ಕರ್ನಾಟಕದಲ್ಲಿ ಎಷ್ಟು ಮಾತೃಭಾಷೆಗಳಿವೆ ಗೊತ್ತೇ? ; ರಾಜ್ಯ ಒಂದು, ನುಡಿ ಹಲವು

Date:

ಕರ್ನಾಟಕ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಯ ನೆಪದಲ್ಲಿ ರಾಜ್ಯದಲ್ಲಿರುವ ವಿವಿಧ ಮಾತೃಭಾಷೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ

ಈ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಿ ಭರ್ತಿ 50 ವರ್ಷಗಳಾದುವು. ಏಕೀಕರಣಗೊಂಡು ಮೈಸೂರು ರಾಜ್ಯವಾಗಿದ್ದ ಕರುನಾಡು ಕರ್ನಾಟಕ ಎಂದು ನಾಮಕರಣಗೊಂಡ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಕನ್ನಡವೇ ಈ ನಾಡಿನ ಎಲ್ಲರ ನಡುವೆ ಸೇತುವಾಗಿರುವ ಈ ನೆಲದ ಭಾಷೆ. ಆದರೆ, ಕನ್ನಡವೊಂದೇ ಕರ್ನಾಟಕದ ಜನರ ಮಾತೃಭಾಷೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಹಲವು ಮಾತೃಭಾಷೆಗಳ ಲೋಕವೇ ತೆರೆದುಕೊಳ್ಳುತ್ತದೆ.

ಈ ನಾಡು ಹಲವು ಭಾಷಿಕರ, ಹಲವು ಧರ್ಮ, ಜಾತಿ, ಸಂಸ್ಕೃತಿಗಳ ಬೀಡು. ಈ ಕಾರಣಕ್ಕಾಗಿಯೇ ʼಕರ್ನಾಟಕ ರಾಜ್ಯೋತ್ಸವʼ ಎಂದರೆ ಅದು ಈ ನೆಲದಲ್ಲಿ ಬದುಕಿ ಬಾಳಿರುವ ಎಲ್ಲ ಭಾಷಿಕರ ಉತ್ಸವವೂ ಆಗಬೇಕು.

ಕನ್ನಡ ನಾಡು ಬಹುಭಾಷೆಗಳ ಸುಂದರ ಹೂಗುಚ್ಛ. ಕನ್ನಡ ಅದರ ಪ್ರಧಾನ ಅಸ್ಮಿತೆ ಹೌದು. ಹಾಗೆಂದಾಕ್ಷಣ ಇತರೆ ಪುಷ್ಪಗಳ ಅಂದ-ಗಂಧಗಳು, ಚೆಲುವು-ಚಿತ್ತಾರಗಳೂ ಕನ್ನಡದ ಅವಿಭಾಜ್ಯ ಅಸ್ಮಿತೆಗಳೇ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಮ್ಮ ಅಕ್ಕಪಕ್ಕದ ರಾಜ್ಯಗಳ ಮಾತೃಭಾಷೆಯನ್ನು ಮಾತನಾಡುವ ಜನರೂ ನಮ್ಮಲ್ಲಿದ್ದಾರೆ. ಆದರೆ, ಬಹುಕಾಲದಿಂದ ಇಲ್ಲಿ ನೆಲೆಸಿರುವ ಅವರು ಸಾರ್ವಜನಿಕ ಬದುಕಿನಲ್ಲಿ ಕನ್ನಡಿಗರೇ ಆಗಿ ಹೋಗಿದ್ದಾರೆ. 2011ರ ಜನಗಣತಿಯ ಪ್ರಕಾರ ಇಲ್ಲಿನ 66% ಜನರು ಮಾತ್ರ ಕನ್ನಡವನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಉಳಿದ ಶೇ.34ರಷ್ಟು ಜನರು ಸುಮಾರು 72 ಬಗೆಯ ಮಾತೃಭಾಷೆಯವರು.

ಕನ್ನಡದ ಉಪಭಾಷೆಗಳು ಅಥವಾ ಪ್ರಾದೇಶಿಕ ನುಡಿಗಟ್ಟುಗಳು
ಕವಿರಾಜಮಾರ್ಗʼ ಬರೆದ ಶ್ರೀವಿಜಯನು, “ಕನ್ನಡದಲ್ಲಿರುವ ಅಸಂಖ್ಯಾತ ಉಪಭಾಷೆಗಳನ್ನು ಹೆಸರಿಸಲು ಸಾವಿರ ನಾಲಿಗೆಗಳಿರುವ ಆದಿಶೇಷನಿಗೂ ಸಾಧ್ಯವಿಲ್ಲ” ಎಂದು ಹೇಳಿದ್ದಾನೆ. ಇದು ಉತ್ಪ್ರೇಕ್ಷೆ ಅಲ್ಲ. ಆದರೀಗ ಅವುಗಳಲ್ಲಿ ಹಲವು ಭಾಷೆಗಳು ಅಳಿದು ಹೋಗಿವೆ. ಕೆಲವು ಭಾಷೆಗಳು ಸಮಾಜದ ಮುನ್ನೆಲೆಗೆ ಬರದಿರುವ ಸಮುದಾಯಗಳ ಭಾಷೆಯಾಗಿ ಅಳಿವಿನಂಚಿನಲ್ಲಿವೆ. ಕೆಲವನ್ನು ಮಾತನಾಡುವವರ ಸಂಖ್ಯೆ ತೀರಾ ಕಡಿಮೆಯಿದೆ. ಹಾಗಾಗಿ ಅವು ಲೆಕ್ಕಕ್ಕೆ ಸಿಗದಿರಬಹುದು.

ಹಾಲಕ್ಕಿ ಕನ್ನಡ: ಹಾಲಕ್ಕಿ ಒಕ್ಕಲಿಗರು ಮಾತನಾಡುವ ಭಾಷೆ ಹಾಲಕ್ಕಿ ಕನ್ನಡ. ಉತ್ತರ ಕನ್ನಡ ಜಿಲ್ಲೆಯ ಕುಮಟ, ಹೊನ್ನಾವರ, ಭಟ್ಕಳ, ಕಾರವಾರ, ಅಂಕೋಲಾ ಮುಂತಾದೆಡೆ ಇರುವ ವಾಸವಿದ್ದಾರೆ.

ದೀವರ ಕನ್ನಡ: ʼದೀವರʼ ಎಂಬ ಸಮುದಾಯದವರು ಮಾತನಾಡುವ ಕನ್ನಡ ದೀವರ ಕನ್ನಡ. ಮುಖ್ಯವಾಗಿ ಶಿವಮೊಗ್ಗದ ಸೊರಬ, ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ ದೀವರು. ಕೃಷಿಯನ್ನೆ ನೆಚ್ಚಿಕೊಂಡ ಜನರಿವರು. ಉತ್ತರ ಕನ್ನಡದಲ್ಲಿ ಇವರನ್ನು ನಾಯಕರು ಅಥವಾ ನಾಮಧಾರಿಗಳು ಎಂದು ಕರೆಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವರು ಎಂದು ಕರೆಯಲಾಗುತ್ತದೆ.

ದೀವರು
ಹಾಲಕ್ಕಿ ಮಹಿಳೆಯರು

ನಾಡೋರ ಕನ್ನಡ: ಉತ್ತರಕನ್ನಡದಲ್ಲಿ ವಾಸವಾಗಿರುವ ʼನಾಡವರುʼ ಮಾತನಾಡುವ ಕನ್ನಡ ನಾಡೋರ ಕನ್ನಡ. ಕೃಷಿ ಕಾರ್ಮಿಕರಾಗಿರುವ ಇವರು ಅಂಕೋಲಾ, ಕುಮಟದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ.

ಹವ್ಯಕ ಕನ್ನಡ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲಸಿರುವ ಹವ್ಯಕ ಬ್ರಾಹ್ಮಣರ ಆಡುಭಾಷೆ ʼಹವ್ಯಕ ಕನ್ನಡʼ. ಇದು ಕನ್ನಡದ ಉಪಭಾಷೆಯಾಗಿದ್ದರೂ ಇದನ್ನಾಡುವ ಜನ ಹವ್ಯಕ ಕನ್ನಡ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಭಾಷೆಗೆ ತನ್ನದೇ ಆದ ಲಿಪಿ ಇಲ್ಲ.

ಅರೆಭಾಷೆ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಒಕ್ಕಲಿಗರು ಅಂದರೆ ಗೌಡರ ಮನೆ ಭಾಷೆ ಗೌಡ ಕನ್ನಡ ಅಥವಾ ಅರೆಭಾಷೆ. ದಕ್ಷಿಣ ಕನ್ನಡದ ಒಕ್ಕಲಿಗರಿಗೆ ಎರಡು ಮನೆ ಭಾಷೆ ಇರುವುದು ವಿಶೇಷ. ಕೊಡಗಿನ ಗಡಿ ಪ್ರದೇಶ ಸಂಪಾಜೆಯಿಂದ ಶುರುವಾಗಿ, ಪಂಜ- ಸುಬ್ರಹ್ಮಣ್ಯದವರೆಗೂ ಅರೆಭಾಷಿಕ ಗೌಡರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಸರಗೋಡು ಗಡಿಯಂಚಿನ ಗೌಡರು, ಮಂಗಳೂರು, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ತುಳು ಭಾಷಿಕ ಗೌಡರು ಹೆಚ್ಚು ಇದ್ದಾರೆ. ಅರೆಭಾಷೆಗೊಂದು ಸಾಹಿತ್ಯ ಅಕಾಡೆಮಿಯೂ ಇದೆ.

ಅರೆಭಾಷೆ ಗೌಡರು
ಬೇಕಲ ಕೋಟೆ

ಕೋಟ ಕನ್ನಡ: ಕೋಟ ಬ್ರಾಹ್ಮಣರ ಆಡುನುಡಿಯನ್ನು ʼಕೋಟ ಕನ್ನಡʼ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡದ ಕೋಟ, ಕಾಸರಗೋಡಿನ ಬನ್ನೂರು, ದೇಶಮಂಗಲ, ಕುಂಬಳೆ, ಬೇಳ ಮುಂತಾದೆಡೆ ಕೋಟ ಬ್ರಾಹ್ಮಣರು ಹೆಚ್ಚಾಗಿ ನೆಲೆಸಿದ್ದಾರೆ.

ಕೋಟೆ ಕನ್ನಡ: ಕೋಟೆ ಕ್ಷತ್ರಿಯರು ಮಾತನಾಡುವ ಕನ್ನಡವೇ ʼಕೋಟೆ ಕನ್ನಡ’. ಕಾಸರಗೋಡು, ಪೊಳಲಿ, ಚಂದ್ರಗಿರಿ, ಪನಿಯಾಲ, ಬೇಕಲ, ಚಿತ್ತಾರಿ ಪ್ರದೇಶಗಳಲ್ಲಿ ಕೋಟ ಬ್ರಾಹ್ಮಣರು ಹೆಚ್ಚಾಗಿ ನೆಲೆಸಿದ್ದಾರೆ. ವೆಂಕಟಪ್ಪ ನಾಯಕ ಮತ್ತು ಶಿವಪ್ಪ ನಾಯಕರ ಕೋಟೆಗಳನ್ನು ಕಾಯುವುದು ಇವರ ಮುಖ್ಯ ಕಾಯಕವಾಗಿತ್ತು. ಹೀಗಾಗಿ ಇವರಿಗೆ ಕೋಟೆ ಕ್ಷತ್ರಿಯರು ಎಂಬ ನಾಮಧೇಯ ಬಂದಿದೆ.

ಕುಂದ ಕನ್ನಡ: ಉಡುಪಿ ಜಿಲ್ಲೆಯಲ್ಲೇ ಇರುವ ಕುಂದಾಪುರ, ಬೈಂದೂರು, ಬ್ರಹ್ಮಾವರ, ಮೂಲ್ಕಿಯ ಜನರು ಮಾತನಾಡುವ ಕನ್ನಡವನ್ನು ʼಕುಂದಾಪ್ರ ಕನ್ನಡʼ ಅಥವಾ ʼಕುಂದ ಕನ್ನಡʼ ಎಂದು ಕರೆಯಲಾಗುತ್ತದೆ. ಅತಿ ಕಡಿಮೆ ಒತ್ತಕ್ಷರಗಳನ್ನು ಕುಂದ ಕನ್ನಡದಲ್ಲಿ ಬಳಸಲಾಗುತ್ತದೆ.

ಕುರುಬ ಕನ್ನಡ: ಕೇರಳದ ವೈನಾಡು (ಮಲಬಾರು), ತಮಿಳು ನಾಡಿನ ನೀಲಗಿರಿ, ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುರುಬ ಎಂಬ ಆದಿವಾಸಿ ಜನಾಂಗದವರು ಈ ಭಾಷೆಯನ್ನಾಡುತ್ತಾರೆ. ಈ ಭಾಷೆಯ ಮೇಲೆ ತಮಿಳು ಮತ್ತು ಮಲೆಯಾಳಂ ಭಾಷೆಗಳು ಪ್ರಭಾವ ಬೀರಿದ್ದು ಕೆಲವರು ಭಾಷಾತಜ್ಞರು ಕುರುಬ ಭಾಷೆಯನ್ನು ಕನ್ನಡದ ಉಪಭಾಷೆ ಎಂದೂ ಮತ್ತೆ ಕೆಲವರು ತಮಿಳಿನ ಉಪಭಾಷೆ ಎಂದೂ ಅನುಮಾನಿಸಿದ್ದಾರೆ.

ಅನ್ಯ ಮಾತೃಭಾಷಿಗರು
ಕರ್ನಾಟಕದವರೇ ಆಗಿದ್ದು ನೆರೆರಾಜ್ಯದ ಭಾಷೆಯನ್ನು ತಮ್ಮ ಮಾತೃಭಾಷೆಯನ್ನಾಗಿ ಮಾಡಿಕೊಂಡವರ ದೊಡ್ಡ ಸಮೂಹವೇ ನಮ್ಮಲ್ಲಿದೆ. ರಾಜ್ಯದ ಗಡಿಭಾಗಗಳಲ್ಲಿ ಎರಡೂ ರಾಜ್ಯಗಳ ಮಾತೃಭಾಷೆಯನ್ನು ಆಡುವ ಜನರು ಬೆರೆತು ಬದುಕುತ್ತಿದ್ದಾರೆ. ವ್ಯಾವಹಾರಿಕವಾಗಿಯೂ ಎರಡು ಭಾಷೆಗಳು ಚಾಲ್ತಿಯಲ್ಲಿವೆ.

ತೆಲುಗು: ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳು. ಗಡಿ ಭಾಗದ ಈ ಜಿಲ್ಲೆಗಳಲ್ಲಿ ಹೆಚ್ಚು ತೆಲುಗು ಭಾಷಿಕರಿದ್ದಾರೆ. ವ್ಯಾವಹಾರಿಕ ಭಾಷೆಯಾಗಿ ಕನ್ನಡದ ಜೊತೆಗೆ ತೆಲುಗು ಕೂಡ ಬಳಕೆಯಲ್ಲಿದೆ. ವಿಜಯನಗರ ಅರಸರ ಆಗಮನಕ್ಕೆ ಮುನ್ನ, ತೆಲುಗು ಮತ್ತು ಕನ್ನಡಕ್ಕೆ ಸಾಮಾನ್ಯ ಲಿಪಿಯಿತ್ತು. ಈಗ ಲಿಪಿಗಳು ಬೇರೆ ಬೇರೆಯಾದರೂ ಎರಡರ ನಡುವೆ ಅನೇಕ ಸಾಮ್ಯಗಳಿವೆ.

ಮರಾಠಿ: ಬೆಳಗಾವಿ, ವಿಜಯಪುರ, ಕಲಬುರ್ಗಿ, ಬೀದರ್‌ ಜಿಲ್ಲೆಗಳು ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿವೆ. ಇಲ್ಲಿ ಮರಾಠಿ ಭಾಷಿಕರ ಪ್ರಮಾಣ ಸಾಕಷ್ಟಿದೆ. ಗಡಿ ಭಾಗಗಳ ಎರಡೂ ಕಡೆ ರಾಜ್ಯ ಬದಲಾಗುತ್ತದೆಯೇ ಹೊರತು ಮಾತೃಭಾಷೆ -ಸಂಸ್ಕೃತಿಗಳು ಬದಲಾಗುವುದಿಲ್ಲ.  ಶತಮಾನಗಳಿಂದ ಮರಾಠಿ ಮತ್ತು ಕನ್ನಡ ಭಾಷೆಗಳು ಪರಸ್ಪರ ಅತ್ಯಂತ ನಿಕಟವಾಗಿವೆ. ಕರ್ನಾಟಕದಲ್ಲಿ ಮಾತನಾಡುವ ಮರಾಠಿ ಭಾಷೆಯ ಭಾಷಾ ವೈಚಿತ್ರ್ಯಗಳು ಗಮನಾರ್ಹವಾಗಿದ್ದು ಕನ್ನಡ ಪದ ಹಾಗೂ ನುಡಿಗಟ್ಟುಗಳ ಬಳಕೆಯು ಪ್ರಚಲಿತವಾಗಿದೆ.

ತಮಿಳು: ಇನ್ನು ಕೋಲಾರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ತಮಿಳುನಾಡಿಗೆ ಹೊಂದಿಕೊಂಡಿವೆ. ಹಾಗಾಗಿ ಈ ಜಿಲ್ಲೆಗಳಲ್ಲಿ ತಮಿಳು ಮಾತೃ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡ ಹಾಗೂ ತಮಿಳು ಭಾಷೆಗಳೆರಡೂ ಪ್ರಾಚೀನ ದ್ರಾವಿಡ ಭಾಷಾ ಮೂಲದಿಂದ ಹುಟ್ಟಿವೆ. ಬೆಂಗಳೂರು, ಮೈಸೂರು ಭಾಗಗಳಲ್ಲಿ ತಮಿಳರ ಸಂಖ್ಯೆ ಹೆಚ್ಚು.

ಮಲಯಾಳಂ: ಮೈಸೂರು, ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಗಳು ಕೇರಳದೊಂದಿಗೆ ಗಡಿ ಹಂಚಿಕೊಂಡಿವೆ. ಹಾಗಾಗಿ ಇಲ್ಲಿ ಮಲಯಾಳಂ ಭಾಷಿಗರು ಹೆಚ್ಚು ಇದ್ದಾರೆ. ಮೈಸೂರು ಮತ್ತು ಕೊಡಗಿನಲ್ಲಿ ಕ್ರೈಸ್ತರ ಮನೆ ಮಾತು ಮಲಯಾಳಂ.

ಕೊಂಕಣಿ ಮಹಿಳೆಯರು ಚೂಡಿ ಹಬ್ಬ

ಕೊಂಕಣಿ: ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳು ಗೋವಾ ರಾಜ್ಯದ ಗಡಿಯಲ್ಲಿರುವ ಕಾರಣ ಅಲ್ಲಿ ಕೊಂಕಣಿ ಭಾಷೆಯ ಪ್ರಭಾವ ಕಾಣಬಹುದು. ಆದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಕಣಿ ಭಾಷಿಗರು ಹೆಚ್ಚು ಇದ್ದಾರೆ. ಗೋವಾದಲ್ಲಿ ಪೋರ್ಚುಗೀಸರು ಪ್ರಾಬಲ್ಯ ಸಾಧಿಸಿದ್ದ ಕಾಲದಲ್ಲಿ ಮತಾಂತರಕ್ಕೆ ಹೆದರಿ ಉಡುಪಿ ದಕ್ಷಿಣ ಕನ್ನಡಗಳಿಗೆ ವಲಸೆ ಬಂದವರು ಈ ಕೊಂಕಣಿಗಳು. ಕರಾವಳಿಯ ಕೊಂಕಣಿ ಭಾಷಿಕರಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ; ಅಂದ್ರೆ ಪ್ರಭು ಶೆಣೈ, ಪೈ, ಕಾಮತ್‌ ಉಪನಾಮಗಳನ್ನು ಹೊಂದಿದವರು ಮತ್ತು ಕ್ರೈಸ್ತರೂ ಸೇರಿದ್ದಾರೆ. ಅಷ್ಟೇ ಅಲ್ಲ ಉತ್ತರ ಕನ್ನಡದ ಕುಡುಬಿಗಳು, ಕಾರವಾರದ ನವಾಯಿತಿಗಳೂ ಸೇರಿದ್ದಾರೆ.

ದಖ್ಖನಿ ಉರ್ದು: ಕನ್ನಡದ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಜನ ಮಾತನಾಡುವ ಭಾಷೆ ಉರ್ದು. ಇದು ರಾಜ್ಯದ ಬಹುಸಂಖ್ಯಾತ ಮುಸಲ್ಮಾನರ ಮಾತೃ ಭಾಷೆಯೂ ಹೌದು. ಆದರೆ, ಕರ್ನಾಟಕದ ಮುಸ್ಲೀಮರು ಮಾತನಾಡುವ ಭಾಷೆಯನ್ನು ದಖ್ಖನಿ ಉರ್ದು ಎಂದು ಕರೆಯುತ್ತಾರೆ. ಕ್ರಿ. ಶ. 1295 ಮತ್ತು 1316ರ ಅವಧಿಯಲ್ಲಿ ಅಲ್ಲಾವುದ್ದೀನ್‌ ಖಿಲ್ಜಿಯ ದೇವಗಿರಿಯ ಆಕ್ರಮಣದಿಂದ ದಖ್ಖನಿ ಭಾಷೆಯ ಇತಿಹಾಸ ಆರಂಭವಾಗುತ್ತದೆ. ನಂತರ ಮೊಹಮ್ಮದ್‌ ಬಿನ್‌ ತುಘಲಕ್‌ ದೇವಗಿರಿಯನ್ನು ಆಕ್ರಮಿಸಿ ದೌಲತಾಬಾದ್‌ ಎಂದು ಮರುನಾಮಕರಣ ಮಾಡಿ ದೆಹಲಿ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳನ್ನು ದಕ್ಷಿಣ ಭಾರತಕ್ಕೆ ಕರೆತರುತ್ತಾನೆ. ಹಾಗೆ ಬಂದವರು ಕನ್ನಡ, ಮರಾಠಿ, ತೆಲುಗು ಭಾಷಿಕರ ಮಧ್ಯೆ ನೆಲೆಗೊಂಡ ಪರಿಣಾಮ ಉರ್ದು ದಖ್ಖನಿಯ ರೂಪು ಪಡೆಯಿತು.

ಮನೆ ಭಾಷೆ ಬೇರೆಯಾಗಿದ್ದರೂ ಇವರೆಲ್ಲರೂ ಅಖಂಡ ಕರ್ನಾಟಕದ ಪ್ರಜೆಗಳು. ಕನ್ನಡವೊಂದೇ ಕರ್ನಾಟಕದ ಜನರ ಮಾತೃಭಾಷೆಯೇ ಎಂಬ ಪ್ರಶ್ನೆಯನ್ನು ಈ ವಿಡಿಯೋದ ಆರಂಭದಲ್ಲೇ ಎತ್ತಿದ್ದು ಈ ಕಾರಣಕ್ಕಾಗಿಯೇ. ಹಲವು ಭಾಷೆ, ಸಂಸ್ಕೃತಿ, ವಿಭಿನ್ನ ಆಚಾರ -ವಿಚಾರ, ಉಡುಗೆ, ಆಹಾರ ಪದ್ಧತಿಗಳ ಜನ ಸೇರಿ ಕರ್ನಾಟಕ ಬಹುತ್ವದ ನಾಡು ಎನಿಸಿದೆ.

ಕರ್ನಾಟಕದಲ್ಲಿಯೇ ಹುಟ್ಟಿ -ಬೆಳೆದು -ಅರಳಿದ ಭಾಷೆಗಳು
ಇದುವರೆಗೆ ನಮ್ಮ ರಾಜ್ಯದವರೇ ಆಗಿದ್ದು ಬೇರೆ ರಾಜ್ಯದ ಗಡಿ ಭಾಗಗಳಲ್ಲಿ ವಾಸ ಮಾಡುತ್ತಿರುವ, ಆದರೆ ಬೇರೆ ರಾಜ್ಯದ ಪ್ರಧಾನ ಭಾಷೆಯನ್ನು ಮಾತೃಭಾಷೆಯನ್ನಾಗಿ ಮಾಡಿಕೊಂಡವರ ವಿಚಾರವಾದರೆ, ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಅರಳಿದ ತುಳು, ಕೊಡವ, ಬ್ಯಾರಿ ಭಾಷೆಗಳನ್ನು ಪ್ರಧಾನವಾಗಿ ಮನೆಯಲ್ಲೂ, ವ್ಯವಹಾರದಲ್ಲೂ ಬಳಸುವ ಪ್ರದೇಶಗಳಿವೆ.

ತುಳುನಾಡಿನ ಕರಾವಳಿ

ತುಳು ಭಾಷೆ: ನೀವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಓಡಾಡಿದರೆ ಸದಾ ನಿಮ್ಮ ಕಿವಿಗೆ ಬೀಳುವುದು ಕನ್ನಡಕ್ಕಿಂತ ಹೆಚ್ಚಾಗಿ ತುಳು ಭಾಷೆ. ದೇವಸ್ಥಾನ, ಬಸ್‌ ನೊಳಗೆ, ಬೀದಿಯಲ್ಲಿ, ಮಳಿಗೆ -ಮಾಲ್‌ ಎಲ್ಲಿ ಹೋದರೂ ಕೇಳಿಬರುವ ಭಾಷೆಯಿದು. ತುಳು ಭಾಷೆಯು, ದ್ರಾವಿಡ ಕುಲಕ್ಕೆ ಸೇರಿದ ಪುರಾತನ ಭಾಷೆಗಳಲ್ಲಿ ಒಂದು. ತುಳುವ ಜನರನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಬಹುತೇಕ, ಕೊಂಚಮಟ್ಟಿಗೆ ಕೊಡಗಿನಲ್ಲೂ ಕಾಣಬಹುದು. ಉತ್ತರದಲ್ಲಿ ಕಲ್ಯಾಣಪುರ ನದಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ ಹಾಗೂ ದಕ್ಷಿಣದಲ್ಲಿ ಪಯಸ್ವಿನಿ / ಚಂದ್ರಗಿರಿ ನದಿಯಿಂದ ತುಳುನಾಡು ಆವೃತವಾಗಿದೆ. ಬಂಟರು, ಬಿಲ್ಲವರು, ಮೊಗವೀರರು, ಒಕ್ಕಲಿಗ ಗೌಡರು, ದಲಿತರು ಹಾಗೂ ಶಿವಳ್ಳಿ ಬ್ರಾಹ್ಮಣರು ತುಳು ಭಾಷೆಯನ್ನು ಮಾತನಾಡುತ್ತಾರೆ. ತುಳು ಸಾಹಿತ್ಯ ಅಕಾಡೆಮಿಯೂ ಇದೆ. ಸ್ವಂತ ಲಿಪಿಯೂ ಇದೆ. ಹಾಗಾಗಿಯೇ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಬಹಳ ಕಾಲದ್ದು.

ಕೊಡವರ ಸಾಂಪ್ರದಾಯಿಕ ಉಡುಗೆ

ಕೊಡವ ಭಾಷೆ : ನಾಲ್ಕೇ ತಾಲ್ಲೂಕುಗಳಿರುವ ಪುಟ್ಟ ಜಿಲ್ಲೆ ಕೊಡಗು. ಇಲ್ಲಿನ ಮೂಲ ನಿವಾಸಿಗಳು ಕೊಡವರು. ಅವರ ಮಾತೃಭಾಷೆ ಕೊಡವ ಭಾಷೆ. ಮಲಬಾರ್ ಪ್ರಾಂತ್ಯದೊಂದಿಗೆ ಇದ್ದ ಅದರ ವ್ಯಾಪಾರಿ ಸಂಬಂಧದಿಂದಾಗಿ ಕೊಡಗಿನಲ್ಲಿ ಮಲಯಾಳಂನ ಪ್ರಭಾವವನ್ನು ಕಾಣಬಹುದು. ಪ್ರತ್ಯೇಕ ರಾಜ್ಯವಾಗಿದ್ದ ಕೊಡಗಿನ ಆಡಳಿತ ಕಾರ್ಯಭಾರವನ್ನು ವಹಿಸಿಕೊಂಡ ಹಾಲೇರಿ ರಾಜವಂಶವು, ಕನ್ನಡವನ್ನು ಆಡಳಿತ ಭಾಷೆಯಾಗಿ ಅಳವಡಿಸಿಕೊಂಡಿತು. 230 ವರ್ಷಗಳ ಕನ್ನಡ ಪ್ರಭಾವವು, ಮೂಲ ಭಾಷೆಯ ಹಲವಾರು ಆಯಾಮಗಳನ್ನು ಬದಲಾಯಿಸಿತು; ಅದರ ಪೈಕಿ, ಬರವಣಿಗೆಗಾಗಿ ಕನ್ನಡ ಲಿಪಿಯನ್ನು ಅಳವಡಿಸಿಕೊಂಡಿರುವುದು ಅತ್ಯಂತ ಮುಖ್ಯವಾದ ಬೆಳವಣಿಗೆ. ಇತ್ತೀಚೆಗೆ ಸ್ವಂತ ಲಿಪಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಬ್ಯಾರಿ ಭಾಷೆ: ಕೊಡಗು, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿರುವ ಮುಸ್ಲಿಮರು ಆಡುವ ನುಡಿ ಬ್ಯಾರಿ ಭಾಷೆ. ಬ್ಯಾರಿ ಅಂದ್ರೆ ತುಳುವಿನಲ್ಲಿ ʼವ್ಯಾಪಾರಿʼ ಎಂದು ಅರ್ಥ. ಮೂಲದಲ್ಲಿ ಕೇರಳದ ಮಲಬಾರಿನಿಂದ ವ್ಯಾಪಾರಕ್ಕೆಂದು ಬಂದ ಮುಸ್ಲಿಮರು ಸ್ಥಳೀಯ ತುಳುವರೊಂದಿಗೆ ವ್ಯಾವಹಾರಿಕವಾಗಿ ಹೆಚ್ಚು ಬೆರೆತಿರುವ ಕಾರಣ ಮಲಯಾಳಂ ಜೊತೆ ಹೆಚ್ಚು ತುಳು ಮತ್ತು ಕನ್ನಡದೊಂದಿಗೆ ಅರಬ್ಬೀ, ಮಲಯಾಳ ಪದಗಳು ಸೇರಿಕೊಂಡು ಬ್ಯಾರಿ ಭಾಷೆ ರೂಪುಗೊಂಡಿದೆ. ರಾಜ್ಯದ ಕರಾವಳಿ ಮುಸ್ಲಿಮರು ಮಾತ್ರ ಈ ಭಾಷೆಯನ್ನು ಆಡುತ್ತಾರೆ. ಜನಾಂಗದ ಕಸುಬಿನ ಆಧಾರದಲ್ಲಿ ಈ ಹೆಸರು ಬಂದಿದ್ದು ವಿಶೇಷ. “ಬ್ಯಾರಿ ಮಲಯಾಳ”, “ಮಲಾಮೆ ಭಾಷೆ”, “ಮಾಪಿಳ್ಳ ಭಾಷೆ” ಎಂದೂ ಕರೆಯಲಾಗುತ್ತದೆ. ಬ್ಯಾರಿ ಭಾಷೆಯ ಅಭಿವೃದ್ಧಿಗೆಂದೇ ರಾಜ್ಯದಲ್ಲಿ ಬ್ಯಾರಿ ಭಾಷಾ ಅಕಾಡೆಮಿ ಇದೆ.

ಮಂಗಳೂರಿನ ಬ್ಯಾರಿಗಳು

ಕರ್ನಾಟಕದ ಪ್ರಮುಖ ಬುಡಕಟ್ಟು ಭಾಷೆಗಳು
ಸೋಲಿಗ:
ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ಮೈಸೂರು ಜಿಲ್ಲೆಯ, ಹೆಗ್ಗಡದೇವನಕೋಟೆ, ಕಾಕನಕೋಟೆ ಹಾಗೂ ಬೆಂಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಾಸವಾಗಿರುವ ಸೋಲಿಗ ಎಂಬ ಆದಿವಾಸಿ ಜನಾಂಗದವರ ಆಡು ಭಾಷೆ ʼಸೋಲಿಗ ಭಾಷೆʼ.

ಬಡಗ ಭಾಷೆ: ಬಡಗ ಸಮುದಾಯದವರ ಭಾಷೆಯಿದು. ಈ ಭಾಷೆಯನ್ನು ಇತ್ತೀಚೆಗೆ ಕೆಲವು ವಿದ್ವಾಂಸರು ಒಂದು ಸ್ವತಂತ್ರ ದ್ರಾವಿಡ ಭಾಷೆ ಎಂದು ಪರಿಗಣಿಸಿದ್ದಾರೆ. ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸಾಲಾಗಿ ಹಬ್ಬಿರುವ ಮಧುಮಲೈ ಮತ್ತು ನೀಲಗಿರಿಬೆಟ್ಟಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬಡಗರು ಈ ಭಾಷೆಯನ್ನಾಡುವರು

ಸೋಲಿಗರ ಮನೆ
ಕೊರಗ ಕುಟುಂಬ

ಕೊರಗ: ಕೇರಳದ ಕಾಸರಗೋಡಿನಿಂದ ತೊಡಗಿ ದಕ್ಷಿಣ ಕನ್ನಡ, ಉಡುಪಿ, ಭಟ್ಕಳದವರೆಗೂ ಕೊರಗ ಸಮುದಾಯದವರು ವಾಸವಿದ್ದಾರೆ. ಮೂಲತಃ ಕಾಡಿಗರು. ಬೆಟ್ಟ-ಗುಡ್ಡಗಳಲ್ಲಿ ಕಾಡಿನ ಅಂಚಿನಲ್ಲಿ, ಬದುಕುತ್ತಿರುವ ಆದಿವಾಸಿ ಸಮುದಾಯಗಳದ್ದು ಕಾಡಿನ ಸಂಪನ್ಮೂಲಗಳೊಂದಿಗೆ ಹೊಂದಿಕೊಂಡ ಬದುಕು. ಹೊರ ಜಗತ್ತಿಗೆ ಬಂದಾಗ ಇವರು ತುಳು ಭಾಷೆಯನ್ನೇ ಬಳಸುತ್ತಾರೆ. ಕೊರಗರಿಗೆ ಕೊರಗ ನುಡಿಯನ್ನು ಪ್ರತ್ಯೇಕ ದ್ರಾವಿಡ ಭಾಷೆ ಎಂದು 19ನೇ ಶತಮಾನದಲ್ಲಿ ಬ್ರಿಟಿಷ್‌ ಅಧಿಕಾರಿಯಾಗಿದ್ದ ಎಚ್‌ ಎ ಸ್ಟುವರ್ಟ್‌ ಉಲ್ಲೇಖಿಸಿದ್ದಾರೆ. ಕೊರಗ ಭಾಷೆ ತುಳುವಿನ ಒಳನುಡಿಯಾಗಿರದೇ ಪ್ರತ್ಯೇಕ ಭಾಷೆಯಾಗಿರಬೇಕು ಎಂದು ಮೊದಲು ಹೇಳಿದವರು ಡಾ. ಡಿ ಎನ್‌ಎಸ್‌ ಭಟ್‌ ಅವರು.

ಬಂಜಾರ (ಗೋರಬೋಲಿ ) : ಬಂಜಾರರು ಅಥವಾ ಲಂಬಾಣಿಗಳು ಭಾರತದ ಉದ್ದಗಲಕ್ಕೂ ವಾಸವಿದ್ದಾರೆ. ಪ್ರಾದೇಶಿಕವಾಗಿ ಬೇರೆ ಬೇರೆ ಉದ್ಯೋಗಗಲ್ಲಿ ತೊಡಗಿರುವ ಕಾರಣ ಭಿನ್ನ ಹೆಸರುಗಳಿಂದ ಗುರುತಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಲಮಾಣಿ, ಲಂಬಾಣಿ, ಲಂಬಾಡಿ, ಬಂಜಾರ ಮೊದಲಾದ ಹೆಸರಿನಿಂದ ಕರೆಯುತ್ತಾರೆ. ಇವರ ಮಾತೃ ಭಾಷೆ ಗೋರಬೋಲಿ. ಈ ಭಾಷೆಯನ್ನು ಇವರಷ್ಟೇ ಮಾತನಾಡುತ್ತಾರೆ.  ವಿಶೇಷವೆಂದರೆ ಅನ್ಯ ಭಾಷೆಗಳ ಗಾಢ ಪ್ರಭಾವ ಆಗಿದ್ದರೂ ಮೂಲ ಗೋರಬೋಲಿ ಭಾಷೆಯನ್ನು ಇವರು ಸುರಕ್ಷಿತವಾಗಿ ಕಾಪಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಇವರ ಜನಸಂಖ್ಯೆ 35ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಬಂಜಾರ ಮಹಿಳೆ

ಇಷ್ಟೇ ಅಲ್ಲ, ಇರುಳ, ಗೌಳಿ, ಹೊಲಿಯ, ಉರಲಿ, ಯೆರವ , ಪರ್ಧಿ, ದುಂಗ್ರಿ, ಗರಾಸಿಯ, ಪಣಿಯನ್, ಗೊಂಡಿ, ಅರುವು ಇವು ಬುಡಕಟ್ಟು ಸಮುದಾಯಗಳು ತಮ್ಮದೇ ಭಾಷೆಯನ್ನು ಹೊಂದಿವೆ.

ಕರ್ನಾಟಕದ 72ಭಾಷೆಗಳಲ್ಲಿ 50 ಭಾಷೆಗಳು ಬುಡಕಟ್ಟು ಭಾಷೆಗಳಾಗಿವೆ. ಕೆಲವರು ಇವನ್ನು ಒಂದು ಭಾಷೆ ಎಂದು ಒಪ್ಪದೇ ಕನ್ನಡ, ತೆಲುಗು, ತಮಿಳು ಅಥವಾ ಮಲಯಾಳಂ ಭಾಷೆಗಳ ಉಪಭಾಷೆ ಎಂದು ಹೇಳುತ್ತಾರೆ.

ಬಹಳಷ್ಟು ಬುಡಕಟ್ಟು ಭಾಷೆಗಳನ್ನು ಹತ್ತು ಸಾವಿರಕ್ಕೂ ಕಡಿಮೆ ಜನ ಮಾತನಾಡುತ್ತಾರೆ. ಆದ್ದರಿಂದ ಇವನ್ನು ಅಳಿವಿನಂಚಿನಲ್ಲಿರುವ ಭಾಷೆಗಳು ಎಂದು ಪರಿಗಣಿಸಲಾಗಿದೆ. ಈ ಭಾಷೆಗಳಿಗೆ ಬಡವರ ಭಾಷೆ, ಹಿಂದುಳಿದ ಭಾಷೆ ಎಂಬ ಸಾಮಾಜಿಕ ಕಳಂಕ ಅಂಟಿಸಲಾಗಿದೆ. ಹೊಸ ತಲೆಮಾರಿನವರು ಈ ಭಾಷೆಗಳನ್ನು ಬಳಸಲು ಹಿಂಜರಿಯುತ್ತಾರೆ.

ಅಳಿವಿನಂಚಿನ ಭಾಷೆಗಳು
ಕೊರಗ, ಬಡಗ, ಯರವ, ಇರುಳ, ಸೋಲಿಗ, ಗೌಳಿ, ಜೇನುಕುರುಬ ಮತ್ತು ಬೆಟ್ಟಕುರುಬ ಬುಡಕಟ್ಟು ಸಮುದಾಯಗಳು ಮಾತನಾಡುವ ಭಾಷೆಗಳು “ಸಂಭಾವ್ಯವಾಗಿ ಅಳಿವಿನಂಚಿನಲ್ಲಿರುವವು” ಎಂದು ಹೇಳಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಬುಡಕಟ್ಟು ಜನರು ಮಾತನಾಡುವ ಸಿದ್ದಿ ಭಾಷೆ ಮತ್ತು ಅಲೆಮಾರಿ ಬುಡಕಟ್ಟುಗಳ ಹಕ್ಕಿ ಪಿಕ್ಕಿ ಭಾಷೆಯನ್ನು “ತೀವ್ರವಾಗಿ ಅಳಿವಿನಂಚಿನಲ್ಲಿರುವ” ಎಂದು ಗುರುತಿಸಲಾಗಿದೆ.

ಹೆಸರಾಂತ ವಿದ್ವಾಂಸರಾದ ಡಾ ಜಿಎನ್ ದೇವಿ ಅವರ ನೇತೃತ್ವದ “ಪೀಪಲ್ಸ್‌ ಲಿಂಗ್ವಿಸ್ಟಿಕ್‌ ಸರ್ವೆ ಆಫ್‌ ಇಂಡಿಯಾ” ಸಂಸ್ಥೆಯು 10,000 ಕ್ಕಿಂತ ಕಡಿಮೆ ಜನರು ಬಳಸುತ್ತಿರುವಾಗ ಭಾಷೆಯನ್ನು “ಸಂಭಾವ್ಯವಾಗಿ ಅಳಿವಿನಂಚಿನಲ್ಲಿರುವ” ಭಾಷೆ ಎಂದು ವರ್ಗೀಕರಿಸಲಾಗಿದೆ ಎಂದು ಹೇಳಿದೆ. ನಿರ್ದಿಷ್ಟ ಸಮುದಾಯದ ಯುವ ಪೀಳಿಗೆಯಿಂದ ಮಾತನಾಡದ ಭಾಷೆಗಳನ್ನು “ತೀವ್ರವಾಗಿ ಅಳಿವಿನಂಚಿನಲ್ಲಿರುವ” ಭಾಷೆ ಎಂದು ವರ್ಗೀಕರಿಸಲಾಗಿದೆ.
ಕರ್ನಾಟಕದ ಹಲವು ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಸ್ವಂತ ಭಾಷೆಯನ್ನು ಹೊಂದಿವೆ. ಅವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಅವುಗಳ ಸಮೀಕ್ಷೆ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಕನ್ನಡದ ಭಾಷಾ ಪ್ರಭೇದಗಳು
ಕನ್ನಡ ಭಾಷೆಯನ್ನೇ, ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯಲ್ಲಿ ಬಳಸಲಾಗುತ್ತದೆ. ಉಡುಪಿ, ದಕ್ಷಿಣಕನ್ನಡ, ಕಾಸರಗೋಡಿನ ಕನ್ನಡಿಗರು ಪತ್ರಿಕೆ, ಗ್ರಂಥಗಳ ಭಾಷೆಯನ್ನು ಯಥಾವತ್‌ ಬಳಸುತ್ತಾರೆ. ಉಳಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬಳಸುವ ಕನ್ನಡವೇ ಬೇರೆ. ಎಲ್ಲರಿಗೂ ಅವರವರ ನುಡಿಗಟ್ಟೇ ಹೆಚ್ಚು ಎಂಬ ಹೆಮ್ಮೆಯಿದೆ.

ಭಾಷಾ ತಜ್ಞರು ಅವುಗಳನ್ನು ಭಾಷಾ ಪ್ರಭೇದಗಳು ಎಂದು ಕರೆಯುತ್ತಾರೆ. ಮುಖ್ಯವಾಗಿ ಕಲಬುರಗಿ ಕನ್ನಡ, ಧಾರವಾಡ ಕನ್ನಡ, ಮೈಸೂರು ಕನ್ನಡ, ಕರಾವಳಿ ಕನ್ನಡ, ರಾಯಚೂರು ಕನ್ನಡ, ಬಳ್ಳಾರಿ ಕನ್ನಡ, ತುಮಕೂರು ಕನ್ನಡ, ಚಿಕ್ಕಮಗಳೂರು ಕನ್ನಡ, ಬೀದರ್‌ ಕನ್ನಡ ಎಂದು ಗುರುತಿಸಲಾಗುತ್ತದೆ.

ಇಷ್ಟೇ ಅಲ್ಲ, ಇಡೀ ದೇಶದ ಉದ್ದಗಲದ ಜನ ಐಟಿ ಸಿಟಿ ಬೆಂಗಳೂರಿನಲ್ಲಿ ಕಾಣಸಿಗುತ್ತಾರೆ. ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕ್ಕೆ ವ್ಯಾಪಾರ, ಶಿಕ್ಷಣ, ಉದ್ಯೋಗ ಎಂದು ದಶಕಗಳ ಹಿಂದೆಯೇ ಇಲ್ಲಿಗೆ ಬಂದು ನೆಲೆಸಿ ಇಲ್ಲಿಯವರೇ ಆಗಿರುವ ಮಾರ್ವಾಡಿಗಳು, ಬಿಹಾರಿ, ಅಸ್ಸಾಮಿ, ಗುಜರಾತಿ, ನೇಪಾಳಿ, ಟಿಬೆಟಿಯನ್ನರು ಇದ್ದಾರೆ. ಈಶಾನ್ಯ ರಾಜ್ಯದ ಜನರೂ ಕಾಣಸಿಗುತ್ತಾರೆ. ಇಂಗ್ಲಿಷನ್ನು ಮಾತೃಭಾಷೆಯನ್ನಾಗಿ ಮಾಡಿಕೊಂಡವರೂ ಇದ್ದಾರೆ.

ಐಟಿ ಸಂಸ್ಥೆಗಳು ಹೆಚ್ಚಾಗಿ ಇರುವ ಬೆಂಗಳೂರು ನಗರದ ಕೆಲವು ಪ್ರದೇಶಗಳಿಗೆ ಹೋದರೆ ಉತ್ತರ ಭಾರತಕ್ಕೆ ಹೋದ ಅನುಭವವಾಗುತ್ತದೆ. ಇಲ್ಲೇ ಇದ್ದರೂ ಇಲ್ಲಿನ ಜನರೊಂದಿಗೆ ಬೆರೆಯದ ಸಮೂಹವೊಂದಿದೆ. ಆ ಜನರಿಗೂ ಕನ್ನಡದ ಸಂಸ್ಕೃತಿ, ಜನ ಭಾಷೆಯ ಬಗ್ಗೆ ಅರಿವು, ಪ್ರೀತಿ ಮೂಡಿಸುವ ಕೆಲಸ ಕರ್ನಾಟಕ ಮಹೋತ್ಸವ ಸುವರ್ಣ ಮಹೋತ್ಸವ ಆಚರಣೆಯ ಭಾಗವಾಗಬೇಕಿದೆ.

ಆಕರಗ್ರಂಥ : ಕರ್ನಾಟಕದ ಭಾಷೆಗಳು (ಸಂಪಾದಕರು: ಡಾ. ಜಿ ಎನ್‌ ದೇವಿ)

ಹೇಮಾ ವೆಂಕಟ್
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...