ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಜಲ ಪ್ರಳಯಗಳೂ ಹೆಚ್ಚಾಗಲಿವೆ ; ನೆಮ್ಮದಿಯ ದಿನಗಳೂ ಮಾಯವಾಗಲಿವೆ

Date:

ಮನುಷ್ಯ ಹುಟ್ಟುವಾಗ ಮಗು, ಯೌವನ, ವೃದ್ಧನಾಗಿ ಹೇಗೆ ಮಣ್ಣು ಸೇರಿಹೋಗುತ್ತಾನೊ ಭೂಮಿಗೂ ಅದೇ ರೀತಿಯ ಹಂತಗಳಿವೆ. ಭೂಮಿಯ ಮೇಲಿನ ಪರಿಸರವನ್ನು ಜತನವಾಗಿ ಕಾಪಾಡಿಕೊಂಡಿದ್ದರೆ ಮನುಷ್ಯನಾದವನು ಇನ್ನಷ್ಟು ದಿನಗಳು ಭೂಮಿಯ ಮೇಲೆ ನೆಮ್ಮದಿಯಾಗಿ ಬಾಳಬಹುದಾಗಿತ್ತು. ಆದರೆ ಈಗ ಕಾಲ ಮಿಂಚಿಹೋಗಿದೆ

ಉತ್ತರದ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಭಾರತದ ನಾಗರಿಕತೆಗಳು ಮತ್ತು ಅಭಿವೃದ್ಧಿಗೆ ಒಂದು ವರದಾನವಾಗಿ ನಿಂತುಕೊಂಡಿವೆ. ಅದೇ ರೀತಿ ಜಗತ್ತಿನ ಅರಣ್ಯಗಳು ಮತ್ತು ನದಿಗಳು ಜನರ ನಾಗರಿಕತೆಗಳನ್ನು ಬೆಳೆಸಿ ಉಳಿಸಿಕೊಂಡು ಬಂದಿವೆ. ಆದರೆ ಜಗತ್ತಿನ ಜನರೆಲ್ಲ ನಿಸರ್ಗದ ಮೇಲೆ ನಡೆಸಿದ ಅನಾಹುತಗಳಿಂದ ಈಗ ನಿಸರ್ಗವೇ ತಿರುಗಿಬಿದ್ದಿದೆ. ಮಾನವನ ದುರಾಸೆಗೆ ಪೆಟ್ಟುಕೊಡುತ್ತಿದೆ. ದುರದೃಷ್ಟಕರ ವಿಷಯವೆಂದರೆ ಮನುಷ್ಯನೀಗ ಹಿಂದಕ್ಕೆ ಹೋಗಲಾಗದೆ, ಬರುವುದೆಲ್ಲವನ್ನೂ ಅನುಭವಿಸಲೇಬೇಕಾಗಿದೆ. 

ಈ ವರ್ಷ ತಡವಾಗಿ ಪ್ರಾರಂಭವಾದ ಮುಂಗಾರು ಮಳೆಯಿಂದ ಉತ್ತರ ಭಾರತದ ರಾಜ್ಯಗಳು ಭೀಕರ ಮಳೆ ಮತ್ತು ಮೇಘಸ್ಫೋಟಗಳಿಂದ ತತ್ತರಿಸಿಹೋಗಿವೆ. ಜಮ್ಮು-ಕ್ಯಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ತಾನಗಳು ಜಲ ಪ್ರಳಯಕ್ಕೆ ಸಿಲುಕಿಕೊಂಡಿವೆ. ಹಿಮಾಲಯದಲ್ಲಿ ಬಿದ್ದ ಅಪಾರ ಮಳೆಯಿಂದ ಯಮುನಾ ನದಿಯ ಉಪನದಿಗಳಲ್ಲಿ ಹರಿದುಬಂದ ನೀರು ದೆಹಲಿಯ ಮೂಲಕ ಹರಿಯುವ ಯಮುನಾ ನದಿಯ ದಡಗಳು ಉಕ್ಕಿಹರಿದು ರಾಷ್ಟ್ರೀಯ ರಾಜಧಾನಿ ತೊಂದರೆಗೆ ಸಿಲುಕಿಕೊಂಡಿದೆ. ಹಿಮಾಚಲದ ಕಣಿವೆಗಳಲ್ಲಿ ಎರಡು ದಿಕ್ಕುಗಳಿಂದ ಎದುರುಬದುರಾಗಿ ಹಾರಿಬಂದು ಡಿಕ್ಕಿ ಹೊಡೆದ ಮೇಘಗಳಿಂದ ಈ ಭೀಕರ ಅನಾಹುತ ಸಂಭವಿಸಿದೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಎಂದಿನಂತೆ ಬಂಗಾಳ ಕೊಲ್ಲಿಯಿಂದ ಎದ್ದುಬರುವ ಮುಂಗಾರು ಮೇಘಗಳು ಆಗ್ನೇಯ ದಿಕ್ಕಿನಲ್ಲಿ ದೆಹಲಿ ಮೇಲಕ್ಕೆ ಚಲಿಸುತ್ತಿದ್ದವು. ಅದೇ ವೇಳೆಗೆ ಯುರೋಪ್ ಕಡೆಯಿಂದ ಬೀಸಿ ಬರುತ್ತಿದ್ದ ಪಶ್ಚಿಮ ವಿಚಲಿತ ಮೇಘಗಳು ಇರಾಕ್-ಇರಾನ್ ಕಡೆಯಿಂದ ಬಂದವು. ಈ ಮೇಘಗಳು ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಬರುವ ಹಿಂಗಾರು ಮಳೆ ಮೇಘಗಳಾಗಿದ್ದು ಈಗ ಮುಂಗಾರು ಮಾರುತಗಳ ಎದುರಿಗೆ ಬಂದು ನಿಂತುಕೊಂಡಿದ್ದು ಯಾಕೋ ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಾಗರಗಳಿಂದ ಚಂಡಮಾರುತಗಳು ಅಕಾಲಿಕವಾಗಿ ಎದ್ದು ಬರುವುದು ನಿಯಮಿತ ಪ್ರಕ್ರಿಯೆ ಆಗಿಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ತಾಪಮಾನ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಅದು ಒಂದಲ್ಲ ಎರಡಲ್ಲ ನೂರಾರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟ/ಮಳೆಯಿಂದ ಉಂಟಾದ ಪ್ರವಾಹದಿಂದ 700 ರಸ್ತೆಗಳು ಪ್ರವಾಹ ಮತ್ತು ಭೂಕುಸಿತದಿಂದ ತೊಂದರೆಗೆ ಸಿಕ್ಕಿಕೊಂಡು ನೂರಾರು ಕಡೆ ರಸ್ತೆಗಳು ಕೊಚ್ಚಿಹೋಗಿವೆ. ಜುಲೈ 9ರಂದು ದೆಹಲಿಯಲ್ಲಿ 153 ಮಿಲಿಮೀಟರ್ ಮಳೆ ಸುರಿದು ಇದು 1982ರ ನಂತರದ ದಾಖಲೆಯ ಮಳೆಯಾಗಿದೆ. ಹಿಮಾಚಲ ಪ್ರದೇಶದಿಂದ ದೆಹಲಿಯವರೆಗೂ ರಸ್ತೆ ಸೇತುವೆಗಳು, ಕಾಡು ಕಣಿವೆಗಳಿಂದ ಮರದ ದಿಮ್ಮಿಗಳು, ಮಹಡಿ ಮನೆಗಳು, ಗುಡಿಗೋಪುರಗಳು, ಕಾರು ಬಸ್ಸುಗಳು ಕೊಚ್ಚಿಕೊಂಡ ಪ್ರವಾಹದಲ್ಲಿ ಹರಿದುಬಂದವು.

ಒಂದೇ ಒಂದು ಸಮಾಧಾನದ ಸಂಗತಿ ಎಂದರೆ ಇಂತಹ ದೊಡ್ಡ ಪ್ರವಾಹದಲ್ಲಿ ಜನರ ಹೆಚ್ಚು ಪ್ರಾಣ ಹಾನಿಯಾಗದಂತೆ ನೋಡಿಕೊಂಡ ನೈಸರ್ಗಿಕ ವಿಪತ್ತು ವಿಭಾಗದವರು ನಡೆಸಿದ ಮುನ್ನೆಚ್ಚರಿಕೆ ಮೆಚ್ಚುವಂತದ್ದಾಗಿದೆ. ಪ್ರತಿವರ್ಷ ಇದೇ ಕಾಲದಲ್ಲಿ ಚಾರ್‌ಧಾಮ್‌ಗೆ ಹೋಗುವ ಯಾತ್ರಿಕರು ಈ ಅನಾಹುತದಲ್ಲಿ ಎಲ್ಲೆಂದರಲ್ಲಿ ಸಿಕ್ಕಿಕೊಂಡಿದ್ದರು. ಗಂಗಾನದಿ ಹುಟ್ಟುವ ಗಂಗೋತ್ರಿ, ಯಮನಾನದಿ ಹುಟ್ಟುವ ಯಮನೋತ್ರಿ, ಕೇದಾರನಾಥ್ ಮತ್ತು ಬದ್ರಿನಾಥ್ ಇವೇ ನಾಲ್ಕು ಧಾಮ್‌ಗಳು. 

ಇದನ್ನು ಓದಿದ್ದೀರಾ?: 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಇಲ್ಲ: ಬಸವಳಿದ ರಾಜ್ಯ ಬಿಜೆಪಿ; ಆಸ್ಥೆ ತೋರದ ಮೋದಿ-ಶಾ  

ಹತ್ತು ವರ್ಷಗಳ ಹಿಂದೆ 2013 ಜೂನ್ 16 ರಂದು ಇದೇ ಕಾಲದಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ಮೇಘಸ್ಫೋಟದ ವಿನಾಶಕಾರಿ ಪ್ರವಾಹ/ಭೂಕುಸಿತದಿಂದ ಸಾವಿರಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿ 6054 ಜನರು ಪ್ರಾಣ ಕಳೆದುಕೊಂಡಿದ್ದರು. ಕಳೆದ ಎರಡು ದಶಕದಲ್ಲಿ ಈ ವಲಯದಲ್ಲಿ ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಚಾರ್‌ಧಾಮ್ ಸಂಪರ್ಕಿಸುವ ರಸ್ತೆಗಳು, ಅಣೆಕಟ್ಟುಗಳು ಮತ್ತು ರಸ್ತೆಗಳ ನಿರ್ಮಾಣದಿಂದ ಪ್ರವಾಹಗಳು ಹೆಚ್ಚಾಗಿವೆ ಎನ್ನಲಾಗಿದೆ. ಜೊತೆಗೆ ಜನಸಂಖ್ಯೆ ಹೆಚ್ಚಾಗಿ ವಸತಿ ಮತ್ತು ಕೃಷಿಯ ಚಟುವಟಿಕೆಗಳು ತೀವ್ರಗೊಂಡು ಈ ವಲಯ ದುರ್ಬಲಗೊಂಡಿದೆ. ಸೇತುವೆಗಳು ಮತ್ತು ರಸ್ತೆಗಳಿಂದ ಸುಮಾರು 3 ಲಕ್ಷ ಯಾತ್ರಿಗಳು ಮತ್ತು ಪ್ರವಾಸಿಗರು ಚಾರ್‌ಧಾಮ್ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದರು. ಇವರನ್ನು ಹೊರತರಬೇಕಾದರೆ ಭಾರತೀಯ ವಾಯುಪಡೆ, ವಾಯುಸೇನೆ ಮತ್ತು ಅರೆಸೈನಿಕ ಪಡೆಗಳು ಹರಸಾಹಸ ಮಾಡಬೇಕಾಯಿತು. ಪ್ರವಾಹ ಪೀಡಿತ ಪ್ರದೇಶಗಳಿಂದ 1,10,000 ಜನರನ್ನು ಸ್ಥಳಾಂತರಿಸಲಾಗಿತ್ತು. ಈ ವರ್ಷದ ಪ್ರವಾಹ ಎಷ್ಟು ಹಾನಿ ಮಾಡಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.      

ಇಷ್ಟಕ್ಕೂ ವಿಪರೀತ ಮಳೆ-ಮೇಘಸ್ಫೋಟ, ಪ್ರವಾಹ, ಭೂಕುಸಿತಗಳು ಏಕೆ ಘಟಿಸುತ್ತವೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಹೊರಟರೆ, ವಿಭಿನ್ನ ಸಂದರ್ಭಗಳು ಪ್ರವಾಹಕ್ಕೆ ಕಾರಣವಾಗುತ್ತವೆ. ಭಾರಿ ಮಳೆ/ಮೇಘಸ್ಫೋಟ, ಸಾಗರಗಳಲ್ಲಿ ಉಂಟಾಗುವ ಚಂಡಮಾರುತಗಳು, ಕರಗುತ್ತಿರುವ ಹಿಮ ಮತ್ತು ಹಿಮಗಡ್ಡೆಗಳು, ಐಸ್‌ಗಡ್ಡೆಗಳು ಜಾಮ್ ಆಗುವುದು, ಅಣೆಕಟ್ಟೆಗಳು ಉಕ್ಕಿಹರಿಯುವುದು ಇಲ್ಲ ಹೊಡೆದು ಹೋಗುವುದರಿಂದ ಪ್ರವಾಹಗಳು ಉಂಟಾಗುತ್ತವೆ. ನದಿಗಳ ಸಮೀಪವಿರುವ ನಗರಗಳು ಯಾವಾಗಲೂ ಪ್ರವಾಹದ ಅಪಾಯದಲ್ಲಿರುತ್ತವೆ. ಸರಿಯಾಗಿ ಯೋಜನೆಗಳನ್ನು ಮಾಡದ ತಗ್ಗು ಪ್ರದೇಶಗಳ ನಗರಗಳಲ್ಲಿ ಪ್ರವಾಹಗಳು ಉಂಟಾಗುತ್ತವೆ. ಮುಂಬೈ ಇದಕ್ಕೆ ಒಳ್ಳೆ ಉದಾಹರಣೆಯಾಗಿದೆ.

ಹಲವಾರು ವಿಭಿನ್ನ ಹವಾಮಾನ ಪರಿಸ್ಥಿತಿಗಳಿಂದ ಒಂದು ಪ್ರದೇಶದಲ್ಲಿ ದಿಢೀರನೆ ಸುರಿಯುವ ಮಳೆ ಪ್ರವಾಹಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಬೇಸಿಗೆ ಮತ್ತು ಶರತ್ಕಾಲದಲ್ಲಿ ಉಷ್ಣವಲಯ ಮತ್ತು ಅರೆಉಷ್ಣವಲಯ ಸಾಗರಗಳಲ್ಲಿ ಚಂಡಮಾರುತಗಳು ರೂಪುಗೊಳ್ಳುತ್ತವೆ. ಚಂಡಮಾರುತಗಳು ಅಟ್ಲಾಂಟಿಕ್ ಮಹಾಸಾಗರ ಅಥವಾ ಪೆಸಿಫಿಕ್ ಮಹಾಸಾಗರದ ವಾಯವ್ಯ ಭಾಗದಲ್ಲಿ ಕಾಣಿಸಿಕೊಂಡು ಒಂದು ನಿರ್ದಿಷ್ಟ ವೇಗ ಅಥವಾ ತೀವ್ರತೆಯನ್ನು ಪಡೆದುಕೊಂಡಾಗ ಅವುಗಳನ್ನು ಚಂಡಮಾರುತಗಳು ಎಂದು ಕರೆಯಲಾಗುತ್ತದೆ. ಉಷ್ಣವಲಯದಲ್ಲಿ ರೂಪುಗೊಳ್ಳುವ ಚಂಡಮಾರುತಗಳು ಭಾರೀ ಪ್ರಮಾಣದ ಮಳೆಯನ್ನು ಉಂಟುಮಾಡುತ್ತವೆ. ಚಂಡಮಾರುತಗಳು ಸಾಗರದಿಂದ ನೆಲ ತಲುಪಿದಾಗ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗುತ್ತವೆ.

ಮತ್ತೆ ಇದಕ್ಕೆಲ್ಲ ಕಾರಣವೆಂದರೆ ಅರಣ್ಯಗಳ ಮಾರಣಹೋಮ, ಬೆಟ್ಟಗುಡ್ಡಗಳನ್ನು ನೆಲಸಮ ಮಾಡುತ್ತಿರುವುದು, ಹೇರಳ ಗಣಿಗಾರಿಕೆ, ಅನಿಲ-ಇಂಧನ ಹೊರತೆಗೆಯುವಿಕೆ, ಅಂತರ್ಜಲ ಸವಕಳಿ, ನದಿಪಾತ್ರಗಳಲ್ಲಿ ಮರಳು ತೆಗೆಯುವುದು, ಭಾರೀ ಅಣೆಕಟ್ಟುಗಳು ಮತ್ತು ರಸ್ತೆಗಳ ನಿರ್ಮಾಣ, ಬೆಟ್ಟಕಣಿವೆಗಳನ್ನು ಕತ್ತರಿಸಿ ವಸತಿಗಳನ್ನು ನಿರ್ಮಾಣ ಮಾಡುವುದು -ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಪ್ರತಿಯೊಂದು ಕೆಲಸವೂ ನಿಸರ್ಗದ ವಿರುದ್ಧ ನಡೆಯುವ ಕೆಲಸವೇ ಆಗಿದೆ. ಇನ್ನು ಸಾಗರಗಳಿಗೆ ತುಂಬುವ ಪ್ಲಾಸ್ಟಿಕ್ ತ್ಯಾಜ್ಯ, ಈ-ತ್ಯಾಜ್ಯ, ಹಡಗುಗಳಿಂದ ಸೋರುವ ಇಂಧನ, ನಗರಗಳ ಚರಂಡಿ ನೀರು, ಕಸ ಇವೆಲ್ಲವೂ ಸಾಗರಗಳನ್ನು ಸೇರಿ ಸಮುದ್ರಗಳು ಪ್ರಕ್ಷುಬ್ದತೆಯಿಂದ ನರಳುತ್ತಿವೆ. ವಾಹನಗಳು ಇನ್ನಿತರ ಮೂಲಗಳಿಂದ ಬಿಡುಗಡೆಯಾಗುವ ಹೇರಳ ಇಂಗಾಲ ಡೈಆಕ್ಸೈಡ್‌ಅನ್ನು ಸಾಗರಗಳು ಹೀರಿಕೊಂಡು ಸಾಗರಗಳ ತಾಪಮಾನ ಏರುತ್ತಿದೆ. ಒಟ್ಟಾರೆ ಈ ಎಲ್ಲಾ ಚಟುವಟಿಕೆಗಳಿಂದ ಸಾಗರಗಳ ತಾಪಮಾನ ಹೆಚ್ಚಾಗುತ್ತಿದೆ. ಫಲಿತಾಂಶ ಅಕಾಲಿಕ ಚಂಡಮಾರುಗಳು ಸಾಗರಗಳಿಂದ ಎದ್ದುಬರುತ್ತಿವೆ. ಅರಣ್ಯಗಳು ಹೊತ್ತಿ ಉರಿಯುತ್ತಿವೆ. ಇದಕ್ಕೆಲ್ಲ ಮೂಲ ಕಾರಣವೆಂದರೆ ಜನಸಂಖ್ಯೆಯ ಏರಿಕೆ ಮತ್ತು ನಿಸರ್ಗದಲ್ಲಿನ ನವೀಕರಿಸಲಾಗದ ಸಂಪನ್ಮೂಲಗಳ ಕೊಳ್ಳೆ. 

ಜಲ ಪ್ರಳಯಗಳು ಭಾರತದಲ್ಲಿ ಮಾತ್ರ ಸಂಭವಿಸುತ್ತಿಲ್ಲ ಜಗತ್ತಿನಾದ್ಯಂತ ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳನ್ನೂ ಬಿಟ್ಟಿಲ್ಲ ಜಪಾನ್, ಅಮೆರಿಕ, ಚೀನಾ, ಬ್ರಜಿಲ್, ಪಿಲಿಪೈನ್ಸ್, ಬಂಗ್ಲಾ ದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅಮೆಜಾನ್ ಕಾಡುಗಳಲ್ಲಿ ಸಂಭವಿಸುವ ಪ್ರವಾಹಗಳಿಂದ ಬಿಲಿಯನ್ ಗಟ್ಟಲೇ ಆಸ್ತಿ ನಷ್ಟವಾಗುತ್ತಿದೆ. ಡೆನ್ಮಾರ್ಕ್ ಮತ್ತು ಬಂಗ್ಲಾದೇಶಗಳ ಅರ್ಧ ಜನಸಂಖ್ಯೆ ಪ್ರವಾಹಗಳಿಂದ ತತ್ತರಿಸುತ್ತಿದ್ದರೆ, ವಿಯೆಟ್ನಾಂ, ಈಜಿಪ್ಟ್ ಮತ್ತು ಮ್ಯಾನ್ಮಾರ್ ದೇಶಗಳ ಹೆಚ್ಚು ಜನರು ಪ್ರವಾಹಗಳಿಗೆ ತುತ್ತಾಗುತ್ತಿದ್ದಾರೆ. ಅಮೆರಿಕದ ಅಟ್ಲಾಂಟಾ, ಚಿಕಾಗೋ ಮತ್ತು ಡೆಟ್ರಾಯಿಟ್ ಕೂಡ ಪ್ರವಾಹಗಳಿಗೆ ದುರ್ಬಲ ಪ್ರದೇಶಗಳಾಗಿವೆ.  

ಭೂಮಿ ತನ್ನ ಮೇಲಿನ ಪರಿಸರವನ್ನು ಲಕ್ಷಾಂತರ ವರ್ಷಗಳಿಂದ ಅರಣ್ಯ ಕಾಡು ಕಣಿವೆ, ನದಿಪಾತ್ರಗಳು ಜೀವಜಗತ್ತು ಮತ್ತು ಋತುಮಾನಗಳನ್ನು ಅದು ರೂಪಿಸಿ ಪೋಷಿಸಿಕೊಂಡು ಬಂದಿದೆ. ಆದರೆ ಜೀವವಿಕಸನದಲ್ಲಿ ಅಂತಿಮವಾಗಿ ಭೂಮಿಯ ಮೇಲೆ ಅವತರಿಸಿದ ಮಾನವನೆಂಬ ಕಲ್ಕಿ ಎಲ್ಲವನ್ನೂ ಮೊಗೆದು ಮುಕ್ಕುವುದರೊಂದಿಗೆ ನಿಸರ್ಗದ ಎಲ್ಲ ತಾಲಮೇಳಗಳನ್ನೂ ಛಿದ್ರಛಿದ್ರವಾಗಿಸಿದರ ಪರಿಣಾಮ ಈಗ ಅವನೇ ಅನುಭವಿಸಬೇಕಾಗಿ ಬಂದಿದೆ.

ಬ್ರಹ್ಮಾಂಡದಲ್ಲಿನ ಯಾವುದೇ ವಸ್ತುವು ಶಾಶ್ವತವಲ್ಲ. ಹಾಗಾಗಿ ಭೂಮಿಯೂ ಶಾಶ್ವತವಲ್ಲ. ಮನುಷ್ಯ ಹುಟ್ಟುವಾಗ ಮಗು, ಯೌವನ, ವೃದ್ಧನಾಗಿ ಹೇಗೆ ಮಣ್ಣು ಸೇರಿಹೋಗುತ್ತಾನೊ ಭೂಮಿಗೂ ಅದೇ ರೀತಿಯ ಹಂತಗಳಿವೆ. ಭೂಮಿಯ ಮೇಲಿನ ಪರಿಸರವನ್ನು ಜತನವಾಗಿ ಕಾಪಾಡಿಕೊಂಡಿದ್ದರೆ ಮನುಷ್ಯನಾದವನು ಇನ್ನಷ್ಟು ದಿನಗಳು ಭೂಮಿಯ ಮೇಲೆ ನೆಮ್ಮದಿಯಾಗಿ ಬಾಳಬಹುದಾಗಿತ್ತು. ಆದರೆ ಈಗ ಕಾಲ ಮಿಂಚಿಹೋಗಿದೆ ಎಂದೇ ಹೇಳಬಹುದೇನೊ? ವಿಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿ ಮುಂದುವರಿದಿದ್ದರೂ ಮನುಷ್ಯನಾದವನು ನಿಸರ್ಗದ ಮುಂದೆ ಏನೇನೂ ಅಲ್ಲ. 

ಮತ್ತೆ ಹಿಮಾಲಯ ಮತ್ತು ಪಶ್ಚಿಮಘಟ್ಟಗಳ ಕಥೆಗೆ ಬಂದರೆ, ಈ ಎರಡೂ ಎತ್ತರದ ಭೌಗೋಳಿಕ ಜೀವಜಾಲ ಅರಣ್ಯ ಕಾಡು ಕಣಿವೆಗಳ ವಲಯಗಳು ಭಾರತಕ್ಕೆ ವರವಾಗಿವೆ. ಹಿಮಾಲಯ ಎವರೆಸ್ಟ್ ಶಿಖರವನ್ನು ಸೇರಿದಂತೆ ಸಮುದ್ರ ಮಟ್ಟದಿಂದ 23,600 ಅಡಿಗಳ ಎತ್ತರ ಮೀರಿದ 100ಕ್ಕೂ ಹೆಚ್ಚು ಶಿಖರಗಳನ್ನು ಹೊಂದಿವೆ. 2,400 ಕಿ.ಮೀ.ಗಳ ಉದ್ದ 150-350 ಕಿ.ಮೀ.ಗಳ ಅಗಲದ ಹಿಮಾಲಯ ಹತ್ತಾರು ದೇಶಗಳನ್ನು ಹಿಮದಿಂದ ರಕ್ಷಿಸಿ ಮಳೆಯಿಂದ ಪೋಷಿಸಿಕೊಂಡು ಬಂದಿದೆ. ಅವೆಂದರೆ ಭೂತಾನ್, ಭಾರತ, ನೇಪಾಳ, ಚೀನಾ (ಟಿಬೆಟ್), ಪಾಕಿಸ್ತಾನ ಮತ್ತು ಮಿಯನ್ಮಾರ್ ಇತ್ಯಾದಿ ದೇಶಗಳು. ಹಿಮಾಲಯ ಪರ್ವತ ಶ್ರೇಣಿಗಳು ವಾಯವ್ಯದಲ್ಲಿ ಕಾರಕೋರಂ ಮತ್ತು ಹಿಂದೂ ಕುಶ್ ಶ್ರೇಣಿಗಳಿಂದ, ಉತ್ತರದಲ್ಲಿ ಟಿಬೆಟ್ ಪ್ರಸ್ಥಭೂಮಿಯಿಂದ ಮತ್ತು ದಕ್ಷಿಣದಲ್ಲಿ ಇಂಡೋ-ಗಂಗಾ ಬಯಲು ಪ್ರದೇಶದವರೆಗೂ ಹರಡಿಕೊಂಡಿದೆ.

ಹಿಮಾಲಯದಲ್ಲಿ ಹುಟ್ಟುವ ನದಿಗಳಿಂದ 600 ದಶಲಕ್ಷ ಜನರು ಬದುಕು ಕಟ್ಟಿಕೊಂಡಿದ್ದರೆ, ಹಿಮಾಲಯದಲ್ಲೆ 53 ದಶಲಕ್ಷ ಜನರು ವಾಸ ಮಾಡುತ್ತಿದ್ದಾರೆ. ಹಿಮಾಲಯ ದಕ್ಷಿಣ ಏಷ್ಯಾ ಮತ್ತು ಟಿಬೆಟ್ ಸಂಸ್ಕೃತಿಯನ್ನು ಆಳವಾಗಿ ರೂಪಿಸಿದೆ. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮಗಳ ಹುಟ್ಟಿಗೆ ಕಾರಣವಾಗಿದೆ. ಇಂತಹ ಅಪರೂಪದ ಹಿಮಾಲಯ ಈಗ ಅಪಾಯಕ್ಕೆ ಸಿಲುಕಿಕೊಂಡಿದೆ. ಇನ್ನು ಪಶ್ಚಿಮ ಘಟ್ಟಗಳ ಪರಿಸ್ಥಿತಿಯೂ ಭಿನ್ನವಲ್ಲ. ಈ ಎರಡೂ ವಲಯಗಳು ಭಾರತದ ಕೃಷಿ, ನೀರು ಮತ್ತು ಅಭಿವೃದ್ಧಿಗೆ ಕಾರಣವಾಗಿರುವುದನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ಈ ಎರಡೂ ವಲಯಗಳು ಬರಡಾದ ದಿನ ಭಾರತವೂ ಉಳಿಯುವುದಿಲ್ಲ.

ಡಾ ಎಂ ವೆಂಕಟಸ್ವಾಮಿ
+ posts

ಭೂವಿಜ್ಞಾನಿ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಎಂ ವೆಂಕಟಸ್ವಾಮಿ
ಡಾ ಎಂ ವೆಂಕಟಸ್ವಾಮಿ
ಭೂವಿಜ್ಞಾನಿ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...