ಕಟೀಲ್ ನಂತರ ರಾಜ್ಯ ಬಿಜೆಪಿಗೆ ಮುಂದಿನ ಸಾರಥಿ ಯಾರು? ಮತ್ತೊಬ್ಬ ‘ಸಂಘನಿಷ್ಠರಿಗೆ’ ಒಲಿಯುತ್ತಾ ಪಟ್ಟ?

ಕಟೀಲ್ ಜಾಗಕ್ಕೆ ರಾಜ್ಯದ ಮೂವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಪ್ರಖರ ಹಿಂದುತ್ವವಾದಿ ರಾಜಕಾರಣಿ ಎನಿಸಿರುವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಂಘಪರಿವಾರ ಹಿನ್ನೆಲೆಯ ಮತ್ತೊಬ್ಬ ಪ್ರಮುಖ ನಾಯಕ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮತ್ತು ಹಾಲಿ ಸಚಿವ ಗೋವಿಂದ ಕಾರಜೋಳ ಹೆಸರು ಕೇಳಿಬರುತ್ತಿವೆ. ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಸಹ ರೇಸ್‌ನಲ್ಲಿದ್ದಾರೆ.
BJP Karnataka

ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಧಿಕಾರಾವಧಿ ಶೀಘ್ರದಲ್ಲೇ ಮುಗಿಯಲಿದೆ. ರಾಜ್ಯ ವಿಧಾನಸಭೆ ಚುನಾವಣೆ ಕೂಡ ಸಮೀಪದಲ್ಲಿದೆ. ಇದೆಲ್ಲದರ ನಡುವೆ ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಯಾರಾಗಲಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸಮರ್ಥವಾಗಿ ಎದುರಿಸಬಲ್ಲ ವ್ಯಕ್ತಿಯೊಬ್ಬರನ್ನು ಅಧ್ಯಕ್ಷ ಹುದ್ದೆಗೆ ನೇಮಿಸಲು ಬಿಜೆಪಿ ಹುಡುಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದು ಅಧಿಕಾರ ಹಿಡಿಯಬೇಕೆಂಬ ಉಮೇದಿನಲ್ಲಿರುವ ಬಿಜೆಪಿಗೆ ಈಗ ಸಮರ್ಥ ನಾಯಕತ್ವದ ಅಗತ್ಯ ಇದೆ. ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಹಲವು ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆಯಾದರೂ, ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಬಿ ಎಸ್ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ಇದ್ದ ಗಟ್ಟಿತನ ನಳಿನ್‌ಕುಮಾರ್ ಕಟೀಲ್ ಅವರಲ್ಲಿ ಕಾಣಲಿಲ್ಲ ಎಂಬ ಸಾರ್ವಜನಿಕ ಅಭಿಪ್ರಾಯಗಳಿವೆ.

'ಸಂಘನಿಷ್ಠ' ಮತ್ತು 'ಪಕ್ಷನಿಷ್ಠ'ರ ಹೆಸರು ಮುನ್ನಲೆಗೆ! 

ನಳಿನ್‌ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸುವುದು ಅನುಮಾನ. ಒಂದು ಕಡೆ ಪಕ್ಷದ ತಳಮಟ್ಟದ ಕಾರ್ಯಕರ್ತರೇ ಕಟೀಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮತ್ತೊಂದು ಕಡೆ, ಮೂರು ಬಾರಿ ದಕ್ಷಿಣಕನ್ನಡ ಸಂಸದರಾಗಿದ್ದರೂ ಅವರು ಹೇಳಿಕೊಳ್ಳುವಂತ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಲ್ಲ. ಕಟೀಲ್ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳೇ ವ್ಯಕ್ತವಾಗುತ್ತಿದ್ದು, ಅವರನ್ನು ಬದಲಿಸುವುದು ಖಚಿತವೆನ್ನಲಾಗುತ್ತಿದೆ.

ಕಟೀಲ್ ಜಾಗಕ್ಕೆ ರಾಜ್ಯದ ಮೂವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಪ್ರಖರ ಹಿಂದುತ್ವವಾದಿ ರಾಜಕಾರಣಿ ಎನಿಸಿರುವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಂಘಪರಿವಾರ ಹಿನ್ನೆಲೆಯ ಮತ್ತೊಬ್ಬ ಪ್ರಮುಖ ನಾಯಕ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮತ್ತು ಹಾಲಿ ಸಚಿವ ಗೋವಿಂದ ಕಾರಜೋಳ ಹೆಸರು ಕೇಳಿಬರುತ್ತಿವೆ.

ಹಿಂದುತ್ವ ರಾಜಕಾರಣದ ಮೂಲಕವೇ ರಾಜ್ಯದಾದ್ಯಂತ ಹೆಸರು ಮಾಡಿರುವ ಸಿ ಟಿ ರವಿ, ಚಿಕ್ಕಮಗಳೂರು ಕ್ಷೇತ್ರದಿಂದ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಹೌದು. ಇನ್ನು ಅರವಿಂದ ಲಿಂಬಾವಳಿ ಕೂಡ ಸಂಘಪರಿವಾರದ ಹಿನ್ನೆಲೆ ಹೊಂದಿದ್ದು, ಅವರ ಮೂಲ ಉತ್ತರ ಕರ್ನಾಟಕವಾದರೂ, ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಹೆಸರಿನ ಮೇಲೆ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಭೋವಿ ಸಮುದಾಯದ ಇವರು, ದಲಿತ ಕೋಟಾದ ಮೇಲೆ ಆಯ್ಕೆಯಾಗುವ ಸಾಧ್ಯತೆಗಳಿವೆ.

ಸಿ ಟಿ ರವಿ ಮತ್ತು ಅರವಿಂದ ಲಿಂಬಾವಳಿ ನಂತರ ಹಾಲಿ ಸಚಿವ ಗೊಂವಿಂದ ಕಾರಜೋಳ ಹೆಸರೂ ಕೇಳಿಬರುತ್ತಿದೆ. ಮುಧೋಳ ಕ್ಷೇತ್ರದಲ್ಲಿ ನಿರಂತವಾಗಿ ಗೆಲ್ಲುತ್ತಿರುವ ಇವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಬಿಎಸ್‌ವೈ ಕಾರಣಕ್ಕಾಗಿಯೇ ಜನತಾ ಪರಿವಾರ ತೊರೆದು ಬಿಜೆಪಿ ಸೇರಿದ್ದಾರೆ. ಪ್ರಬಲ ಖಾತೆಗಳನ್ನು ನಿರ್ವಹಿಸಿದ್ದಾರೆ. ದಲಿತ ಕೋಟಾ ಮತ್ತು ಯಡಿಯೂರಪ್ಪ ಬಣ ಹಠ ಹಿಡಿದರೆ ಕಾರಜೋಳ ಅವರಿಗೂ ರಾಜ್ಯಾಧ್ಯಕ್ಷ ಹುದ್ದೆ ಒಲಿಯುವ ಸಾಧ್ಯತೆ ಇದೆ.

ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ; ಸಿ ಟಿ ರವಿ ನಾಯಕತ್ವ!

ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರವೂ ಲಿಂಗಾಯತ ಮತಬ್ಯಾಂಕ್‌ಗೆ ತೊಂದರೆಯಾಗದಂತೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ ಬಿಜೆಪಿ ಹೈಕಮಾಂಡ್. ಬಿ ಎಸ್ ಯಡಿಯೂರಪ್ಪ ಕಾರಣಕ್ಕಾಗಿಯೇ ಲಿಂಗಾಯತ ಸಾಮುದಾಯ ಪಕ್ಷದ ಜತೆಗಿದೆ ಎಂಬುದು ಬಿಜೆಪಿ ಹೈಕಮಾಂಡ್‌ಗೆ ಅರಿವಿದೆ. ಇದೇ ಕಾರಣಕ್ಕೆ ಯಡಿಯೂರಪ್ಪ ಸೂಚಿಸಿದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಲಾಗಿದೆ. ಈಗ ಒಕ್ಕಲಿಗ ಸಮುದಾಯದ ಸಿ ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿ, ಲಿಂಗಾಯತ ಮತ್ತು ಒಕ್ಕಲಿಗೆ ‘ಕಾಂಬಿನೇಷನ್’ನಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗುವ ಸಾಧ್ಯತೆ ಇದೆ.

ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳುತ್ತಾ, ಅವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಾ ಲಿಂಗಾಯತ ‘ಮತ ಬ್ಯಾಂಕ್’ ಭದ್ರಪಡಿಸಿಕೊಳ್ಳುವುದು. ಸಿ ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿ, ಮತ್ತೊಂದು ಕಡೆ ಒಕ್ಕಲಿಗ ಸಮುದಾಯಕ್ಕೆ ಮುಂದಿನ ಮುಖ್ಯಮಂತ್ರಿ ಸಿ ಟಿ ರವಿ ಎಂದು ಪರೋಕ್ಷವಾಗಿ ಹೇಳುತ್ತಾ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಹುಡುಕುವುದು ಮತ್ತೊಂದು ಉದ್ದೇಶವಾಗಿದೆ. ಸಿ ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದರೆ ಸಂಘದವರನ್ನೇ ಹುದ್ದೆಯಲ್ಲಿ ಮುಂದುವರೆಸಿದಂತಾಗುತ್ತದೆ.

ದಲಿತರಿಗೆ ಮಣೆ ಹಾಕುವುದಾದರೆ ಲಿಂಬಾವಳಿಗೆ ಮೊದಲ ಆದ್ಯತೆ!

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ದಲಿತ ಸಮುದಾಯದ ಮುಖಂಡರಿಗೆ ನೀಡುವುದಾದರೆ ಅರವಿಂದ ಲಿಂಬಾವಳಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಭೋವಿ ಸಮುದಾಯಕ್ಕೆ ಸೇರಿರುವ ಲಿಂಬಾವಳಿಗೆ ಹುದ್ದೆ ನೀಡಿದರೆ, ದಲಿತರಿಗೆ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಬಹುದು. ಜತೆಗೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಸಂಘಪರಿವಾರದ ನಾಯಕನನ್ನೇ ಮುಂದುವರೆಸಿದಂತಾಗುತ್ತದೆ.

ಆದರೆ ಅರವಿಂದ ಲಿಂಬಾವಳಿಗೆ ಬಿಜೆಪಿ ನೇತೃತ್ವ ನೀಡಿದರೆ ದಲಿತ ಸಮುದಾಯದ ಇತರೆ ಸಾಮುದಾಯಗಳು ಮುನಿಸಿಕೊಳ್ಳುವ ಸಾಧ್ಯತೆಗಳಿವೆ. ದಲಿತ ಸಮಯದಾಯದ ಸ್ಪೃಶ್ಯ ಜಾತಿಗಳಾದ ಲಂಬಾಣಿ ಮತ್ತು ಭೋವಿ ಸಮುದಾಯಗಳಿಗೆ ಬಿಜೆಪಿ ಮಣೆ ಹಾಕುತ್ತದೆ ಎಂಬ ಆರೋಪ ಹೊತ್ತುಕೊಂಡೇ ಚುನಾವಣೆ ಎದುರಿಸಬೇಕು. 

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಈಗಾಗಲೇ ಬಿಜೆಪಿ ಜತೆಗೆ ಮುನಿಸಿಕೊಂಡಿರುವ ಪರಿಶಿಷ್ಟ ಎಡಗೈ ಸಮುದಾಯ ಮತ್ತು ಕಾಂಗ್ರೆಸ್ ಜತೆಗೆ ಹೆಚ್ಚು ಗುರುತಿಸಿಕೊಂಡಿರುವ ಬಲಗೈ ಸಮುದಾಯದ ಮತಗಳು ಬಿಜೆಪಿಗೆ ಕಡಿಮೆಯಾಗಲಿವೆ.
ಅರವಿಂದ ಲಿಂಬಾವಳಿಗೆ ಮಣೆ ಹಾಕಿದರೆ ಪರಿಶಿಷ್ಟ ಸಮುದಾಯದ ಇತರೆ ಜಾತಿಗಳು ಮುನಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಮತ್ತು ಯಡಿಯೂರಪ್ಪ ಅಪ್ತ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ಯಡಿಯೂರಪ್ಪ ಕೂಡ ಹೈಕಮಾಂಡ್ ಮಟ್ಟದಲ್ಲಿ ಕಾರಜೋಳ ಪರ ಲಾಬಿ ನಡೆಸುವ ಸಾಧ್ಯತೆ ಇದೆ. ಕಾರಜೋಳರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ, ದಲಿತ ಸಮುದಾಯ ಎಡಗೈ, ಬಲಗೈ ಮತ್ತು ಇತರೆ ಸಣ್ಣ ಸಣ್ಣ ಜಾತಿಗಳು ಬಿಜೆಪಿ ಕೈಹಿಡಿಯಲಿವೆ ಎಂಬ ಲೆಕ್ಕಾಚಾರವೂ ಇದೆ.

ಬಿಜೆಪಿ ಮೂಲಗಳ ಪ್ರಕಾರ, ಚಿತ್ರದುರ್ಗ ಸಂಸದ ಹಾಗೂ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ. ಮೂಲತಃ ನಾರಾಯಣಸ್ವಾಮಿ ಎಬಿವಿಪಿ ಮತ್ತು ಆರ್‍‌ಎಸ್‌ಎಸ್‌ ಹಿನ್ನೆಲೆ ಹೊಂದಿದ್ದು, ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆರ್‍‌ಎಸ್‌ಎಸ್‌ ಪ್ರಮುಖರಾದ ಸಂತೋಷ್‌ಜಿ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಕಾರಜೋಳ ಅವರಿಗೆ ಅಧ್ಯಕ್ಷ ಹುದ್ದೆ ಕೊಡಬೇಕೆಂಬ ಒತ್ತಡ ಹೆಚ್ಚಾದರೆ, ವಯಸ್ಸಿನ ಕಾರಣ ನೀಡಿ ನಾರಾಯಣಸ್ವಾಮಿಗೆ ಮಣೆ ಹಾಕುವ ಎಲ್ಲ ಸಾಧ್ಯತೆಗಳಿವೆ.

ಈಗಾಗಲೇ ಹಲವು ರೀತಿಯ ವಿವಾದ ಮತ್ತು ಹಗರಣಗಳ ಆರೋಪಗಳಿಂದ ಬಸವಳಿದಿರುವ ಬಿಜೆಪಿ, ಅಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಬಲ್ಲ ಅಭ್ಯರ್ಥಿಯನ್ನು ಹುಡುಕುತ್ತಿದೆ. ಇದೆಲ್ಲದರ ನಡುವೆ ಜಾತಿ ಮತ್ತು ಹಿಂದುತ್ವದ ಲೆಕ್ಕಾಚಾರವೂ ಇದ್ದು, ಅರವಿಂದ ಲಿಂಬಾವಳಿ, ಸಿಟಿ ರವಿ, ಎ ನಾರಾಯಣಸ್ವಾಮಿ ಮತ್ತು ಗೊವಿಂದ ಕಾರಜೋಳ ಈ ನಾಲ್ವರಲ್ಲಿ ಯಾರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂಬುದೇ ಕುತೂಹಲ.  

ಬಿಜೆಪಿ ಹೈಕಮಾಂಡ್ ಹಲವು ಬಾರಿ ಕೊನೇ ಕ್ಷಣದಲ್ಲಿ ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕಳೆದ ಬಾರಿ  ಕಟೀಲ್ ಅವರನ್ನು ಅಚ್ಚರಿ ಆಯ್ಕೆ ಮಾಡಿದಂತೆ, ಈ ಮೂವರನ್ನು ಹೊರತುಪಡಿಸಿ ಮತ್ತೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆರಗಳಿವೆ. ಬಿಜೆಪಿ ಮುಂದಿನ ಸಾರಥಿ ಯಾರಾಗಲಿದ್ದಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಏಕೆಂದರೆ, ಚುನಾವಣೆ ದಿನಗಣನೆ ಶುರುವಾಗಿರುವುದರಿಂದ ಬಿಜೆಪಿ ಈ ವಿಚಾರದಲ್ಲಿ ದಿನದೂಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್