ಕಾರ್ಪೊರೇಟ್‌ಗಳ ಸಾಲ ಮನ್ನಾ ಮಾಡುವ ಮೋದಿಯವರು ಯಾಕೆ ರೈತರ ಸಾಲ ಮನ್ನಾ ಮಾಡುತ್ತಿಲ್ಲ: ದಿನೇಶ್ ಗುಂಡೂರಾವ್

  • ಸರಣಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
  • ರೈತರ ಆತ್ಮಹತ್ಯೆ ವಿಚಾರದಲ್ಲೂ ಸತ್ಯ ಮುಚ್ಚಿಡುವುದ್ಯಾಕೆ?

ದೇಶದಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ರೈತರ ಆತ್ಮಹತ್ಯೆಗೆ ಅನೇಕ ಕಾರಣಗಳಿವೆ. ಬೆಳೆ ನಷ್ಟ, ಹವಾಮಾನ ವೈಪರೀತ್ಯ, ಸೂಕ್ತ ಬೆಲೆಯಿಲ್ಲದೆ ರೈತ ಹತಾಶನಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅತಿ ಮುಖ್ಯವಾಗಿ ಸಾಲದ ಸುಳಿಯಲ್ಲಿ ಸಿಲುಕುವುದು ರೈತನ ಆತ್ಮಹತ್ಯೆಗೆ ಪ್ರಮುಖ ಕಾರಣ. ವಿಪರ್ಯಾಸವೆಂದರೆ ಮೋದಿಯವರು ಕಾರ್ಪೊರೇಟ್ ಕುಳಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲ ಯಾಕೆ ಮನ್ನಾ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

‘2014 ರಿಂದ 2021ರ ಅವಧಿಯಲ್ಲಿ ಸುಮಾರು 78 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋದಿ ಅವಧಿಯಲ್ಲಿ  ರೈತರ ಆತ್ಮಹತ್ಯೆಯೇ ನಡೆದಿಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆಗೆ ತಿಳಿಸಿದ್ದರು. ಈಗ ಕೇಂದ್ರದ ಎನ್‌ಸಿಆರ್‍‌ಬಿ 78 ಸಾವಿರ ರೈತರ ಆತ್ಮಹತ್ಯೆಯ ವರದಿ ನೀಡಿದೆ. ರೈತರ ಆತ್ಮಹತ್ಯೆ ವಿಚಾರದಲ್ಲೂ ಸತ್ಯ ಮುಚ್ಚಿಡುವುದ್ಯಾಕೆ?’ ಎಂದು ಪ್ರಶ್ನಿಸುತ್ತಾ, ರೈತರ ಆತ್ಮಹತ್ಯೆ ಕುರಿತು ‘ಪ್ರಜಾವಾಣಿ’ ಪತ್ರಿಕೆ ಪ್ರಕಟಿಸಿರುವ ವರದಿಯನ್ನು ಕಾಂಗ್ರೆಸ್ ಶಾಸಕ ಹಂಚಿಕೊಂಡಿದ್ದಾರೆ.

‘ಮೋದಿಯವರು ಪ್ರತಿ ಭಾಷಣದಲ್ಲೂ ರೈತರ ಬದುಕು ಬೆಳಗುವ ಭಾಷಣ ಬಿಗಿಯುತ್ತಾರೆ. ಮೋದಿಯವರು ರೈತರ ಬದುಕು ಬೆಳಗಿದ್ದರೆ, ರೈತರು ಯಾಕೆ ಸಾವಿನ ಹಾದಿ ತುಳಿಯಬೇಕು? ಮೂರು ಕರಾಳ ಕೃಷಿ ಕಾಯ್ದೆ ತಂದಾಗಲೇ ಮೋದಿಯವರ ರೈತರ ಮೇಲಿನ ಕಾಳಜಿಯ ಬಂಡವಾಳ ಗೊತ್ತಾಗಿದೆ. ಮೋದಿ ಸರ್ಕಾರ ಯಾವತ್ತೂ ರೈತರ ಪರ ಸರ್ಕಾರವಾಗಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ’ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ವರ್ಷಕ್ಕೆ 12 ಸಾವಿರ ಕೊಟ್ಟರೆ ರೈತರ ಬದುಕು ಬಂಗಾರವಾಗಲಿದೆ ಎಂದು ಮೋದಿಯವರು ಭಾವಿಸಿದ್ದಾರೆ. 50ಕೆಜಿ ಡಿಎಪಿ ಗೊಬ್ಬರದ ಬೆಲೆ ಎಷ್ಟಿದೆ ಎಂದು ಮೋದಿಯವರಿಗೆ ಗೊತ್ತಿದೆಯೇ? ದೊಡ್ಡಮಟ್ಟದ ಆರ್ಥಿಕ ಚೈತನ್ಯ ಸಿಕ್ಕರೆ ಮಾತ್ರ ರೈತರ ಬದುಕು ಸುಧಾರಿಸಬಹುದು. ಇಲ್ಲದಿದ್ದರೆ ರೈತರ ಆತ್ಮಹತ್ಯೆಗೆ ಕೊನೆಯೇ ಇರುವುದಿಲ್ಲ‘ ಎಂದು ವಾಗ್ದಾಳಿ ನಡೆಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್