
- ಮೋದಿ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದ 40ಕ್ಕೂ ಹೆಚ್ಚು ಕಾರ್ಮಿಕರು
- ಬಿಜೆಪಿ ಮುಖಂಡರ ವಿರುದ್ಧ ದೂರು ನೀಡಲು ಠಾಣೆಗೆ ಬಂದ ಕಾರ್ಮಿಕರು
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಮತ್ತು ಊಟ ಕೊಡಿಸಿಲ್ಲ ಎಂದು ಆರೋಪಿಸಿ ಕಾರ್ಮಿಕರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದಾರೆ.
40ಕ್ಕೂ ಹೆಚ್ಚು ಕಾರ್ಮಿಕರು ಶನಿವಾರ ಬೆಳಗ್ಗೆ ನಗರದಲ್ಲಿನ ಬಿಜೆಪಿ ಮುಖಂಡರೊಬ್ಬರ ಮನೆ ಬಾಗಿಲು ತಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಆ ಮುಖಂಡ “ಅದು ಸರ್ಕಾರಿ ಕಾರ್ಯಕ್ರಮ. ಅಲ್ಲಿ ಯಾರು ಯಾರಿಗೂ ಹಣ ಕೊಟ್ಟಿಲ್ಲ. ಹಣ ಕೇಳಿದರೆ ಪೊಲೀಸರಿಗೆ ಪ್ರಕರಣ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ.
“ಬಿಜೆಪಿ ಮುಖಂಡರು ಸ್ಥಳೀಯ 40 ಕೂಲಿ ಕಾರ್ಮಿಕರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ವಾಪಸ್ ಬರುವ ವೇಳೆ 500 ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇನ್ನೂ ಹಣ ನೀಡಿಲ್ಲ. ಕಾರ್ಯಕ್ರಮದಲ್ಲಿ ಕನಿಷ್ಠ ಕುಡಿಯುವ ನೀರು ಮತ್ತು ಊಟವನ್ನು ಕೊಡಲಿಲ್ಲ” ಎಂದು ಕಾರ್ಮಿಕರು ದೂರಿದ್ದಾರೆ.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ಆಗಮಿಸಿದ ಕೂಲಿ ಕಾರ್ಮಿಕರು ಏನೆಂದು, ಯಾರ ವಿರುದ್ಧ ದೂರು ನೀಡಬೇಕು ಎಂದು ತಿಳಿಯದೆ ಕೆಲ ಸಮಯ ಅಲ್ಲೇ ನಿಂತಿದ್ದರು. ಪೊಲೀಸರೂ ಸಹ ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ.

ಕಾರ್ಮಿಕರು ತಮಗೆ ತಿಳಿದಿರುವ ಬಿಜೆಪಿ ಮುಖಂಡರ ಮನೆ ಬಾಗಿಲು ಬಡಿಯತೊಡಗಿದ್ದಾರೆ. ಇದು ಬಿಜೆಪಿ ಮುಖಂಡರಿಗೆ ಇರಿಸು ಮುರುಸಿಗೆ ಕಾರಣವಾಗಿದೆ. ಜತೆಗೆ ಮೋದಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯುವ ವ್ಯವಸ್ಥೆಯ ಹೊಣೆ ಹೊತ್ತಿದ್ದವರ ನಡುವೆ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಕೆಂಪೇಗೌಡ ಪ್ರತಿಮೆ | ಹುಟ್ಟುವ ಮಗುವಿಗೆಲ್ಲ ನಾಮಕರಣ ಮಾಡಿದ್ದು ನಾನೇ ಎನ್ನುವ ಸಿದ್ದರಾಮಯ್ಯ: ಬೊಮ್ಮಾಯಿ ವ್ಯಂಗ್ಯ
ಕಾರ್ಮಿಕರಿಗೆ ಹಣ ಕೊಡಿಸಿ ಎಂದು ಕಾಂಗ್ರೆಸ್ ಟ್ವೀಟ್
ಪ್ರಧಾನಿ ನರೇಂದ್ರ ಮೋಡಿ ಅವರೇ ನಿಮ್ಮನ್ನು ಮೆಚ್ಚಿಸಲು ರಾಜ್ಯ ಬಿಜೆಪಿ ನಾಯಕರು ಹಣ ಕೊಡುತ್ತೇವೆ ಎಂದು ಕರೆತಂದ ಜನರಿಗೆ ₹500 ರೂ. ನೀಡದೆ ವಂಚಿಸಿದ್ದಾರೆ. ಕನಿಷ್ಠ ಮೋಸ ಹೋದ ಕಾರ್ಮಿಕರಿಗಾದರೂ ನ್ಯಾಯ ಕೊಡಿಸಿ, ಅವರ ಪಾಲಿನ ₹500 ರೂಪಾಯಿಯನ್ನು ಕೊಡಿಸಿ ಎಂದು ಒತ್ತಾಯಿಸಿದೆ.