ದಿನದಲ್ಲಿ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿ; ಸರ್ಕಾರಿ ನೌಕರರಿಗೆ ಸೂಚನೆ ನೀಡಿದ ಸಿಎಂ ಬೊಮ್ಮಾಯಿ

CM SPEACH IN EMPLOYS UNION
  • ಸರ್ಕಾರಿ ನೌಕರರು ಜನ ಮೆಚ್ಚುವ ಕೆಲಸ ಮಾಡಿ ಸರ್ಕಾರಕ್ಕೆ ಗೌರವ ತರಬೇಕು
  • ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ

"ಸರ್ಕಾರಿ ನೌಕರರಾದವರು ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕು. ಹೀಗಾದಲ್ಲಿ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣವಾಗುತ್ತದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿಂದು 7 ನೇ ವೇತನ ಆಯೋಗ ರಚನೆ ಮಾಡಿರುವುದರ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗಳನ್ನು ಅಭಿನಂದಿಸಿತು. ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, "ಸರ್ಕಾರಿ ನೌಕರರು ಜನಮೆಚ್ಚುವ ಕೆಲಸ ಮಾಡಿ ಸರ್ಕಾರಕ್ಕೆ ಗೌರವ ತರಬೇಕು. ಅಧಿಕಾರದ ಮೇಲ್ಮಟ್ಟದಿಂದ ಕೆಳಹಂತದವರೆಗೆ ಈ ಕೆಲಸ ಆಗಬೇಕು. ನೀವು ಇದನ್ನು ಮಾಡಿ, ಮುಂದಿನ ಕೆಲಸಗಳನ್ನು ನನಗೆ ಬಿಡಿ" ಎಂದರು.

Eedina App

"ಜನಸೇವಕರು ಜನಪ್ರತಿನಿಧಿಗಳು ಒಂದಾಗಿ ಸುಭಿಕ್ಷ ನಾಡನ್ನು ಕಟ್ಟೋಣ. ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿ. ಬಡವರ ಪರವಾಗಿ, ಜನಪರವಾಗಿ ಕೆಲಸ ಮಾಡಿದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಿಸೋಣ" ಎಂದರು. "ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡಬೇಕು" ಎಂದು ಮುಖ್ಯಮಂತ್ರಿಗಳು ಹೇಳಿದರು.

"ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತದೆ. ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಸಂದರ್ಭಕ್ಕೂ ಈಗಿನ   ಸಂದರ್ಭಕ್ಕೂ ವ್ಯತ್ಯಾಸವಿರುತ್ತದೆ. ಸಮಯ ಮತ್ತು ಹಣ ಎರಡೂ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ. ಅದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಕೂಡ ಇದಕ್ಕೆ ಒತ್ತಾಸೆಯಾಗಿದ್ದರು. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರೂ ಒತ್ತಾಯ ಮಾಡಿದ್ದರು" ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದೇ ವೇಳೆ ಆಯೋಗದ ಬಗೆಗೂ ಮೆಚ್ಚುಗೆ ಮಾತುಗಳನ್ನಾಡಿದ ಮುಖ್ಯಮಂತ್ರಿಗಳು, "ಡಾ. ಸುಧಾಕರ್ ರಾವ್ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಯಾಗಿ ದಕ್ಷತೆಯಿಂದ ಕೆಲಸ ಮಾಡಿದವರು. ಪ್ರಭಾವಕ್ಕೆ ಮಣಿಯದವರು. ಹೀಗಾಗಿ ಅವರನ್ನೇ ಆಯೋಗದ ಅಧ್ಯಕ್ಷರನ್ನಾಗಿಸಲಾಗಿದೆ ಎಂದರು. "ಅವರ ನೇತೃತ್ವದಲ್ಲಿ ನ್ಯಾಯಸಮ್ಮತವಾದ ವರದಿ ಬರಲಿ" ಎಂದು ಬೊಮ್ಮಾಯಿ ಆಶಿಸಿದರು.

ಜನಸ್ಪಂದನೆಯ ಕೆಲಸವಾಗಬೇಕು
"ಕಾರ್ಯಾಂಗ ಜನಸ್ಪಂದನೆಯ ಕೆಲಸ ಮಾಡಿದಾಗ ಸರ್ಕಾರಕ್ಕೆ, ವ್ಯವಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ. ಜನಸಂಖ್ಯೆ ಹೆಚ್ಚಿದ್ದು, ಎಲ್ಲರ ಆಶೋತ್ತರಗಳೂ ಹೆಚ್ಚಾಗಿವೆ. ಯುವಕರು, ವಿದ್ಯಾವಂತರ, ನೌಕರರ ಜೀವನದ ಗುಣಮಟ್ಟವೂ ಉತ್ತಮಗೊಳ್ಳಬೇಕು. ಅವರು ಚೆನ್ನಾಗಿದ್ದರೆ, ಸಂತೋಷದಿಂದಿದ್ದರೆ ಸರ್ಕಾರದ ಕೆಲಸಗಳು ಉತ್ತಮವಾಗಿ ಆಗುತ್ತವೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ಈ ಸುದಿ ಓದಿದ್ದೀರಾ? : ಒಂದು ನಿಮಿಷದ ಓದು | ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ: ಸಿಎಂ ಬೊಮ್ಮಾಯಿ

"ಸರ್ಕಾರಿ ವ್ಯವಸ್ಥೆಯಲ್ಲಿ ವೇತನ, ಸೌಲತ್ತು, ಪಿಂಚಣಿಯನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡಬೇಕು. ಇದು ಮೊದಲಿನಿಂದಲೂ ಬಂದಿದೆ. ಒಂದು ವೇತನ ಆಯೋಗದಿಂದ ಮತ್ತೊಂದು ವೇತನ ಆಯೋಗದ ನಡುವೆ 5 ವರ್ಷಗಳ ಅಂತರವಿರಬೇಕು. ಆದರೆ, ಬಹಳ ಸಾರಿ ಹಾಗಾಗುವುದಿಲ್ಲ. 6-7 ವರ್ಷ ತೆಗೆದುಕೊಂಡಿರುವ ಉದಾಹರಣೆ ಇದೆ. ಒಟ್ಟಿನಲ್ಲಿ ನಿಮ್ಮಗಳ ಹಿತವನ್ನು ಸರ್ಕಾರ ಕಾಪಾಡಲಿದೆ. ನೀವೂ ಸರ್ಕಾರಕ್ಕೆ ಹೆಸರು ತರುವ ಕೆಲಸ ಮಾಡಿ" ಎಂದು ಬಸವರಾಜ ಬೊಮ್ಮಾಯಿ ಕಿವಿ ಮಾತು ಹೇಳಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app