ಬಿಜೆಪಿಯ ಧ್ರುವೀಕರಣ ಮತ್ತು ಭಾರತೀಯರ ಮೌನ

Date:

ಗಣೇಶ್ ಎನ್ ದೇವಿ ಖ್ಯಾತ ಲೇಖಕರು ಮತ್ತು ಸಂಸ್ಕೃತಿ ಚಿಂತಕರು. 'ಬೆಲೆ ಏರಿಕೆ, ನಿರುದ್ಯೋಗ ವಿಪರೀತ ಎನ್ನುವಷ್ಟು ಹೆಚ್ಚಾಗುತ್ತಿದ್ದರೂ ದೇಶದ ಜನ ಪ್ರತಿಭಟಿಸಲು ಬೀದಿಗಿಳಿಯದೇ ಇರುವುದಕ್ಕೆ ಮೋದಿಯವರ ಜನಪ್ರಿಯತೆ ಕಾರಣವಲ್ಲ; ಜನರ ಮೌನವನ್ನು ತಪ್ಪಾಗಿ ಅರ್ಥೈಸಲಾಗಿದೆ' ಎನ್ನುವುದು ಅವರ ವಾದ. ಆಗಸ್ಟ್‌ 26, 2023ರ ಫ್ರಂಟ್‌ಲೈನ್‌ ಪತ್ರಿಕೆಯಲ್ಲಿ ಪ್ರಕಟವಾದ ಗಣೇಶ್‌ ಎನ್ ದೇವಿ ಅವರ ಲೇಖನವನ್ನು ಸದಾನಂದ ಆರ್ ಸಂಗ್ರಹಾನುವಾದ ಮಾಡಿದ್ದಾರೆ. 

ಕಳೆದ ಒಂದೂವರೆ ಶತಮಾನದಲ್ಲಿ ನಡೆದಿರುವ ಭಾರತೀಯ ಸಂಸ್ಕೃತಿ ಅಧ್ಯಯನದಲ್ಲಿ ಕಾಣಸಿಗುವ ಬಹುದೊಡ್ಡ ಹೆಸರು ಆನಂದ ಕುಮಾರಸ್ವಾಮಿ. ಇವರ ತಂದೆ ಸಿಲೋನಿನವರಾದರೆ, ತಾಯಿ ಇಂಗ್ಲಿಷ್‌. ಆನಂದರು ಭಾರತಕ್ಕೆ ಬಂದದ್ದು ಅದು ಸಿಲೋನಿಗೆ ಹತ್ತಿರವಿದೆ ಎನ್ನುವ ಕಾರಣಕ್ಕೆ. ಭಾರತಕ್ಕೆ ಬಂದು ಬೌದ್ಧ ಮತ್ತು ಹಿಂದು ತತ್ವಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಭಾರತೀಯ ಕಲೆಯ ಕುರಿತು ಅಗಾಧವಾದ ಜ್ಞಾನವನ್ನು ಸಂಪಾದಿಸಿದ ಆನಂದರು, ಅದರ ಕುರಿತು ಬರೆಯುತ್ತಲೇ ಹೋದರು.

ಆನಂದರು ಆ ಕಾಲದ ಶ್ರೇಷ್ಠ ಮನಸ್ಸುಗಳೊಂದಿಗೆ ಸಂವಾದಿಸಿದರು. ಅವರು ಗಾಂಧೀ ಮತ್ತು ಠಾಗೋರರೊಂದಿಗೆ ನಿಕಟವಾಗಿ ಚರ್ಚಿಸಿದರು. ಜೊತೆಗೆ ವಿಶ್ವದ ಎಲ್ಲಾ ನಾಗರಿಕತೆಗಳನ್ನು ತಾತ್ವಿಕ ದೃಷ್ಟಿಯಿಂದ ಅರಿಯಲೆತ್ನಿಸಿದರು. ಹಾಗಾಗಿಯೇ ಅವರ ಬರಹಗಳು ಸಂಸ್ಕೃತಿ ಅಧ್ಯಯನದ ಸ್ವರೂಪವನ್ನು ಪಡೆದವು. ಈ ಜ್ಞಾನವೇ ಅವರನ್ನು ಭಾರತೀಯ ಸಂಸ್ಕೃತಿಯ ಶ್ರೇಷ್ಠ ವಿದ್ವಾಂಸರನ್ನಾಗಿಸಿದವು. ಅವರ “ದ ಡಾನ್ಸ್‌ ಆಫ್‌ ಶಿವಾ” ಬಹು ಚರ್ಚಿತ ಪುಸ್ತಕವಾಗಿದೆ. ಈ ಪುಸ್ತಕದ ಮುಖಪುಟದಲ್ಲಿ ನಟೇಶ್ವರನ ಚಿತ್ರವಿದೆ. ನಟೇಶ್ವರನೆಂದರೆ ಅರ್ಧನಾರೀಶ್ವರ. ಹೆಣ್ತನದ ಮೃದುತ್ವ ಮತ್ತು ಪುರುಷತನದ ಗಡುಸುತನಗಳ ಹದವಾದ ಸಂಗಮವೇ ಈ ನಟೇಶ್ವರನ ಪ್ರತಿಮೆ. ಇದು ನಮ್ಮ ನಾಗರಿಕತೆಯನ್ನು ರೂಪಿಸಿರುವ ಶಕ್ತಿಯ ದ್ಯೋತಕವೂ ಆಗಿದೆ.

ಹೆಣ್ಣು-ಗಂಡುಗಳು ಒಂದೆಡೆ ಸಂಗಮಗೊಳ್ಳುವ ಕಲ್ಪನೆ ಅನಾದಿ ಕಾಲದಿಂದಲೂ ಭಾರತೀಯರನ್ನು ಬೆರಗುಗೊಳಿಸಿದೆ. ಮಹಾಭಾರತದಲ್ಲಿ ಅರ್ಜುನ ಅಲ್ಪಕಾಲ ನೃತ್ಯಗಾತಿ ಬೃಹನ್ನಳೆಯಾಗುತ್ತಾನೆ. ಮಹಾಭಾರತದ ಯುದ್ಧಕ್ಕೆ ಸಿದ್ಧನಾಗಿ ನಿಂತಾಗ ತನ್ನ ಪೌರುಷ ಉಡುಗಿಹೋದದ್ದನ್ನು ಅರ್ಜುನ ಕೃಷ್ಣನಲ್ಲಿ ಹಂಚಿಕೊಳ್ಳುತ್ತಾನೆ: “ನನ್ನ ಕೈಕಾಲುಗಳು ನಡುಗಿದವು; ಬಾಯಿ ಒಣಗಿ ಹೋಯಿತು”. “ಈ ಸ್ಥಿತಿಯೇ ನಿನಗೆ ದಿವ್ಯಚಕ್ಷುವನ್ನು ನೀಡಲಿದೆ; ಈ ದಿವ್ಯಚಕ್ಷುವಿನ ಮೂಲಕವೇ ನೀನು ಜೀವನ್ಮರಣಗಳ ಸಾರವನ್ನು ಅರಿಯಲಿರುವೆ” ಎನ್ನುತ್ತಾನೆ ಕೃಷ್ಣ. ಭೀಷ್ಮನ ಸಾವಿಗೆ ಕಾರಣವಾಗುವ ಶಿಖಂಡಿಯ ಕತೆ ಎಲ್ಲರಿಗೂ ಪರಿಚಿತವೆ ತಾನೇ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆನಂದ ಕುಮಾರಸ್ವಾಮಿಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ಹೆಣ್ಣು-ಗಂಡುಗಳ ಸಂಗಮದ ಚಿತ್ರಣಗಳು ಅನೇಕ ಬಾರಿ ನೋಡಲು ದೊರೆಯುತ್ತವೆ. ಮಧ್ಯಕಾಲದ ಕಬೀರ ಮತ್ತು 19ನೇ ಶತಮಾನದ ರಾಮಕೃಷ್ಣ ಪರಮಹಂಸ ಈ ನಿಟ್ಟಿನಲ್ಲಿ ವಿಶೇಷವಾದ ಉದಾಹರಣೆಗಳಾಗಿದ್ದಾರೆ. ವಸಾಹತುಶಾಹಿ ಶಕ್ತಿಯನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ಗಾಂಧೀ ಬಳಸಿಕೊಂಡ ಹೆಣ್ಣು-ಗಂಡು ಸ್ವರೂಪಗಳನ್ನು ಅಶೀಷ್‌ನಂದಿ ತಮ್ಮ ಪ್ರಬಂಧವೊಂದರಲ್ಲಿ ಅದ್ಭುತವಾಗಿ ವಿವರಿಸುತ್ತಾರೆ. ತಮ್ಮ ಕ್ರಿಯೆಯಲ್ಲಿ ಮತ್ತು ಪ್ರಸ್ತುತಿಯಲ್ಲಿ ಗಾಂಧೀ ಹೆಣ್ಣು-ಗಂಡು ಎರಡನ್ನೂ ಹದವಾಗಿ ಬಳಸಿಕೊಂಡು ವಸಾಹತುಶಾಹಿ ಶಕ್ತಿಯನ್ನು ಎದುರುಗೊಂಡರೆಂದು ಉದಾಹರಣೆಗಳ ಸಹಿತ ಅವರು ಪ್ರತಿಪಾದಿಸುತ್ತಾರೆ. ಫ್ರಾಯ್ಡಿಯನ್‌ ದೃಷ್ಟಿಕೋನದಲ್ಲಿ ಉಪ್ಪಿನ ಸತ್ಯಾಗ್ರಹವು ಹೆಣ್ಣಿನ ಪ್ರತಿರೋಧವಾಗಿರುತ್ತದೆ. ಇದು ಮೌನ ಹಾಗೂ ಅಸಹಕಾರಗಳು ಸಂಗಮಗೊಂಡ ಪ್ರತಿಭಟನೆಯಾಗಿತ್ತು. ಮೌನ ಮತ್ತು ಅಸಹಕಾರಗಳು ಹೆಣ್ಣಿನ ಪ್ರತಿಭಟನೆಯ ದಾರಿಗಳಾಗಿವೆ.       

ಇಂತಹ ಉಭಯ ಸ್ಥಿತಿಯ ಇರುವಿಕೆ ಕೇವಲ ಭಾರತೀಯ ಕಲೆ ಮತ್ತು ಪುರಾಣಗಳಿಗಷ್ಟೇ ಸೀಮಿತ ಎಂದುಕೊಳ್ಳಬಾರದು. ವಾಸ್ತವಿಕ ಬದುಕಿನ ಅಸ್ತಿತ್ವದ ಕುರಿತು ಇರುವ ಅನೇಕ ಪ್ರಾಪಂಚಿಕ ತಾತ್ವಿಕತೆಗಳು ಈ ಉಭಯ ಸ್ಥಿತಿಯ ಇರುವಿಕೆಯನ್ನು ಒಪ್ಪಿಕೊಳ್ಳುತ್ತವೆ. ಆರಂಭಿಕ ಗ್ರೀಕ್‌ ಪುರಾಣಗಳಲ್ಲಿ ದೇವರು-ಮಾನವರು ಪರಸ್ಪರ ಆಶೋತ್ತರಗಳನ್ನು ಮತ್ತು ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ಸನ್ನಿವೇಶಗಳನ್ನು ಕಾಣುತ್ತೇವೆ. ಪರಿಣಾಮವಾಗಿ ದೇವಲೋಕ ಮತ್ತು ಮಾನವ ಲೋಕಗಳ ನಡುವೆ ಸಂಘರ್ಷಗಳು ನಡೆಯುತ್ತವೆ. ನಂತರದ ದಿನಗಳಲ್ಲಿ ಪುರಾಣಗಳ ಸ್ಥಾನವನ್ನು ಭೌತಶಾಸ್ತ್ರ ಮತ್ತು ತತ್ವಜ್ಞಾನಗಳು ಆಕ್ರಮಿಸಿಕೊಂಡದ್ದರಿಂದ, ಮಾನವ-ಅತಿಮಾನವ ಮುಖಾಮುಖಿಗಳು ಇಲ್ಲವಾದವು.

ಆದರ್ಶದ ಕುರಿತಾದ ಗ್ರೀಕರ ಅರಿವು ಮಾನವ ಜಗತ್ತು ಮತ್ತು ಆದರ್ಶಗಳ ಜಗತ್ತು ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಅನ್ನುವ ನಂಬಿಕೆಯಿಂದ ಬೆಳೆದಿದೆ. ಇಲ್ಲಿ ನಂಬಿಕೆಗಿಂತ ಭಯ ಬಲವಾದ ಕೆಲಸ ಮಾಡಿದೆ ಎನ್ನಬಹುದು. ಇಲ್ಲಿ ಆದರ್ಶವೆಂದರೆ, ಯೋಚನೆ-ಕಲ್ಪನೆ ಅನ್ನುವ ಅರ್ಥವನ್ನು ಹೊಂದಿರುವುದಿಲ್ಲ. ಬದಲಿಗೆ ಅದೊಂದು ಸ್ಥಿತಿ– ಅತಿಮಾನವ ನೆಲೆಯಲ್ಲಿ ಕಾಣಸಿಗುವ ನಶಿಸದೇ ಉಳಿಯುವ ಸ್ಥಿತಿ ಇದಾಗಿರುತ್ತದೆ. ವಾಸ್ತವ ಮತ್ತು ಆದರ್ಶಗಳ ಸಹಬಾಳ್ವೆಯ ಸಾಧ್ಯತೆಯು ಇಲ್ಲದಿರುವ ಕಾರಣ ಗ್ರೀಕರು ಎಲ್ಲವನ್ನು ದ್ವಿ-ಸ್ಥಿತಿಗಳಲ್ಲಿ (ಬೈನರಿ/ ಡ್ಯೂಯಾಲಿಟಿ) ಕಾಣುವುದನ್ನು ರೂಢಿಸಿಕೊಂಡರು. ಯಾವುದೇ ಜ್ಞಾನ ಶಾಖೆಯಲ್ಲಿ ದ್ವಿ-ಸ್ಥಿತಿಗಳನ್ನು ಕಾಣುತ್ತೇವೆ. ಅವರ ಆಲೋಚನೆಗಳು ಈ ವೈರುಧ್ಯಗಳ ಸಿಕ್ಕಿನಲ್ಲೇ ಉಳಿದುಕೊಂಡವು ಮತ್ತು ಅದರಿಂದ ಹೊಮ್ಮುವ ಒತ್ತಡದ ಸ್ಥಿತಿಯಲ್ಲಿ ಲೀನವಾದವು.

ಆದರೆ, ಭಾರತೀಯ ತಾತ್ವಿಕತೆ ದ್ವಿ-ಸ್ಥಿತಿಯ ಕುರಿತು ಭ್ರಮನಿರಸನಗೊಳ್ಳುವ ಸ್ಥಿತಿಯನ್ನು ತಲುಪಲಿಲ್ಲ. ಈ ಎರಡೂ ಸ್ಥಿತಿಗಳ ಸಹ ಅಸ್ತಿತ್ವದ ಸಾಧ್ಯತೆ; ಎರಡರ ನಡುವೆ ಕೊಡುವ-ತೆಗೆದುಕೊಳ್ಳುವ ಅವಕಾಶಗಳ ಬಗೆಗಿನ ನಂಬಿಕೆ ಭಾರತೀಯ ತತ್ವಶಾಸ್ತ್ರೀಯತೆಯ ನೆಲೆಯಾಯಿತು. ಇದರ ಅಪಾಯಕಾರಿ ಫಲವೇ ಪುನರ್‌ಜನ್ಮದ ಪರಿಕಲ್ಪನೆ.

ಇದರ ಪ್ರಭಾವ ಸಾಮಾಜಿಕ ನೆಲೆಯಲ್ಲಿ ಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿತು. ಆಧುನಿಕತೆಯ ಗರ್ಭದಲ್ಲಿ ಬದುಕಿದರೂ, ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳಬಹುದೆಂಬ ಆಲೋಚನೆ ಮೂಡಿತು. ಇದರ ಇನ್ನೊಂದು ಪರಿಣಾಮವೂ ಇತ್ತು: ಅದೆಂದರೆ ಪರಸ್ಪರ ವಿರುದ್ಧವಾದ ಮೌಲ್ಯಗಳು ಮತ್ತು ನಂಬಿಕೆಗಳು ಏಕಕಾಲದಲ್ಲಿ ಇರಬಹುದು ಮತ್ತು ಇರುತ್ತವೆ ಎನ್ನುವುದು. ಇದರ ಪರಿಣಾಮವಾಗಿಯೇ ಭಾರತೀಯರಲ್ಲಿ ಪರಸ್ಪರ ವಿರುದ್ಧವಾದ ಜೀವನ ರೀತಿಗಳು ಏಕಕಾಲದಲ್ಲಿ ಜೀವಂತವಾಗಿರುತ್ತವೆ.

ಬ್ರಾಹ್ಮಣನಾನು 1920ರಲ್ಲಿ ಪ್ರಕಟವಾದ ಪುಸ್ತಕವೊಂದನ್ನು ಇಂದಿಗೆ ಐವತ್ತು ವರ್ಷಗಳ ಹಿಂದೆ ಓದಿದ್ದೆ. ಅದರ ಲೇಖಕ ಇಂಗ್ಲಿಷ್‌ನವ ಅನ್ನುವ ನೆನಪಿದೆಯಾದರೂ, ಆತನ ಹೆಸರು ಮತ್ತು ಪುಸ್ತಕದ ಶೀರ್ಷಿಕೆಯ ನೆನಪಿಲ್ಲ. ಪುಣೆಯ ಫರ್ಗ್ಯುಸನ್‌ ಕಾಲೇಜಿನಲ್ಲಿ ಭೌತಶಾಸ್ತ್ರ ಬೋಧಿಸುತ್ತಿದ್ದ ಭಾರತೀಯ ಪ್ರಾಧ್ಯಾಪಕರೊಂದಿಗೆ ಸಂವಾದಿಸಿದ ಸಂದರ್ಭವೊಂದನ್ನು ಲೇಖಕರು ಪುಸ್ತಕದಲ್ಲಿ ವಿವರಿಸುತ್ತಾರೆ: ಕಾಲೇಜಿನಲ್ಲಿ ಭೌತಶಾಸ್ತ್ರದ ಸಿದ್ಧಾಂತಗಳನ್ನು ಬೋಧಿಸುವ ಇವರು ಸಂಜೆ ಸತ್ಯನಾರಾಯಣನ ಕಥೆ ಕೇಳಲು ಹೋಗುವ ಪರಿಪಾಠ ಹೊಂದಿರುವುದನ್ನು ಗಮನಿಸಿದ ಲೇಖಕರು, ಅವರನ್ನು ‘ಈ ವರ್ತನೆಯಲ್ಲಿ ವೈರುಧ್ಯವಿದೆ ಅಲ್ಲವೇ’ ಎಂದು ಪ್ರಶ್ನಿಸುತ್ತಾರೆ. ‘ಅಯ್ಯೋ ನಾವಿರುವುದೇ ಹೀಗೆ. ಇದರಲ್ಲಿ ವೈರುಧ್ಯವೆಲ್ಲಿ ಬಂತು’ ಎನ್ನುತ್ತಾರೆ ಭಾರತೀಯ ಪ್ರಾಧ್ಯಾಪಕರು. ಮೇಲಾಗಿ ಲೇಖಕರು ಕೇಳಿದ ಪ್ರಶ್ನೆಯ ಕುರಿತಾಗಿಯೇ ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸುತ್ತಾರೆ.

ನಾನು ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಜೀವಶಾಸ್ತ್ರಜ್ಞರೊಂದಿಗೆ ಸಂವಾದಿಸುತ್ತಿದ್ದೆ. ಎನ್‌ಸಿಇಆರ್‌ಟಿ ಪಠ್ಯಗಳಲ್ಲಿ ಡಾರ್ವಿನ್‌ನ ವಾದವನ್ನು ತೆಗೆದು ಹಾಕುವ ನಿರ್ಧಾರ ಕೈಗೊಂಡ ಸಂದರ್ಭ ಇದಾಗಿತ್ತು. ಅಲ್ಲಿ ಇದ್ದ ವಿಜ್ಞಾನಿಯೊಬ್ಬರು ದೇಶದ ಪ್ರಮುಖವಾದ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿರುವವರು. “ಡಾರ್ವಿನ್‌ನ ಸಿದ್ಧಾಂತ ಮತ್ತು ಅವರು ನಂಬಿಕೆ ಇಟ್ಟಿರುವ ಪ್ರಾಚೀನ ಗ್ರಂಥಗಳ ಹಿನ್ನೆಲೆಯಲ್ಲಿ ನಿಮ್ಮಲ್ಲಿ ಮಾನಸಿಕ ಸಂಘರ್ಷವೇನಾದರೂ ಇದೆಯೇ” ಎಂದು ಪ್ರಶ್ನಿಸಿದೆ. “ಇಲ್ಲವೇ ಇಲ್ಲ’’ ಅನ್ನುವ ಉತ್ತರ ದೊರೆಯಿತು. ಕೆಲವರಂತೂ ಈ ನೆಲೆಯಲ್ಲಿ ನಾವು ಯೋಚಿಸಿಯೇ ಇಲ್ಲ ಎಂದರು. ಪ್ರಶ್ನೆಗೆ ವಿವರವಾದ ಉತ್ತರ ನೀಡಿದವರು “ಎರಡೂ ವಲಯಗಳಲ್ಲಿ ನಾವು ಏಕಕಾಲದಲ್ಲಿ ಜೀವಿಸುವುದಾಗಿಯೂ, ಒಂದು ಇನ್ನೊಂದರ ಪ್ರಾಮುಖ್ಯತೆಯನ್ನು ಕಡಿಮೆಗೊಳಿಸುವುದಿಲ್ಲವೆಂದೂ” ಹೇಳಿದರು.

ಚರ್ಚಿನ ಮೌಲ್ಯ ಮತ್ತು ಕಲಾತ್ಮಕ ಸ್ವಾತಂತ್ರ್ಯದ ನಡುವಿನ ಸಂಘರ್ಷವನ್ನು ಸಮರ್ಥವಾಗಿ ಚಿತ್ರಿಸುವ ಕಾದಂಬರಿ ಜೇಮ್ಸ್‌ ಜಾಯ್ಸ್‌ನ ‘ದ ಪೋಟ್ರೈಟ್‌ ಆಫ್‌ ದ ಅರ್ಟಿಸ್ಟ್‌ ಯಾಸ್‌ ಎ ಯಂಗ್‌ ಮ್ಯಾನ್‌ʼ ಆಗಿದೆ. ಆದರೆ ಇಂತಹ ದ್ವಿ-ಸ್ಥಿತಿಗಳನ್ನು ನಿಭಾಯಿಸುವ ಪರಿಸ್ಥಿತಿ ಒದಗಿದಾಗ ಭಾರತೀಯ ಮನಸ್ಸುಗಳು ಇಷ್ಟು ಹಿಂಸೆ ಪಡುವುದಿಲ್ಲ. ಇಂತಹ ಸ್ಥಿತಿಯೊಂದರ ನಿರ್ವಹಣೆಯ ಕುರಿತು ರಾಜಾರಾವ್‌ ಎಂಟು ದಶಕಗಳಷ್ಟು ಹಿಂದೆಯೇ ಕಾಮ್ರೇಡ್‌ ಕಿರಿಲೋವ್‌ ಅನ್ನೋ ಕಥೆಯಲ್ಲಿ ಬರೆದಿದ್ದರು. ಇಲ್ಲಿ ಸಂಪ್ರದಾಯದಲ್ಲಿ ನಂಬಿಕೆಯಿಟ್ಟ ನಂಬೂದರಿ ಬ್ರಾಹ್ಮಣನೊಬ್ಬ ಮಾರ್ಕ್ಸ್‌ ಸಿದ್ಧಾಂತದ ಪ್ರತಿಪಾದಕನೂ ಆಗಿರುತ್ತಾನೆ. ಶಂಕರಾಚಾರ್ಯರ ಬ್ರಹ್ಮ ಸೂತ್ರ ಭಾಷ್ಯ ಗ್ರಂಥ ಮತ್ತು ಮಾರ್ಕ್ಸ್‌ನ ದಾಸ್‌ ಕ್ಯಾಪಿಟಲ್‌ ಗ್ರಂಥಗಳೆರಡನ್ನೂ ಪೂರ್ಣವಾಗಿ ಸಮರ್ಥಿಸುವ ಶಕ್ತಿ ಈ ಕಥಾ ನಾಯಕನಿಗಿರುತ್ತದೆ.

ಗತಕಾಲದಿಂದಲೂ ನೈತಿಕ ಇಬ್ಬಂದಿತನ (ಮಾರಲ್‌ ಆಂಬಿವೆಲೆನ್ಸ್‌) ಮತ್ತು ಲೈಂಗಿಕ ಸಮ್ಮಿಶ್ರಣಗಳು (ಜೆಂಡರ್‌ ಮಿಕ್ಸ್‌) ಭಾರತೀಯರ ಪ್ರತಿರೋಧದ ವಿಧಾನವೆಂದು ಅಶೀಷ್‌ ನಂದಿ ವಾದಿಸುತ್ತಾರೆ. ಬೌದ್ಧ ಧರ್ಮ ಮತ್ತು ಭಕ್ತಿಪಂಥಗಳು ಸಹ ಪ್ರತಿರೋಧ ದಾರಿಗಳು ಎನ್ನುವ ಅಶೀಷ್‌ನಂದಿ, ಉಭಯ ಲಿಂಗತ್ವ (ಅಂಡ್ರೋಜಿನಿ) ಮತ್ತು ಇಬ್ಬಂದಿತನಗಳು (ಆಂಬಿವೆಲೆನ್ಸ್‌) ಇತರ ವಿಧಾನಗಳಿಗಿಂತಲೂ ಐತಿಹಾಸಿಕವಾಗಿ ಹೆಚ್ಚಿನ ಪರಿಣಾಮಕಾರಿ ಪ್ರತಿರೋಧದ ದಾರಿಗಳಾಗಿದ್ದವೆಂಬ ವಾದವನ್ನು ಮಂಡಿಸುತ್ತಾರೆ. ನಾನಿದನ್ನು ಪೂರ್ಣವಾಗಿ ಅನುಮೋದಿಸುತ್ತೇನೆ.

ಅಶೀಶ್ ನಂದಿಭಾರತೀಯ ಸಂಸ್ಕೃತಿ ಮತ್ತು ತಾತ್ವಿಕ ನೆಲೆಗಳ ಲಕ್ಷಣಗಳ ವಿಶೇಷತೆಗಳ ಕುರಿತಾದ ಚರ್ಚೆ ಹಿಂದೆಂದಿಗಿಂತಲೂ ಈಗ ಮುಖ್ಯವಾಗಿದೆ. ಪ್ರಸ್ತುತ ಅಧಿಕಾರದಲ್ಲಿರುವ ರಾಜಕೀಯ ವ್ಯವಸ್ಥೆ ಸಾವರ್ಕರ್ ಪ್ರೇರಿತ ನೆಲೆಯಲ್ಲಿ ಗತವನ್ನು ಮತ್ತು ಆರ್‌ಎಸ್‌ಎಸ್‌ ಪ್ರೇರಿತ ನೆಲೆಯಲ್ಲಿ ಮೂಡಿರುವ ಭಾರತೀಯ ಸಮಾಜದ ಅರಿವನ್ನು ಒಪ್ಪಿಕೊಂಡು ಜಾರಿ ಮಾಡುತ್ತಿದೆ. ಇದರ ಫಲವಾಗಿ ಉಗ್ರ ಹಿಂದೂವಾದ ಪೋಷಣೆಗೊಳ್ಳುತ್ತಿದೆ. ಆದರೆ, ಇಂತಹ ರಾಜಕೀಯ ನಡೆಗೆ ಭಾರತೀಯರ ಪ್ರತಿಕ್ರಿಯೆ ಹೇಗಿರಬಹುದೆಂಬ ಕಲ್ಪನೆ ಆಡಳಿತಾರೂಢ ಪಕ್ಷಕ್ಕೆ ಇನ್ನೂ ಪೂರ್ಣವಾಗಿ ದೊರೆತಿಲ್ಲ. ಎದೆ ಬಡಿದು ಚೀರಾಡುವ ಪೌರುಷವಾದಿ ಚಿಂತನೆಯನ್ನು ಮತ್ತು ಧರ್ಮದ ಆಧಾರದ ಮೇಲೆ ಮತದಾರರನ್ನು ಧ್ರುವೀಕರಿಸುವ ಬಿಜೆಪಿಯ ಯೋಜನೆಯನ್ನು ಕರ್ನಾಟಕದ ಮತದಾರರು ತಿರಸ್ಕರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ: ಬಿಜೆಪಿ ಮಣಿಸಲು ’ಮಾಡು ಇಲ್ಲವೇ ಮಡಿ’ ಹೋರಾಟ ಅನಿವಾರ್ಯ: ಹಿರೇಮಠ್

ತಮ್ಮ ಸರ್ಕಾರದ ಯೋಜನೆಯ ಫಲಾನುಭವಿಗಳನ್ನು ಬಿಜೆಪಿ ಪಕ್ಷ “ಲಾಭಾರ್ಥಿಗಳು” ಎಂದು ಗುರುತಿಸುತ್ತದೆ. ಆದರೆ, ಈ ಲಾಭಾರ್ಥಿಗಳು ಆ ಪಕ್ಷಕ್ಕೆ ವಿಧೇಯರಾಗಿರುವ ಸೂಚನೆ ಪಂಚಾಯಿತಿ ಚುನಾವಣೆಯಲ್ಲೂ ದೊರೆಯುತ್ತಿಲ್ಲ. ಇದು ಬಹುತೇಕ ರಾಜ್ಯಗಳಲ್ಲಿ ಕಾಣಸಿಗುವ ವಸ್ತುಸ್ಥಿತಿಯಾಗಿದೆ. ಶ್ರೀಲಂಕಾದಲ್ಲಿ ಬೆಲೆ ಏರಿಕೆ ವಿಪರೀತವಾದಾಗ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲಾಯಿತು. ಬೃಹತ್‌ ಪ್ರಮಾಣದಲ್ಲಿ ಉದ್ಯೋಗದ ನಷ್ಟವಾದರೂ, ವಿಪರೀತವಾಗಿ ಬೆಲೆಗಳು ಏರಿದರೂ, ಭಾರತೀಯರು ಶ್ರೀಲಂಕನ್ನರಂತೆ ಬೀದಿಗಿಳಿದು ಪ್ರತಿಭಟಿಸುತ್ತಿಲ್ಲ. ಇದನ್ನು ಮೋದಿಯವರ ಜನಪ್ರಿಯತೆಯ ಪ್ರಭಾವ ಎಂದು ಆಡಳಿತ ಪರಿಗಣಿಸಿದೆ. ಆದರೆ “ಜನರ ಮೌನವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆಯೇ?” ಎನ್ನುವುದು ನನ್ನ ಸದ್ಯದ ಸಂದೇಹ. ಆನಂದ ಕುಮಾರಸ್ವಾಮಿಯವರು ತಮ್ಮ ‘ಡಾನ್ಸ್‌ ಆಫ್‌ ಶಿವಾ’ ಪುಸ್ತಕದಲ್ಲಿ ಗಾಢ ಮೌನದ ಒಡಲಿನಿಂದ ಹುಟ್ಟುವ ರೋಷವೇ ತಾಂಡವ ನೃತ್ಯ ಎನ್ನುತ್ತಾರೆ. 2024ರಲ್ಲಿ ಭಾರತೀಯ ಸಂಸ್ಕೃತಿಯ ಮೂಲ ನೆಲೆಯ ವರ್ತನೆ ಅಭಿವ್ಯಕ್ತಗೊಳ್ಳಲಿದೆಯೋ ಅಥವಾ ಆಡಳಿತಾರೂಢ ಪಕ್ಷ ಭಾರತೀಯರಲ್ಲಿ ಪೂರ್ಣ ಸಾಂಸ್ಕೃತಿಕ ಪಲ್ಲಟವನ್ನು ರೂಪಿಸಲಿದೆಯೋ ತಿಳಿಯಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...