“ನೀವು ಅಸ್ಪೃಶ್ಯರು” ಎಂದು ಅಜ್ಞಾನದಿಂದ ಕರೆಯುವವರಿಗೆ ಜ್ಞಾನದ ಸ್ಪಷ್ಟನೆ

Date:

ಆರೋಪ ಮಾಡಿದವರೇ ಆರೋಪಿಗಳು ಆಗಿರುವುದರಿಂದ ನೆಲ ಮೂಲ ಸಂಸ್ಕೃತಿಯ ಬಹುಜನರು ತಾವು “ಅಸ್ಪೃಶ್ಯರು” ಎಂಬ ಆರೋಪವನ್ನು ಸಂಪೂರ್ಣವಾಗಿ ತಮ್ಮ ವಿಶಾಲವಾದ ಮನಸ್ಸಿನಿಂದ ಕಿತ್ತೆಸೆದು ಭಾರತ- ಭಾರತೀಯ ಹಾಗೂ ಭಾರತೀಯತೆಯ ಹಿನ್ನೆಲೆಯಲ್ಲಿ ಸತ್ಪ್ರಜೆಯಾಗಿ ತಲೆಯೆತ್ತಿ ನಿಲ್ಲಬೇಕಾಗಿದೆ.

ಅಸ್ಪೃಶ್ಯತೆ ಎಂಬುವುದು ಜಾತಿ ಅಲ್ಲ – ಇದು ನಾವು ಶ್ರೇಷ್ಠರು, ನಾವೇ ಸ್ಪೃಶ್ಯರು ಎಂದು ಹೇಳಿಕೊಳ್ಳುವವರು ಮಾಡಿರುವ ಬಹುದೊಡ್ಡ ಅವೈಜ್ಞಾನಿಕ ಆರೋಪ ಅಷ್ಟೇ. ಆರೋಪ ಮಾಡಿದ ತಕ್ಷಣಕ್ಕೆ ಸಾಕ್ಷಿ ಆಧಾರಗಳಿಲ್ಲದೆ ಆರೋಪಿಯಾಗಲು ಸಾಧ್ಯವಿಲ್ಲ. ಈ ಅರ್ಥದಲ್ಲಿ ಆರೋಪ ಮಾಡಿದವರೇ ಆರೋಪಿ ಸ್ಥಾನದಲ್ಲಿ ನಿಂತಿರುವುದು ಸಂವಿಧಾನದ ಆಧಾರದಲ್ಲಿ ಸತ್ಯವಾಗಿದೆ. ಅಂದರೆ ಸಂವಿಧಾನದ ಪ್ರಕಾರ ಆರೋಪ ಮಾಡಿದವರೇ ಆರೋಪಿಗಳಾಗಿದ್ದಾರೆ. ಈ ಹಿನ್ನಲೆಯಿಂದ ಭಾರತದಲ್ಲಿ ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಿರುವವರು ಎಂದಿಗೂ ಅಸ್ಪೃಶ್ಯರಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಂದುವರೆದು ಇಷ್ಟು ಶತಮಾನಗಳ ಕಾಲ ಅಸ್ಪೃಶ್ಯರು ಎಂದು ಆರೋಪ ಹೊರಿಸಿದವರೇ- ಅಸ್ಪೃಶ್ಯತೆಯ ಆರೋಪಿಗಳಾಗಿರುವುದು ಸ್ಪಷ್ಟವಾಗುತ್ತದೆ.

“ನಾವೇ ಸ್ಫೃಶ್ಯರು- ಶ್ರೇಷ್ಠ ಕುಲದವರು” ಎಂದು ಹೇಳಿಕೊಳ್ಳುವವರು ಈ ನೆಲ ಮೂಲ ಸಂಸ್ಕೃತಿಯನ್ನು ಒಡಲಾಳದಿಂದ ತೆರೆದ ಕಣ್ಣಿನಿಂದ ನೋಡದೆ, ತಮ್ಮ ಪಾರಂಪರಿಕ ಮೋಹದ ಅಜ್ಞಾನದಿಂದ ತುಂಬಿದ ಹೃದಯದಲ್ಲಿ ಶ್ರೇಷ್ಠತೆಯ ಮೋಹವನ್ನು ಅದುಮಿಕೊಂಡು ಶ್ರಮದ ಮೂಲಕ ದುಡಿಯುವ ಜನರ ಮೇಲೆ ಮಾಡಿರುವ ಸ್ವಾರ್ಥಪರ ಹಿನ್ನೆಲೆಯ ಬಹುದೊಡ್ಡ ಆರೋಪವೇ ಅಸ್ಪೃಶ್ಯರು ಎಂದು ಕರೆದಿರುವುದು – ಇವರು ಅಸ್ಪೃಶ್ಯರು ಎಂಬ ಬಹುದೊಡ್ಡ ಆರೋಪ.

ತಮ್ಮ ಸ್ವಾರ್ಥಪರ ಸಾಧನೆಗಾಗಿ ಅಥವಾ ಇವರಿಂದ ದುಡಿಸಿಕೊಂಡು ತಾವು ಕುಳಿತು ಹೊಟ್ಟೆ ತುಂಬಾ ತಿಂದು ಉಣ್ಣುವ ಕಾರಣಕ್ಕಾಗಿ ಅಸ್ಪೃಶ್ಯರು ಎಂಬ ಶ್ರಮಜೀವಿ ವರ್ಗವನ್ನು ಸೃಷ್ಟಿಸಿ, ಇವರಿಗೆ ಮಾನವರಿಗೆ ಬದುಕಲು ಬೇಕಾದ ಕೆಲವೇ ಕೆಲವು ಮೂಲಭೂತ ಹಕ್ಕುಗಳನ್ನು ನೀಡದೆ ಜೀವಿಸುವಂತೆ ಮಾಡಿದ್ದು ಇವರೇ ಹೇಳಿಕೊಳ್ಳುವಂತೆ “ಮಾನವ ಕುಲದಲ್ಲಿಯೇ ಶ್ರೇಷ್ಠರು” ಅಥವಾ “ಮಾನವ ಕುಲದಲ್ಲಿ ನಾವು ಮಾತ್ರ ಸ್ಪೃಶ್ಯರು” ಅಲ್ಲ. ಬದಲಿಗೆ ಇವರ ತಲೆಯಲ್ಲಿ ಶತಶತಮಾನಗಳಿಂದ ಎಂದಿಗೂ ಚಲಿಸದೆ ಇವರ ಅಜ್ಞಾನದ ಬಾವಿಯಲ್ಲಿ ತುಂಬಿ ನಿಂತಲ್ಲಿ ನಿಂತಿರುವ ನೀರಿನ ಪಾರಂಪರಿಕ ಅಜ್ಞಾನಕ್ಕೆ ಒಳಗಾದ ಇವರ ಮನಸ್ಸಿನ ನಿಜ ‘ಅಸ್ಪೃಶ್ಯತೆ’ ಎಂಬುವುದನ್ನು ಬಹು ಸೂಕ್ತವಾಗಿ ಮನಗಾಣಬೇಕಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಹಿನ್ನಲೆಯಿಂದ ಈ ನೆಲದಲ್ಲಿ ‘ಅಸ್ಪೃಶ್ಯರು’ ಎಂಬುವರು ಇದ್ದರೆ ಅದು ‘ಅಸ್ಪೃಶ್ಯತೆ’ ಯನ್ನು ಅಸಂವಿಧಾನಾತ್ಮಕವಾಗಿ ಚಾಚೂ ತಪ್ಪದೇ ಆಚರಣೆ ಮಾಡುವವರೇ ಆಗಿದ್ದಾರೆ ಎಂಬುವುದೂ ಸಹ ಸ್ಪಷ್ಟವಾದ್ದದ್ದೇ. ಇಂಥ ಸಂದರ್ಭದಲ್ಲಿ ಯೋಚಿಸಿ ನೀವೇ ಹೇಳಿ ಯಾರು ಸ್ಪೃಶ್ಯರು….? ಯಾರು ಅಸ್ಪೃಶ್ಯರು….? ಎಂದು.

ಈ ಆರೋಪವನ್ನು ಬುದ್ಧನಿಂದ ಮೊದಲುಗೊಂಡು- ಬಸವಾದಿ ಶರಣ, ಶರಣೀಯರು, ದಾಸರು, ಸೂಫಿ ಸಂತರು, ನವ ಭಾರತದ ಸಮಸಮಾಜ ಪ್ರತಿಪಾದಕರು, ದೇಶ ವಿದೇಶದ ಸಮಸಂಸ್ಕೃತಿಯ ಚಿಂತಕರು, ಇವರೆಲ್ಲರ ಬೌದ್ಧಿಕ ಚಿಂತನೆಯ ಸಮಾಗಮವಾಗಿದ್ದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರವರೆಗೂ ಸ್ಪಷ್ಟವಾಗಿ ಸಾಕ್ಷಿ ಸಹಿತ ಆರೋಪ ಮಾಡಿದವರಿಗೆ ಹಾಗೂ ಮಾಡುವವರಿಗೆ ಸ್ಪಷ್ಟವಾದ ಕಠಿಣ ಶಬ್ದಗಳಿಂದ ಉತ್ತರ ನೀಡಿದ್ದಾರೆ. ಹಾಗೆ ಕಠಿಣ ಶಬ್ದಗಳಿಂದ ಖಂಡಿಸಿದ್ದಾರೆ. ಇವರೆಲ್ಲರ ಚಿಂತನೆ- ಹೋರಾಟ ಹಾಗೂ ಬರವಣಿಗೆಯಿಂದ ಮೇಲಿನವರ “ಇವರು ಅಸ್ಪೃಶ್ಯರು” ಎಂಬ ಆರೋಪ ಸಾಕ್ಷಿ ಸಮೇತ ಬೌದ್ಧಿಕ ಕಟಕಟೆಯಲ್ಲಿ ಚರ್ಚೆಯಾಗಿ ಸೋತು ಆರೋಪ ಮಾಡಿದವರೇ ಆರೋಪಿಯ ಸ್ಥಾನದಲ್ಲಿ ನಿಂತು ತಲೆತಗ್ಗಿಸುವಂತೆ ಮಾಡಿದೆ . ಇದು ಸಹ ಸಂವಿಧಾನಾತ್ಮಕವಾಗಿ ವಾಸ್ತವ.

‘ಆರೋಪ ಮಾಡಿದವರೇ ಆರೋಪಿಗಳು’ ಆಗಿರುವುದರಿಂದ ನೆಲ ಮೂಲ ಸಂಸ್ಕೃತಿಯ ಬಹುಜನರು ತಾವು “ಅಸ್ಪೃಶ್ಯರು” ಎಂಬ ಆರೋಪವನ್ನು ಸಂಪೂರ್ಣವಾಗಿ ತಮ್ಮ ವಿಶಾಲವಾದ ಮನ ಹಾಗೂ ಮನೆಯಿಂದ ಕಿತ್ತೆಸೆದು ಭಾರತ- ಭಾರತೀಯ ಹಾಗೂ ಭಾರತೀಯತೆಯ ಹಿನ್ನೆಲೆಯಲ್ಲಿ ಸತ್ಪ್ರಜೆಯಾಗಿ ತಲೆಯೆತ್ತಿ ನಿಲ್ಲಬೇಕಾಗಿದೆ. ಇದನ್ನೇ ನಮ್ಮ ದೇಶದ ಆಳ್ವಿಕೆ ಶ್ರೇಷ್ಠ ಗ್ರಂಥ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಸಾರಿ ಸಾರಿ ಹೇಳುವುದು. ಸಂವಿಧಾನ ತನ್ನ ಸಂವಿಧಾನ ಬದ್ಧತೆಯಿಂದ ಅಸ್ಪೃಶ್ಯತೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಮೂಲಕ – ಅಸ್ಪೃಶ್ಯತೆಯನ್ನು ಮಾಡುವವರಿಗೆ ಕಠಿಣ ಶಿಕ್ಷೆಯನ್ನು ನೀಡುವ ರೂಪದಲ್ಲಿ ನಮ್ಮ ದೇಶದಲ್ಲಿ ಸಾರ್ವಭೌಮ, ಸಮಾನತೆ ಹಾಗೂ ಭ್ರಾತೃತ್ವದ ಹಿನ್ನೆಲೆಯಿಂದ ಆಳ್ವಿಕೆ ಮಾಡುತ್ತಿದೆ. ಇಂತಹ ಸಮ ಸಂಸ್ಕೃತಿಯನ್ನು ಬಯಸಲು ರಚಿತವಾಗಿರುವ ಅಂಬೇಡ್ಕರ್ ಅವರ ಸಂವಿಧಾನ ಭಾರತದಲ್ಲಿ ಸ್ವಚ್ಛಂದ ಆಳ್ವಿಕೆ ಮಾಡಿದರೆ ಮಾತ್ರ ನಮ್ಮ ದೇಶ ವಸುದೇವ ಕುಟುಂಬಕಂ ಎಂದು ಕರೆಸಿಕೊಳ್ಳಲು ಸಾರ್ಥಕವಾಗುತ್ತದೆ. ಇದು ಜಾರಿಯಾಗದಿದ್ದರೆ 2000 ವರ್ಷಗಳಿಂದ ಇಂದಿನವರೆಗೂ ಜಾರಿಯಲ್ಲಿರುವ ನಮ್ಮ ದೇಶದ ಅಲಿಖಿತ ಸಂವಿಧಾನದ ಮಾದರಿಯ ಸ್ಪೃಶ್ಯ- ಅಸ್ಪೃಶ್ಯ ಕುಟುಂಬಕಂ ದೇಶವಾಗುತ್ತದೆ.

ವಾಸ್ತವದ ಮೂಲಕ ಇಂದು ಸ್ವ-ಘೋಷಿತ ಸ್ಪ್ರಶ್ಯರಿಂದ ಏಕಮುಖವಾಗಿ ಕರೆಸಿಕೊಳ್ಳುತ್ತಿರುವ ಅಸ್ಪೃಶ್ಯರು ಮೂಲತಃ ಅಸ್ಪೃಶ್ಯರೇ ಅಲ್ಲ – ಆದರೆ ದೇವರು, ದೇವರು ಮಿಶ್ರಿತ ಧರ್ಮದ ಹಿನ್ನೆಲೆಯ ಪುರಾಣದ ಬಹುದೊಡ್ಡ ತಳ- ಬುಡವಿಲ್ಲದ ಆರೋಪದ ಮೂಲಕ ಮಾತ್ರ ಇವರು ಅಸ್ಪೃಶ್ಯರಾಗಿದ್ದಾರೆ. ಬಹುಮುಖ್ಯವಾಗಿ ಇದಕ್ಕೆ ಧರ್ಮ- ಧರ್ಮದೊಳಗೆ ಸೇರಿಕೊಂಡ ಬಹುದೊಡ್ಡ ಜನವರ್ಗದ ಸಮ ಸಂಸ್ಕೃತಿಯನ್ನು ಪ್ರತಿಪಾದನೆ ಮಾಡಲು ಇದ್ದಂತಹ ಈ ಭಾರತದ ಸಮಾಜವನ್ನೇ ನಿಯಂತ್ರಿಸುತ್ತಿರುವ ‘ದೇವರು – ದೇವರಿಂದ’ ತಮ್ಮ ಬದುಕನ್ನು ಉಜ್ವಲ ಗೊಳಿಸಿಕೊಳ್ಳಲು ಬಯಸಿದ ಕೆಲವೇ ಕೆಲವು ಬೆರಳೆಣಿಕೆಯ ಜನ ಇದರ ಸೃಷ್ಟಿಕರ್ತರು.

ಇಂತಹ ಅನೀತಿ ಸೃಷ್ಟಿಯನ್ನು ಅರಿಯದವರು ತಮ್ಮನ್ನು ತಾವೇ “ನಾವು ಅಸ್ಪೃಶ್ಯರು” ಎಂದು ಕರೆದುಕೊಂಡು ಸಾಂಸ್ಕೃತಿಕವಾಗಿ ಸೊರಗುತ್ತಿದ್ದಾರೆ.

ಈ ಹಿನ್ನೆಲೆಯಿಂದ ಪುರಾಣದ ಮೂಲಕ ಆರೋಪ ಮಾಡಿದವರೇ – ವಾಸ್ತವದ ಮೂಲಕ ಆರೋಪಿಗಳಾಗಿದ್ದಾರೆ . ಸಂವಿಧಾನಾತ್ಮಕವಾಗಿ ಇದೂ ಸಹ ವಾಸ್ತವ. ಆದ್ದರಿಂದ ಈ ನೆಲದಲ್ಲಿ ವಾಸಿಸುತ್ತಿರುವ ಅಸ್ಪೃಶ್ಯರು ಎಂದು ಕರೆಸಿಕೊಳ್ಳುವವರು ಎಂದೆಂದಿಗೂ ಸಹ ಸಂವಿಧಾನಾತ್ಮಕವಾಗಿ ಅಸ್ಪೃಶ್ಯರಲ್ಲ.

ಮಾನವ – ಮಾನವೀಯತೆಯ ವಿರುದ್ಧವಾಗಿ ಶತಶತಮಾನಗಳಿಂದಲೂ “ಇವರು ಅಸ್ಪೃಶ್ಯರು” ಎಂದು ಕರೆದು, ಕಟ್ಟುನಿಟ್ಟಿನ ಸಾಮಾಜಿಕ ನಿರ್ಬಂಧನೆಗಳ ಸಂಕೋಲೆಯಲ್ಲಿ ಸಿಲುಕಿಸಿ, ಈ ಸಂಕೋಲೆಗೆ ಎಲ್ಲೂ ಸಹ ಚ್ಯತಿ ಬರದ ಹಾಗೆ ಆಚರಣೆ ಮಾಡಿಸಿಕೊಂಡು ಇವರ ಮಾನವ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಂಡವರು ನಿಜವಾಗಲೂ ಅಸ್ಪೃಶ್ಯರು ಎಂಬುದನ್ನು ಮರೆಯಬಾರದು. ಇದೇ ಅಂಬೇಡ್ಕರ್ ಅವರು ಭಾರತ ಹಾಗೂ ನಿಜ ಭಾರತೀಯರಿಗೆ ಸಾರಿ ಸಾರಿ ಹೇಳಿದ ಅವರ ಬೌದ್ಧಿಕ ವಾದದ ಪ್ರಮುಖ ತಿರುಳು.

ಎನ್ ಚಿನ್ನಸ್ವಾಮಿ ಸೋಸಲೆ
+ posts

ಪ್ರಾಧ್ಯಾಪಕ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಎನ್ ಚಿನ್ನಸ್ವಾಮಿ ಸೋಸಲೆ
ಎನ್ ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....