ಹೊಸಿಲ ಒಳಗೆ-ಹೊರಗೆ | ಶೂರಮತಿ ಎಂಬ ಹೀರೋ ಮತ್ತು ಮೋಹನಾಂಗ ಎಂಬ ಹೀರೊಯಿನ್‌ ಕತೆ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌) 

ಮಹಿಳೆಯರು ಮಾಡುವ ಕೆಲಸಗಳನ್ನು ಪುರುಷರು ಮಾಡುವುದು ಕಂಡಾಗ ಅಸಹಜ ಅನಿಸಿದರೆ, ಆಶ್ಚರ್ಯ ಅನಿಸಿದರೆ ತಪ್ಪೇನಿಲ್ಲ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿ, “ಅಬ್ಬಾ, ಅವನ ಹೆಂಡತಿಯ ಸೊಕ್ಕು ನೋಡು, ಗಂಡನ ಕೈಯಲ್ಲಿ ಕೆಲಸ ಮಾಡಿಸುತ್ತಾಳೆ,” ಎಂಬ ಆರೋಪ ಬಂದುಬಿಡುತ್ತದಲ್ಲ, ಅದು ಸಮಸ್ಯೆ. ಹಾಗಾದರೆ ಇದಕ್ಕೇನೂ ಪರಿಹಾರ ಇಲ್ಲವೇ?

ಹೀಗೊಂದು ತಾಳಮದ್ದಳೆ (ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆಯ ಒಂದು ಸ್ವರೂಪ); ಇದರಲ್ಲಿ ರಾಣಿ ಪದ್ಮಾವತಿ ಅಶ್ವಮೇಧ ಯಾಗ ಕೈಗೊಂಡು, ತುರಗವನ್ನು ಬಿಟ್ಟು, ತುರಗದ ಬೆಂಗಾವಲಿಗಾಗಿ ಹೊರಟಿದ್ದಾಳೆ. (ಸಾಮಾನ್ಯವಾಗಿ ಇದನ್ನು ಮಾಡುವುದು ರಾಜರು. ಅದರಲ್ಲೂ ಮಹಾರಾಜರು, ಚಕ್ರವರ್ತಿಗಳು. ರಾಣಿಯರೂ ಅಲ್ಲ, ಮಹಾರಾಣಿಯರೂ ಅಲ್ಲ). ಮಗಳು ಶೂರಮತಿಗೆ ಸಡಗರವೇ ಸಡಗರ. ಅಮ್ಮ ತನ್ನನ್ನೂ ಕರೆದಿದ್ದಾಳೆ, ತನ್ನ ಶೂರತನವನ್ನು ಪ್ರದರ್ಶಿಸುವ ಕಾಲ ಬಂದಿದೆ ಎಂಬ ಖುಷಿ. ಹೊರಡುವ ಮೊದಲು ‘ಅಂತಃಪುರದಲ್ಲಿ ಇರುವ ತಂದೆಯವರ’ ಅನುಮತಿ ಪಡೆಯಬೇಕಾಗಿದೆ. ತಂದೆಗೆ ಯುದ್ಧವೆಂದರೆ ಭಯ. ಮಗಳನ್ನು ಪ್ರೀತಿಯ ಮಾತುಗಳಿಂದ ತಡೆಯಲು ನೋಡುತ್ತಾನೆ. ಎಷ್ಟಾದರೂ ತಂದೆಗರುಳಲ್ಲವೇ? ಯುದ್ಧರಂಗವನ್ನೇ ನೋಡದ, ಯುದ್ಧದ ಸುದ್ದಿಗೇ ಹೆದರುವ ಅಪ್ಪನಿಗೆ ಮಗಳು ಧೈರ್ಯ ತುಂಬುತ್ತಾಳೆ. ಅಮ್ಮನ ಜೊತೆ ಯುದ್ಧಭೂಮಿಗೆ ಜಿಗಿಯುತ್ತ ಹೋಗುತ್ತಾಳೆ.

ಹೀಗೆ ಶುರುವಾಗುವ ತಾಳಮದ್ದಳೆ, ಸಂಪೂರ್ಣವಾಗಿ ಹೆಣ್ಣುಗಳೆಲ್ಲ ಗಂಡುಗಳಂತಾಗಿ ಗಂಡುಗಳೆಲ್ಲ ಹೆಣ್ಣುಗಳಂತಾಗಿಯೇ ಮುಂದುವರಿಯುತ್ತದೆ. ಇಲ್ಲಿ ನಾಚಿಕೆ ‘ಅವನ’ ಗುಣವಾದರೆ, ಧೈರ್ಯ ‘ಅವಳ’ ಗುಣವಾಗುತ್ತದೆ. ಸ್ವರ್ಗದ ಅಪ್ಸರೆಯ ಬದಲು ಅಪ್ಸರ ಕುವರ ಬರುತ್ತಾನೆ. ಅಪ್ಸರ ಕುವರಿ ಭೂಲೋಕದ ಗಂಡನ್ನು ಮೋಹಿಸುವಂತೆ ಇಲ್ಲಿ ಅಪ್ಸರ ಕುವರ ಭೂಲೋಕದ ಹೆಣ್ಣಿನಿಂದ ಆಕರ್ಷಿತನಾಗುತ್ತಾನೆ. ಶೂರಮತಿಯೇ ಇಲ್ಲಿ ಹೀರೋ ಮತ್ತು ಅಪ್ಸರ ಕುವರ ಮೋಹನಾಂಗ ಇಲ್ಲಿ ಹೀರೊಯಿನ್. ಎಲ್ಲವೂ ಅಪ್ಪಟ ದೈನಂದಿನ ಬದುಕಿನ ಮಾತುಗಳು ಮತ್ತು ವರ್ತನೆಗಳೇ ಇವೆ. ಆದರೆ ಇಲ್ಲಿ ಅದಲಿಬದಲಿ ರೂಪದಲ್ಲಿ ಕಾಣಸಿಗುತ್ತದೆ ಅಷ್ಟೇ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜನ ಹೋ ಅಂತ ನಗುತ್ತಾರೆ. ನಗುತ್ತಲೇ ‘ಓಹ್’ ಇದನ್ನೇ ತಾನೇ ಪುರುಷರು ಮಾಡುತ್ತಿರುವುದು ಎಂದು ಗಮನಕ್ಕೂ ಬರುತ್ತದೆ. ಒಂದು ಕ್ಷಣಕ್ಕಾದರೂ ಸಹಜ ಎಂದು ಒಪ್ಪಿಕೊಂಡಿದ್ದ ವಿಚಾರಗಳು ನಿಜವಾಗಿಯೂ ಸಹಜವೇ ಎಂಬ ಅನಿಸಿಕೆ ಮಿಂಚಿನಂತೆ ಮೂಡಿಬಿಡಲೂಬಹುದು. ಮನಸ್ಸು ತುಂಬಾ ಬಿಗುವಾಗಿದ್ದರೆ ಹಾಗೆ ಕಾಣುವ ಸಾಧ್ಯತೆ ಕಡಿಮೆ. ಆದರೂ ಒಂದು ಕ್ಷಣ ಚುರುಕು ಮುಟ್ಟಿಸಿದಂತೆ ಆಗದಿರುತ್ತದೆಯೇ?

ಗೆಳತಿ ಕೃತಿ ಪುರಪ್ಪೆಮನೆ, ಸಾಗರದಲ್ಲಿ ಯಕ್ಷಗಾನದ ಹಿನ್ನೆಲೆಯಿಂದ ಬಂದವಳು; ಅನುಭವ ಇರುವವಳು. ಮಹಿಳೆಯರ ತಾಳಮದ್ದಳೆ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿರುತ್ತಾಳೆ. ಭಾಗವತಿಕೆ ಕೂಡ ಮಾಡುತ್ತಾಳೆ. ಭಾಗವತಿಕೆಯಲ್ಲೂ ಗಂಡುಶೈಲಿಯನ್ನು ನೇರವಾಗಿ ಅನುಕರಿಸದೆ, ತನ್ನ ದನಿಗೆ ತಕ್ಕಂತೆ ತನ್ನದೇ ಶೈಲಿಯನ್ನು ಗುರುತಿಸಿಕೊಂಡಿದ್ದಾಳೆ. ಈ ಒಂದೆರಡು ವರುಷಗಳ ಹಿಂದೆ ತನ್ನ ತಂಡ ಮತ್ತು ಕೆಲವು ಸ್ತ್ರೀವಾದಿ ಗೆಳತಿಯರನ್ನು ಒಳಗೊಂಡು ಹೊಸತೊಂದು ಪ್ರಯೋಗ ಮಾಡಲು ಹೊರಟಿದ್ದಾಳೆ. ಪುರುಷಪ್ರಧಾನ ವ್ಯವಸ್ಥೆ ಯಾವುದನ್ನು ಸಹಜ ಅಂತ ಬಿಂಬಿಸುತ್ತ, ಪ್ರತಿಪಾದಿಸುತ್ತ ಬಂದಿದೆಯೋ ಅದು ನಮಗೆ ರೂಢಿಯಾಗಿದ್ದೇ ಹೊರತು ಅದು ನಿಜವಾಗಿಯೂ ‘ಸಹಜ’ ಅಲ್ಲ ಎಂಬುದನ್ನು ‘ಪದ್ಮಾವತಿ ಕಾಳಗ’ ಎಂಬ ಯಕ್ಷಗಾನ ತಾಳಮದ್ದಳೆ ಪ್ರಕಾರದ ಮೂಲಕ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾಳೆ. ಮೇಲೆ ಹೇಳಿದ ವಿವರಣೆ ಈ ಪ್ರಸಂಗದ ಚಿಕ್ಕ ಭಾಗ. ಪುರುಷಪ್ರಧಾನತೆ ಮೂಡಿಸಿದ ಬಿಂಬಗಳು ಎಷ್ಟು ಬಲವಾಗಿ ಇವೆಯೆಂದರೆ, ಈ ಪ್ರಸಂಗವನ್ನು ರೂಪಿಸುವಾಗ ಪಾತ್ರಧಾರಿಗಳಿಗೆ ‘ಅವನು,’ ‘ಅವಳು’ ಎಲ್ಲಿ ಹಾಕಬೇಕು, ಬಿಡಬೇಕು ಎಂಬುದು ಗೊಂದಲವಾಗುತ್ತಿತ್ತು. “ಆಹಾ… ‘ಅವನ’ ನಾಚಿಕೆ ನೋಡು, ಪಂಚೆಯ ತುದಿಯನ್ನು ಬೆರಳುಗಳಲ್ಲಿ ಸುತ್ತುವ ಚಂದ ನೋಡು,” ಅನ್ನುವಾಗ ‘ಅವನ’ ಎಂದು ಹೇಳಲು ಕಷ್ಟವಾಗುತ್ತಿತ್ತು. ಅವನ ಗುಣಗಾನವನ್ನು ಅವಳ ಗುಣಗಾನದಂತೆ ಮಾಡಬೇಕೆಂದರೆ ಉಪಮೆಗಳು ಸಿಗದೆ ಒದ್ದಾಡುವ ಹಾಗೆ ಆಗಿತ್ತು. ಏನೇ ಇರಲಿ, ಈ ಪ್ರಯೋಗ ಪುರುಷಪ್ರಧಾನ ಚಿಂತನೆಗೆ ಕನ್ನಡಿ ಇಡುವ ಒಂದು ಸಣ್ಣ ಪ್ರಯತ್ನವಾಗಿದೆ. ತುಂಬಾ ಸಹಜವೆಂದು ನಾವು ಒಪ್ಪಿಕೊಂಡ ವಿಚಾರಗಳನ್ನು ಅದಕ್ಕೆ ವ್ಯತಿರಿಕ್ತವಾಗಿ ಎದುರು ಇರಿಸಿದಾಗ ಎಷ್ಟು ಅಸಹಜ ಅನಿಸಿಬಿಡುತ್ತದಲ್ಲ! ಆ ಒಂದು ಕ್ಷಣವಾದರೂ ಸತ್ಯದರ್ಶನ ಆಗಬಹುದೇ ಎಂಬ ಆಶಯ ‘ಪದ್ಮಾವತಿ ಕಾಳಗ’ದಲ್ಲಿ ಕಾಣುತ್ತದೆ.

ಪದ್ಮಾವತಿ ಕಾಳಗಕೃತಿ ಆರ್ ಪುರಪ್ಪೆಮನೆ ವಾಣಿ ಪೆರಿಯೋಡಿ
‘ಪದ್ಮಾವತಿ ಕಾಳಗ’ ತಾಳಮದ್ದಳೆ ದೃಶ್ಯ

ಯಾವ್ಯಾವುದೋ ಕಾರಣಗಳಿಗಾಗಿ, ಯಾವುದೋ ಸನ್ನಿವೇಶಗಳಲ್ಲಿ ಬದುಕಿನ ರೀತಿ ನೀತಿಗಳು ರೂಪುಗೊಂಡಿರುತ್ತವೆ. ಪುರುಷಪ್ರಧಾನ ವ್ಯವಸ್ಥೆ ಕೂಡ ಭದ್ರ ಬುನಾದಿ ಹಾಕಿಕೊಂಡಿದ್ದು ಹಾಗೇನೇ. ಇದು ಹಾಗೆ ಕಾಲಾಂತರದಿಂದ ನಡೆದುಕೊಂಡು ಬಂದ ಕಾರಣಕ್ಕೇನೇ ಸಹಜ, ಮಾಮೂಲಿ ಹಾಗೂ ಇದುವೇ ಸತ್ಯ ಅಂತ ಅನಿಸಿಕೊಳ್ಳುತ್ತ ಬಂದಿದೆ. ಉದಾಹರಣೆಗೆ, ಗಂಡ ಹೆಂಡತಿಗೆ ಹೊಡೆಯುವುದು ಸಹಜ, ಮಾಮೂಲಿ. ‘ಅಯ್ಯೋ ಪಾಪ… ಕಷ್ಟ ಅನುಭವಿಸುತ್ತಿದ್ದಾಳೆ’ ಅಂತ ಅನೇಕರಿಗೆ ಅನುಕಂಪ ಹುಟ್ಟಬಹುದು. ಆದರೆ ಇದು ಇದ್ದಿದ್ದೇ, ಏನು ಮಾಡುವುದು ಎಂಬ ಅನಿಸಿಕೆಯೇ ಮೇಲಾಗಿರುತ್ತದೆ. ಅದೇ, ಒಬ್ಬ ಹೆಂಡತಿ ಅದೆಷ್ಟೋ ಕಾಲ ಗಂಡನಿಂದ ಹೊಡೆತ ತಿಂದು ತಡೆಯಲಾರದೆ ಹಿಂದೇಟು ಕೊಟ್ಟುಬಿಟ್ಟರೆ ಅದು ಅಸಹಜ ಅಂತ ಅನಿಸುತ್ತದೆ ಮಾತ್ರವಲ್ಲ, ಘೋರ ಅನ್ಯಾಯದ ಹಾಗೆ ಕಾಣಿಸುತ್ತದೆ. ಇದು ವಿಪರ್ಯಾಸವೇ ತಾನೇ? ಈ ವಿಪರ್ಯಾಸ ಅರ್ಥವಾಗದೆ ಇರುವುದರಿಂದ ಇದನ್ನು ಕದಲಿಸುವುದು ಬಹಳ ಕಷ್ಟದ ಕೆಲಸ; ಆದರೆ, ಇದನ್ನು ಕದಲಿಸದೆಹೋದರೆ ನ್ಯಾಯದ ನೆಲೆಯನ್ನು ಸ್ಥಾಪಿಸುವುದು ಕೂಡ ಕಷ್ಟವೇ. ಗಂಡ ಹೆಂಡತಿಗೆ ಹೊಡೆಯುವುದು ಸಹಜವಲ್ಲ, ಅದನ್ನು ನೋಡಿ-ನೋಡಿ ನಮಗೆ ಅಭ್ಯಾಸವಾಗಿರುವುದು, ಅದನ್ನು ಮಾಮೂಲಿ ಮಾಡುತ್ತ ಬರಲಾಗಿದೆ ಎಂದು ಖಚಿತವಾಗಿ ಹೇಳಬೇಕಾಗುತ್ತದೆ. ಅದು ಮಾಮೂಲಿಯಾಗಿರುವ ಮಾತ್ರಕ್ಕೆ ಅದು ನ್ಯಾಯ ಅಲ್ಲ ಎಂದು ಪ್ರತಿಪಾದಿಸಬೇಕಾಗುತ್ತದೆ.

ಈ ಅತ್ಯಂತ ಸಹಜ ಅಂದುಕೊಂಡಿದ್ದನ್ನು ಒಡೆಯುವುದೇ ಒಂಥರಾ ಸವಾಲಿನ ಕೆಲಸ. ಮನ ಮುಟ್ಟುವ ಹಾಗೆ ಹೇಳುವುದು ಒಂದು ರೀತಿಯಾದರೆ, ಮನಸ್ಸು ಚುರುಕ್ ಅನ್ನುವ ಹಾಗೆ ವಿಚಾರ ಮಂಡಿಸುವುದು ಇನ್ನೊಂದು ದಾರಿ. ಪುರುಷಪ್ರಧಾನತೆಯ ವಿಡಂಬನೆಯನ್ನು ಪುರುಷರಿಗೆ ಮನದಟ್ಟು ಮಾಡಲು ನಯವಾಗಿ ಹೇಳುವ, ಮನಸ್ಸಿಗೆ ಅರ್ಥವಾಗುವ ಹಾಗೆ ಹೇಳುವ ಪ್ರಯತ್ನ ಮಾಡುತ್ತ ಇರುತ್ತೇವೆ. ಅದರ ಅಗತ್ಯ ಕೂಡ ಇದೆ; ಯಾವುದೇ ವಿಚಾರವನ್ನು ಆಕ್ರಮಣಶೀಲವಾಗಿ ಹೇಳಿದರೆ ಯಾರೇ ಆಗಲಿ ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ ಎಂಬುದನ್ನೂ ಗಮನಿಸಿದ್ದೇವೆ. ಆದರೂ ನಡುನಡುವೆ ಚುರುಕು ಮುಟ್ಟಿಸುವ ಕೆಲಸ ಕೂಡ ಮಾಡಬೇಕಾಗುತ್ತದೆ. ಪೊಳ್ಳು ಅಹಂ ಕಡಿಮೆ ಇರುವ ಪುರುಷರಿಗೆ ಇಂತಹ ವಿಚಾರಗಳು ಮುಖಾಮುಖಿಯಾದಾಗ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಇನ್ನು ಕೆಲವರಿಗೆ ಸತ್ಯ ಮುಖಕ್ಕೆ ಅಪ್ಪಳಿಸುವಾಗ ಚಕ್ಕಂತ ಜ್ಞಾನೋದಯ ಅಗುವುದೂ ಇದೆ. ಉದಾಹರಣೆಗೆ, ‘ದುರ್ಗಾ’ ನಾಟಕದಲ್ಲಿ ಹೆಂಡತಿ ಸದಾ ಗಂಡನ ಪೆಟ್ಟು ತಿನ್ನುತ್ತಿದ್ದು, ಒಂದು ಸಾರಿ ಗಂಡನಿಗೆ ಹೊಡೆದುಬಿಡುತ್ತಾಳೆ. ಈ ನಾಟಕ ಕಾಲೇಜೊಂದರಲ್ಲಿ ಮಾಡುತ್ತಿದ್ದಾಗ, ಅಲ್ಲಿಗೆ ಕಾರ್ಯಕ್ರಮದ ವೀಡಿಯೊ ಮಾಡಲು ಬಂದ ವ್ಯಕ್ತಿಗೆ ತಾನು ಹೆಂಡತಿಗೆ ಹೊಡೆಯುವುದು ಒಪ್ಪಿಕೊಳ್ಳತಕ್ಕಂತಹ ವಿಷಯ ಅಲ್ಲ ಅನ್ನುವುದು ಮಿಂಚಿನಂತೆ ಹೊಳೆದ ಹಾಗೆ ಆಗಿತ್ತು. ಬಹಳ ಪ್ರಾಮಾಣಿಕವಾಗಿ ಎಲ್ಲರ ಎದುರು ಈ ವಿಚಾರವನ್ನು ಧೈರ್ಯವಾಗಿ ಹೇಳಿಕೊಂಡರು ಅವರು. ಎಷ್ಟೋ ಸಾರಿ ಸತ್ಯ ಅರ್ಥವಾಗುವುದು ಕಷ್ಟ; ಅರ್ಥವಾಗಿಬಿಟ್ಟರೆ, ಹೀಗೆ ನಿರಾಳವಾಗುವವರೂ ಇದ್ದಾರೆ.

ನೋಡಿಯೇ ಇರದ, ಕೇಳಿಯೇ ಇರದ ಒಂದು ಪ್ರತೀಕ ಕಣ್ಣೆದುರಿಗೆ ಬಂದರೆ ಆಶ್ಚರ್ಯ ಎನಿಸುವುದು, ಅಸಹಜ ಅನಿಸುವುದೂ ಸಹಜವೇ. ಆದರೆ, ಸಮಸ್ಯೆ ಇರುವುದು ಅದಕ್ಕೆ ನ್ಯಾಯ-ಅನ್ಯಾಯದ ಬಣ್ಣ ಹಾಕಿದಾಗ. ಅಂದರೆ, ಮಹಿಳೆಯರು ಮಾಡುವ ಕೆಲಸಗಳನ್ನು ಪುರುಷರು ಮಾಡುವುದು ಕಂಡಾಗ ಅಸಹಜ ಅನಿಸಿದರೆ, ಆಶ್ಚರ್ಯ ಅನಿಸಿದರೆ ತಪ್ಪೇನಿಲ್ಲ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿ, “ಅಬ್ಬಾ, ಅವನ ಹೆಂಡತಿಯ ಸೊಕ್ಕು ನೋಡು, ಗಂಡನ ಕೈಯಲ್ಲಿ ಕೆಲಸ ಮಾಡಿಸುತ್ತಾಳೆ,” ಎಂಬ ಆರೋಪ ಬಂದುಬಿಡುತ್ತದಲ್ಲ, ಅದು ಸಮಸ್ಯೆ. ಈ ನೋಟ, ಚಿಂತನೆ ಬದಲಾದರೆ ಮಾತ್ರ ಸಹಜ-ಅಸಹಜತೆಯ ಹೆಸರಿನಲ್ಲಿ ಬೇರೂರಿದ ಯಥಾಸ್ಥಿತಿಯನ್ನು ಅಲ್ಲಾಡಿಸುವುದು ಸಾಧ್ಯ.

ಮುಖ್ಯಚಿತ್ರ: ‘ಪ್ರಾಜೆಕ್ಟ್ ಡಾರ್ಲಿಂಗ್’ ರಂಗಪ್ರಯೋಗದ ದೃಶ್ಯ

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

1 COMMENT

  1. ಇದು ನನ್ನ ಹೃದಯದ ಮೇಲೆ ಅತ್ಯಂತ ಪ್ರಭಾವ ಬೀರುತ್ತದೆ! ಹೊಸಿಲ ಒಳಗೆ-ಹೊರಗೆ ಸಿನಿಮಾದ ಶೂರಮತಿ ಹೀರೋ ಮತ್ತು ಮೋಹನಾಂಗ ಹೀರೋಯಿನ್‌ಗಳ ಕತೆ ಎಂದಿಗೂ ಮರೆಯದ ಒಂದು ಅತ್ಯಂತ ಹೊತ್ತ ಕತೆಯಾಗಿದೆ. 😍 ಈ ಸಿನಿಮಾ ನನಗೆ ಅನೇಕ ಅದ್ಭುತ ಅನುಭವಗಳನ್ನು ನೀಡಿದೆ. ನಟನೆ ಮತ್ತು ನಟಿಯ ಕೆಲಸವೂ ಅದ್ಭುತವಾಗಿದೆ! 👏 ನನ್ನ ಸಿನಿಮಾ ಅನುಭವಕ್ಕೆ ಇನ್ನೊಂದು ಭಾಗ ಬಂದಿದ್ದರೆ ನಾನು ಅತ್ಯಂತ ಸಂತೋಷಗೊಳ್ಳುತ್ತೇನೆ! 🥰 #ಶೂರಮತಿ #ಮೋಹನಾಂಗ #ಸಿನಿಮಾಹೆಬ್ಬರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...