ಕಡ್ಲೇಪುರಿಯಂತೆ ಸೇಲ್ ಆಗುವ ಪ್ರಶಸ್ತಿ ಪುರಸ್ಕಾರಗಳು ಮತ್ತು ಸಾಂಸ್ಕೃತಿಕ ರಾಜಕಾರಣ

Date:

ಬಹುಪಾಲು ಖಾಸಗಿ ಪ್ರತಿಷ್ಠಾನ, ಸಂಘ ಸಂಸ್ಥೆಗಳು ನೀಡುವ ಪುಸ್ತಕ ಬಹುಮಾನ, ಪ್ರಶಸ್ತಿ, ಮತ್ತು ಅವುಗಳ ಆಯ್ಕೆಗೆ ಅನುಸರಿಸುವ ವಿಧಾನ, ಪುರಸ್ಕಾರಗಳ ಒಳಹುನ್ನಾರಗಳು ವಸೂಲಿಬಾಜಿ ದಂಧೆಗಳಾಗಿವೆ. ಅವು ಗಳಿಕೆ ಮತ್ತು ಮೂಗಿನ ನೇರದ ಹೊಲಬುಗೇಡಿ ಕೀರ್ತಿ ಕಾಮನೆಯ ಕಿರಿಕ್ ಕೆಲಸಗಳಾಗಿವೆ. ರಾಜಧಾನಿ ಬೆಂಗಳೂರು ಮತ್ತು ಇತರೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರಶಸ್ತಿ, ಪುರಸ್ಕಾರ ನೀಡುವುದು ಕೆಲವು ಸೋಗಲಾಡಿ ಪ್ರತಿಷ್ಠಾನಗಳ ಪ್ರತಿಷ್ಠೆಯ ಸಂಕೇತವಾಗಿದೆ. ಮತ್ತೆ ಕೆಲವು ಪೂರ್ವಗ್ರಹ ಪೀಡಿತರ ವೈಯಕ್ತಿಕ ಹಿತಾಸಕ್ತಿ ಮತ್ತು ಲಾಭದ ವಾರ್ಷಿಕ ದಂಧೆಯಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರೇತರ ಖಾಸಗಿ ಸಂಘ ಸಂಸ್ಥೆಗಳ ಬಹುಮಾನ, ಪ್ರಶಸ್ತಿ, ಪುರಸ್ಕಾರಗಳ ಪಾರಮ್ಯ ವ್ಯಾಪಕವಾಗಿದೆ. ಹಾಗೆ ನೋಡಿದರೆ ಸಾಂಸ್ಕೃತಿಕ ಲೋಕ ಪರಿಧಿಯಲ್ಲಿ ನಮ್ಮ ಕರ್ನಾಟಕ ಸರಕಾರದ ವಾರ್ಷಿಕ ಮತ್ತು ವಿಶೇಷ ಪ್ರಶಸ್ತಿ, ಪುರಸ್ಕಾರಗಳ ಸಂಖ್ಯೆ ಹಾಗೂ ಗುಣಮಟ್ಟದ ಬಾಹುಳ್ಯ ಖಂಡಿತಾ ಅತ್ಯುತ್ತಮವೇ ಆಗಿದೆ. ಹೀಗಿದ್ದಾಗ್ಯೂ ಖಾಸಗಿ ಪ್ರಶಸ್ತಿ ಪುರಸ್ಕಾರಗಳು ಸಾಂಸ್ಕೃತಿಕ ವಲಯದಲ್ಲಿ ಮುಂಚಲನೆಯಲ್ಲಿವೆ. ಕೆಲವೇ ಕೆಲವು ಸಂಘ ಸಂಸ್ಥೆ, ಪ್ರತಿಷ್ಠಾನಗಳು ಮಾತ್ರ ಅಚ್ಚುಕಟ್ಟಾಗಿ ಬಹುಮಾನ, ಪ್ರಶಸ್ತಿಗಳ ಆಯ್ಕೆ ಮಾಡಿ ಮತ್ತು ಕಾರ್ಯಕ್ರಮಗಳನ್ನು ಅಷ್ಟೇ ನೀಟಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಕೆಲವು ಪ್ರತಿಷ್ಠಾನಗಳು ಸರ್ಕಾರ ಮತ್ತು ಸಾಂಸ್ಕೃತಿಕ ಇಲಾಖೆಗಳಿಗಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಪ್ರಶಸ್ತಿಗಳ ಆಯ್ಕೆ ವಿಧಾನ ಮತ್ತು ಪ್ರದಾನ ಕಾರ್ಯಕ್ರಮಗಳನ್ನು ಜರುಗಿಸುವುದು ಸ್ವಾಗತಾರ್ಹ. ಬಹುತೇಕ ಹಸ್ತಕ್ಷೇಪವಿಲ್ಲದ ಅವುಗಳ ಸಾಂಸ್ಕೃತಿಕ ವಾಂಛೆಯೂ ಮೆಚ್ಚುವಂತಿದೆ.

ದುರಂತವೆಂದರೆ ಬಹುಪಾಲು ಖಾಸಗಿ ಪ್ರತಿಷ್ಠಾನ, ಸಂಘ ಸಂಸ್ಥೆಗಳು ನೀಡುವ ಪುಸ್ತಕ ಬಹುಮಾನ, ಪ್ರಶಸ್ತಿ, ಮತ್ತು ಅವುಗಳ ಆಯ್ಕೆಗೆ ಅನುಸರಿಸುವ ವಿಧಾನ, ಪುರಸ್ಕಾರಗಳ ಒಳಹುನ್ನಾರಗಳು ವಸೂಲಿಬಾಜಿ ದಂಧೆಗಳಾಗಿವೆ. ಅವು ಗಳಿಕೆ ಮತ್ತು ಮೂಗಿನ ನೇರದ ಹೊಲಬುಗೇಡಿ ಕೀರ್ತಿ ಕಾಮನೆಯ ಕಿರಿಕ್ ಕೆಲಸಗಳಾಗಿವೆ. ರಾಜಧಾನಿ ಬೆಂಗಳೂರು ಮತ್ತು ಇತರೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರಶಸ್ತಿ, ಪುರಸ್ಕಾರ ನೀಡುವುದು ಕೆಲವು ಸೋಗಲಾಡಿ ಪ್ರತಿಷ್ಠಾನಗಳ ಪ್ರತಿಷ್ಠೆಯ ಸಂಕೇತವಾಗಿದೆ. ಮತ್ತೆ ಕೆಲವು ಪೂರ್ವಗ್ರಹ ಪೀಡಿತರ ವೈಯಕ್ತಿಕ ಹಿತಾಸಕ್ತಿ ಮತ್ತು ಲಾಭದ ವಾರ್ಷಿಕ ದಂಧೆಯಾಗಿವೆ. ಕೆಲವು ಪ್ರಶಸ್ತಿಗಳಿಗೆ ಅವರು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಎಂದು ಹೆಸರಿಟ್ಟು ಕರೆಯುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಪ್ರಶಸ್ತಿ ಕೊಡುವ ಮತ್ತು ಪಡೆಯುವವರ ಅರ್ಥಾತ್ ಹೊಡಕೊಳ್ಳುವವರ ನಡುವೆ ಅದೇನೋ ಒಳಮುಸುಕಿನ ಹೊಂದಾಣಿಕೆ. ಹಪಾಹಪಿ ಸಾಹಿತಿಗಳನ್ನು ಗುರುತಿಸಿ ಹುಚಗೊಟ್ಟಿಗಳಂತೆ ಕಾಣುವ ಲೆಕ್ಕಾಚಾರ. ಕೆಲವೊಮ್ಮೆ ಅದು ಚೌಕಾಸಿತನದ ಗುಪ್ತ ವ್ಯಾಪಾರ ಎಂಬ ಭರಪೂರ ಅನುಮಾನಗಳನ್ನು ಹುಟ್ಟು ಹಾಕುತ್ತವೆ.

ಉತ್ತರ ಕರ್ನಾಟಕದ ಹೆಸರಾಂತ ಲೇಖಕಿಯೊಬ್ಬರು ಇತ್ತೀಚೆಗೆ ನನ್ನೊಂದಿಗೆ ಮಾತನಾಡುತ್ತಾ ತಮಗಾದ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡರು. ಪ್ರತಿಷ್ಠಿತ ಪ್ರತಿಷ್ಠಾನವೆಂದು ತಮಗೆ ತಾವೇ ಕರೆದುಕೊಳ್ಳುವ ಪ್ರತಿಷ್ಠಾನವೊಂದರ ಮಾಲೀಕರು ಸದರಿ ಲೇಖಕಿಗೆ ಫೋನ್ ಮಾಡಿ “ಮೇಡಂ ನೀವು ಸ್ಪರ್ಧೆಗೆ ನಿಮ್ಮ ಕೃತಿ ಕಳಿಸಿಲ್ಲವಾದರೂ ನಿಮಗೆ ಬಹುಮಾನ ಘೋಷಿಸಿದ್ದೇವೆ. ದಯವಿಟ್ಟು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಬೇಕೆಂದು” ಅಲವತ್ತುಗೊಳ್ಳುತ್ತಾರೆ. ಹಾಗೇಕೆ ಮಾಡಿದಿರಿ ಎಂದುದಕ್ಕೆ ಅವರಿಂದ “ನೀವು ನಮ್ಮ ಭಾಗದ ಪ್ರಸಿದ್ಧ ಸಾಹಿತಿ ಇದ್ದೀರೆಂದು” ಪುಸಲಾವಣೆಯ ಉತ್ತರ. ಸ್ವಾಭಿಮಾನದ ಲೇಖಕಿ, ಪ್ರತಿಷ್ಠಾನದವರು ಹಾಗೆ ಕರೆದರೆಂದ ಮಾತ್ರಕ್ಕೆ ಸಮಾರಂಭಕ್ಕೆ ಹೋಗುವುದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೋಜಿಗವೆಂದರೆ ಅದೇ ಲೇಖಕಿ ಅದಕ್ಕೆ ಒಂದೆರಡು ವರ್ಷಗಳ ಹಿಂದೆ ತನ್ನ ಕೃತಿಯೊಂದನ್ನು ಅದೇ ಪ್ರತಿಷ್ಠಾನದ ಕರೆಯಂತೆ ಸ್ಪರ್ಧೆಗೆ ಕಳಿಸಿದ ಕೇವಲ ಮೂರ್ನಾಲ್ಕು ದಿನಗಳಲ್ಲಿ ಫಲಿತಾಂಶ ಪ್ರಕಟಗೊಳ್ಳುತ್ತದೆ. ಆದರೆ ಅವರ ಕೃತಿ ಬಹುಮಾನಕ್ಕೆ ಆಯ್ಕೆ ಆಗುವುದಿಲ್ಲ. ಅಚ್ಚರಿ ಎಂದರೆ ಅವರ ಅದೇ ಕೃತಿಗೆ ಅದೇ ವರುಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರಕುತ್ತದೆ. ಅದರಿಂದಾಗಿ ಪುಸ್ತಕ ಕಳಿಸಿದ ಮೂರ್ನಾಲ್ಕು ದಿನದಲ್ಲೇ ಫಲಿತಾಂಶ ಪ್ರಕಟಿಸಿದ ಸದರಿ ಪ್ರತಿಷ್ಠಾನದ ಪುಸ್ತಕ ಬಹುಮಾನ ಮತ್ತು ಪ್ರಶಸ್ತಿ ಆಯ್ಕೆಯ ಕಾರ್ಯವೈಖರಿ ಪಕ್ಕಾ ಫೇಕ್ ಎನ್ನುವುದು ಲೇಖಕಿಗೆ ಮನವರಿಕೆ ಆಗುತ್ತದೆ. ಇದೇ ಬಗೆಯ ಅನುಭವ ಇನ್ನೂ ಅನೇಕರದಾಗಿದೆ. ಈಗಲೂ ಹಾಗೆಯೇ ಅದು ಮುಂದುವರೆದಿದೆಯಂತೆ.

ಇನ್ನು ಬಹುಮಾನಿತ ಕೃತಿಗಳ ಕೃತಿಕಾರರಿಗೆ ಐದು ಸಾವಿರ ಹತ್ತು ಸಾವಿರ ಹಣದ ಮೊತ್ತ ನೀಡುವುದು ಕೇವಲ ಮಾಧ್ಯಮದ ಹೇಳಿಕೆಗಳಷ್ಟೇ. ಖುದ್ದು ತಾವೇ ರಾಜಕಾರಣಿ, ಭ್ರಷ್ಟ ಅಧಿಕಾರಿ ಮತ್ತು ಉದ್ಯಮಪತಿಗಳ ಬಳಿ ದೇಣಿಗೆ ಎತ್ತಿ ತಮ್ಮ ಪ್ರತಿಷ್ಠಾನಗಳ ಹೆಸರಲ್ಲಿ ಪ್ರಶಸ್ತಿ ಪ್ರದಾನ ಏರ್ಪಡಿಸುವವರೇ ಹೇರಳ. ಮೇಲಾಗಿ ಎಲ್ಲವೂ ರಾಜ್ಯಮಟ್ಟದ ಬಹುಮಾನ, ಪ್ರಶಸ್ತಿ ಪುರಸ್ಕಾರಗಳೆಂಬ ಭಯಂಕರ ಬೋಂಗು. ಬಯಲಾಗದ ಬಹಳಷ್ಟು ಒಳಮುಚುಕು ಬನಾವಟಿತನ ಇದ್ದರೂ ಕೆಲವರು ಹತ್ತಿಪ್ಪತ್ತು ವರುಷಗಳಿಂದ ಬಹುಮಾನ, ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಗಳನ್ನು ಯಾವ ಎಗ್ಗಿಲ್ಲದೇ ನಡೆಸಿಕೊಂಡೇ ಬರುತ್ತಾರೆ.

ವಾಸ್ತವವಾಗಿ ಅವರಿಗೆ ಅದರಲ್ಲಿ ಲಾಭ ಮತ್ತು ಹೆಸರಿನ ಕೀರ್ತಿಪತಾಕೆ. ಸಾಂಸ್ಕೃತಿಕ ಸಮಾಜದಲ್ಲಿ ಸ್ಥಾನಮಾನ. ತಮ್ಮ ಈ ಸೇವಾ ಕೈಂಕರ್ಯ ಮೆಚ್ಚಿ ತಮ್ಮ ಪ್ರತಿಷ್ಠಾನ ಇಲ್ಲವೇ ತಮಗೆ ರಾಜ್ಯೋತ್ಸವ ಪ್ರಶಸ್ತಿ ಇಲ್ಲವೇ ಆಯಕಟ್ಟಿನ ಸಾಂಸ್ಕೃತಿಕ ಸ್ಥಾನಮಾನಗಳು ದೊರಕಿದರೆ ಅಚ್ಚರಿ ಏನಿಲ್ಲ. ಮೇಲಾಗಿ ಪ್ರಭುತ್ವಕ್ಕೆ ಹೆಚ್ಚು ಹತ್ತಿರವಿರುವ ರಾಜಧಾನಿಯ ಹೆಸರಾಂತ ಸಾಹಿತಿ, ಸಂಸ್ಕೃತಿ ಚಿಂತಕರನ್ನು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸುತ್ತಾರೆ. ಆ ಮೂಲಕ ತಮ್ಮ ಬೈಯಕ್ತಿಕ ಪ್ರತಿಷ್ಠೆಗೆ ಧಕ್ಕೆಯಾಗಲಿ, ಮುಕ್ಕಾಗಲಿ ಬಾರದಿರುವ ಮುನ್ನೆಚ್ಚರ ವಹಿಸುತ್ತಾರೆ.

ಇದೆಲ್ಲ ಹಿಕಮತ್ತು ಕುರಿತು ಬೇರೆಯವರಿಗೆ ಅನುಮಾನ ಬಾರದಿರಲಿ ಮತ್ತು ಅಪಸ್ವರ ಎತ್ತದಿರಲೆಂದು ಬೆಂಗಳೂರು, ಮೈಸೂರು, ಕರಾವಳಿ ಭಾಗದ ಪ್ರತಿಷ್ಠಿತ ಕವಯತ್ರಿ, ಸಾಹಿತಿಗಳ ಒಂದೆರಡು ಕೃತಿಗಳಿಗೆ ಬಹುಮಾನ ಘೋಷಿಸಿ ಕೂದಲು ಸೀಳುವ ಶ್ಯಾಣೇತನ ಮೆರೆಯುತ್ತಾರೆ. ತನ್ಮೂಲಕ ತಮ್ಮದು ಪಾರದರ್ಶಕ ಮತ್ತು ರಾಜ್ಯಮಟ್ಟದ ಗುಣೀಭೂತ ಪ್ರತಿಷ್ಠಾನ ಎಂಬ ಸ್ವಪ್ರತಿಷ್ಠೆ. ಅದನ್ನು ಸಾಬೀತು ಪಡಿಸುವ ಸಂದರ್ಭಗಳನ್ನು ಅತಿಥಿ ಅಭ್ಯಾಗತರ ಸಮಕ್ಷಮ ಸೃಜಿಸಿ ಗೆಲುವು ಸಾಧಿಸಿದ ತಮಗೆ ತಾವೇ ಬೆನ್ನು ಚಪ್ಪರಿಸಿಕೊಳ್ಳುವ ಮಿತಿಮೀರಿದ ಆತ್ಮರತಿ. ಅಂಥವರಿಂದ ಪುಸ್ತಕ ಬಹುಮಾನ ಮತ್ತು ಗೌರವ ಪ್ರಶಸ್ತಿ ಪಡೆದ ಸಾಹಿತಿ, ಸಂಸ್ಕೃತಿ ಚಿಂತಕರಿಗೆ ಇದೆಲ್ಲ ಒಳಪೇಚಿನ ವ್ಯವಹಾರ ಗೊತ್ತಾದ ಮೇಲೆ ಅದನ್ನು ವಾಪಸು ಮಾಡುವ ಇಲ್ಲವೇ ಇದು ಸರಿ ಅಲ್ಲ ಎಂದು ಹೇಳುವ‌ ನೈತಿಕ ಹೊಣೆಯನ್ನು ಮೆರೆಯುವುದಿಲ್ಲ. ಅದು ಅವರ ಕ್ರಿಯಾಜ್ಞಾನ ಲೋಪವೇ ಆಗಿದ್ದರೂ “ಹೋಗಲಿ ಬಿಡು ಎಂಬ ಸಾಂಸ್ಕೃತಿಕ ಅಸಡ್ಡೆತನ” ತೋರುವವರೇ ಅಧಿಕ. ಕೆಲವರಿಗದು ಅಧಿಕ ಪ್ರಸಂಗದ ಸಂಗತಿ ಅನಿಸಿರಬಹುದು. ಕೆಲವಂತೂ ಅಪಸವ್ಯಗಳ ಅಗ್ನಿಕುಂಡವೇ ಆಗಿರುವುದರಿಂದ ಮುಟ್ಟಿದರೆ ಸುಡುವ ಸಾಂಸ್ಕೃತಿಕ ಭಯ.

ರಾಜಧಾನಿಯ ಮತ್ತೆ ಕೆಲವರು “ಕಲ್ಚರಲ್ ಹೈಕಮಾಂಡರ್” ತರಹ ಅಂತಹ ಪ್ರತಿಷ್ಠಾನಗಳ ಮೇಲೆ ಕಮಾಂಡಿಂಗ್ ಹೊಂದಿರುತ್ತಾರೆ. ತನಗೆ ಬೇಕು ಬೇಕಾದ ಕವಿ, ಕವಯಿತ್ರಿಯರಿಗೆ‌ ದೂರದ ಊರುಗಳ ಇಂತಹ ಪ್ರತಿಷ್ಠಾನಗಳಿಂದ ಪುಸ್ತಕ ಬಹುಮಾನ, ಪ್ರಶಸ್ತಿಗಳನ್ನು ಕೊಡಿಸುವ ಕಲ್ಚರಲ್ ರಿಮೋಟ್ ಕಂಟ್ರೋಲರ್ ಆಗಿರುತ್ತಾರೆ. ಹೀಗಾಗಿ ಬೆಂಗಳೂರೇತರ ಬಹುತೇಕ ಖಾಸಗಿ ಪ್ರತಿಷ್ಠಾನಗಳಿಗೆ ಇವರು ಮಾರ್ಗಸೂಚಿ ಮಾಸ್ಟರ್ ಮೈಂಡ್. ಇಂತಹ ಮನಸುಗಳಿಗೆ ಸಾಹಿತ್ಯದ ಒಂದಷ್ಟು ಗಂಧಗಾಳಿ ಇದ್ದರಂತೂ ಮುಗೀತು. ಸರಕಾರಿ ಸಾಂಸ್ಕೃತಿಕ ಪ್ರಭುತ್ವದ ನಿಕಟ ಸಂಪರ್ಕ ಗಿಟ್ಟಿಸುತ್ತಾರೆ. ಇದರಿಂದಾಗಿ ಖಾಸಗಿ ಪ್ರತಿಷ್ಠಾನಗಳ ಪ್ರಶಸ್ತಿ ಪುರಸ್ಕಾರಗಳ ಪ್ರಕ್ರಿಯೆ ಪೂರ್ವ ನಿಯೋಜಿತ ಮತ್ತು ವೈಯಕ್ತಿಕ ಹಿತಾಸಕ್ತಿಯ ಆಗರವೇ ಆಗಿಬಿಡುತ್ತದೆ. ಇಲ್ಲದೇ ಹೋದಲ್ಲಿ ಬಂದಿರುವ ನೂರಾರು ಕೃತಿಗಳನ್ನು ಕೇವಲ ಮುರ್ನಾಲ್ಕು ದಿನಗಳಲ್ಲಿ ಓದಿ ತೀರ್ಪು ನೀಡುವುದು ಹೇಗೆ ಸಾಧ್ಯ? ಅಷ್ಟಕ್ಕೂ ತೀರ್ಪುಗಾರರ ಹೆಸರನ್ನು ಫಲಿತಾಂಶದ ನಂತರವಾದರೂ ಈ ಖಾಸಗಿ ಪ್ರತಿಷ್ಠಾನಗಳ ಅನೇಕರು ಪ್ರಕಟಿಸುವುದಿಲ್ಲ. ಬೆರಳೆಣಿಕೆಯ ಕೆಲವೇ ಕೆಲವರು ಮಾತ್ರ ಇದಕ್ಕೆ ಹೊರತಾದವರು.

ಇದನ್ನು ಓದಿದ್ದೀರಾ?: ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿ ವರದಿ ಜಾರಿಯಾಗಬೇಕು

ಇನ್ನು ರಾಜಧಾನಿ ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಕೆಲವು ಖಾಸಗಿ ಪ್ರತಿಷ್ಠಾನಗಳು ಏರ್ಪಡಿಸುವ ಬಹುಮಾನ, ಪ್ರಶಸ್ತಿ, ಪುರಸ್ಕಾರ, ಗೌರವಗಳ ಆಯ್ಕೆ ಮತ್ತು ಕಾರ್ಯಕ್ರಮಗಳ ಸ್ವರೂಪ ಕುರಿತು ಹೇಳದಿರುವುದೇ ಪಾಡ ಎನ್ನುವಷ್ಟು ಖೋಡಿ ಆಗಿರುತ್ತವೆ. ಕೆಲವು ಪ್ರತಿಷ್ಠಾನಗಳ ಅಧಿಪತಿಗಳು ‘ಮುಲಾಜಿಲ್ಲ’ ಎನ್ನುವಂತೆ ನೇರವಾಗಿ ಹಣದ ಬೇಡಿಕೆ ಇಡುತ್ತಾರೆ. ಅಷ್ಟೇ ಯಾಕೆ ಇಂತಹ ತಮ್ಮ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಸಮ್ಮೇಳನಗಳೆಂದು ಮಾರ್ಪಡಿಸಿ ಅದರ ಸರ್ವಾಧ್ಯಕ್ಷರನ್ನಾಗಿ ಮಾಡಲು ದೊಡ್ಡ ಮೊತ್ತವನ್ನೇ ನಿಗದಿ ಮಾಡುವ ಕರಾಮತ್ತುಗಳು.

ಅಷ್ಟಿಷ್ಟು ಚೌಕಾಸಿ ಮಾಡಿ ಸಮ್ಮೇಳನಾಧ್ಯಕ್ಷ ಪದವಿಯ ಕುರ್ಚಿ ಖರೀದಿಸಲು ಕೆಲವು ಹೇರಾಫೇರಿ ಸಾಹಿತಿಗಳು ತರಾತುರಿಯಲ್ಲಿ ಕಾಯುತ್ತಿರುತ್ತಾರೆ. ಯಾವುದೋ ದೂರದ ಜಿಲ್ಲೆಯ ಹಳ್ಳಿಯೊಂದರಿಂದ ಬಂದು ರಾಜಧಾನಿ ಬೆಂಗಳೂರಿನ ಸಾಂಸ್ಕೃತಿಕ ಸಮಾವೇಶದ ಸರ್ವಾಧ್ಯಕ್ಷನಾಗುವುದೆಂದರೆ ಸುಮ್ಮನಲ್ಲ. ಅದಕ್ಕೆಂದೇ ಸ್ಥಳೀಯ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ ಹಾಕಿ ಅಭಿನಂದನೆಗಳ ಸುರಿಮಳೆ. ಇದೆಲ್ಲವೂ ಕಾರ್ಯಕ್ರಮ ಹಮ್ಮಿಕೊಂಡ ಪ್ರತಿಷ್ಠಿತ ಎಂಬ ಹೆಸರು ಅಂಟಿಸಿಕೊಂಡ ಪ್ರತಿಷ್ಠಾನಗಳ ಪ್ರಾಯೋಜಿತ ಪ್ಲಾನ್. ಅವರ ಪ್ಲಾನ್ ಯಾವತ್ತೂ ಫ್ಲಾಪ್ ಆಗದಹಾಗೆ ನೋಡಿಕೊಳ್ಳುವ ಮಹಾಬೆರಕಿಗಳು. ಹಾಗಂತಲೇ ಖರ್ಚುಮಾಡಿ ತಮ್ಮ ಕಾರ್ಯಕ್ರಮಕ್ಕೆ ಪ್ರಖರ ವಿಚಾರಧಾರೆಯ ಒಂದಿಬ್ಬರು ಪ್ರಗತಿಪರ ಸಾಹಿತಿ, ಚಿಂತಕರನ್ನು ದೃಷ್ಟಿಬೊಟ್ಟಿನಂತೆ ವೇದಿಕೆಯಲ್ಲಿ ಇಟ್ಟುಕೊಂಡಿರುತ್ತಾರೆ. ಅವರೊಂದಿಗೆ ಘನ ಗಂಭೀರವಾಗಿಯೇ ವ್ಯವಹರಿಸುವುದರಲ್ಲಿ ರಂಗೋಲಿ ಕೆಳಗೆ ತೂರುವಷ್ಟು ಜಾಣತನ ಹೊಂದಿರುತ್ತಾರೆ. ಕನ್ನಡ ರಾಜ್ಯೋತ್ಸವದ ನವೆಂಬರ್ ತಿಂಗಳು ಇವರಿಗೆ ಕನ್ನಡ ಸಂಸ್ಕೃತಿ ಸೇವೆಯ ಸುಗ್ಗಿಯ ಕಾಲ.

ಸೋಜಿಗವೆಂದರೆ ಇಂತಹ ಜಾಣತನ ಹೊಂದಿದವರು ಕೈಯಲ್ಲೊಂದು ಮುದ್ರಣ ಇಲ್ಲವೇ ವಿದ್ಯುನ್ಮಾನ ಮಾಧ್ಯಮವನ್ನು ಅಸ್ತ್ರದಂತೆ ಇಟ್ಟುಕೊಂಡಿರುತ್ತಾರೆ. ಕೆಲವರು ಪ್ರಭುತ್ವಕ್ಕೆ ಹೆಚ್ಚು ಹತ್ತಿರದಲ್ಲಿರುತ್ತಾರೆ. ತಾವು ಮಾಡಿದ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಗಲೆಂಬಂತೆ ಸದಾ ಸುಸುದ್ದಿಯಲ್ಲಿರುವ ಮಂತ್ರಿ ಮಹೋದಯರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಅದಕ್ಕೆ ಸಮೀಕರಿಸಿದಂತೆ ಹೆಸರಾಂತ ಸ್ವಾಮೀಜಿ, ಇಲ್ಲವೇ ಕಿರುತೆರೆ ತಾರೆಯನ್ನು ಕರೆ ತರುತ್ತಾರೆ. ಪ್ರಚಾರ ಸಿಗಲು ಇಷ್ಟು ಸಾಕಲ್ಲ, ಇನ್ನೇನು ಬೇಕು? ಇತ್ತೀಚೆಗೆ ಇದು ಸಾಂಕ್ರಾಮಿಕ ಜಡ್ಡಿನಂತೆ ಜಿಲ್ಲೆ, ತಾಲೂಕುಗಳನ್ನು ಮೀರಿ ಹಳ್ಳಿಗಳಿಗೂ ಹಬ್ಬತೊಡಗಿದೆ.

ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....