ಬಾಲ್ಯದ ನೆನಪು | ಈದ್ ಗೌಜಿ ಮತ್ತು ಹೊಸ ಬಟ್ಟೆ ಖರೀದಿ

Date:

ಚಿಕ್ಕಂದಿನಲ್ಲಿ ಎರಡು ಕಾರಣಕ್ಕೆ ನಮಗೆ ಚಿಕ್ಕ ಪೆರ್ನಾಲ್ ಅಥವಾ ಈದುಲ್ ಫಿತ್ರ್ ಹಬ್ಬ ಹೆಚ್ಚು ಇಷ್ಟ. ಉಪವಾಸ ಬಳಿಕದ ಖುಷಿಯೊಂದಾದರೆ, ನಮಗೆ ಹೊಸ ಬಟ್ಟೆಯನ್ನು ಖರೀದಿಸುವುದು ವರ್ಷದಲ್ಲಿ ಒಂದು ಸಲ ಅದು ಈ ಹಬ್ಬಕ್ಕೆ ಮಾತ್ರ. ಆದ್ದರಿಂದ ರಮದಾನಿನ ನಂತರದ ಶವ್ವಾಲ್ ತಿಂಗಳ ಆರಂಭದ ಈ ಹಬ್ಬ ನಮಗೆ ಬಹಳ ವಿಶೇಷ ಮತ್ತು ಮುಖ್ಯವಾಗಿದ್ದವು. ಈದುಲ್ ಫಿತ್ರ್ ಹಬ್ಬದ ದಿನ ಹೊಸ ಬಟ್ಟೆ ಉಟ್ಟು ನಡೆಯುವಾಗ ಇರುವ ಸಂತೋಷ ಮತ್ಯಾವ ದಿನದಲ್ಲೂ ಇರುವುದಿಲ್ಲ. ಅದೊಂದು ಈಗ ವರ್ಣಿಸಲಾಗದ ಸ್ವರ್ಗ ಸುಖ. ನಮಗೆ ವರ್ಷಕ್ಕೆ ಒಮ್ಮೆಯಾದರೂ ಹೊಸ ಬಟ್ಟೆ ಧರಿಸುವ ಭಾಗ್ಯ ಇದ್ದರೂ ಕೆಲವರಿಗೆ ಅದೂ ಇರುತ್ತಿರಲಿಲ್ಲ ಎಲ್ಲರ ಮನೆಯಲ್ಲೂ ಬಡತನವೇ ಮುಖ್ಯ ಸಮಸ್ಯೆಯಾಗಿದ್ದ ಆ ಕಾಲದಲ್ಲಿ ಎಲ್ಲರಿಗೂ ಹೊಸ ಬಟ್ಟೆ ಖರೀದಿಸುವ ಆರ್ಥಿಕ ಬಲ ಇಲ್ಲದಿದ್ದರೂ ಮಕ್ಕಳ ರೋದನೆ ತಾಳಲಾರದೆ ಕೆಲವೊಮ್ಮೆ ಸಾಲ ಮಾಡಿ ಹೆತ್ತವರು ಹೇಗಾದರೂ ರಮದಾನಿನಲ್ಲಿ ಹಣ ಹೊಂದಿಸಿಡುತ್ತಿದ್ದರು. ಬುದ್ದಿ ಬಂದ ಮಕ್ಕಳಂತೂ ಮನೆಯವರ ಕಷ್ಟ ಅರಿತು ಹೊಸ ಬಟ್ಟೆಯ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಇದು ಹಿಂದಿನ ಕಾಲದ ಮಕ್ಕಳಿಗೆ ಹೆತ್ತವರ ಕಷ್ಟ ಅರ್ಥೈಸುವ ವಿಶೇಷ ಗುಣ ದೇವರು ಕೊಟ್ಟಿದ್ದು ಅನ್ಸುತ್ತೆ.

ಕೆಲವೊಮ್ಮೆ ಮನೆಯೊಳಗಿನ ಬಡತನವನ್ನು ಖುದ್ದು ಅರಿತ ಮಕ್ಕಳು ತಾವೇ ಹಣ ಶೇಖರಿಸುವ ಕೆಲಸ ಮಾಡುತ್ತಿದ್ದರು. ಅದಕ್ಕೆ ಮುಖ್ಯವಾಗಿ ಸಮೂಸ ಮಾರುವುದು. ಅಡಿಕೆಯ ಸಿಪ್ಪೆ ಸುಳಿಯುವುದು, ಬೀಡಿ ಕಟ್ಟುವುದು ಹಣ ಜಮೇ ಮಾಡಲು ಇದ್ದ ಇತರ ಉತ್ಪಾದನಾ ಮಾರ್ಗಗಳಾಗಿ ಕಂಡಿದ್ದರು.

ನಮ್ಮದು ಸರ್ಕಾರಿ ಶಾಲೆಯಾದರೂ ಮುಸ್ಲಿಮರೇ ಹೆಚ್ಚಿರುವುದರಿಂದ ಉಪವಾಸದ ಒಂದು ತಿಂಗಳು ಮದ್ಯಾಹ್ನ ತನಕ ಮಾತ್ರ ಶಾಲೆ ಇರುತ್ತಿತ್ತು. ಆ ಬಳಿಕ ಹೆಚ್ಚಿನ ಮಕ್ಕಳು ರಟ್ ಪೆಟ್ಟಿಗೆಯಲ್ಲಿ ಸಮೂಸ ತುಂಬಿಸಿ ನಾಲ್ಕು ದಿಕ್ಕಿಗೆ ಹರಡಿ ತಂಬೂಸಾ… ತಂಬೂಸಾ… ಎಂದು ರಾಗದಿಂದ ಕೂಗುತ್ತಾ.. ಮನೆ ಮನೆಗೆ ಹೋಗಿ ಮಾರುತ್ತಿದ್ದರು. ಪ್ರತಿ ದಿನದ ಕಮಿಷನ್ ಗಳಿಕೆ ಒಂದು ತಿಂಗಳಿಗೆ ದೊಡ್ಡ ಸಂಖ್ಯೆಯೇ ಆಗುತ್ತಿತ್ತು. ಅಡಿಕೆ ಸಿಪ್ಪೆ ಸುಳಿಯುವುದು ಮನೆಯಲ್ಲೇ ಕೂತು ಮಾಡುವ ಕೆಲಸವಾದ್ದರಿಂದ ನಾವು ಅದನ್ನೇ ಆಯ್ಕೆ ಮಾಡಿದ್ದೆವು. ಆ ಕೆಲಸ ಮಾಡುವುದಾದರೆ ಅಪ್ಪನಿಗೆ ಅಭ್ಯಂತರವಿರಲಿಲ್ಲ. ಹೆಣ್ಣು ಮಕ್ಕಳು ಬಿಡಿ ಕಟ್ಟಿತ್ತಿದ್ದರು. ಬೀಡಿಗೆ ನೂಲು ಹಾಕಿ ಕೊಡುವ, ಕಟ್ಟಿದ ಬೀಡಿಯನ್ನು ಬ್ರಾಂಚಿಗೆ ಮುಟ್ಟಿಸುವ, ಲೇಬಲ್ ಹಾಕುವ ಕೆಲಸವನ್ನೂ ಮಾಡುತ್ತಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನನಗೆ ತಂಬೂಸ ಮಾರುವ ಕೆಲಸಕ್ಕೆ ಹೋಗುವುದು ತುಂಬ ಇಷ್ಟ. ನಾಲ್ಕು ಕಾಸು ಜೋಪಾನ ಮಾಡುವ ಜೊತೆಗೆ ಊರು ಸುತ್ತುವ ಖುಷಿ. ಅಪ್ಪನಿಗೆ ಗೊತ್ತಾದರೆ ಬೆನ್ನೆಲುಬು ಮುರಿಯುತ್ತಾರೆ. ‘ಕಲಿಯುವ ಮಕ್ಕಳು ಕೆಲಸದ ಕಡೆ ಗಮನ ಕೊಡಬಾರದು’ ಎಂಬ ಅವರ ತತ್ವಕ್ಕಿಂತ ಮುಖ್ಯವಾಗಿ ನಿನ್ನ ಮಗ ಸಮೂಸ ಮಾರುತ್ತಿದ್ದಾನೆ ಎಂದು ಪೇಟೆಯಲ್ಲಿ ನಾಲ್ಕಾರು ಜನ ಮಾತನಾಡುವ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿದ್ದರು. ಈ ಜನರಿಂದಾಗಿ ಅಪ್ಪನಿಂದ ನಿತ್ಯ ನಿರಂತರ ಒದೆ ತಿಂದು ಬದುಕಿದ ಪುಣ್ಯಾತ್ಮ ಊರಿನಲ್ಲಿ ನಾನೊಬ್ಬನೇ ಆಗಿದ್ದೆ. ಒಮ್ಮೆ ಅಪ್ಪನ ಕಣ್ಣು ತಪ್ಪಿಸಿ ಸಮೂಸ ಮಾರುವ ಕೆಲಸಕ್ಕೆ ಗೆಳೆಯನ ಜೊತೆ ಕೈ ಜೋಡಿಸಿದೆ ನಾನು ದಣಿದು ಮನೆಗೆ ತಲುಪುವ ಮುಂಚೆಯೇ ಮಿಂಚಿನಂತೆ ಅಪ್ಪನಿಗೆ ಸುದ್ದಿ ಮುಟ್ಟಿತ್ತು. ಉದ್ದದ ಬೆತ್ತ ಹಿಡಿದು ಚಾವಡಿಯಲ್ಲಿ ನನಗಾಗಿ ಕಾಯುತ್ತಿದ್ದರು. ರಮದಾನಿನಲ್ಲಿ ಒಂದು ಕರ್ಮಕ್ಕೆ ಎಪ್ಪತ್ತು ಪ್ರತಿಫಲವಿದೆಯೆಂದ ಉಸ್ತಾದರ ಭಾಷಣದ ಪ್ರಾಯೋಗಿಕ ರೂಪ ಆಗ ಅನುಭವವಾಯಿತು.

ರಮದಾನಿನ ಹದಿನೇಳನೇ ದಿನ ಬದ್ರ್ ವಾರ್ಷಿಕ ಸ್ಮರಣೆ ಮುಗಿದ ಬಳಿಕ ಬಟ್ಟೆ ಖರೀದಿಸುವ ಭರಾಟೆ ಜೋರಾಗುತ್ತದೆ. ಮಂಗಳೂರಿನಿಂದ ಬಟ್ಟೆ ಖರೀದಿಸಿದರೆ ಮಾತ್ರ ಅದಕ್ಕೊಂದು ಬೆಲೆ. ಮಂಗಳೂರು ಈಗಿನಂತೆ ಸನಿಹದ ಪಟ್ಟಣವಾಗಿರಲಿಲ್ಲ ಬಹಳ ದೂರದಲ್ಲಿತ್ತು. ಶಾಲೆಯಲ್ಲಿ ಪಾಠಕ್ಕಿಂತ ಹೆಚ್ಚಾಗಿ ಬಟ್ಟೆಯ ಹೊಸ ಮಾಡೆಲ್ ನ ಚರ್ಚೆಯೇ ನಡೆಯುತ್ತಿತ್ತು.

ನಮ್ಮ ಸಹಪಾಠಿಗಳಲ್ಲಿ ಹೆಚ್ಚಿನವರು ಅಡಿಕೆ ವ್ಯಾಪಾರಸ್ಥರ ಮಕ್ಕಳಾಗಿದ್ದರಿಂದ ಅವರು ಮೊದಲು ಖರೀದಿಸಿ ಬಂದು ನಮ್ಮಲ್ಲಿ ಊದುವ ಪುರಾಣಗಳನ್ನು ಕೂತು ಆಲಿಸುವ ದುರ್ದೈವ ನಮ್ಮದಾಗಿತ್ತು. ಕೆಲವರು ತಾವು ತೆಗೆದ ಎರಡು ಜೋಡಿ ಬಟ್ಟೆಯ ಬಣ್ಣ, ಮೋಡಲ್, ಡಿಸೈನ್ ಬಗ್ಗೆ ಹಾಗೂ ಮಂಗಳೂರಿನ ಐಡಿಯಲ್ ನಲ್ಲಿ ತಾವು ತಿಂದ ಐಸ್‌ಕ್ರೀಂನ ಸ್ವಾದದ ಬಗ್ಗೆ ಹೇಳಿ ಹೇಳಿ ನಮ್ಮಲ್ಲಿ ನಂಜಿ ಉರಿಸುತ್ತಿದ್ದರು.

ಮೊದಲೆಲ್ಲಾ ನಮಗೆ ಮಂಗಳೂರು ಕಡೆ ಹೋಗಿ ಬಟ್ಟೆ ತೆಗೆಯುವ ಸೌಭಾಗ್ಯ ಇರುತ್ತಿರಲಿಲ್ಲ. ವರ್ಷಕ್ಕೊಮ್ಮೆ ಅಜ್ಜಿ ಮನೆ ಕಡೆ ಹೋಗುವಾಗ ಸ್ಟೇಟ್ ಬ್ಯಾಂಕ್ ದಾರಿಯಲ್ಲಿ ಬಸ್ಸು ಹಾದು ಹೋದರೆ ಅದುವೇ ನಮ್ಮ ಪಾಲಿನ ಮಂಗಳೂರು ದರ್ಶನ. ನನ್ನ ಸರಿಯಾದ ನೆನಪಿನಲ್ಲಿ ಐದನೇ ತರಗತಿ ನಂತರವೇ ಮಂಗಳೂರಿಗೆ ಮೊದಲು ಕಾಲಿಟ್ಟದ್ದು. ಹತ್ತನೇ ತರಗತಿಯ ವರೇಗೆ ವರ್ಷಕ್ಕೊಮ್ಮೆ ಮಾತ್ರ ನಮ್ಮ ಪ್ರಯಾಣ. ಈಗಲೂ ಮಂಗಳೂರಿನಲ್ಲಿ ಕೆಲಸ ಮಾಡುವವರಿಗೆ ಹಳ್ಳಿಗಳಲ್ಲಿ ನೀಡಲಾಗುವ ವಿಶೇಷ ಗೌರವ ಹಾಗೇ ಉಳಿದಿದೆ. ಇದು ಆ ಪಟ್ಟಣದ ಮಹಿಮೆ. ಬ್ಯಾರಿಯಲ್ಲಿ ಮಂಗಳೂರಿಗೆ ಮೈಕಾಲ ಎಂದು ಕರೆಯುತ್ತೇವೆ. ಒಟ್ಟು ಸಪ್ತ ಭಾಷೆಯಲ್ಲಿ ಕರೆಯಲ್ಪಡುವ ಏಕೈಕ ನಗರ ಇದು ಎಂಬ ಹೆಮ್ಮೆ ನಮಗಿದೆ.

ಮಂಗಳೂರಿನಿಂದ ಬಟ್ಟೆ ಖರೀದಿಸಲು ಸಾವಿರಾರು ರೂಪಾಯಿ ಖರ್ಚು ಇರುವುದರಿಂದ ಹಳ್ಳಿಯ ಹೆಚ್ಚಿನವರು ಕಂತಿನ ಜವಳಿ ವ್ಯಾಪಾರಿಯನ್ನೇ ಅವಲಂಬಿಸುತ್ತಿದ್ದರು. ತಿಂಗಳಿಗೆ ಒಂದಿಂತಿಷ್ಟು ಕೊಟ್ಟು ಒಂದು ವರ್ಷದಲ್ಲಿ ಲೆಕ್ಕ ಚುಕ್ತ ಮಾಡಿ ಪ್ರತಿ ರಮದಾನಿಗೆ ಹೊಸ ಕಂತು ಕುದುರಿಸುತ್ತಿದ್ದರು. ಬೀಡಿ ಆದಾಯದವರಿಗೆ ಇದು ಒಂದು ಸರಳ ಮತ್ತು ಸುಲಭ ವ್ಯವಸ್ಥೆಯಾಗಿತ್ತು. ಕೆಲವೊಮ್ಮೆ ನಷ್ಟ ಅನುಭವಿಸಿ ಜವಳಿ ವ್ಯಾಪಾರಿ ಊರು ಬಿಟ್ಟು ಕಂತು ವಸೂಲಿಗೆ ಬರದಿದ್ದರೆ ಲಾಭವೇ ಆಗುತ್ತಿತ್ತು. ಕಂತಿಗೆ ಅವಲಂಬಿಸಿದ ಕೆಲವು ಗಿರಾಕಿಗಳ ಮನದಾಳದ ಇಚ್ಛೆ ಕೂಡ ಇದೇ ಆಗಿರುತ್ತಿತ್ತು. ವಂಚನೆಯ ಉದ್ದೇಶದಿಂದಲ್ಲ ವರಮಾನದ ಕೊರತೆ ಬಡತನವೇ ಮುಖ್ಯ ಕಾರಣ. ಏನೇ ಆದರೂ ಮನೆ ಬಳಿ ಬರುವ ಜವಳಿ ವ್ಯಾಪಾರಿಗಳೇ ಹಳ್ಳಿಯವರಿಗೆ ಆಸರೆ. ಧೀರ್ಘ ಬಾಳಿಕೆಯನ್ನು ಮುಂದಿಟ್ಟು ಕಂತಿನಲ್ಲಿ ಅಮ್ಮ ನಮಗೆ ಬಟ್ಟೆ ಖರೀದಿಸುತ್ತಿದ್ದಳು. ಅದು ನಮಗೆ ಜಂಬಳಿ ತರ ಆಗುತ್ತಿದ್ದರೂ ಉಟ್ಕೊಳ್ಳಲೇ ಬೇಕು ಈಗಿನಂತೆ ಫಿಟ್ಟಿಂಗ್ ಮಾಡುವ ಪರ್ಯಾಯ ವ್ಯವಸ್ಥೆಗೆ ರೊಕ್ಕ ನಮ್ಮಲ್ಲಿ ಇರಲಿಲ್ಲ. ನಮ್ಮ ಸೈಜಿನ ಬಟ್ಟೆ ಸಿಗದಿದ್ದರೆ ಸಿಕ್ಕಿದ್ದನ್ನು ತೆಗೆಯುತ್ತಿದ್ದರು. ಕೆಲವೊಮ್ಮೆ ದೊಡ್ಡ ಸೈಜ್ ಡ್ರೆಸ್ ಅರ್ಧ ಮಡಚಬೇಕಾಗುತ್ತಿತ್ತು. ಅಯಕ್ಕರ್ (ಲಾಡಿ) ಕಟ್ಟಿ ಪ್ಯಾಂಟ್ ಜಾರದಂತೆ ನೋಡಿಕೊಳ್ಳಬೇಕಾಗುತ್ತಿತ್ತು. ಕೆಲವೊಮ್ಮೆ ಒಂದು ಕೈಯಲ್ಲಿ ಪ್ಯಾಂಟ್ ಹಿಡಿದುಕೊಂಡೇ ಹಬ್ಬ ಮುಗಿಸುವ ಸಂಕಷ್ಟ ಎದುರಿಸಬೇಕಿತ್ತು. ಎಲ್ಲರ ಆಂತರಿಕ ಸಮಸ್ಯೆಗಳು ಇದೇ ಆದ್ದರಿಂದ ಯಾರಿಗೂ ತಮಾಷೆ ಮಾಡುವ ಪುರ್ಸೊತ್ತು ಇರುತ್ತಿರಲಿಲ್ಲ.

ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ನೀಲಿ-ಬಿಳಿ ಸಮವಸ್ತ್ರ ಇತ್ತು. ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ ಅಂಗಿ. ಆಗ ಅರ್ಧಕ್ಕಿಂತ ಹೆಚ್ಚಿನ ಮಕ್ಕಳಿಗೆ ಸಮವಸ್ತ್ರವೇ ಇರಲಿಲ್ಲ ಸರ್ಕಾರದ ಉಚಿತ ಯೋಜನೆಯೂ ಸಮರ್ಪಕವಾಗಿ ಇರಲಿಲ್ಲ. ಹೆತ್ತವರು ಹೆಚ್ಚು ಬುದ್ದಿ ಉಪಯೋಗಿಸಿ ಸಮವಸ್ತ್ರ ಬಣ್ಣದ ಬಟ್ಟೆಯನ್ನೇ ಹಬ್ಬಕ್ಕೆ ಖರೀದಿಸತೊಡಗಿದರು ಅದಕ್ಕೆ ಟೀಚರ್ ರವರ ಪ್ರೇರಣೆ ಬೇರೆ ಇತ್ತು. ನಮ್ಮ ಸೀನಿಯರ್ಸ್ ತುಂಬಾ ಮಂದಿ ಈ ಪ್ರಯೋಗ ಮಾಡಿದ್ದರು. ನನ್ನ ಸರದಿ ಬಂದಾಗ ಸರ್ಕಾರ ಕಣ್ಣು ತೆರೆಯಿತು. ಒಂದು ಜೋಡಿ ಉಚಿತ ಸಮವಸ್ತ್ರ ಕೈ ಸೇರ ತೊಡಗಿತು. ಹಬ್ಬಕ್ಕೆ ಸಮವಸ್ತ್ರ ಖರೀದಿಸುವುದು ತಪ್ಪಿತು.

ಏಳನೇ ತರಗತಿಯಿಂದ ನಾವು ಕ್ಲೋತ್ ಪೀಸ್ ತೆಗೆದು ನಮ್ಮ ಅಳತೆಯಂತೆ ಹೊಲಿಸಿಕೊಳ್ಳುತ್ತಿದ್ದೆವು. ರೆಡಿಮೇಡ್ ಗಿಂತ ಇದು ಕನ್ಫಟ್ ಮತ್ತು ಅಗ್ಗವಾಗುತ್ತಿತ್ತಾದರೂ ಟೈಲರ್ ಬಟ್ಟೆ ಹೊಲಿದು ಕೊಡುವ ವರೇಗೆ ನಮಗೆ ನೆಮ್ಮದಿಯಿರುತ್ತಿರಲಿಲ್ಲ. ರಮದಾನಿನ ಮೊದಲನೇ ದಿನ ಅಳತೆ ಕೊಟ್ಟರೂ ಹೊಲಿದು ಕೊಡುವುದು ಶವ್ವಾಲ್ ಚಂದ್ರ ದರ್ಶನದ ಬಳಿಕ. ಇದು ಟೈಲರ್ ರವರ ಚಾಳಿ. ಒಮ್ಮೆ ಏನಾಯಿತೆಂದರೆ ನಮ್ಮ ಊರಿಗೆ ಹೊಸ ಟೈಲರ್ ಬಂದು ಅಂಗಡಿ ತೆರೆದಿದ್ದ. ಅವನ ನವೀನ ವಿನ್ಯಾಸದ ಸ್ಟಿಚ್ಚಿಂಗ್ ಮೆಥಡ್ ಗೆ ಎಲ್ಲರೂ ಮಾರು ಹೋಗಿದ್ದರೂ ಅದೂ ಅಲ್ಲದೆ ಕಡಿಮೆ ದರ ಬೇರೆ. ಈ ಸಲ ಪೆರ್ನಾಲ್ ಗೆ ಇವನ ಹತ್ರ ಹೊಲಿಸಬೇಕೆಂದು ನಾವೆಲ್ಲ ನಿಯ್ಯತ್ ಮಾಡಿ ಕನಸು ಕಂಡೆವು. ಆ ವರ್ಷದ ಪೆರ್ನಾಲ್ಗೆ ಟೈಲರ್ ತನ್ನ ಮಿತಿಗಿಂತ ಹೆಚ್ಚಿನ ಗಿರಾಕಿಗಳನ್ನು ಕವರ್ ಮಾಡಿ, ಹಳೇಯ ಟೈಲರ್ ಗಳ ವ್ಯಾಪಾರಕ್ಕೂ ಕತ್ತರಿ ಹಾಕಿದ್ದ. ಗಿರಾಕಿಗಳು ಆ ಕಡೆ ವಾಲದಂತೆ ಜಾಗೃತೆ ವಹಿಸಿ ಅಡ್ವಾನ್ಸು ಕೀಸೆಗೆ ಹಾಕಿ ಅರ್ಧ ಸ್ಟಿಚ್ ಮಾಡಿ ಬಾಕಿ ಬಿಟ್ಟ. ಕೆಲವರಂತೂ ತಮ್ಮ ಬಟ್ಟೆ ಬೇಗ ಕೈ ಸೇರಲೆಂದು ಪೂರ್ತಿ ಪೇಮೆಂಟ್ ಕೂಡಾ ಮಾಡಿದ್ದರು. ನಮಗೆ ಹಣದ ದಾರಿದ್ರ್ಯವಿದ್ದರಿಂದ ಸ್ಟಿಚ್ಚಿಂಗ್ ಫೀಸ್ ನ ಹಣ ಸಂಗ್ರಹಿಸುವ ಒದ್ದಾಟದಲ್ಲಿದ್ದೆವು.

ರಮದಾನ್ ಇಪ್ಪತ್ತೇಳರಿಂದ ಅವನ ಅಂಗಡಿ ಮುಂದೆ ಜನ ಜಮಾಯಿಸತೊಡಗಿದರು. ಆದರೆ, ಒಬ್ಬನ ವಸ್ತ್ರವೂ ಪೂರ್ತಿ ಹೊಲಿದು ಮುಗಿದಿರಲಿಲ್ಲ. ಪೂರ್ತಿ ಹಣ ಪಾವತಿಸಿದವರು ತಾಳ್ಮೆ ಮೀರಿ ಬಯ್ಯತೊಡಗಿದರು. ಪಾಪ ಟೈಲರ್ ರಾತ್ರಿ ಪೂರ್ತಿ ಕಣ್ಣು ಬಿಟ್ಟು ಮಿಷನ್ ಮೆಟ್ಟುತ್ತಿದ್ದ.

ರಮದಾನಿನ ಕೊನೆಯ ದಿನ ಬೆಳಿಗ್ಗೆಯಿಂದ ಆತನ ಪತ್ತೆ ಇರಲಿಲ್ಲ ಅಂಗಡಿಗೆ ಬೀ ಹಾಕಲಾಗಿತ್ತು. ಮನೆಯಿಂದಲೂ ಮೂಟೆ ಕಟ್ಟಿ ಪರಾರಿಯಾಗಿದ್ದ. ಎಲ್ಲರೂ ಹೈರಾಣಾದರು ಹಿಡಿ ಶಾಪ ಹಾಕಿದರು ಅವನನ್ನು ಹುಡುಕಲು ಒಂದು ನಿಯೋಗ ಹೊರಟಿತು. ನಾನು ಕಷ್ಟಪಟ್ಟು ಹಣ ಹೊಂದಿಸಿದರೂ ನಿರಾಶೆಯಾಗಿ ಅಳುವೇ ಬಂತು. ಆದರೂ ಆ ಜನ ಕೈ ಕೊಡಲ್ಲ ಎಂಬ ಭರವಸೆ ಇತ್ತು.

ಪೆರ್ನಾಲ್ ತಕ್ಬೀರ್ ಮೊಳಗಿದ ಕೆಲವೇ ಕ್ಷಣಗಳಲ್ಲಿ ಆತ ದಿಢೀರ್ ಪ್ರತ್ಯಕ್ಷನಾದ. ಹೊಲಿದ ಪ್ಯಾಂಟ್ ಷರ್ಟುಗಳನ್ನು ಟೈಲರ್ ಮಿಶನ್ ಮೇಲೆ ರಾಶಿ ಹಾಕಿದ ಎಲ್ಲರೂ ತಮ್ಮ ತಮ್ಮ ಬಟ್ಟೆ ಜೋಡಿಗಳನ್ನು ತೆಗೆಯಲು ಮುಗಿಬಿದ್ದರು. ಈ ಗೌಜಿ ಯಲ್ಲಿ ಯಾರ ಷರ್ಟು ಯಾರದೋ ಪಾಲಾಯಿತು ಇನ್ಯಾರದೋ ಪ್ಯಾಂಟ್ ಯಾರಿಗೋ ಹೋಯಿತು. ಅಂತು ಹೊಸ ಬಟ್ಟೆ ಎಲ್ಲರಿಗೂ ಸಿಕ್ಕಿತೆಂದು ಅಲ್ಲಿಂದಲ್ಲಿಗೆ ಸಮಾದಾನಗೊಂಡರು. ಈ ಜಂಗುಳಿಯಲ್ಲಿ ನಾನು ಮತ್ತು ಗೆಳಯ ಕೂಡ ಸಿಕ್ಕಿಬಿದ್ದಿದ್ದೆವು. ಹೇಗೊ ಒದ್ದಾಡಿ ನನ್ನ ಷರ್ಟ್ ಮತ್ತು ಇನ್ಯಾರದೋ ಪ್ಯಾಂಟ್ ಸಿಕ್ಕಿತು ಅಳತೆಯೂ ಸರಿ ಹೊಂದಿತು. ಇದು ನನ್ನದಲ್ಲ ಎಂದು ವಾದ ತೆಗೆದರೆ ಸಿಕ್ಕಿದ್ದೂ ದಕ್ಕಲ್ಲ ಎಂದರಿತು ಬೇಗ ಕಾಲ್ಕಿತ್ತೆ. ಗೆಳೆಯ ಅಳತೆ ನೋಡುವ ಗೋಜಿಗೆ ಹೋಗಲಿಲ್ಲ ಸಿಕ್ಕಿದ್ದನ್ನು ತೊಟ್ಟೆಗೆ ಹಾಕಿ ಮನೆಗೆ ಓಡಿದ. ಮಸೀದಿಗೆ ಬರುವಾಗ ಅವ ಷರ್ಟ್ ಮಾತ್ರ ಹಾಕಿಕೊಂಡಿದ್ದ ಅವನ ಅಪ್ಪ ಹೊಸ ಪ್ಯಾಂಟ್ ಹಾಕಿ ರಾಜ ಗಾಂಭೀರ್ಯದಿಂದ ಮುಂದೆ ನಡೆಯುತ್ತಿದ್ದರು ಅವನು ಕೂಗುತ್ತಾ ಹಿಂಬಾಲಿಸುತ್ತಿದ್ದ. ಇದು ನೆನೆದು ನನಗೆ ಈಗಲೂ ನಗು ಉಕ್ಕಿ ಬರುತ್ತದೆ.

ಉಪವಾಸದ ಕೊನೇಯ ದಿನದಿಂದ ಫಿತ್ರ್ ಝಕಾತ್ ಕೊಡುವ ಗೌಜಿ. ಆಗ ಫಿತ್ರ್ ಝಕಾತ್ ಹೇಗೆ ಕೊಡಬೇಕೆಂಬ ಮಾಹಿತಿ ಇದ್ದರೂ ಯಾರಿಗೆ ಕೊಡಬೇಕೆಂಬ ಮಾಹಿತಿಯ ಕೊರತೆ ಇತ್ತು. ಈಗಲೂ ಇದೆ. ನಮ್ಮೂರಿನಲ್ಲಿ ಜನರು ಫಿತ್ರ್ ಝಕಾತ್ ಕ್ರಮ ಬದ್ಧವಾಗಿ ಕೊಡುತ್ತಿದ್ದರೂ ಅರ್ಹರಿಗೆ ಸರಿಯಾಗಿ ಅದು ತಲುಪುತ್ತಿರಲಿಲಿಲ್ಲ. ಅಕ್ಕ ಪಕ್ಕದವರು ಪರಸ್ಪರ ಅದಲು ಬದಲು ಮಾಡಿಕೊಂಡು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. “ಹಬ್ಬದ ದಿನ ಒಬ್ಬರು ಕೂಡಾ ಹಸಿದಿರಬಾರದೆಂಬ” ಪ್ರವಾದಿಯವರ ಆಜ್ಞೆ ನಿಜವಾಗಿಯೂ ಪ್ರಯೋಗಿಕವಾಗುತ್ತಿರಲಿಲ್ಲ. ಅರ್ಹರನ್ನು ಹುಡುಕಿ ಕೊಡುವ ಉಸಬರಿಯೂ ಹೆಚ್ಚಿನವರಿಗಿರಲಿಲ್ಲ ಉದ್ದೇಶಕ್ಕಿಂತ ಹೆಚ್ಚಾಗಿ ತಮ್ಮ ಕರ್ಮ ಪೂರ್ತಿಗೊಳಿಸುವ ತವಕ ಅಷ್ಟೇ.

ಅಂದಿನ ಕಾಲದಲ್ಲಿ ಫಿತ್ರ್ ಝಕಾತ್ ಅಗತ್ಯದವರು ತುಂಬಾ ಜನ ಇದ್ದರು. ಆದರೆ, ಇಂದು ಎರಡುವರೆ ಸೇರು ಅಕ್ಕಿ ಇಲ್ಲದ ಮನೆಯ ಸಂಖ್ಯೆ ಬರೀ ಕಡಿಮೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ. ಅಂತಹದರಲ್ಲಿ ಫಿತ್ರ್ ಝಕಾತ್ ಗೆ ಅಕ್ಕಿ ಸಾಮಾಗ್ರಿಯನ್ನು ಕೊಡುವುದರ ಬದಲು ಬೇರೆ ಆಲೋಚನೆ ನಡೆಯಬೇಕು. ಕಾಲದ ಬೇಡಿಕೆಯಂತೆ ಅದರ ಅಗತ್ಯವೂ ಇದೆ. ಏಕೆಂದರೆ ಫಿತ್ರ್ ಝಕಾತ್ ನ ಉದ್ದೇಶ ಎಲ್ಲಾ ಮನೆಯಲ್ಲಿ ಹಬ್ಬದ ಸಂಭ್ರಮ ಇರಬೇಕು ಎಂದಲ್ಲವೆ? ಸಂಭ್ರಮಕ್ಕೆ ಹಸಿವು ಮುಖ್ಯ ತೊಡಕ್ಕಾದರೂ ಬೇರೆ ಅಗತ್ಯವೂ ಇರುತ್ತದೆ. ಇರಲಿ ಅದು ದೊಡ್ಡ ಚರ್ಚೆಯ ಮ್ಯಾಟರ್.

ನನ್ನ ಅಪ್ಪನಿಗೆ ಫಿತ್ರ್ ಝಕಾತ್ ಸ್ವೀಕರಿಸುವುದು ಅಷ್ಟು ಇಷ್ಟವಿರಲಿಲ್ಲ. ಅವರು ಸ್ವಲ್ಪ ಪುಸ್ತಕ ಪೇಪರ್ ಓದುವ ಜನ ಆದ್ದರಿಂದ ಅವರಿಗೆ ಸ್ವಲ್ಪ ಇದರ ಬಗ್ಗೆ ಅರಿವಿತ್ತು. ಒಮ್ಮೆ ಅವರು ನೆರೆಯ ಸಂಬಂಧಿಯೋರ್ವರು ಅಕ್ಕಿ ಕಿಟ್ಟಿನೊಂದಿಗೆ ಬಂದಾಗ ನೇರವಾಗಿ ಹೇಳಿ ಬಿಟ್ಟರು; “ನಮಗೆ ಫಿತ್ರ್ ಝಕಾತ್ ಬೇಡ. ಅಗತ್ಯವಿದ್ದವರಿಗೆ ಕೊಡಿ”. ಅದೊಂದು ಮಾತು ಊರಿಡೀ ಪ್ರಚಾರವಾಯಿತು. ಚರ್ಚೆ ಬೇರೆ ನಡೆಯಿತು. ಅವನಿಗೆ ಅಹಂಕಾರ! ದೊಡ್ಡ ಜನ ಆಗಿದ್ದಾನೆ ಎಂದು ಹಾಗೆ ಹೀಗೆ ಎಲ್ಲರೂ ಸೇರಿಸಿ ಮಾತನಾಡಿಕೊಂಡರು. ನಂತರದ ವರ್ಷಗಳಲ್ಲಿ ನಮ್ಮ ಮನೆಗೆ ಫಿತ್ರ್ ಝಕಾತಿನ ಕಟ್ಟು ಬರೊ ತೊಡಗಿದರೂ ಅದು ನಿಮಗಲ್ಲ ನಿಮ್ಮ ಅಜ್ಜಿಗೆ ಎಂದು ಬಹಿರಂಗವಾಗಿ ಹೇಳಿ ಇಟ್ಟು ಹೋಗುತ್ತಿದ್ದರು.

ನಾವು ಸಣ್ಣವರಿದ್ದರಿಂದ ನಮಗೆ ಇದರ ಒಳ ಮರ್ಮ ಗೊತ್ತಿರಲಿಲ್ಲ ಅಕ್ಕಿ ಮನೆಗೆ ಬಂದಷ್ಟು ಒಳ್ಳೆಯದು ಹಸಿವಿನ ದಿನದ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರ. ಒಮ್ಮೆ ಪೆರ್ನಾಲ್ ಚಂದ್ರ ದರ್ಶನದ ಬಳಿಕ ನಾನು ಮತ್ತು ತಮ್ಮ ಎಲ್ಲರ ಮನೆಗೆ ಹೋಗಿ ಬರುವ ಪ್ಲಾನ್ ಮಾಡಿದೆವು. ಸಂಭ್ರಮದ ಗೌಜಿಯಲ್ಲಿ ಏನಾದರೂ ಕುಡಿಯಲು ಸಿಗಬಹುದು ಪೆರ್ನಾಲ್ ಹಣ ಸಿಕ್ಕಿದರೂ ಸಿಕ್ಕಿತು ಎಂಬ ಆಶಾ ಭಾವನೆ ನಮಗೆ. ಉದ್ದೇಶ ಈಡೇರಿದರೂ ಒಂದೊಂದು ಮನೆ ಇಳಿದು ಬರವಾಗಲೂ ಎಲ್ಲರೂ ನಮ್ಮ ಮನೆಗೆ ಮೀಸಲಿಟ್ಟಿದ ಫಿತ್ರ್ ಝಕಾತ್ ಕಟ್ಟನ್ನು ಕೊಟ್ಟು ಕೈ ಕೊಡವಿದರು. ನಮಗೆ ಖುಷಿಯೋ ಖುಷಿ ನಾವು ಅದನ್ನೆಲ್ಲ ಗೋಣಿಯೊಳಗೆ ಹಾಕಿ ಒಯ್ದೆವು. ಗೋಣಿ ಚೀಲ ಹೊತ್ತುಕೊಂಡು ಬರುವ ನಮ್ಮ ಪರಿಯನ್ನು ಕಂಡ ಅಪ್ಪನ ಪಿತ್ತ ನೆತ್ತಿಗೇರಿತು. ದರಬರನೆ ಭಾರಿಸಿದರು. ಊರಿಡೀ ಕೇಳುವಂತೆ ಬೈದರು. ನಾವು ಫಿತ್ರ್ ಝಕಾತ್ ಕಲೆಕ್ಟ್ ಮಾಡಿದ್ದು ಅವರ ಸ್ವಾಭಿಮಾನಕ್ಕೆ ಧಕ್ಕೆ ತಂದಿತ್ತು ಎಂದು ನನಗೆ ಅರಿವಾಯಿತು. ‘ಎಲ್ಲಿಂದ ತಂದಿದ್ದೀರೋ ಅಲ್ಲಿಯೇ ಇಟ್ಟು ಬನ್ನಿ’ ಎಂದು ಆರ್ಡರ್ ಮಾಡಿ ಹೋದರು ಅಜ್ಜಿಯ ಬೆಂಬಲ ಇದ್ದಿದ್ದರಿಂದ ಆದಿನ ಬಚಾವ್ ಆದೆವು ವಾಪಸ್ ಕೊಡುವುದಂತು ಊಹಿಸಲು ಸಾಧ್ಯವಿರಲಿಲ್ಲ.

ಈದ್ ದಿನದ ಸುಪ್ರಭಾತಕ್ಕೆ ಅಪ್ಪ ದೊಡ್ಡ ಹಂಡೆಯಲ್ಲಿ ನೀರು ಕಾಯಿಸುವರು. ಹೊಸ ಬಟ್ಟೆ ತೊಟ್ಟು ಒಂದು ಕರ್ಜೂರ ಮತ್ತು ಸೀರ್ ಕುರ್ಮ ಕುಡಿದು ಗೆಳೆಯರ ಜೊತೆ ಸೇರೆ ನಮ್ಮ ಹೊಸ ಬಟ್ಟೆಯ ಬಗ್ಗೆ ಕೀರ್ತನೆ ಮಾಡುತ್ತಾ ಮಸೀದಿಗೆ ಜೊತೆಯಾಗಿ ನಡೆಯುವೆವು.

ಈ ವರದಿ ಓದಿದ್ದೀರಾ?: ಮಣಿಪುರ ಹಿಂಚಾಸಾರ| ನಿರಾಶ್ರಿತ ಕೇಂದ್ರಗಳಲ್ಲಿ 180ಕ್ಕೂ ಹೆಚ್ಚು ಶಿಶುಗಳ ಜನನ

ಮುಖ್ಯವಾಗಿ ಈದ್ ನಮಾಜ್ ಈದ್ ಗಾಹ್ ನಲ್ಲಿ ನಡೆಯ ಬೇಕು ಆದರೆ, ನಮ್ಮೂರಲ್ಲಿ ಆ ಕಾನ್ಸೆಪ್ಟ್ ಅಷ್ಟಾಗಿ ಇಲ್ಲ ಮಸೀದಿಯನ್ನೇ ಅವಲಂಬಿಸಿದ್ದೇವೆ. ದೊಡ್ಡವರಾದಮೇಲೆ ಈದ್ ಗಾಹ್ ಹೆಚ್ಚಾಗಿ ಹೋಗಲು ಪ್ರಾರಂಭಿಸಿದೆವು. ಈದ್ ನಮಾಜ್ ಈದ್ ಗಾಹ್ ನಲ್ಲಿ ನಿರ್ವಹಿಸಿದರೆ ಅದಕ್ಕೊಂದು ಮೆರುಗು. ನಂತರ ಗೆಳೆಯರು ಜೊತೆಯಾಗಿ ಪ್ರತಿಯೊಂದು ಮನೆಗೆ ಬೇಟಿ ಕೊಟ್ಟು ಹೊಟ್ಟೆ ಬಿರಿವಷ್ಟು ತಿಂದು, ಕುಡಿದು ಅವರು ಕೊಟ್ಟ ಪೆರ್ನಾಲ್ ಕಾಸ್ ಅಥವಾ ಈದೀ (ಹಬ್ಬದ ಹಣ) ಯನ್ನು ಕೀಸೆಗೆ ತುಂಬಿಸುವೆವು. ದೊಡ್ಡ ಮೊತ್ತದ ಹಣವೇನು ಆಗ ಸಿಗುತ್ತಿರಲಿಲ್ಲ ಎಂಟಾಣೆ, ಇಪ್ಪತ್ತೈದು ಪೈಸೆ, ಹತ್ತು ಪೈಸೆ ಸಿಕ್ಕಿದ್ದೂ ನೆನಪುಂಟು. ದೊಡ್ಡ ಮೊತ್ತ ಎಂದರೆ ಒಂದೋ ಎರಡೊ ರುಪಾಯಿಗೆ ಸೀಮಿತ. ಇನ್ನು ಹತ್ತು ರುಪಾಯಿಯಂತಹ ಬೃಹತ್ ಮೊತ್ತ ಸಿಗಬೇಕಾದರೆ ಅಜ್ಜಿ ಮನೆಗೆ ಹೋಗಬೇಕು. ಪೆರ್ನಾಲ್ ಇದಕ್ಕೊಂದು ಸುವರ್ಣ ಅವಕಾಶ. ಆದರೆ ಅಪ್ಪ ಅಜ್ಜಿ ಮನೆಗೆ ಹೋಗಲು ಪರ್ಮಿಶನ್ ಕೊಡುವುದು ಕಮ್ಮಿ. ತಮ್ಮ ರಂಪಾಟ ಶುರು ಮಾಡಿದರೆ ಅಜ್ಜಿಯಿಂದ ಜಾಮೀನು ಪಡೆದು ಹೋಗುತ್ತೇವೆ. ಹೆಚ್ಚಿನ ಸಮಯದಲ್ಲಿ ಪರೋಲ್ ಗೆ ಹೋದಾಗೆ ಜಸ್ಟ್ ಹೋಗಿ ಬರಬೇಕು ಎಂಬ ಹುಕುಂ ಅಪ್ಪ ಮಾಡುತ್ತಿದ್ದ. ಆಗ ನಮ್ಮ ನಿರೀಕ್ಷೆಯ ಮೊತ್ತ ಸಿಗುವುದು ಕಷ್ಟ. ಎಲ್ಲರೂ ಅಜ್ಜಿ ಮನೆಗೆ ಹೋಗುವ ಮೂಲಕ ಈದ್ ಗೆ ವಿದಾಯ ಹೇಳುತ್ತಿದ್ದರು. ಶವ್ವಾಲ್ ಎರಡನೇ ದಿನದಿಂದ ಉಪವಾಸದ ಆ ದಿನಗಳು ಮತ್ತೆ ಮತ್ತೆ ನಮ್ಮ ನೆನಪಿಗೆ ಬರುತ್ತದೆ. ಐಚಿಕ ಉಪವಾಸ ಗಳು ಇದ್ದರೂ ರಮದಾನಿನ ಉಪವಾಸ ಕ್ಕೆ ಸರಿಸಾಟಿಯೆನಿಸುವುದಿಲ್ಲ. ಈದ್ ನ ಮರುದಿವಸ ಒಗೆದು ಜೊಪಾನವಾಗಿ ಮಡಚ್ಚಿಟ್ಟ ಬಟ್ಟೆ ಮತ್ತೆ ಉಡವ ಶುಭ ಯೋಗಕ್ಕಾಗಿ ನಾವು ಕಾಯುತ್ತೇವೆ.

ಕಾಲ ಬದಲಾಗಿದೆ ಇಂದು ಸಂಬಂಧಗಳು ಕಡಿಮೆಯಾದ್ದರಿಂದ ಈದ್ ನ ಸಂಭ್ರಮವೂ ಸೀಮಿತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುವ ಚೆಂದದ ಫೋಟೋಗಳಷ್ಟು ಕ್ಲಾರಿಟಿ ಇಂದಿನ ಈದ್ ಸಂಭ್ರಮಗಳಿಗಿಲ್ಲ.

– ಎಂ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರಿಗೆ 2,000 ಕೊಡ್ತಿದ್ದಾರೆ; ಗಂಡಸ್ರು ದುಡಿಮೆಯ 90% ಕುಡಿಯುತ್ತಿದ್ದಾರೆ: ಎಚ್‌ಡಿಕೆ

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡುವ ಮೂಲಕ ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ...

ನನ್ನ ಮಗನಿಗೆ ತಕ್ಕ ಶಿಕ್ಷೆ ಆಗಲಿ; ಆದ್ರೆ ಇಬ್ಬರೂ ಪ್ರೀತಿ ಮಾಡ್ತಿದ್ದರು ಎಂಬುದು ಸತ್ಯ: ಕಣ್ಣೀರಿಟ್ಟ ಫಯಾಜ್‌ ತಾಯಿ ಮುಮ್ತಾಜ್

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ...

ಬೆಂಗಳೂರು | ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ; ನ್ಯಾಯಕ್ಕಾಗಿ ರಾಷ್ಟ್ರಪತಿಗೆ ಕರವೇ ಮನವಿ

ಗೋವಾ ಕನ್ನಡಿಗರ ರಕ್ಷಣೆಗೆ ರಾಷ್ಟ್ರಪತಿಯರು ಮಧ್ಯೆ ಪ್ರವೇಶಿಸಿ ನ್ಯಾಯ ನೀಡಬೇಕು ಎಂದು...

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಖಂಡನೀಯ: ಕರ್ನಾಟಕ ಮುಸ್ಲಿಂ ಯುನಿಟಿ

ಹುಬ್ಬಳ್ಳಿ ಯ ವಿದ್ಯಾರ್ಥಿನಿ ನೇಹಾ ಕೊಲೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ...