’ಸಮುದಾಯ ಒಡೆಯುವ ಹುನ್ನಾರ’: ಆರ್‌ಎಸ್‌ಎಸ್‌ ಪ್ರಾಯೋಜಿತ ’ಮಾದಿಗ ಮುನ್ನಡೆ’ ವಿರುದ್ಧ ಭುಗಿಲೆದ್ದ ಆಕ್ರೋಶ

Date:

ಬಿಜೆಪಿ, ಆರ್‌ಎಸ್‌ಎಸ್ ಪ್ರಾಯೋಜಿತ ’ಮಾದಿಗ ಮುನ್ನಡೆ’ ಹೆಸರಿನ ಸರಣಿ ಕಾರ್ಯಕ್ರಮಗಳ ಕುರಿತು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ದಲಿತರನ್ನು ಒಡೆಯುವ ಹುನ್ನಾರದ ಭಾಗವಾಗಿ ಆರ್‌ಎಸ್‌ಎಸ್‌ ಈ ಅಜೆಂಡಾ ರೂಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಆರ್‌ಎಸ್‌ಎಸ್‌ ಮುಖಂಡ ವಾದಿರಾಜ ಸಾಮರಸ್ಯ ಎಂಬುವರ ಫೋಟೋ ’ಮಾದಿಗ ಮುನ್ನಡೆ’ ಕಾರ್ಯಕ್ರಮದ ಪೋಸ್ಟರ್‌ನಲ್ಲಿ ಕಾಣಿಸಿಕೊಂಡ ಬಳಿಕ, “ಸಮುದಾಯವನ್ನು ಮುನ್ನಡೆಸಲು ಇವರು ಯಾರು? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಲೆಯ ಮಾದಿಗರು ಒಗ್ಗಟ್ಟು ತೋರಿದ್ದನ್ನು ಮುರಿಯಲೆಂದೇ ಈ ಮಾದಿಗ ಮುನ್ನಡೆ ಹೆಸರಲ್ಲಿ ವಿಷಬೀಜ ಬಿತ್ತಲಾಗುತ್ತಿದೆ” ಎಂದು ಆಕ್ರೋಶ ಹೊರಹಾಕಲಾಗಿದೆ.

ಭಾನುವಾರ ತುಮಕೂರಿನ ಎಂಪ್ರೆಸ್ ಕಾಲೇಜು ಆವರಣದಲ್ಲಿ ’ಮಾದಿಗರ ಆತ್ಮಗೌರವ ಸಮಾವೇಶ’ ಹೆಸರಲ್ಲಿ ‘ಮಾದಿಗ ಮುನ್ನಡೆ’ ಆಯೋಜನೆ ಮಾಡಲಾಗಿದೆ. ಇದರಲ್ಲಿ ವಾದಿರಾಜ ಸಾಮರಸ್ಯ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಈ ಕಾರ್ಯಕ್ರಮ ನಡೆದಿದೆ ಮತ್ತು ಆಯೋಜನೆಗೊಳ್ಳುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಕುರಿತು ಪೋಸ್ಟ್ ಹಾಕಿರುವ ಹಿರಿಯ ಪತ್ರಕರ್ತರಾದ ರವಿಕುಮಾರ್‌ ಟೆಲೆಕ್ಸ್, “ನನಗೂ ಪ್ರಶ್ನೆಗಳಿವೆ. ಮಾದಿಗರ ಆತ್ಮಗೌರವವನ್ನು ಅನಾದಿ ಕಾಲದಿಂದಲೂ ಯಾರೆಲ್ಲಾ ಹತ್ತಿಕ್ಕಿದರು? ಯಾಕೆ? ಕಳೆದ ಐದು ವರ್ಷಗಳಲ್ಲಿ ಒಳಮೀಸಲಾತಿಗಾಗಿ ಮಾತಾಡದೆ ಇದ್ದೀರಲ್ಲ ನಾಲಿಗೆ ಸತ್ತಿದ್ದವಾ? ಮಾದಿಗರ ಸ್ವಾಭಿಮಾನ ಎಂದರೆ ಅದು ಒಂದು ರಾಜಕೀಯ ಪಕ್ಷದ ಸ್ವಾಭಿಮಾನವಾ? ಮಾದಿಗರಿಗೂ ವಾದಿರಾಜ ಎಂಬ ಸಂಘಿಗೂ ಏನು ಸಂಬಂಧ? ಮಾದಿಗರಿಗೂ ಹಕ್ಕುಗಳಿವೆ ಎಂದು ಈಗ ನೆನಪಾಯಿತಾ? ಹಕ್ಕುಗಳಾದರೂ ಏನು? ಮುಖ್ಯವಾಗಿ ಈ ಸಮಾವೇಶ ಸಮಸ್ತ ಮಾದಿಗರ ಸಮಾವೇಶ ಹೇಗಾದಿತು? ಮಾದಿಗರನ್ನು ರಾಜಕೀಯ ಗುಲಾಮಗಿರಿಗೆ ಒಡ್ಡುತ್ತಿರುವ ವಂಚನೆಯ ಕೆಲಸ ಇದಲ್ಲವಾ?” ಎಂಬ ಮಹತ್ವದ ಪ್ರಶ್ನೆಗಳನ್ನು ಕೇಳಿದ್ದಾರೆ.

ಲೇಖಕರಾದ ಹುಲಿಕುಂಟೆ ಮೂರ್ತಿಯವರು ಈ ಕುರಿತು ಪೋಸ್ಟ್ ಮಾಡಿದ್ದು, “ಮಾದಿಗರ ಆತ್ಮಗೌರವದ ಬಗ್ಗೆ ಅದನ್ನು ಕೊಂದವರೇ ಮಾತಾಡೋದು ಅಂದ್ರೆ ಏನು? ಈ ವಾದಿರಾಜ್ ಯಾಕೇ ಪದೇ ಪದೇ ದೂರ ಇಟ್ರು ಮಾದಿಗರ ಹಟ್ಟಿಗಳಿಗೆ ಬರ್ತಾನೆ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬರಹಗಾರ ರವಿಕುಮಾರ್‌ ನೀಹ ಪ್ರತಿಕ್ರಿಯಿಸಿ, “ಇಂಥ ಮುನ್ನಡೆಗಳು ಎಷ್ಟೊಂದು ಆಗಿವೆ. ಆಗುತ್ತಲೂ ಇರುತ್ತವೆ ಅಷ್ಟೇ. ತುಮಕೂರಿನ ಮಾದಿಗ ಸಮುದಾಯ ಅಷ್ಟೊಂದು ದಡ್ಡರಲ್ಲಾ. ಕಾದು ನೋಡೋಣ” ಎಂದಿದ್ದಾರೆ.

“ನಮ್ಮ ಮಾದಿಗರಿಗೆ ಮೊದಲು ಆತ್ಮಗೌರವ ಇದ್ದರೆ ಈ ಕಾರ್ಯಕ್ರಮ ಮುನ್ನೆಡೆಸುತ್ತಿರುವ ಬ್ರಾಹ್ಮಣ ಜಾತಿಯ ವಾದಿರಾಜ್ ಅವರನ್ನು ದೂರವಿಡಬೇಕು” ಎಂದು ಕೆ.ಪಿ.ಶ್ರೀನಿವಾಸ್ ಮನವಿ ಮಾಡಿದ್ದಾರೆ.

“ತುಮಕೂರು ಜಿಲ್ಲೆಯ ಮುಖಂಡರು ಈ ವಾದಿರಾಜರನ್ನು ಸ್ವಲ್ಪ ಪ್ರಶ್ನೆ ಮಾಡಿ. ಇದು ಏಕೋ ಅತಿಯಾಯಿತು. ಅವನ್ಯಾರು ಮುನ್ನಡೆಸೋಕೆ?” ಎಂದು ಯುವ ವಕೀಲ ಹನುಮೇಶ್ ಗುಂಡೂರು ಪ್ರಶ್ನಿಸಿದ್ದಾರೆ.

ಕೆಲವು ದಿನಗಳಿಂದ ಮಾದಿಗ ಮುನ್ನಡೆಯ ಹುನ್ನಾರಗಳನ್ನು ನಿರಂತರವಾಗಿ ಬಿಚ್ಚಿಡುತ್ತಿರುವ ಹೋರಾಟಗಾರರಾದ ಭಾಸ್ಕರ್‌ ಪ್ರಸಾದ್‌ ಅವರು ಮಾದರ ಚೆನ್ನಯ್ಯ ಸ್ವಾಮೀಜಿಯವರು ಬಿಜೆಪಿ ಪರ ಬ್ಯಾಟ್ ಮಾಡಿ ಮಾತನಾಡುತ್ತಿರುವುದನ್ನು ಕಟುವಾಗಿ ಟೀಕಿಸಿದ್ದಾರೆ.

ಒಳಮೀಸಲಾತಿಯನ್ನು ಬಿಜೆಪಿ ಜಾರಿಗೊಳಿಸುತ್ತದೆ ಎಂದು ನಂಬಿಸಿ ಮಾತನಾಡುತ್ತಿರುವ ಸ್ವಾಮೀಜಿಯ ವಿಡಿಯೊವನ್ನು ಹಂಚಿಕೊಂಡಿರುವ ಅವರು, “ಮತ್ತೆಷ್ಟು ಯಾಮಾರಿಸುತ್ತೀರಿ ಮಾದಾರ ಚನ್ನಯ್ಯ ಸ್ವಾಮೀಜಿಗಳೇ. ಯಾರನ್ನು ಯಾಮಾರಿಸುತ್ತೀರಿ‌? ಈ ವಿಡಿಯೋದಲ್ಲಿ ಮಾತನಾಡುತ್ತಿರುವ ಮಾದರ ಚೆನ್ನಯ್ಯ ಸ್ವಾಮೀಜಿಯವರೇ ಹೇಳುವ ಪ್ರಕಾರ ಚೆಂಡು ಈಗ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಆದರೆ ಇಡೀ ದೇಶದ ಕಾನೂನು ಪಂಡಿತರಿಗೆ ಗೊತ್ತಿರುವ ವಿಚಾರ ಏನೆಂದರೆ, ಸಂಸತ್‌ನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆಯ ಮೂಲಕ ಒಳಮೀಸಲಾತಿಯನ್ನ ಜಾರಿ ಮಾಡಿದರೆ ಕೋರ್ಟಿನ ಅಂಗಳದಲ್ಲಿರುವ ಕೇಸ್ ಬಿದ್ದು ಹೋಗುತ್ತದೆ. ಈಗಾಗಲೇ ಆಂಧ್ರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಪ್ರಕಟಿಸಿ ಚೆಂಡನ್ನ ಸಂಸತ್ತಿಗೆ ವರ್ಗಾಯಿಸಿದೆ. ಸ್ವಾಮೀಜಿಯವರೇ ಹೇಳುವ ಪ್ರಕಾರ ಹಲವು ರಾಜ್ಯಗಳ ಪ್ರಸ್ತಾವನೆಗಳು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿ ಇರುವುದರಿಂದ ಕೇಂದ್ರ ಸರ್ಕಾರ ಸಂವಿಧಾನದ ವಿಧಿಗಳಿಗೆ ತಿದ್ದುಪಡಿಯನ್ನ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸುವುದು ಕಷ್ಟ ಸಾಧ್ಯವೇನಲ್ಲ” ಎಂದು ತಿಳಿಸಿದ್ದಾರೆ.

ಮುಂದುವರಿದು, “ಉದಾಹರಣೆಗೆ ಸ್ವಾಮೀಜಿಗಳೇ ಹೇಳುತ್ತಿರುವ ಪ್ರಕಾರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಒಳ ಮೀಸಲಾತಿ ವಿರುದ್ಧದ ತೀರ್ಪು ಬಂದರೂ, ಸಂಸತ್ತಿನಲ್ಲಿ ಒಳ ಮೀಸಲಾತಿಯನ್ನ ಜಾರಿ ಹೇಗೆ ಮಾಡಬೇಕೆಂದು ಮೋದಿ ಮತ್ತು ಅಮಿತ್ ಶಾ ಸಿದ್ಧವಾಗಿದ್ದಾರೆಂದು ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಒಳ ಮೀಸಲಾತಿಯನ್ನ ಜಾರಿ ಮಾಡುತ್ತೇವೆಂದು ಸಿದ್ಧವಾಗಿರುವ ಕೇಂದ್ರ ಸರ್ಕಾರ ಈಗಲೇ ಅದನ್ನು ಕೈಗೆತ್ತುಕೊಂಡು ಜಾರಿ ಮಾಡಲು ಯಾರು ಅಡ್ಡಿಯಾಗಿಲ್ಲ ಅಲ್ಲವೇ. ಮತ್ತೆ ಸ್ವಾಮೀಜಿಗಳ ಮಾತಿನ ಪ್ರಕಾರವೇ ಒಳ ಮೀಸಲಾತಿಯ ಚೆಂಡು ಈಗ ಕೇಂದ್ರ ಸರ್ಕಾರದಲ್ಲಿ ಇರುವಾಗ ಕರ್ನಾಟಕದಲ್ಲಿ ಮಾದಿಗ ಮುನ್ನಡೆ ಕಾರ್ಯಕ್ರಮದ ಮೂಲಕ ಒಳ ಮೀಸಲಾತಿ ಜಾರಿ ಮಾಡಿ, ಒಳಮಿಸಲಾತಿ ಜಾರಿ ಮಾಡಿ, ಒಳಮಿಸಲಾತಿ ಜಾರಿ ಮಾಡಿ ಎಂದು ಇವರು ಯಾರನ್ನು ಕೇಳುತ್ತಿದ್ದಾರೆ. ಇವರ ಪ್ರತಿಭಟನೆಗಳು ಯಾರ ವಿರುದ್ಧವಾಗಿವೆ. ಇವರ ಆಗ್ರಹಗಳು ಕೇಂದ್ರ ಸರ್ಕಾರಕ್ಕೆ ಇರಬೇಕೇ ಅಥವಾ ರಾಜ್ಯ ಸರ್ಕಾರಕ್ಕೆ ಇರಬೇಕೇ? ಇದನ್ನು ಇವರು ಸ್ಪಷ್ಟಪಡಿಸಲಿ” ಎಂದು ಆಗ್ರಹಿಸಿದ್ದಾರೆ.

“ಕಳೆದ ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಒಳಮಿಸಲಾತಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೇವೆ ಎಂದು ಬೆಲ್ಲ ತಿಂದು ಹೋದವರು ಇವರು. ಈಗ ಮತ್ತೆ ’ಮಾದಿಗ ಮುನ್ನಡೆ’ ಕಾರ್ಯಕ್ರಮದ ಮೂಲಕ ಒಳಮೀಸಲಾತಿ ಜಾರಿಗೆ ಯಾರನ್ನು ಆಗ್ರಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ಕೇಂದ್ರ ಸರ್ಕಾರವನ್ನ ಆಗ್ರಹಿಸುವುದಾದರೆ ನೇರವಾಗಿ ಕೇಂದ್ರ ಸರ್ಕಾರಕ್ಕೆ ಈ ಒಂದು ವಿಚಾರವನ್ನು ಮುಟ್ಟಿಸಬೇಕಲ್ಲವೇ. ಆದರೆ ‘ಮಾದಿಗ ಮುನ್ನಡೆ’ಯ ವೇದಿಕೆ ತುಂಬಾ ಕುಳಿತು ಮಾತನಾಡುತ್ತಿರುವ ಕೇಂದ್ರ ಮಂತ್ರಿಯು ಸೇರಿದಂತೆ ಎಲ್ಲರೂ ಬಿಜೆಪಿಯವರೇ ಆಗಿದ್ದಾಗ ಯಾರನ್ನ ಆಗ್ರಹಿಸುತ್ತಿದ್ದೀರಿ ಎಂದು ಪದೇಪದೇ ಸ್ಪಷ್ಟಪಡಿಸಲು ನಾನು ಕೇಳುತ್ತಿದ್ದೇನೆ ಎಂದಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಐಗೆ ವಕೀಲರ ಪತ್ರ: ಪ್ರಧಾನಿಯದು ಬರೀ ʼಬೂಟಾಟಿಕೆʼ ಎಂದು ಕಾಂಗ್ರೆಸ್ ತಿರುಗೇಟು

ಪಟ್ಟಭದ್ರ ಹಿತಾಸಕ್ತಿ ಗುಂಪಿನ ವಿರುದ್ಧ ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿಗೆ ಬರೆದ...

ಕೋಲಾರ ಟಿಕೆಟ್‌ | ಬಣ ಬಡಿದಾಟಕ್ಕೆ ಪೂರ್ಣವಿರಾಮವಿಟ್ಟ ಸಿಎಂ, ಡಿಸಿಎಂ; ಅಭ್ಯರ್ಥಿ ಯಾರು?

ಕೋಲಾರ ಟಿಕೆಟ್‌ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಬಣಗಳ ಬಡಿದಾಟವನ್ನು...

ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್...