ರಾಜಸ್ಥಾನ | ಖರ್ಗೆ ಸಂಧಾನ; ಒಗ್ಗೂಡಿ ಚುನಾವಣೆ ಎದುರಿಸಲು ಮುಂದಾದ ಗೆಹ್ಲೋಟ್-ಪೈಲಟ್

Date:

ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜಸ್ಥಾನ ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ರಾಜಿ ಸಂಧಾನಕ್ಕೆ ಹೈಕಮಾಂಡ್ ಮುಂದಿಟ್ಟ ಪ್ರಸ್ತಾಪಗಳನ್ನು ಇಬ್ಬರೂ ಒಪ್ಪಿದ್ದಾರೆ

ತಿಂಗಳಾನುಗಟ್ಟಲೆ ರಾಜಸ್ಥಾನ ಕಾಂಗ್ರೆಸ್‌ನ ಭಿನ್ನಮತ ಮತ್ತು ಒಡಕು ಮಾಧ್ಯಮಗಳಿಗೆ ಆಹಾರವಾಗಿತ್ತು. ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಸೋಮವಾರ (ಮೇ 29) ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮಾತುಕತೆಯಲ್ಲಿ ಬಿಕ್ಕಟ್ಟು ಪರಿಹರಿಸುವಲ್ಲಿ ಸಫಲವಾಗಿದೆ. ಇಬ್ಬರು ಒಗ್ಗಟ್ಟಿನಲ್ಲಿ ಜೊತೆಗೂಡಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಇಬ್ಬರ ನಡುವೆ ಒಪ್ಪಿತವಾದ ಷರತ್ತುಗಳೇನು ಎಂದು ಇನ್ನೂ ಕಾಂಗ್ರೆಸ್ ಬಹಿರಂಗಪಡಿಸಿಲ್ಲ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ಎಐಸಿಸಿ ರಾಜಸ್ಥಾನ ಉಸ್ತುವಾರಿ ಸುಖುಜಿಂದರ್ ಸಿಂಗ್ ರಾಂಧಾವ ಮೊದಲಾದವರು ಭಾಗವಹಿಸಿದ್ದರು.

ಖರ್ಗೆ ನಿವಾಸದಲ್ಲಿ ನಡೆದ ಸಭೆಗೆ ಅಶೋಕ್ ಗೆಹ್ಲೋಟ್ ಮೊದಲು ಆಗಮಿಸಿದ್ದರು. ಹೈಕಮಾಂಡ್ ಮತ್ತು ಗೆಹ್ಲೋಟ್ ನಡುವೆ ಎರಡು ಗಂಟೆಗಳ ಕಾಲ ಚರ್ಚೆ ನಡೆದಿದೆ. ನಂತರ ಸಚಿನ್ ಪೈಲಟ್ ಆಗಮಿಸಿದ ಬಳಿಕ ಮತ್ತೆ ಎರಡು ಗಂಟೆಗಳ ಕಾಲ ಸಭೆ ನಡೆದಿದೆ. ರಾತ್ರಿ ಹತ್ತು ಗಂಟೆಗೆ ನಾಯಕರು ಮಾಧ್ಯಮಗಳಿಗೆ ವಿವರ ನೀಡಿದರೂ, ಚರ್ಚೆಯಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷರಾದ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಜೊತೆಗೆ ವಿವರವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯ ನಂತರ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಜೊತೆಗೂಡಿ ಚುನಾವಣೆ ಎದುರಿಸಿದರೆ ರಾಜಸ್ಥಾನದಲ್ಲಿ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರುವುದು ಕಷ್ಟವಲ್ಲ ಎಂದು ಗೆಹ್ಲೋಟ್‌-ಪೈಲಟ್ ಒಪ್ಪಿಕೊಂಡಿದ್ದಾರೆ. “ಕಾಂಗ್ರೆಸ್ ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಇಬ್ಬರೂ ನಾಯಕರು ಒಗ್ಗಟ್ಟಿನಿಂದ ಮತ್ತು ಒಮ್ಮತದಿಂದ ಹೈಕಮಾಂಡ್ ಮುಂದಿಟ್ಟ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ” ಎಂದು ವೇಣುಗೋಪಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸುದ್ದಿಗೋಷ್ಠಿ ಸಂದರ್ಭ ಗೆಹ್ಲೋಟ್ ಮತ್ತು ಪೈಲಟ್ ಹಾಜರಿದ್ದರೂ ಮಾತನಾಡಲಿಲ್ಲ.

ಹೈಕಮಾಂಡ್ ಮುಂದಿಟ್ಟ ಪ್ರಸ್ತಾಪವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ವೇಣುಗೋಪಾಲ್, “ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ. ಆ ಬಗ್ಗೆ ಚಿಂತೆ ಬೇಡ. ಇಬ್ಬರೂ ಜೊತೆಗೂಡಿ ಕೆಲಸ ಮಾಡಲು ಸಿದ್ಧರಿಸಿದ್ದಾರೆ. ಜಂಟಿಯಾಗಿ ಬಿಜೆಪಿ ವಿರುದ್ಧ ರಾಜ್ಯದಲ್ಲಿ ಹೋರಾಡುತ್ತೇವೆ” ಎಂದಷ್ಟೇ ಹೇಳಿದರು.

ಸಭೆಗೆ ಮೊದಲು ಮಾತನಾಡಿದ ಗೆಹ್ಲೋಟ್‌, “ಯಾವುದೇ ವ್ಯಕ್ತಿಯನ್ನು ತೃಪ್ತಿಪಡಿಸಲು ಅಧಿಕಾರ ನೀಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿ ಇಲ್ಲ” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ರಾಜಸ್ಥಾನ ಪಕ್ಷದ ನಾಯಕರು ಗೆಹ್ಲೋಟ್ ಮತ್ತು ಪೈಲಟ್ ತಮ್ಮ ನಡುವಿನ ಭಿನ್ನಾಭಿಪ್ರಾಯ ತೊರೆದು ರಾಜಿ ಮಾಡಿಕೊಳ್ಳಬೇಕು ಎಂದೇ ಬಯಸಿದ್ದಾರೆ. ಆದರೆ ಗೆಹ್ಲೋಟ್ ಹೇಳಿಕೆ ಗಮನಿಸಿದಲ್ಲಿ, ಹೈಕಮಾಂಡ್ ಮುಂದಿಡುವ ಯಾವುದೇ ಶಾಂತಿ ಪ್ರಸ್ತಾಪ ಅಥವಾ ಪೈಲಟ್‌ಗೆ ಅಧಿಕಾರ ನೀಡುವುದನ್ನು ಅವರು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ

ಇದಕ್ಕೆ ಮೊದಲು, ವಸುಂದರಾ ರಾಜೆ ಸರ್ಕಾರದ ಭ್ರಷ್ಟಾಚಾರದ ತನಿಖೆಯನ್ನು ಗೆಹ್ಲೋಟ್ ಸರ್ಕಾರ ನಡೆಸಿಲ್ಲ ಎಂದು ಸಚಿನ್ ಪೈಲಟ್ ಪ್ರತಿಭಟನೆ ಮಾಡಿ ಧರಣಿ ಕುಳಿತಿದ್ದರು. ಅಜ್ಮೀರ್‌ನಿಂದ ಜೈಪುರ್ ನಡುವೆ ಐದು ದಿನಗಳ ಯಾತ್ರೆ ನಡೆಸಿದ ಸಚಿನ್ ಪೈಲಟ್‌, ರಾಜೆ ಸರ್ಕಾರದ ವಿರುದ್ಧ ತನಿಖೆಗೆ ಒತ್ತಾಯಿಸಿದ ಕೆಲ ದಿನಗಳ ನಂತರ ಈ ಸಭೆ ನಡೆದಿದೆ. 15 ದಿನಗಳ ಒಳಗೆ ರಾಜೆ ಸರ್ಕಾರದ ಭ್ರಷ್ಟಾಚಾರದ ತನಿಖೆ ನಡೆಸುವಂತೆ ಗೆಹ್ಲೋಟ್‌ ಸರ್ಕಾರವನ್ನು ಸಚಿನ್ ಪೈಲಟ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ವಲಯದಲ್ಲಿ ಸಚಿನ್ ಪೈಲಟ್ ಅವರನ್ನು ಮತ್ತೆ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು ಎನ್ನುವ ಸುದ್ದಿಗಳು ಹರಡಿವೆ. ಆದರೆ ಗೆಹ್ಲೋಟ್ ಅಂತಹ ಪ್ರಸ್ತಾಪವಾಗಿಲ್ಲ ಎಂದು ಹೇಳಿದ್ದಾರೆ. “ಹೈಕಮಾಂಡ್ ಇಂದಿಗೂ ಬಲಿಷ್ಠವಾಗಿದೆ. ಒಬ್ಬ ವ್ಯಕ್ತಿಯನ್ನು ತೃಪ್ತಿಪಡಿಸಲು ಹುದ್ದೆಯನ್ನು ನೀಡುವ ಅಗತ್ಯ ಬಂದಿಲ್ಲ. ಭವಿಷ್ಯದಲ್ಲೂ ಅದು ನಡೆಯುವುದಿಲ್ಲ. ಯಾವುದೇ ಕಾರ್ಯಕರ್ತ ಅಥವಾ ನಾಯಕ ಹುದ್ದೆಯ ಬೇಡಿಕೆ ಇಡುವಂತಹ ಸನ್ನಿವೇಶ ಇರುವುದಿಲ್ಲ” ಎಂದು ಗೆಹ್ಲೋಟ್ ಹೇಳಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಟ್ಸಾಪ್‌ನಲ್ಲಿ ಇಂಟರ್‌ನೆಟ್ ಇಲ್ಲದೆ ಫೈಲ್‌ಗಳು, ಇಮೇಜ್‌ಗಳ ಶೇರಿಂಗ್ ಆಯ್ಕೆ

ಸರಿಸುಮಾರು ಮುನ್ನೂರು ಕೋಟಿಗೂ ಸಕ್ರಿಯ ಬಳಕೆದಾರರನ್ನು ಹೊಂದಿರುವ ಪ್ರಬಲ ಸಾಮಾಜಿಕ ಮಾಧ್ಯಮ...

ಕಾಂಗ್ರೆಸ್ ಪಕ್ಷ ಬೆಂಬಲಿಸಲು ಪಿಟಿಸಿಎಲ್ ಹೋರಾಟ ಸಮಿತಿ ನಿರ್ಧಾರ

ಬೆಂಗಳೂರು: ದಲಿತರು, ಸಂವಿಧಾನ ವಿರೋಧಿ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ...

ʼಈ ದಿನʼ ಸಮೀಕ್ಷೆ | ಬಿಗಡಾಯಿಸಿದ ನಿರುದ್ಯೋಗ ; ಮೋದಿ ಆಡಳಿತಕ್ಕೆ ಬೇಸರಗೊಂಡ ಮತದಾರ

“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು” ಎಂಬ ಘೋಷಣೆಯನ್ನು ನರೇಂದ್ರ ಮೋದಿಯವರು...

ನೇಹಾ ಕನ್ನಡ ನಾಡಿನ ಮಗಳು, ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ ಬೇಡ: ಸುರ್ಜೇವಾಲ್

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ್ ಅವರು ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ...