ಡಾ ಕೆ.ಸುಧಾಕರ್: ಅಪಾಯಕಾರಿ ರಾಜಕೀಯ ಶೈಲಿ

Date:

ಯಾರು ಏನೇ ಆಡಿಕೊಂಡರೂ, ಆರೋಪ ಮಾಡಿದರೂ ತನ್ನ ದಾರಿ ಇದೇ ಎಂದು ಡಾ ಕೆ. ಸುಧಾಕರ್ ಮುಂದೆ ಸಾಗುತ್ತಿದ್ದಾರೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವ ಕನಸೂ ಅವರಿಗಿದೆ ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಯಾವುದೇ ಮೌಲ್ಯ ವಿವೇಚನೆಯಿಲ್ಲದೆ, ಅಭಿವೃದ್ಧಿಯ ಚಿಂತನೆಯಿಲ್ಲದೆ, ಜನಾದರಣೆಯ ಹಾದಿಯನ್ನು ಬಿಟ್ಟು ತನ್ನಿಚ್ಛೆಯಂತೆ ತನ್ನದೇ ದಾರಿಯಲ್ಲಿ ಸಾಗುತ್ತಿರುವ ಸುಧಾಕರ್‌ಗೆ ಅತಿ ವೇಗ ಒಳ್ಳೆಯದಲ್ಲ ಎನ್ನುವುದನ್ನು ಯಾರಾದರೂ ಮನದಟ್ಟು ಮಾಡಿಸಬೇಕಿದೆ.

ರಾಜ್ಯ ರಾಜಕಾರಣದಲ್ಲಿ ಹೊಸ ತಲೆಮಾರಿನವರ ನಡುವೆ ಸದಾ ಸುದ್ದಿಯಲ್ಲಿರುವ ವ್ಯಕ್ತಿ ಚಿಕ್ಕಬಳ್ಳಾಪುರದ ಡಾ ಕೆ ಸುಧಾಕರ್. 49 ವಯಸ್ಸಿನ ಸುಧಾಕರ್ ಇದುವರೆಗೆ ನಡೆದುಬಂದ ಹಾದಿಯನ್ನು ನೋಡಿದರೆ, ಅವರ ವ್ಯಕ್ತಿತ್ವ ಮತ್ತು ರಾಜಕಾರಣದ ವರಸೆ ತಿಳಿಯುತ್ತದೆ.

ಸುಧಾಕರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದವರು. ಇವರ ತಂದೆ ಕೇಶವ ರೆಡ್ಡಿ ಒಬ್ಬ ಸಾಧಾರಣ ಶಾಲಾ ಮಾಸ್ತರ್ ಆಗಿದ್ದವರು. ಜೊತೆಗೆ ಸ್ಥಳೀಯ ಮಟ್ಟದಲ್ಲಿ ರಾಜಕಾರಣ ಮಾಡುತ್ತಿದ್ದರು. ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷ ಸೇರಿ ಪೂರ್ಣಾವಧಿ ರಾಜಕಾರಣಿಯಾದರು. 2008ರವರೆಗೆ ಚಿಕ್ಕಬಳ್ಳಾಪುರ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಗಿತ್ತು. ಹಾಗಾಗಿ ಒಕ್ಕಲಿಗ ರೆಡ್ಡಿ ಜಾತಿಯ ಕೇಶವ ರೆಡ್ಡಿ ಸ್ಥಳೀಯ ಸಂಸ್ಥೆಗಳಿಗಷ್ಟೇ ತಮ್ಮ ರಾಜಕಾರಣ ಸೀಮಿತಗೊಳಿಸಿಕೊಂಡಿದ್ದರು. 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಚಿಕ್ಕಬಳ್ಳಾಪುರ ಸಾಮಾನ್ಯ ಮೀಸಲು ಕ್ಷೇತ್ರವಾದ ನಂತರ ಕೇಶವ ರೆಡ್ಡಿಯವರಿಗೆ ಜೆಡಿಎಸ್ನಿಂದ ಸ್ಪರ್ಧಿಸುವ ಇರಾದೆ ಇತ್ತು. ಆದರೆ, ಜೆಡಿಎಸ್ ವರಿಷ್ಠರು ಕೆ ಪಿ ಬಚ್ಚೇಗೌಡ ಅವರಿಗೆ ಟಿಕೆಟ್ ನೀಡಿದ್ದರಿಂದ ಸಿಟ್ಟಾದ ಕೇಶವ ರೆಡ್ಡಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2013ರಲ್ಲಿ ಕಾಂಗ್ರೆಸ್ನಿಂದ ನಿಂತದ್ದು ಕೇಶವ ರೆಡ್ಡಿ ಅಲ್ಲ, ಅವರ ಮಗ ಡಾ.ಕೆ ಸುಧಾಕರ್. ಎಂಬಿಬಿಎಸ್ ಓದಿದ್ದ ಸುಧಾಕರ್, ಅದುವರೆಗೆ ರಾಜಕಾರಣದಿಂದ ದೂರವೇ ಇದ್ದರು. ಅಪ್ಪನಿಗೆ ವಯಸ್ಸಾಗಿದೆ ಎಂದೋ, ಅಪ್ಪನ ನೆರಳಿನಲ್ಲಿಯೇ ರಾಜಕೀಯ ತಾಲೀಮು ನಡೆಸೋಣ ಎಂದೋ ಸುಧಾಕರ್ 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ತಮ್ಮ ಮೊದಲ ಪ್ರಯತ್ನದಲ್ಲಿಯೇ ಸುಮಾರು 15 ಸಾವಿರ ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.

ಸುಧಾಕರ್ ಉನ್ನತ ಶಿಕ್ಷಣ ಪಡೆದವರು. ಜೊತೆಗೆ ಮಹತ್ವಾಕಾಂಕ್ಷಿ. ಶಕ್ತಿಕೇಂದ್ರದ ರಾಜಕೀಯ ವಲಯದಲ್ಲಿ ತುಂಬಾ ವೇಗವಾಗಿ ಸಂಪರ್ಕ ಸಾಧಿಸತೊಡಗಿದ ಸುಧಾಕರ್, ಮೊದಲ ಬಾರಿಗೇ ಮಂತ್ರಿಗಿರಿಯ ಆಸೆ ಹೊಂದಿದ್ದರು. ಆದರೆ, ಅದು ಆಗುವ ಕೆಲಸವಲ್ಲ ಎಂದು ನಂತರ ಸುಮ್ಮನಾಗಿದ್ದರು. ಆದರೂ ಅದು ಹೇಗೋ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಆಪ್ತರಾಗಿದ್ದರು.

2018ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್‌ನ ಕೆ ಪಿ ಬಚ್ಚೇಗೌಡರ ವಿರುದ್ಧ ಮೊದಲಿಗಿಂತ ದುಪ್ಪಟ್ಟು ಅಂತರದಲ್ಲಿ ಗೆದ್ದು ಬೀಗಿದರು. ಈ ಬಾರಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಆಗಲೇಬೇಕು ಅಂತ ಹಟ ಹಿಡಿದರು. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ವರಿಷ್ಠರು ಐದು ಬಾರಿ ಗೆದ್ದಿದ್ದ ಸೌಮ್ಯ ಸ್ವಭಾವದ ಗೌರಿಬಿದನೂರು ಶಾಸಕ ಎನ್ ಎಚ್ ಶಿವಶಂಕರ ರೆಡ್ಡಿಯವರನ್ನು ಮಂತ್ರಿ ಮಾಡಿದರು. ಸುಧಾಕರ್ ಬಹಿರಂಗವಾಗಿಯೇ ಶಿವಶಂಕರ ರೆಡ್ಡಿಯೂ ಸೇರಿದಂತೆ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ವಿರುದ್ಧ, ಕಾಂಗ್ರೆಸ್ ವಿರುದ್ಧ ಕೆಂಡ ಕಾರತೊಡಗಿದರು. ಅವರಿಗಿಂತ ಹಿರಿಯರು, ಹಲವು ಬಾರಿ ಗೆದ್ದವರು ಸುಮ್ಮನಿದ್ದರೂ ಸುಧಾಕರ್ ಮಾತ್ರ ಅಧಿಕಾರಕ್ಕಾಗಿ ಚಡಪಡಿಸತೊಡಗಿದರು.

ಈ ಸುದ್ದಿ ಓದಿದ್ದೀರಾ: ಬದಲಾವಣೆಗಾಗಿ ಬಿಜೆಪಿ ವಿರುದ್ಧ ಮತ ಹಾಕಿ: ಸುಧೀಂದ್ರ ಕುಲಕರ್ಣಿ

ಸುಧಾಕರ್ ಅವರನ್ನು ಸಮಾಧಾನಿಸಲು ಸಾಕಷ್ಟು ಕಸರತ್ತು ನಡೆಸಿದ ಕಾಂಗ್ರೆಸ್ ಕೊನೆಗೆ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿತು. ಅದನ್ನು ‘ಪುಟಗೋಸಿ’ ಎಂದು ಕರೆದರೂ ಸುಧಾಕರ್, ಹೇಗೋ ಕೊಂಚ ಕಾಲ ಸುಮ್ಮನಿದ್ದರು. ಅಷ್ಟರಲ್ಲಿ ಬಯಲು ಸೀಮೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ ಸುಧಾಕರ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಅರ್ಹತೆ ಮತ್ತು ಮಾನದಂಡ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರು. ಇದರ ಪರಿಣಾಮವಾಗಿ ಸುಧಾಕರ್ ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂತು.

ಅಲ್ಲಿಗೆ ಸುಧಾಕರ್‌ಗೆ ತನಗೆ ಈ ಸರ್ಕಾರದಲ್ಲಿ ಅಧಿಕಾರ ಸಿಗುವುದಿಲ್ಲ ಎಂದು ಖಾತ್ರಿಯಾಯಿತು. ರಮೇಶ್ ಜಾರಕಿಹೊಳಿ ಜೊತೆ ಸೇರಿದ ಸುಧಾಕರ್, ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಿ, ಬಿಜೆಪಿ ಅಧಿಕಾರಕ್ಕೇರಲು ಕಾರಣಕರ್ತರಾದರು. ವಿಶೇಷ ಅಂದರೆ, 2019ರ ಉಪಚುನಾವಣೆಯಲ್ಲಿ ಸುಧಾಕರ್ ಪರ ಪ್ರಚಾರ ಮಾಡಲು ಸಿನಿಮಾ ನಟಿಯರ ದಂಡು ಚಿಕ್ಕಬಳ್ಳಾಪುರಕ್ಕೆ ಹರಿದುಬಂದಿತ್ತು. ಕನ್ನಡದಿಂದ ನಟಿ ಹರಿಪ್ರಿಯಾರಂಥವರು ಬಂದರೆ, ತೆಲುಗಿನಿಂದ ಬ್ರಹ್ಮಾನಂದಂ ಬಂದರು. ಹೀಗೆಲ್ಲ ಮಾಡಿ ದೊಡ್ಡ ಅಂತರದಿಂದ ಚುನಾವಣೆ ಗೆದ್ದ ಸುಧಾಕರ್, ಹೊಸ ಸರ್ಕಾರದಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವರಾಗಿ ಮೆರೆಯತೊಡಗಿದರು.

ಕೋವಿಡ್ ಸಮಯದಲ್ಲಿ ಔಷಧಿ ಖರೀದಿ, ಮಾಸ್ಕ್ ಮತ್ತಿತರ ಪರಿಕರಗಳ ಖರೀದಿಯಲ್ಲಿ ಸುಧಾಕರ್ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದವು. ಮೆಡಿಕಲ್ ಕಾಲೇಜುಗಳಲ್ಲಿ ನೇಮಕಾತಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಅಕ್ರಮಗಳು ನಡೆದವು ಎನ್ನುವ ಆರೋಪಗಳು ಬಂದವು. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕವನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ ಎನ್ನುವ ಟೀಕೆಗಳು ವ್ಯಕ್ತವಾದವು.

ಇದ್ಯಾವುದಕ್ಕೂ ಸುಧಾಕರ್ ಸರಿಯಾದ ಉತ್ತರ ನೀಡಲಿಲ್ಲ. ತನ್ನ ವಿರುದ್ಧ ಆರೋಪ ಮಾಡಿದರೆ ಅವರ ಮೇಲೆ ವಾಗ್ದಾಳಿ ಮಾಡುವುದು ಸುಧಾಕರ್ ಅವರ ಒಂದು ತಂತ್ರ. ಒಂದೊಂದು ಆರೋಪ ಬಂದಾಗಲೂ ತಮ್ಮನ್ನು ಸಮರ್ಥಿಸಿಕೊಳ್ಳುವುದು, ಆರೋಪ ಮಾಡಿದವರನ್ನು ನಿಂದಿಸುವುದು ಸುಧಾಕರ್ ಶೈಲಿಯಾಯಿತು.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಭ್ರಷ್ಟಾಚಾರ ಆರೋಪ ಬಂದಾಗ ಸುಧಾಕರ್ ಕೂಡ ಕಟಕಟೆಯಲ್ಲಿ ನಿಂತರು. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಸುಧಾಕರ್ ವಿರುದ್ಧ ನೇರವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆರೋಗ್ಯ ಇಲಾಖೆಯನ್ನು ‘ಭ್ರಷ್ಟಾಚಾರದ ರಾಜ’ ಎಂದಿದ್ದರು; ಸಚಿವರ ಸಂಬಂಧಿಕರು ಗುತ್ತಿಗೆ ಪಡೆದಿದ್ದು, ಸಚಿವರ ಪತ್ನಿಯೂ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಉತ್ತರಿಸುವ ಬದಲು ಸುಧಾಕರ್ ಕೆಂಪಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಕಾಂಗ್ರೆಸ್ ಏಜೆಂಟ್ ಎಂದು, ಅವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಬೇಕೆಂದು ಪ್ರತ್ಯುತ್ತರ ನೀಡಿದ್ದರು.

ಈ ಸುದ್ದಿ ಓದಿದ್ದೀರಾ: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-3: ಭ್ರಷ್ಟಾಚಾರ, ಅಸಮರ್ಥತೆಯೇ ತಿರಸ್ಕಾರಕ್ಕೆ ಪ್ರಧಾನ ಕಾರಣ

ಸುಧಾಕರ್ ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣ. ಎಲ್ಲ ಪಕ್ಷಗಳಲ್ಲೂ ಇವರಿಗೆ ಬೇಕಾದವರಿದ್ದಾರೆ. ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಓದಿದ ಕಾರಣಕ್ಕೆ ಇವರಿಗೆ ಪರಮೇಶ್ವರ್ ಆತ್ಮೀಯರು. ಜಾತಿಯ ಕಾರಣಕ್ಕೆ ಡಿ ಕೆ ಶಿವಕುಮಾರ್ ಆತ್ಮೀಯರು. ಹೀಗೆ ಜಾತಿ, ಹಣ, ತಂತ್ರಗಾರಿಕೆ ಎಲ್ಲಿ ಯಾವುದು ಸಲ್ಲುತ್ತೋ ಅಲ್ಲಿ ಅದನ್ನು ಪ್ರಯೋಗಿಸುವುದರಲ್ಲಿ ಸುಧಾಕರ್ ಸಿದ್ಧಹಸ್ತರು ಎನ್ನುವ ಮಾತು ರಾಜಕೀಯ ವಲಯದಲ್ಲಿದೆ.

ಸುಧಾಕರ್ ಅವರ 10 ವರ್ಷದ ರಾಜಕೀಯ ಜೀವನದಲ್ಲಿ ಇಂಥ ಹತ್ತಾರು ಅಕ್ರಮ, ಅವ್ಯವಹಾರಗಳ ಆರೋಪಗಳು ಕೇಳಿಬಂದಿವೆ. ಆದರೆ, ಅವರು ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಯಾವುದು ತನ್ನನ್ನೂ ತಡೆಯಲು ಸಾಧ್ಯವಿಲ್ಲವೆನ್ನುವಂತೆ ಮುನ್ನುಗ್ಗುತ್ತಿದ್ದಾರೆ.

ರಾಜ್ಯ ಸರ್ಕಾರದ ಏನೇ ಪ್ರಮುಖ ಪ್ರೆಸ್ ಮೀಟ್ ನಡೆಯಲಿ, ಅಲ್ಲಿ ಯಾವ ಹಿರಿಯ ಸಚಿವರು ಇಲ್ಲದಿದ್ದರೂ ಸುಧಾಕರ್ ಇರುತ್ತಾರೆ. ಅದರಲ್ಲೂ ಸಿನಿಮಾ ರಂಗದವರಿರುವ ಕಡೆ ಸುಧಾಕರ್ ಯಾವ ಕಾರಣಕ್ಕೂ ಇಲ್ಲದಿರುವುದಿಲ್ಲ. ವಿಧಾನಸೌಧದ ಬಳಿ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲೂ ಜೂ. ಎನ್ಟಿಆರ್ ಮತ್ತಿತರರ ಜೊತೆ ಕಾಣಿಸಿಕೊಂಡದ್ದು ಇದೇ ಸುಧಾಕರ್. ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ ಒಂದೂವರೆ ದಶಕವಾದ ನೆಪದಲ್ಲಿ ಸುಧಾಕರ್ ಸರ್ಕಾರದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಾರ ಕಾಲ ಚಿಕ್ಕಬಳ್ಳಾಪುರ ಉತ್ಸವ ಮಾಡಿದರು. ವೇದಿಕೆ ಮೇಲೆ ತೆಲುಗು ಚಿತ್ರರಂಗ ಮತ್ತು ಕನ್ನಡ ಚಿತ್ರರಂಗದ ಸ್ಟಾರ್‌ಗಳನ್ನು ತುಂಬಿಕೊಳ್ಳುವುದೇ ಉತ್ಸವ ಆಚರಣೆ ಎನ್ನುವಂತಿತ್ತು ಅದು. ಈಚೆಗೆ ಸುದೀಪ್ ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ತಿಳಿಸಲು ಬೊಮ್ಮಾಯಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲೂ ಸುಧಾಕರ್ ಇದ್ದರು.

ಅಷ್ಟೇ ಏಕೆ, ಈಗಿನ ಚುನಾವಣೆಯಲ್ಲಿ ಹರ್ಷಿಕಾ ಪೂಣಚ್ಚ, ಅನು ಪ್ರಭಾಕರ್, ದಿಗಂತ್, ಭುವನ್ ಸೇರಿದಂತೆ ಅನೇಕ ನಟ ನಟಿಯರು ಸುಧಾಕರ್ ಪರ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಈ ನಟ ನಟಿಯರಿಗೂ, ಸುಧಾಕರ್‌ಗೂ ಏನು ಸಂಬಂಧ ಎನ್ನುವುದು ತಿಳಿಯದೆ ಜನ ಪುಗ್ಸಟ್ಟೆ ಮನರಂಜನೆ ಪಡೆಯುತ್ತಿದ್ದಾರೆ. ಹೇಳಿಕೊಳ್ಳಲು ಯಾವ ಅಭಿವೃದ್ಧಿಯ ಕೆಲಸಗಳೂ ಇಲ್ಲದೇ ಸುಧಾಕರ್ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ನಟ ನಟಿಯರನ್ನು ಕರೆತಂದು ಶೋ ಕೊಡಿಸುತ್ತಿದ್ದಾರೆ ಎಂದು ವಿರೋಧಿಗಳು ಆಡಿಕೊಳ್ಳುತ್ತಿದ್ದಾರೆ.

ಯಾರು ಏನೇ ಆಡಿಕೊಂಡರೂ, ಆರೋಪ ಮಾಡಿದರೂ ತನ್ನ ದಾರಿ ಇದೇ ಎಂದು ಸುಧಾಕರ್ ಮುಂದೆ ಸಾಗುತ್ತಿದ್ದಾರೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವ ಕನಸೂ ಅವರಿಗಿದೆ ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಯಾವುದೇ ಮೌಲ್ಯ ವಿವೇಚನೆಯಿಲ್ಲದೆ, ಅಭಿವೃದ್ಧಿಯ ಚಿಂತನೆಯಿಲ್ಲದೆ, ಜನಾದರಣೆಯ ಹಾದಿಯನ್ನು ಬಿಟ್ಟು ತನ್ನಿಚ್ಛೆಯಂತೆ ತನ್ನದೇ ದಾರಿಯಲ್ಲಿ ಸಾಗುತ್ತಿರುವ ಸುಧಾಕರ್‌ಗೆ ಅತಿ ವೇಗ ಒಳ್ಳೆಯದಲ್ಲ ಎನ್ನುವುದನ್ನು ಯಾರಾದರೂ ಮನದಟ್ಟು ಮಾಡಿಸಬೇಕಿದೆ. ಅದೇ ಪ್ರಾಂತ್ಯದಿಂದ ಬಂದು ಈಗ ಬೆಂಗಳೂರಿನ ಬ್ಯಾಟರಾಯನಪುರದ ಶಾಸಕರಾಗಿರುವ, ಅವರದೇ ಜಾತಿಯ, ಹೆಚ್ಚು ಕಡಿಮೆ ಅವರದ್ದೇ ವಯಸ್ಸಿನ ಕೃಷ್ಣ ಭೈರೇಗೌಡರೊಂದಿಗೆ ಹೋಲಿಸಿದರೆ ಸುಧಾಕರ್ ಅವರ ರಾಜಕೀಯ ಶೈಲಿಯ ಮಿತಿ ಮತ್ತು ಅಪಾಯಗಳು ಅರಿವಾಗುತ್ತವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...

ಚಿಕ್ಕಮಗಳೂರು | ಜಯಪ್ರಕಾಶ್ ಹೆಗ್ಡೆ ಮಲೆನಾಡಿನ ಅಡಿಕೆ ಬೆಳೆಗಾರರ ಆಶಾಕಿರಣ: ಬಿ ಎ ರಮೇಶ್ ಹೆಗ್ಡೆ

"ಜಯಪ್ರಕಾಶ್ ಹೆಗ್ಡೆ ಅವರು ಅಡಿಕೆ ಬೆಳೆಗಾರರ ಆಶಾಕಿರಣ. ಕೇವಲ ಎರಡು ವರ್ಷಗಳಲ್ಲಿ...