ನಿಷೇಧವಾಗಿರುವ ಭಜರಂಗದಳ ಮತ್ತು ಮಾಧ್ಯಮಗಳ ಆಕ್ರೋಶ

Date:

ಇದೊಂದು ವ್ಯವಸ್ಥಿತ ಕಾರ್ಯಾಚರಣೆ. ಅಂತಹದ್ದೇನೂ ಸಿಗದೇ ಕಾಯುತ್ತಿದ್ದದ್ದು ಬಿಜೆಪಿಗಿಂತ ಹೆಚ್ಚಾಗಿ ಕೆಲವು ಮಾಧ್ಯಮಗಳು. ಅವರು ಕಾದು, ಕುದ್ದು ಹತಾಶರಾಗಿದ್ದರು. ಇದ್ದಕ್ಕಿದ್ದಂತೆ ಅಂತಹದ್ದೊಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸಿಕ್ಕಿಬಿಟ್ಟಿತು 

ನಿನ್ನೆಯಿಂದ ಒಂದು ತಮಾಷೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬರೆದ ಒಂದು ಸಂಗತಿ ʼಅಲ್ಲೋಲ ಕಲ್ಲೋಲʼ ಸೃಷ್ಟಿಸಿದೆ. ಇದನ್ನು ಇಂಗ್ಲಿಷಿನಲ್ಲಿ ವಿವರಿಸುವುದಾದರೆ ʼಚಹಾ ಕಪ್ಪಿನಲ್ಲಿ ಬಿರುಗಾಳಿʼ ಎನ್ನಬಹುದು. ಏಕೆಂದರೆ, ಇಡೀ ರಾಜ್ಯಾದ್ಯಂತ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿರುವುದು ಎಲ್ಲಿ ಗೊತ್ತೇ? ಜನ ನೋಡಲು ಕಡಿಮೆ ಮಾಡಿರುವ ಟಿವಿ ಚಾನೆಲ್ಲುಗಳಲ್ಲಿ ಮತ್ತು ಮಂಗಳೂರಿನ ಬೀದಿಯೊಂದರಲ್ಲಿ ಹದಿನೆಂಟು ಜನ ಮಾಡಿದ ಪ್ರತಿಭಟನೆಯಲ್ಲಿ. ಹದಿನೆಂಟೇ ಜನ ಮಾಡಿದ ಪ್ರತಿಭಟನೆ.

ಇದನ್ನು ಹೀಗೆ ವಿವರಿಸುವುದಕ್ಕೆ ಕಾರಣವಿದೆ. ಕರ್ನಾಟಕದಲ್ಲಿ ʼಭಾರೀ ಆಕ್ರೋಶ, ರಾಜ್ಯಾದ್ಯಂತ ಬೀದಿಗಿಳಿದ… ಕಾರ್ಯಕರ್ತರುʼ ಇತ್ಯಾದಿ ಬೆಳವಣಿಗೆಗಳಲ್ಲಿ ಒಂದು ಸಮಾನ ವಿಧಾನ (ಪ್ಯಾಟರ್ನ್) ಇದೆ. ಅದು ಕೃತಕವಾಗಿ ಎದೆ ಬಡಿದುಕೊಂಡು ಅದನ್ನು ಕೆಲವು ಮಾಧ್ಯಮಗಳಲ್ಲಿ ವಿಪರೀತ ಹಿಗ್ಗಿಸಿ ಒಂದು ರೀತಿಯ ಅಭಿಪ್ರಾಯ ಉತ್ಪಾದಿಸುವ ವಿಧಾನ. ಅದನ್ನು ವಿವರಿಸುವ ಮುನ್ನ ಕಾಂಗ್ರೆಸ್ ಏನು ಹೇಳಿತ್ತೆಂಬುದನ್ನು ನೋಡೋಣ.

ಈ ಮೂರು ಅಂಶಗಳು ಅದರ ಪ್ರಣಾಳಿಕೆಯಲ್ಲಿದ್ದವು.

ಧರ್ಮ, ಜಾತಿಯ ಹೆಸರಿನಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ಕಠಿಣ ಕ್ರಮ; ಸಂವಿಧಾನ ವಿಧಿಗಳನ್ನು ಭಜರಂಗದಳ, ಪಿಎಫ್ಐ ಸೇರಿದಂತೆ ಬಹುಸಂಖ್ಯಾತ, ಅಲ್ಪಸಂಖ್ಯಾತರು ಯಾರೇ ಉಲ್ಲಂಘಿಸಿದರೂ ಕಠಿಣ ಕ್ರಮ; ಸಂವಿಧಾನಕ್ಕೆ ಧಕ್ಕೆ ತರುವ ಸಂಘಟನೆಗಳ ನಿಷೇಧ.

ಇದರಲ್ಲಿ ತಪ್ಪೇನೂ ಇಲ್ಲ. ಸಂವಿಧಾನದ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಮಾಡಲೇಬೇಕಾದ ಕೆಲಸ ಇದು. ಆದರೆ, ಇದರ ಅಗತ್ಯವಿರಲಿಲ್ಲ. ಏಕೆಂದರೆ, ಇಂತಹ ಚಹಾಕಪ್ಪಿನ ಬಿರುಗಾಳಿಯನ್ನು ನಿಭಾಯಿಸುವ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಇಲ್ಲ. ಎರಡನೆಯದಾಗಿ ಭಜರಂಗದಳ ಈಗಾಗಲೆ ಸ್ವಯಂನಿಷೇಧಕ್ಕೆ ಒಳಪಟ್ಟಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿ ಬದಲಾವಣೆಗಾಗಿ ಬಿಜೆಪಿ ವಿರುದ್ಧ ಮತ ಹಾಕಿ: ಸುಧೀಂದ್ರ ಕುಲಕರ್ಣಿ

ಹೌದು. ಇಲ್ಲ ಎನ್ನುವುದಾದರೆ, ನಿಮಗೊಂದು ಪ್ರಶ್ನೆ. ಈಗಿನ ಭಜರಂಗದಳದ ರಾಜ್ಯ ಸಂಚಾಲಕರ ಹೆಸರು ಹೇಳಿ ನೋಡೋಣ. ನಿಮಗೆ ಗೊತ್ತಿಲ್ಲ ಸರಿ. ಗೂಗಲ್‌ʼನ ಕೇಳಿ. ಅದರಲ್ಲಿ ಮತ್ತೆ ಮತ್ತೆ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್‌ ಅವರ ಹೆಸರೇ ಬರುತ್ತದೆ. ಅದಕ್ಕೂ ಹಿಂದೆ ಪ್ರಮೋದ್‌ ಮುತಾಲಿಕ್‌ ಹೆಸರು ಕೇಳಿ ಬರುತ್ತಿತ್ತು. ಶೂದ್ರ ಯುವಕರನ್ನು ಬಡಿದಾಡಲು ಹಚ್ಚುತ್ತಿದ್ದ ಭಜರಂಗದಳ ಈಗ ಮುಂಚೂಣಿಯಲ್ಲಿ ಎಲ್ಲೂ ಇಲ್ಲ. ಇದ್ದಕ್ಕಿದ್ದಂತೆ ಯಾವುದಾದರೂ ಸಮಾವೇಶ ಮಾಡಬೇಕೆಂದರೆ ಸಮಸ್ತ ಸಂಘಪರಿವಾರ ಕೆಲಸ ಮಾಡಿ, ಬಿಜೆಪಿಯ ಬೆಂಬಲಿಗರಿಂದ ಹಣ ಪಡೆದು ಸಂಘಟಿಸುತ್ತಾರೆ. ಏಕೆ? ಏಕೆಂದರೆ ಶೂದ್ರ ಯುವಕರು ಈಗ ಹಿಂದಿನಂತೆ ಬೀದಿಯಲ್ಲಿ ಬಡಿದಾಡಲು ದೊಡ್ಡ ಸಂಖ್ಯೆಯಲ್ಲಿ ಸಿಗುತ್ತಿಲ್ಲ. ಎಲ್ಲೋ ಕೆಲವು ಕಡೆ ಪುನೀತ್‌ ಕೆರೆಹಳ್ಳಿ ಥರದವರು ಟೀಂ ಕಟ್ಟಿಕೊಂಡು ಕ್ರಿಮಿನಲ್‌ ಕೆಲಸ ಮಾಡುತ್ತಾರೆ. ಅದನ್ನು ಬಿಟ್ಟರೆ ಭಜರಂಗದಳದ ಕೆಲಸವನ್ನು ಬಹುತೇಕ ಮಾಧ್ಯಮಗಳಲ್ಲಿ ಕುಳಿತವರು ಮಾಡುತ್ತಾರೆ. ನೇರ ದೈಹಿಕ ಹಿಂಸೆ ಈಗ ಅಷ್ಟಾಗಿ ಇಲ್ಲ.

ಇಲ್ಲವಾದರೆ, ಸ್ವತಃ ಪ್ರಧಾನಿ ಮೋದಿಯವರೇ ಮುಂದೆ ನಿಂತು ನಿನ್ನೆ ನೇತೃತ್ವ ಕೊಟ್ಟ ಭಜರಂಗದಳದ ಪರವಾಗಿನ ಯುದ್ಧಕ್ಕೆ ಬೀದಿಯಲ್ಲಿ ಪ್ರತಿಭಟನೆ ಎಲ್ಲೂ ಏಕೆ ನಡೆಯಲಿಲ್ಲ? ಮಂಗಳೂರಿನ ಬೀದಿಯಲ್ಲಿ ರಾತ್ರಿ ಎಷ್ಟೋ ಹೊತ್ತಿನಲ್ಲಿ ಹದಿನೆಂಟು ಜನ ಸೇರಿ ಮಾಡಿದ್ದನ್ನು ಹೊರತುಪಡಿಸಿ..

ನಿಮಗೆ ಆಶ್ಚರ್ಯ ಎನಿಸಬಹುದಾದರೂ ಇದು ನಿಜ. ಹಿಜಾಬ್‌ ವಿರುದ್ಧ ನಡೆದ ಸೋ ಕಾಲ್ಡ್‌ ರಾಜ್ಯಾದ್ಯಂತ ಪ್ರತಿಭಟನೆ ಎಷ್ಟು ಕಡೆ ನಡೆದಿತ್ತು? ಎಣಿಸಿ ನೋಡಿದರೆ ಅದು ನಡೆದದ್ದು 17 ಕಡೆ ಮಾತ್ರ. ಎಲ್ಲಾ ಕಡೆ ಇದ್ದಿದ್ದು 20-30 ಜನ. ಸಾವಿರಾರು ವಿದ್ಯಾರ್ಥಿಗಳಿರುವ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮಾತ್ರ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಆದರೆ, ಮಾಧ್ಯಮದಲ್ಲಿ ಅವನ್ನು ಹೇಗೆ ಬಿಂಬಿಸಲಾಯಿತು ಎಂದರೆ, ಸ್ವತಃ ಕಾಂಗ್ರೆಸ್‌ ನಾಯಕರೇ, ಕಾಲೇಜುಗಳಿಗೆ ರಜೆ ಘೋಷಿಸಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಇದನ್ನು ಓದಿ ಭಜರಂಗದಳಕ್ಕೆ ಹನುಮಂತನನ್ನು ಹೋಲಿಸಿದರೆ ಕನ್ನಡಿಗರು ಕ್ಷಮಿಸುವುದಿಲ್ಲ: ಗೌರವ್ ವಲ್ಲಭ್

ಇದೊಂದು ವ್ಯವಸ್ಥಿತ ಕಾರ್ಯಾಚರಣೆ. ಅಂತಹದ್ದೇನೂ ಸಿಗದೇ ಕಾಯುತ್ತಿದ್ದದ್ದು ಬಿಜೆಪಿಗಿಂತ ಹೆಚ್ಚಾಗಿ ಕೆಲವು ಮಾಧ್ಯಮಗಳು. ಅವರು ಕಾದು ಕುದ್ದು ಹತಾಶರಾಗಿದ್ದರು. ಇದ್ದಕ್ಕಿದ್ದಂತೆ ಅಂತಹದ್ದೊಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸಿಕ್ಕಿಬಿಟ್ಟಿತು. ಇಡೀ ರಾಜ್ಯದ ಮೂಲೆ ಮೂಲೆಗಳಿಂದ ಭಜರಂಗದಳದ ಕಾರ್ಯಕರ್ತರು ಹೇಳಿಕೆ ನೀಡಲಿಲ್ಲ; ಏಕೆಂದರೆ ರಾಜ್ಯದ ಮೂಲೆ ಮೂಲೆಗಳಲ್ಲಿ ಭಜರಂಗದಳವೇ ಇಲ್ಲ. ವ್ಯವಸ್ಥಿತ ಸಂದೇಶ ಹೊರಟಿದ್ದು ಬಿಜೆಪಿ ಐಟಿ ಸೆಲ್‌ ಮತ್ತು ಸ್ಟ್ರಾಟೆಜಿ ರೂಮುಗಳಿಂದ. ಖುದ್ದು ಪ್ರಧಾನಿಯವರಿಗೇ ಸಂದೇಶ ಹೋಯಿತು. ಟೆಲಿಪ್ರಾಂಪ್ಟರ್‌ ನಲ್ಲಿ ಅದನ್ನು ಓದಿ ಅವರೂ ಹೇಳಬೇಕಾದ್ದನ್ನು ಹೇಳಿದರು.

ಅಷ್ಟಾಗಿಯೂ ರಾಜ್ಯದಲ್ಲಿ ಪ್ರತಿಭಟನೆ ನಡೆಯದೇ ಇರಲು ಕಾರಣವೆಂದರೆ, ಭಜರಂಗದಳದಂತಹ ಸಂಘಟನೆಯೊಂದನ್ನು ರಾಜ್ಯದಲ್ಲಿ ದೀರ್ಘಕಾಲಿಕವಾಗಿ ಕಟ್ಟಲು ಆಗಿಲ್ಲ. ಕರ್ನಾಟಕದಲ್ಲಿ ಅಂಥದ್ದಕ್ಕೆ ಜನರು ಇನ್ನೂ ಸಿದ್ಧವಾಗಿಲ್ಲ; ಇದೇ ವಾಸ್ತವ. ಆ ಅರ್ಥದಲ್ಲಿ ಅದು ಸ್ವಯಂ ನಿಷೇಧಕ್ಕೆ ಒಳಪಟ್ಟಿದೆ. ಹಾಗೆ ನೋಡಿದರೆ ಹಿಜಾಬ್‌ – ಹಲಾಲ್‌ ನಂತರದಲ್ಲಿ ಕೋಮು ಧ್ರುವೀಕರಣದ ಪ್ರಯತ್ನಕ್ಕೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರಯತ್ನ ಮಾಡಲಿಲ್ಲ. ತೀರಾ ಇತ್ತೀಚೆಗೆ ಉರಿಗೌಡ-ನಂಜೇಗೌಡ ಪ್ರಕರಣದಲ್ಲಿ ನಡೆಸಿದ ಪ್ರಯತ್ನದಲ್ಲೂ ಅರೆಮನಸ್ಸು ಇದ್ದದ್ದು ಎದ್ದು ಕಾಣುತ್ತಿತ್ತು. ಈ ವಿಚಾರದಲ್ಲಿ ಮೊನ್ನೆ ಒಂದು ತಮಾಷೆ ನಡೆದು ಹೋದದ್ದನ್ನು ಯಾರೂ ಗಮನಿಸಲಿಲ್ಲ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಬಂದು ಭಾಷಣದಲ್ಲಿ ಉರಿಗೌಡ ಪ್ರಸ್ತಾಪ ಮಾಡಿದರೆ, ಅವರ ಭಾಷಣದ ಅನುವಾದಕ ಅದನ್ನು ಅನುವಾದ ಮಾಡಲಿಲ್ಲ.

ಇದನ್ನು ಓದಿ ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತಾಡಿ: ಮೋದಿಗೆ ರಾಹುಲ್-ಪ್ರಿಯಾಂಕಾ ಸವಾಲು

ಇವೆಲ್ಲದರಿಂದ ನಿರಾಶರಾಗಿರುವುದು ಟಿವಿಗಳಲ್ಲಿ ಕೂತ ಕೆಲವು ನಿರೂಪಕರು ಮಾತ್ರ. ಅವರಿಗೆ ಇಂಥದ್ದು ಇಲ್ಲದೇ ಅಭಿವೃದ್ಧಿ ಸಚ್ಚಾರಿತ್ರ್ಯ, ಹೊಸ ಮುಖಗಳು, ಭಾರೀ ಚಾಣಾಕ್ಷ ತಂತ್ರಗಳು, ರಣಕಲಿಗಳ ಭರ್ಜರಿ ಬೇಟೆಯ ಪಟ್ಟುಗಳ ಮೂಲಕವಷ್ಟೇ ಚುನಾವಣೆಯನ್ನು ನಿಭಾಯಿಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಂದಿಡೀ ದಿನ ಸಾಕ್ಷಾತ್‌ ಹನುಮಂತನನ್ನೇ ಕಾಂಗ್ರೆಸ್‌ ನವರು ನಿಷೇಧ ಮಾಡಿದರು ಎಂಬಂತೆ ಹುಯಿಲೆಬ್ಬಿಸಲಾಯಿತು. ಇನ್ನೇನಾದರೂ ಒಂದು ಸಿಕ್ಕರೆ ಇಂದಿನಿಂದ ಅದರ ಬೆನ್ನು ಹಿಂದೆ ಬೀಳುತ್ತಾರೆ. ಇಲ್ಲವಾದರೆ ಈ ವಿಚಾರವನ್ನೇ ನಾಲ್ಕೈದು ದಿನ ಎಳೆಯಲಾಗುತ್ತದೆ. ಈ ಮಧ್ಯೆ ಐಟಿ ಸೆಲ್ಲುಗಳಿಂದ ಹೊರಬೀಳುವ ಪೋಸ್ಟರುಗಳು ಒಂದಷ್ಟು ಜನರಿಗೆ ಗಾಬರಿ ಹುಟ್ಟಿಸುತ್ತದೆ. ಆ ಗಾಬರಿಯು ಬಿಜೆಪಿಗಿಂತ ಅದರ ವಿರುದ್ಧ ಇರುವ ಪಕ್ಷಗಳಿಗೆ ಸಹಾಯ ಮಾಡುವ ಸಾಧ್ಯತೆಯೇ ಹೆಚ್ಚು.

Dr Vasu HV
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...