ದೌರ್ಜನ್ಯ ನಡೆದು 120 ದಿನ ಕಳೆದರೂ ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ: ಖಾರವಾಗಿ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

Date:

  • 90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸದಿದ್ದರೆ ಆರೋಪಿಗಳಿಗೆ ಜಾಮೀನು ಸಿಗತ್ತೆ
  • ಜಾಮೀನು ಪಡೆದವರಿಗೆ ಕಾನೂನಿನ ಭಯ ಇರತ್ತಾ?: ಸಿಎಂ ಸಿದ್ದರಾಮಯ್ಯ ತರಾಟೆ

ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಮತ್ತು ಜಾತಿ ದೌರ್ಜನ್ಯದ ಕೊಲೆ ಪ್ರಕರಣಗಳಲ್ಲಿ 120 ದಿನ ಕಳೆದರೂ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀಗೇ ಆದರೆ ಎಸ್.ಪಿ, ಡಿಸಿಪಿಗಳನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂಕಿ ಅಂಶಗಳನ್ನು ಮುಂದಿಟ್ಟು ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದರು.

ಕಳೆದ ಐದು ವರ್ಷಗಳಲ್ಲಿ ದಾಖಲಾದ 10,893 ಪ್ರಕರಣಗಳಲ್ಲಿ 1,100 ಪ್ರಕರಣಗಳಲ್ಲಿ 120 ದಿನಗಳಲ್ಲಿಯೂ ಚಾರ್ಜ್‌ ಶೀಟ್‌ ಹಾಕಿಲ್ಲ. ಇದು ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಅಧಿಕಾರಿಗಳ ಅಸಡ್ಡೆಯನ್ನು ತೋರಿಸುತ್ತದೆ. ಇದರಿಂದ ಸಂತ್ರಸ್ತರಿಗೆ ನ್ಯಾಯ ಕೊಡಿಸಿದಂತಾಗುವುದಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಅಡಿಯಲ್ಲಿ 90 ದಿನಗಳೊಳಗೆ ಚಾರ್ಜ್‌ ಶೀಟ್‌ ಹಾಕದಿದ್ದರೆ, ಎಸ್ಸಿ /ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ 60 ದಿನಗಳೊಳಗೆ ಆರೋಪ ಪಟ್ಟಿ ದಾಖಲಾಗದಿದ್ದರೆ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಗುತ್ತದೆ. ಹೀಗೆ ಜಾಮೀನು ಪಡೆದವರಿಗೆ ಕಾನೂನಿನ ಭಯ ಇರುತ್ತದಾ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಭಾರತ ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ: ಸಿಎಂ ಸಿದ್ದರಾಮಯ್ಯ ಅಭಿಮತ

ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್ ಒನ್ ಎನ್ನುವ ಅಭಿಪ್ರಾಯ ಇದೆ. ಆದರೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷೆ ಪ್ರಮಾಣ ಕೇವಲ 3.44% ಇದೆ. ಅಂದರೆ ಪೊಲೀಸ್ ಇಲಾಖೆ ಕಳೆದ ಐದು ವರ್ಷಗಳಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿತ್ತಾ ಎಂದು ಪ್ರಶ್ನಿಸಿ ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇದಕ್ಕೆ ಎಸ್ಪಿ ಹಾಗೂ ಡಿಸಿಪಿಗಳನ್ನು ನೇರವಾಗಿ ಹೊಣೆ ಮಾಡಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಸಿ ಪ್ರಕರಣಗಳ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ & ಐಜಿಗೆ ಸೂಚಿಸಿದರು.

“ರಾಜ್ಯದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆಯಡಿ Conviction rate 3.44% ಇದೆ. ಅಂದರೆ prosecution has failed. ಶಿಕ್ಷೆ ಪ್ರಮಾಣದಲ್ಲಿ ರಾಜ್ಯ ದೇಶದಲ್ಲಿ 21 ನೇ ಸ್ಥಾನದಲ್ಲಿದೆ. ಶಿಕ್ಷೆ ಪ್ರಮಾಣ ಕಡಿಮೆ ಇರುವುದರಿಂದ ಚಾಳಿ ಬಿದ್ದ ಆರೋಪಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ” ಎಂದು ಸೂಚಿಸಿದರು.

“ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗಳಲ್ಲಿ ದೌರ್ಜನ್ಯ ಪ್ರಕರಣಗಳ ಪ್ರಗತಿ ಪರಿಶೀಲನೆ ಮಾಡುವ ಕುರಿತು ಸುತ್ತೋಲೆ ಹೊರಡಿಸುತ್ತೇನೆ. ಜಿಲ್ಲಾಧಿಕಾರಿಗಳೂ ಕಡ್ಡಾಯವಾಗಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಮತ್ತೊಂದು ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾ ಮತ್ತು ತಾಲೂಕು ಕೆಡಿಪಿ ಸಭೆಗಳಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳ ರಿವ್ಯೂ (ಪರಿಶೀಲನೆ) ನಡೆಸದ ಕಾರಣದಿಂದ ಹೀಗಾಗುತ್ತದೆ. ಆದ್ದರಿಂದ ಶಾಸಕರು, ಜಿಲ್ಲಾ ಸಚಿವರು, ಡಿಸಿ-ಎಸ್ಪಿಗಳು ಕಡ್ಡಾಯವಾಗಿ ರಿವ್ಯೂ ಮಾಡಬೇಕು” ಎಂದು ನಿರ್ದೇಶನ ನೀಡಿದರು.

ಸಮನ್ವಯತೆಯಿಂದ ಕೆಲಸ ಮಾಡಿ

“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡುವ ಜತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಸಮಾಜ‌ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು” ಎಂದು ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.

“ತಾಲ್ಲೂಕು, ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಈ ವಿಷಯದ ಕುರಿತು ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ಆಗಬೇಕು. ಚಾರ್ಜ್‌ ಶೀಟ್‌ ಸಲ್ಲಿಕೆಯನ್ನು ಯಾವುದೇ ಕಾರಣಕ್ಕೆ ವಿಳಂಬ ಮಾಡಬಾರದು. ಸಾಕ್ಷ್ಯ ವಿಫಲ ಆಗದಂತೆ ಪೊಲೀಸರು ಹೆಚ್ಚಿನ ಗಮನ ಕೊಡಬೇಕು.
ರಾಜಕಾರಣಿಗಳು ಈ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯ ಪ್ರವೇಶಿಸದೆ ಪೊಲೀಸರಿಗೆ ಸಹಕಾರ ನೀಡಬೇಕು. ಪ್ರತಿ ಪ್ರಕರಣ ದಾಖಲಿಸುವಾಗ ಪೊಲೀಸರು ತಮ್ಮ ವಿವೇಚನೆಯನ್ನು ಬಳಸಬೇಕು. ಚಾರ್ಜ್‌ ಶೀಟ್‌ ಸಲ್ಲಿಕೆ ವಿಳಂಬವಾದರೆ ಆರೋಪಿಗಳು ಜಾಮೀನು ಪಡೆದು ಹೊರಬಂದು ಮತ್ತೊಮ್ಮೆ ಅಪರಾಧ ಎಸಗುವ ಸಾಧ್ಯತೆ ಇರುತ್ತದೆ” ಎಂದು ಎಚ್ಚರಿಸಿದರು.

ಸುಳ್ಳು ಜಾತಿ ಪ್ರಮಾಣ ಪತ್ರ; ಪ್ರತ್ಯೇಕ ಸಭೆ

“ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆಯಲಾಗುವುದು. ಕಾನೂನು ಬಾಹಿರವಾಗಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಯಮಕ್ಕೆ ತಿದ್ದುಪಡಿ ಮಾಡಿ ಈ ಸಮುದಾಯಗಳ ಎಲ್ಲ ಸಚಿವರು, ಸಂಸದರು, ಶಾಸಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಈ ದೌರ್ಜನ್ಯ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಧಿಕಾರಿಗಳು ತಮ್ಮ ಧೋರಣೆಯನ್ನು ಬದಲಿಸಿಕೊಂಡು ಕಾರ್ಯನಿರ್ವಹಿಸಬೇಕು. ಆರು ತಿಂಗಳಿಗೊಮ್ಮೆ ಈ ಸಭೆ ಕರೆಯಬೇಕು” ಎಂದು ತಿಳಿಸಿದರು.

CRE ಸೆಲ್ ಗೆ ಹೆಚ್ಚಿನ ಬಲ

ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (CRE cell) ಬಲ ಪಡಿಸುವ ಕುರಿತು ವರದಿ ಸಿದ್ಧಪಡಿಸಲಾಗಿದ್ದು, ಕಡತವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಸಮಾಜ ಕಲ್ಯಾಣ ಸಚಿವರು ಸಭೆಯಲ್ಲಿ ತಿಳಿಸಿದರು. ಕಳೆದ ಐದು ವರ್ಷಗಳಲ್ಲಿ 53 ಕೊಲೆ ಪ್ರಕರಣಗಳಲ್ಲಿಯೂ ಚಾರ್ಜ್‌ ಶೀಟ್‌ ಹಾಕದಿರುವ ಕುರಿತು ಆಕ್ಷೇಪಿಸಿದ ಮುಖ್ಯಮಂತ್ರಿಗಳು, ಅಂತಹ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸೂಚಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಂ ಮೀಸಲಾತಿ | ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರವಿವರ್ಮ ಕುಮಾರ್

ಮುಸ್ಲಿಂರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಂರಿಗೆ...

ಪೆನ್‌ಡ್ರೈವ್ ಆತಂಕ ಕೊನೆಗೊಳಿಸಿ – ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ; ಸಿಪಿಐಎಂ ಆಗ್ರಹ

"ಕಳೆದ ಎರಡು ಮೂರು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ವಿಚಾರ ಭಾರೀ ಚರ್ಚೆಯಾಗುತ್ತಿದೆ....

ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ ಎಂದ ನಟಿ ಶೃತಿ: ಮಹಿಳಾ ಆಯೋಗದಿಂದ ನೋಟಿಸ್

“ಪ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗೆ...

ಮಸ್ಲಿಮರನ್ನು ಒಬಿಸಿಗೆ ಸೇರಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌: ಮೋದಿಗೆ ದ್ವಾರಕಾನಾಥ್ ಇತಿಹಾಸ ಪಾಠ

"ಒಬಿಸಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಸಂಚನ್ನು ಮೋದಿ ರೂಪಿಸಿದ್ದಾರೆ, ಮಂಡಲ್‌ ಆಯೋಗ...