಿ ರುದ್ರನ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದರೆನ್ನುವ ಕಾರಣಕ್ಕೆ ಖಾಕಿಪಡೆ ಮತ್ತೆ ಮುದ್ದೆ ಮುರಿಯಲು ಕಳುಹಿಸಿತ್ತು. ಇದಾದ ಬಳಿಕ ಬದಲಾದ ಕಾಲಕ್ಕೆ ತಕ್ಕಂತೆ ಜೀವನ ಶೈಲಿಯನ್ನೂ ಬದಲಿಸಲು ಸುನೀಲ ಮುಂದಾಗಿದ್ದ.

ಇದರ ನಡುವೆಯೇ ಬೆಂಗಳೂರು ಪಾತಕಲೋಕಕ್ಕೆ ಸಿಂಹಸ್ವಪ್ನರಾಗಿದ್ದ ಶಂಕರ್ ಬಿದರಿ, ಗೋಪಾಲ್ ಹೊಸೂರು, ಅಲೋಕ್ ಕುಮಾರ್ ಅವರಂತಹ ಘಟಾನುಘಟಿ ಪೊಲೀಸ್ ಅಧಿಕಾರಿಗಳು, ಸುನೀಲನನ್ನೂ ಒಳಗೊಂಡಂತೆ ಎಲ್ಲರಿಗೂ ಖಡಕ್ ವಾರ್ನಿಂಗ್ ನೀಡಿ, 'ಲಕ್ಷ್ಮಣ ರೇಖೆ ಮೀರಿದ್ರೆ ಉಡಾಯಿಸುವ ಎಚ್ಚರಿಕೆ'ಯನ್ನೂ ನೀಡಿ ಕಳುಹಿಸಿತ್ತು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ತನ್ನ 'ವರ್ಕಿಂಗ್ ಸ್ಟೈಲ್' ಬದಲಿಸಿಕೊಂಡ ಸುನೀಲ, ಭೂ ವಿವಾದ ಸೆಟಲ್ಮೆಂಟ್‌ಗಳಂತಹ ಹೈ ಪ್ರೊಫೈಲ್ ಕೇಸ್‌ಗಳನ್ನ ಹ್ಯಾಂಡಲ್ ಮಾಡುತ್ತಾ ಹುಡುಗರ ಹೊಟ್ಟೆ ತುಂಬಿಸುವ ಕಾಯಕ ಮಾಡುತ್ತಿದ್ದ. ಹೀಗಾಗಿ ಈತನ ಮೇಲೆ 2017ರವರೆಗೂ ಯಾವುದೇ ದೊಡ್ಡ ಪ್ರಕರಣಗಳು ದಾಖಲಾಗಿರಲಿಲ್ಲ.

ಕಟ್ಟಕಡೆಯದ್ದು ಎನ್ನುವಂತೆ ಅದೇ ವರ್ಷ ಟಾಟಾ ರಮೇಶ್ ಎಂಬಾತನಿಗೆ ಬೆದರಿಕೆ ಹಾಕಿದ ಪ್ರಕರಣ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸರು ಸುನೀಲ, ಮತ್ತವನ ಗೆಳೆಯ ಒಂಟೆ ರೋಹಿತ್ ಮತ್ತು ಕೆಲ ಪ್ರಮುಖರ ಮೇಲೆ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿದ್ದರು. ಹೀಗೆ ಒಟ್ಟಾರೆ 17 ಕೇಸ್ ಹೊಂದಿದ್ದ ಸುನೀಲ, 16 ಕೇಸ್‌ಗಳಿಂದ ಖುಲಾಸೆಯಾಗಿ ಕೋಕಾಕೇಸ್ ಒಂದರಲ್ಲೇ ಠಾಣೆ ಮೆಟ್ಟಿಲೇರಿ ಬರುತ್ತಿದ್ದ.‌ ಈಗ ಆ ಪ್ರಕರಣವೂ ವಿಚಾರಣೆಯ ಹಂತದಲ್ಲಿದ್ದು ನ್ಯಾಯಾಲಯ ಇದಕ್ಕೂ 'ಸ್ಟೇ' ನೀಡಿದೆ. ಹಾಗಾಗಿ, ಸುನೀಲ ಸುಗಮ ಸಂಚಾರಕ್ಕ ಯಾವ ಅಡ್ಡಿಗಳಿರಲಿಲ್ಲ. ಹೀಗೆ ಇದ್ದೂ ಇಲ್ಲದಂತಿರುವ ಪ್ರಕರಣವೊಂದೇ ಈಗ ಸುನೀಲನನ್ನು ರೌಡಿ ಎನ್ನಲು ಉಳಿದಿರುವ ಏಕೈಕ ದಾಖಲೆ.

ಸೈಲೆಂಟ್ ಖಾಸಗಿ ಬದುಕು  
ಇಷ್ಟೆಲ್ಲಾ ಕುಖ್ಯಾತಿ ಹೊಂದಿರುವ ಸೈಲೆಂಟ್ ಸುನೀಲನ ಖಾಸಗಿ ಜೀವನ ಕೊಂಚ ಡಿಫರೆಂಟ್. ಸುನೀಲನ ಬಗ್ಗೆ ಎಲ್ಲವೂ ಗೊತ್ತಿದ್ದರೂ ಪ್ರೀತಿಸಿ ಮದುವೆಯಾದ ಆತನ ಪತ್ನಿ ಅವನಷ್ಟೇ ಗಟ್ಟಿಗಿತ್ತಿ. ಹೀಗೆ ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬದಲಾವಣೆ ಬಯಸಿದ್ದ ಸುನೀಲ, ನಾಗರಿಕ ಸಮಾಜಕ್ಕೆ ಮರಳಲು ಅವಕಾಶಕ್ಕಾಗಿ ಕಾಯುತ್ತಿದ್ದ.

ಚಿತ್ರರಂಗದ ಮೂಲಕ 'ರೀ ಬರ್ತ್‌' ಪಡೆಯಲು ಹೊರಟಿದ್ದ ಸುನೀಲನಿಗೆ, ಈ ವಿಚಾರದಲ್ಲಿ ಸಪೋರ್ಟ್‌ ಮಾಡಲು ಹೊರಟಿದ್ದವರು, ಹಿಂದೊಮ್ಮೆ  ಸಿಲಿಕಾನ್‌ ಸಿಟಿ ಡಾನ್‌ ಪಟ್ಟಕ್ಕೇರಲು ಸೈಡಲ್ಲಿ ನಿಂತು ಸ್ಕೆಚ್‌ ಹಾಕಿಕೊಟ್ಟ ಅಗ್ನಿ ಶ್ರೀಧರ್‌ ಅನ್ನೋದು ಗಮನಾರ್ಹ ವಿಚಾರ. ಆದರೆ, ಅಲ್ಲಿ ಅದೃಷ್ಟ ಕೈ ಹಿಡಿಯದ ಕಾರಣ, ಆ ಪ್ರಯತ್ನದಲ್ಲಿ ಸುನೀಲ ಕೊಂಚ ಎಡವಿ ನಿಂತ.

sunila with agani sridhar

ಹೀಗೆ ಮತ್ತೊಂದು ಹೊಸರೂಪದಲ್ಲಿ ಅಸ್ತಿತ್ವ ಕಂಡುಕೊಳ್ಳಲು ನಿಂತಿದ್ದ ಸುನೀಲನಿಗೆ ಮತ್ತೆ ಅವಕಾಶ ಲಾಂಚ್ ಪ್ಯಾಡ್ ಎನಿಸಿದ್ದು ರಾಜಕೀಯ. ರಕ್ತದ ಕಲೆ ತೊಳೆದುಕೊಂಡು ಬಂದವರನ್ನು ಬಿಗಿದಪ್ಪಿಕೊಂಡ 'ಖಾದಿಯೇ ತನಗೆ ಸೂಕ್ತ' ಎಂದುಕೊಂಡು, ಸುನೀಲನಿಗೆ ಆ ಅವಕಾಶ ಕೊಡಿಸಿದ್ದು ಚಾಮರಾಜಪೇಟೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ.

ರಾಜಕೀಯದತ್ತ ಸುನೀಲನ ಚಿತ್ತ
ಸದ್ಯ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ಶಾಸಕ ಜಮೀರ್ ಎದುರಿಗೆ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಸುನೀಲ ಸೈಲೆಂಟಾಗೇ ಸಿದ್ಧತೆ ನಡೆಸಿದ್ದಾನೆ ಎನ್ನುವುದು ಲೇಟೆಸ್ಟ್ ವಿಚಾರ. ಇದಕ್ಕಿಂತಲೂ ಕುತೂಹಲ ವಿಚಾರ ಎಂದರೆ ಸುನೀಲನಿಗೆ ಬೆನ್ನೆಲುಬಾಗಿ ನಿಲ್ಲುತ್ತಿರುವುದು ರಕ್ತದಾನ ಶಿಬಿರದ ರೂವಾರಿಯಾಗಿರುವ ಹಿಂದೂ ಸಂಘಟನೆ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬಿಜೆಪಿ.

silent sunil with bjp mla

ಅದರ ಭಾಗವಾಗಿಯೇ ಸುನೀಲನ ಬ್ಯಾಗ್ರೌಂಡ್ ಅರಿವಿದ್ದರೂ ಆತನ ಜೊತೆ ಸಂಸದರಾದ ತೇಜಸ್ವಿ ಸೂರ್ಯ, ಪಿ ಸಿ ಮೋಹನ್, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆತನ ಮುಂದಿನ ಮಾರ್ಗ ಸುಗಮವಾಗಲು ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಸರ್ಚ್‌ ವಾರೆಂಟ್‌ ಇದ್ದರೂ ವೇದಿಕೆ ಮೇಲೆ ಸುನೀಲ ರಾಜಾರೋಷವಾಗಿ ಪೊಲೀಸರೆದುರು ಓಡಾಡಿಕೊಂಡಿದ್ದ ಎನ್ನುವುದು ಹೊಸ ವಿಚಾರ.

ಈ ಸುದಿ ಓದಿದ್ದೀರಾ? : ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ: ಪಕ್ಷದ ಮೇಲಿನ ಟೀಕೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಸ್ಪಷ್ಟನೆ

ಹೇಳಿ ಕೇಳಿ, ಬೆಂಗಳೂರನ್ನೇ ನಡುಗಿಸಿದ ಲೋಕಲ್ ಪಾತಕಲೋಕದ ಲಿಸ್ಟ್‌ನಲ್ಲಿರುವ ಹೆಸರುಗಳಲ್ಲಿ ಚಾಮರಾಜಪೇಟೆಯೂ ಒಂದು. ಇಂತಹ ಜಾಗದಲ್ಲಿ ಭವಿಷ್ಯ ಅರಸಲು ಬಯಸಿರುವ ಸುನೀಲನಿಗೆ ಈ ಕಾರಣಕ್ಕೆ ಬಿಜೆಪಿ ದಿಗ್ಗಜರು ಬ್ಯಾಕಪ್ ಮಾಡಲು ನಿಂತಿದ್ದಾರಂತೆ. ಈ ಅದೃಷ್ಟದ ಆಟದಲ್ಲಿ ನಸೀಬು ಕೈ ಹಿಡಿದರೆ ಚಾಮರಾಜಪೇಟೆ, ಇಲ್ಲದ್ದಿದ್ದರೆ ಗಾಯತ್ರಿ ನಗರವೇ ಸುನೀಲನ ಪರ್ಮನೆಂಟ್‌ ಅಡ್ರೆಸ್‌ ಆಗಲಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app