ನಿಗದಿತ ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಶಾಲಾ ಹಾಗೂ ಖಾಸಗಿ ವಾಹನಗಳ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು 994 ಪ್ರಕರಣ ದಾಖಲಿಸಿದ್ದಾರೆ.
ಶಾಲಾ ವಾಹನಗಳಲ್ಲಿ ನಿಗದಿ ಮಾಡಿದ ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ವಾಹನಗಳಲ್ಲಿ ಚಾಲಕರು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆ, ನಗರ ಸಂಚಾರ ಪೊಲೀಸರು ಮಂಗಳವಾರ ಮಧ್ಯಾಹ್ನ ಈ ವಿಶೇಷ ಕಾರ್ಯಾಚರಣೆ ನಡೆಸಿದರು.
ಉಪ್ಪಾರಪೇಟೆ, ಹೈಗ್ರೌಂಡ್ಸ್, ಮಲ್ಲೇಶ್ವರ, ಶೇಷಾದ್ರಿಪುರ, ರಿಚ್ಮಂಡ್ ವೃತ್ತ, ಅಶೋಕ ನಗರ, ಹಲಸೂರು, ಯಶವಂತಪುರ ಸೇರಿದಂತೆ ಹಲವು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಠಾಣಾ ಸರಹದ್ದಿನಲ್ಲಿ ಶಾಲಾ ವಾಹನಗಳ ವಿರುದ್ದ ವಿಶೇಷ ಕಾರ್ಯಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಶಾಲಾ ವಾಹನಗಳ ವಿರುದ್ದ ಐ.ಎಂ.ವಿ ಪ್ರಕರಣ ದಾಖಲಿಸಲಾಗಿರುತ್ತದೆ. pic.twitter.com/2f8lne9HeW
— THALGHATTAPURA TRAFFIC (@tgpuratraffic) November 22, 2023
ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ಬರೋಬ್ಬರಿ 2050 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಈ ಪೈಕಿ 994 ಶಾಲಾ ವಾಹನ, 319 ಬಸ್ಗಳು, 122 ಆಟೋ, 133 ಓಮ್ನಿ, 332 ವ್ಯಾನ್ ಹಾಗೂ ಇತರೆ 88 ವಾಹನಗಳ ಮೇಲೆ ಭಾರತೀಯ ಮೋಟಾರು ವಾಹನ ಕಾಯ್ದೆ 177ರ ಅಡಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಏರ್‌ಪೋರ್ಟ್ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ; ಚಾಲಕರ ಆಕ್ರೋಶ
“ಚಾಲಕರು ಹಣದ ಆಸೆಗಾಗಿ ಹೆಚ್ಚಿನ ಮಕ್ಕಳನ್ನು ವಾಹನದಲ್ಲಿ ತುಂಬಿಕೊಂಡು ಸಂಚಾರ ಮಾಡುತ್ತಾರೆ. ವಾಹನ ಅಪಘಾತವಾದಾಗ ಮಕ್ಕಳು ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಮಕ್ಕಳನ್ನು ವಾಹನದಲ್ಲಿ ತುಂಬಿಕೊಂಡಿರುತ್ತಾರೆ. ಈ ಬಗ್ಗೆ ಚಾಲಕರಿಗೆ ಹಲವು ಬಾರಿ ತಿಳಿಸಿದರೂ ಕೂಡ ಸುಧಾರಣೆ ಕಂಡಿಲ್ಲ” ಎಂದು ಬೆಂಗಳೂರು ಸಂಚಾರ ಪೊಲೀಸರೊಬ್ಬರು ತಿಳಿಸಿದರು.