ಹಳ್ಳಿ ದಾರಿ | ಭಾರತದಲ್ಲಿ ಯಾರೂ ಹಸಿವಿನಿಂದ ನರಳುತ್ತಿಲ್ಲವೇ?

Date:

 ಜಾಗತಿಕ ಹಸಿವಿನ ಸೂಚ್ಯಂಕ ಕುರಿತ ಪ್ರಶ್ನೆಗೆ, “ನಂಗೆ ಹಸಿವಾಗಿದೆಯೇ ಅಂತ ಕೇಳಿದ್ರೆ ಹೌದು ಅಂತೀನಿ,” ಎಂಬ ಕ್ರೂರ ತಮಾಷೆ ಮಾಡಿದ್ದಾರೆ ಕೇಂದ್ರ ಸಚಿವೆ ಸ್ಮೃತಿ ಇರಾನಿ. ಇತ್ತ ರಾಜ್ಯ ಸರ್ಕಾರದ್ದೂ ಹೆಚ್ಚೂಕಡಿಮೆ ಇಂಥದ್ದೇ ಕತೆ; ಈಗಲೂ ಪಡಿತರ ವಿತರಣೆ ಸಮಸ್ಯೆ ಬಗೆಹರಿದಿಲ್ಲ. ರಕ್ತಹೀನತೆ, ಅಪೌಷ್ಟಿಕತೆ ತಗ್ಗಿಸುವ ಕ್ರಮಗಳು ಅತಂತ್ರ!

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ‘ಸ್ಪಾಟಿಫೈ’ನಲ್ಲಿ ಕೇಳಿ…)

ಪ್ರತೀ ವರ್ಷದಂತೆ ಈ ವರ್ಷವೂ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index) ಪ್ರಕಟವಾಗಿದೆ. ನಿರೀಕ್ಷೆಯಂತೆ ಭಾರತದ ಸಾಧನೆ ಮತ್ತೂ ಕೆಳಕ್ಕಿಳಿದಿದೆ. ಎಷ್ಟು ಕೆಳಕ್ಕೆ ಎಂದರೆ – ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶಗಳಿಗಿಂತ ಕಳಪೆ. ಕಳೆದ ವರ್ಷ ಬಂದ ಭೀಕರ ಬರಗಾಲದಿಂದಾಗಿ ಪಾಕಿಸ್ತಾನದ ಪರಿಸ್ಥಿತಿ ಹೀನಾಯ ಆಗಿರಬಹುದು. ಸಂಪನ್ಮೂಲಗಳಿಲ್ಲದ ಬಾಂಗ್ಲಾದ ಪರಿಸ್ಥಿತಿ ಯಾವಾಗಲೂ ಗಂಭೀರವೇ. ಶ್ರೀಲಂಕಾ ಅಂತೂ ದಿವಾಳಿಯೆದ್ದಿತ್ತು. ಆದರೆ, ಇದೊಂದೂ ಇಲ್ಲದ ಭಾರತದ ಜನರ ಪೌಷ್ಟಿಕತೆಯ ಸ್ಥಿತಿ ಈ ಮೂರೂ ದೇಶಗಳಿಗಿಂತಲೂ ಹೀನ ಸ್ಥಿತಿಗಿಳಿದಿದೆಯೆಂದರೆ, ನಮ್ಮ ಮೈಯನ್ನು ನಾವೊಮ್ಮೆ ಮುಟ್ಟಿ ನೋಡಿಕೊಳ್ಳಬೇಕಾದ ಪರಿಸ್ಥಿತಿಯೇ ಅದು.

ಭಾರತ ಸರ್ಕಾರ ಮಾತ್ರ, ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಟಣೆಯನ್ನು ಒಪ್ಪುವುದಿಲ್ಲ. ಕಳೆದ ವರ್ಷವೂ ಒಪ್ಪಿಲ್ಲ, ಈ ವರ್ಷವೂ ಒಪ್ಪುವುದಿಲ್ಲ. ಸಹಜವೇ. ನಮ್ಮ ಸಾಧನೆಗೆ ಕುಂದು ತೋರಿಸುವಂಥದ್ದನ್ನು ವಿಶ್ವಗುರುವಾದ ನಾವು ಒಪ್ಪುವುದು ಹೇಗೆ ಸಾಧ್ಯ? ಜಿ-20ಯನ್ನು ಸಾಧಿಸಿ ದೇಶಾದ್ಯಂತ, ಜಗತ್ತಿನಾದ್ಯಂತ ನಮ್ಮ ಶ್ರೇಷ್ಠತೆಯನ್ನು ಬಿತ್ತರಿಸಿಕೊಂಡಿರುವ ನಾವು, ಒಳಗೆ ಟೊಳ್ಳು, ಅಶಕ್ತ, ಅಪೌಷ್ಟಿಕ ಎಂದು ಒಪ್ಪಿಕೊಳ್ಳುವುದಾದರೂ ಎಂತು? “ಇವರ ಲೆಕ್ಕವೇ ಸರಿ ಇಲ್ಲ, ಅಪೌಷ್ಟಿಕತೆಗೆ ಕಾರಣ ಹಸಿವೇ ಆಗಬೇಕೆಂದೇನಿಲ್ಲ, ಪರಿಸರದಲ್ಲಿನ ಮಾಲಿನ್ಯವೂ, ವಂಶವಾಹಿನಿಯೂ ಕಾರಣವಾಗಬಹುದು…” ಎಂದು ಭಾರತ ವಿವರಣೆ ನೀಡುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಲೆಕ್ಕ ಎಲ್ಲಿ ತಪ್ಪುತ್ತಿದೆ?

ಆದರೆ, ಸ್ವತಃ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿರುವಂತೆ, 97 ಕೋಟಿ ಜನರಿಗೆ ಪಡಿತರ ಹಂಚಬೇಕಾದಲ್ಲಿ ಇನ್ನೂ 80 ಕೋಟಿ ಜನಕ್ಕೆ ಮಾತ್ರ ಹಂಚಲಾಗುತ್ತಿದೆ. ಈವರೆಗೆ 2011ರ ಜನಗಣತಿಯನ್ನಾಧರಿಸಿಯೇ ಪಡಿತರವನ್ನು ಹಂಚಲಾಗುತ್ತಿದೆಯೇ ಹೊರತು ಮತ್ತೆ ಗಣತಿಯನ್ನು ಮಾಡುವ ಪ್ರಯತ್ನವೂ ಇಲ್ಲ, 141 ಕೋಟಿಗೇರಿರುವ ಜನಸಂಖ್ಯೆಗೆ ತಕ್ಕಂತೆ ಪಡಿತರ ನೀಡುವ ಪ್ರಯತ್ನವೂ ಇಲ್ಲ. ಗೋದಾಮುಗಳಲ್ಲಿ ತುಂಬಿ ತುಳುಕುತ್ತಿರುವ ಅಕ್ಕಿಯನ್ನು ವಿದೇಶಗಳಿಗೆ ಎಥೆನಾಲ್ ತಯಾರಿಕೆಗೆ ರಫ್ತು ಮಾಡುವ ವಿಚಾರ ಮಾಡುವ ಸರ್ಕಾರವು ದೇಶದ ಬಡಜನರ ಹೊಟ್ಟೆ ತುಂಬಿಸಲು ಏನು ಮಾಡಬೇಕೆಂದು ವಿಚಾರ ಮಾಡದಿರುವುದೇ ಹಸಿವಿನ ಸೂಚ್ಯಂಕದಲ್ಲಿ ಕೆಳಗಿಳಿಯಲು ನಿಜವಾದ ಕಾರಣ. ಮನೆಯ ಯಜಮಾನ ಮಕ್ಕಳ ಹೊಟ್ಟೆ ತುಂಬಿಸುವ ಬದಲು, ಮನೆಯ ಧಾನ್ಯ ಮಾರಿ ಕುಡಿತಕ್ಕೆ ಹಣ ಹೊಂದಿಸಿದರೆ ಮಕ್ಕಳು ಬಡವಾಗದೆ ಇನ್ನೇನಾದೀತು? 141 ಕೋಟಿ ಜನಸಂಖ್ಯೆಯನ್ನು ಕಡೆಗಣಿಸಿದ್ದು ಸರ್ಕಾರ ಗೊತ್ತಿದ್ದೂ ಮಾಡುತ್ತಿರುವ ದೊಡ್ಡ ತಪ್ಪು. ಈ ಕುರಿತು ‘ಆಹಾರದ ಹಕ್ಕಿಗಾಗಿ ಆಂದೋಲನ’ದವರು ಕೆಲ ವರ್ಷಗಳಿಂದಲೂ, ಅದರಲ್ಲೂ ಕೊರೋನಾ ಸಮಯದಲ್ಲಿ ಬಹುವಾಗಿ ಸರ್ಕಾರವನ್ನು ಕೇಳಿಕೊಂಡಿದ್ದಿದೆ, ಆದರೂ ಮನವಿಗಳೆಲ್ಲ ಕಸದ ಬುಟ್ಟಿಗೆ ಹೋಗಿವೆಯೇ ಹೊರತು ನಾಗರಿಕ ಸಂಘಟನೆಗಳ ಕೇಳಿಕೆಯಲ್ಲಿ ಜನಹಿತವಿದೆಯೆಂಬುದನ್ನು ಸರ್ಕಾರ ಗಮನಿಸದೇ ಹೋಯಿತು. ನಿಮ್ಮ ಮನವಿಯನ್ನೂ ಪರಿಗಣಿಸುವುದಿಲ್ಲ, ಜಾಗತಿಕ ಹಸಿವಿನ ಸೂಚ್ಯಂಕವನ್ನೂ ಒಪ್ಪುವುದಿಲ್ಲ ಎನ್ನುವ ಈಗಿನ ಸರ್ಕಾರಕ್ಕೆ ಹೊಟ್ಟೆಗೆ ಹಿಟ್ಟಿಗಿಂತಲೂ ತನ್ನ ಜುಟ್ಟಿನ ಮಲ್ಲಿಗೆಯೇ ಆದ್ಯತೆ ಆಗಿದೆ.

ಎರಡನೆಯದು, ಮಕ್ಕಳ ಪೌಷ್ಟಿಕತೆ ಮತ್ತು ಅಪೌಷ್ಟಿಕತೆ. ಅಂಗನವಾಡಿಗಳಲ್ಲಿ ‘ಪೋಷಣ್ ಅಭಿಯಾನ’ ಎಂದು ಕೇಂದ್ರ ಸರ್ಕಾರ ಆರಂಭಿಸಿದೆ. ಪೋಷಣ್ ಟ್ರಾಕರನ್ನು ಕೂಡ ಆರಂಭಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸರ್ಕಾರವು ನಿಜದಲ್ಲಿ ಅಂಗನವಾಡಿಗಳಲ್ಲಿ ಮಾಡಿರುವ ಬದಲಾವಣೆಗಳೇನು? ಅಪೌಷ್ಟಿಕ ಇರುವ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಆಹಾರ ನೀಡಬೇಕು. ಆದರೆ, ತೀವ್ರ ಅಪೌಷ್ಟಿಕ ಮಕ್ಕಳ ನಿಜ ಸಂಖ್ಯೆಯನ್ನೇ ತೋರಿಸದಿದ್ದಾಗ ಮಾಡುವುದೇನು? ಇಂಥ ಮಕ್ಕಳು ಪೋಷಣ್ ಟ್ರಾಕರ್‌ನಲ್ಲಿ ಎಲ್ಲಿ ಬರುತ್ತವೆ? ಇನ್ನೂ ಒಂದು ಅಂಶವಿದೆ. ಅದೇನೆಂದರೆ, ಅಂಗನವಾಡಿಯ ಸೌಲಭ್ಯ ಪಡೆಯಲು ಆ ಮಗುವಿನ ಆಧಾರ್ ಜೋಡಣೆ ಆಗಿರಬೇಕು!

ದೇಶದಲ್ಲಿ ತೀವ್ರ ಅಪೌಷ್ಟಿಕ ಮಕ್ಕಳು ಹೆಚ್ಚಿರುವ 100 ಜಿಲ್ಲೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಕರ್ನಾಟಕದ 5 ಜಿಲ್ಲೆಗಳಿವೆ. ಆ ಜಿಲ್ಲೆಗಳಲ್ಲಿ ತೀವ್ರ ಅಪೌಷ್ಟಿಕ ಮತ್ತು ಸಾಧಾರಣ ಅಪೌಷ್ಟಿಕ ಮಗುವಿಗೆ ಪ್ರತಿದಿನವೂ ಒಂದು ಮೊಟ್ಟೆ ಕೊಡಬೇಕೆಂದು ‘ಪೋಷಣ್ ಅಭಿಯಾನ’ದ ಆದೇಶವಿದ್ದರೂ ಅದು ಪಾಲನೆಯಾಗುತ್ತಿಲ್ಲ. ವಾರಕ್ಕೆ ಮೂರು ದಿನ ಮಾತ್ರ ಎಲ್ಲ ಮಕ್ಕಳಿಗೂ ಮೊಟ್ಟೆ ಸಿಗುತ್ತದೆ. ಇನ್ನೆರಡು ಮೊಟ್ಟೆ ಎಲ್ಲಿ ಹೋಗುತ್ತಿವೆ? ಮಕ್ಕಳ ಪಾಲನ್ನು ಅಧಿಕಾರಸ್ಥರು ನುಂಗಿ ನೀರು ಕುಡಿಯುತ್ತಿರುವಾಗ ಹಸಿವಿನ ಸೂಚ್ಯಂಕದಲ್ಲಿ ಕಳಪೆ ಸಾಧನೆ ಕಾಣಿಸದೆ ಇನ್ನೇನು ಕಾಣಿಸಬೇಕು? ಕರ್ನಾಟಕದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲು ಕೊಡದೆ ಆರು ತಿಂಗಳಾಗುತ್ತ ಬಂತು. ಇಂತಹ ಲೋಪಗಳೇಕಾಗುತ್ತವೆ? ಹಾಲು ಮತ್ತು ಮೊಟ್ಟೆಗಳೆರಡೂ ಮಕ್ಕಳಿಗೆ ಅತ್ಯವಶ್ಯಕ ಪ್ರೋಟೀನ್‌ಯುಕ್ತ ಆಹಾರಗಳು. ಅವೇ ಮಕ್ಕಳಿಗೆ ಸಿಗದಿದ್ದರೆ ಅಪೌಷ್ಟಿಕತೆ ಹೆಚ್ಚದೆ ಇನ್ನೇನಾಗಲು ಸಾಧ್ಯ?

ಕರ್ನಾಟಕವನ್ನು ರಕ್ತಹೀನತೆ ಮುಕ್ತ ರಾಜ್ಯವನ್ನಾಗಿ ಮಾಡಲು 185 ಕೋಟಿ ರೂಪಾಯಿಗಳ ಯೋಜನೆ ಸಿದ್ಧಪಡಿಸಿರುವುದಾಗಿ ಇತ್ತೀಚೆಗೆ ಸರ್ಕಾರ ಪ್ರಕಟಿಸಿತ್ತು. ಆದರೆ, ಅದರ ಕಾರ್ಯಯೋಜನೆಗಳನ್ನು ನೋಡಿದರೆ, ಆರು ತಿಂಗಳಿಗೊಮ್ಮೆ ಮಕ್ಕಳ ತೂಕ ತಪಾಸಣೆಯ ಹೊರತಾಗಿ ಬೇರೆ ಯಾವೊಂದೂ ಹೊಸ ಯೋಜನೆಗಳು ಅದರಲ್ಲಿ ಕಾಣಲಿಲ್ಲ. ರಕ್ತಹೀನತೆ ಕಡಿಮೆಯಾಗಬೇಕೆಂದರೆ ಕಬ್ಬಿಣಾಂಶಯುಕ್ತ ಆಹಾರವನ್ನು ಮಗುವಿಗೆ ಕೊಡುವುದರ ಜೊತೆಗೆ, ಕಬ್ಬಿಣಾಂಶ ರಕ್ತದಲ್ಲಿ ಸೇರಿಕೊಳ್ಳಲು ಪ್ರೋಟೀನ್‌ಯುಕ್ತ ಅಂದರೆ – ಬೇಳೆಕಾಳುಗಳನ್ನು, ಹಾಲು, ಮೊಟ್ಟೆಯನ್ನು ಮಗುವಿಗೆ ಕೊಡುವುದು ಅತ್ಯವಶ್ಯ. ಏನೇನೋ ನೆಪಗಳನ್ನೊಡ್ಡಿ ಹಾಲು, ಮೊಟ್ಟೆಯನ್ನು ಮಕ್ಕಳಿಗೆ ಕೊಡದಿರುವುದು ಸರ್ಕಾರ ಮಾಡುವ ದೊಡ್ಡ ಅಪರಾಧಗಳಲ್ಲೊಂದಾಗುತ್ತದೆ.

ಇವೆಲ್ಲವುಗಳ ಮಧ್ಯೆ, ಅಂಗನವಾಡಿ ಸೇವೆಗಳಲ್ಲಿ ಹದಿಹರೆಯದ ಕಿಶೋರಿಯರೆಲ್ಲೋ ಸದ್ದಿಲ್ಲದೆ ಮಾಯವಾಗಿಬಿಟ್ಟಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ತಾಯಂದಿರಾಗುವ ಕಿಶೋರಿಯರ ಪೌಷ್ಟಿಕತೆ, ಅಪೌಷ್ಟಿಕತೆಗಳತ್ತ ತಕ್ಷಣವೇ ಗಮನ ಹರಿಸದಿದ್ದರೆ ಮಕ್ಕಳ ಅಪೌಷ್ಟಿಕತೆಯನ್ನು ನೀಗುವುದು ಕನಸಿನ ಮಾತೇ.

ದೇಶವೆಂದರೆ ಗಡಿಗಳಲ್ಲ, ದೇಶದೊಳಗಿನ ಜನರು; ಗಡಿ ಕಾಯುವ ಸೈನಿಕರಷ್ಟೇ ದೇಶದೊಳಗಿನ ಜನರ ಆಹಾರ ಭದ್ರತೆಯೂ ಮುಖ್ಯ ಎಂದು ಸಂಘಟನೆಗಳು ಮತ್ತೆ-ಮತ್ತೆ ಸರ್ಕಾರಕ್ಕೆ ಹೇಳುತ್ತಲೇ ಬಂದಿವೆ. ಆದರೆ, ಇವರನ್ನೆಲ್ಲ ‘ಎಡ ವಿಚಾರಧಾರೆಯವರು’ ಎಂದು ಸರ್ಕಾರ ಸಾರಾಸಗಟು ತಿರಸ್ಕರಿಸುತ್ತ ನಡೆದಿದೆ. ಕರ್ನಾಟಕದಲ್ಲಿ ಐದು ಕೆ.ಜಿ ಹೆಚ್ಚುವರಿ ಅಕ್ಕಿ ಕೊಡುವೆನೆಂದು ಕಾಂಗ್ರೆಸ್ ಘೋಷಿಸಿತ್ತು. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡಲು ಒಪ್ಪದಿದ್ದಾಗ ಹಣ ಕೊಡಲು ತೊಡಗಿದೆ. “ನಮ್ಮಲ್ಲೇ ಸಾಕಷ್ಟು ಜೋಳ, ರಾಗಿ, ಬೇಳೆಕಾಳುಗಳಿವೆ, ನಮ್ಮ ರೈತರಿಂದಲೇ ಖರೀದಿ ಮಾಡಿ ಕೊಡಿ,” ಎಂದು ರೈತಸಂಘಟನೆಗಳು, ನಾಗರಿಕ ಸಂಘಟನೆಗಳು, ಜನಸಾಮಾನ್ಯರು ಮತ್ತೆ-ಮತ್ತೆ ಮಂತ್ರಿಗಳಿಗೆ ಅಹವಾಲು ಮಾಡಿಕೊಳ್ಳುತ್ತಲೇ ಇವೆ. ಇವಾವುದೂ ಸರ್ಕಾರದ ಕಿವಿ ತಲುಪುತ್ತಿಲ್ಲವೋ ಅಥವಾ ದಾಟಿ ಹೋಗುತ್ತವೋ?

ಸರ್ಕಾರ ರೇಶನ್ ಕಾರ್ಡ್‌ನಲ್ಲಿ ತಿದ್ದುಪಡಿ, ಹೊಸದಾಗಿ ಹೆಸರು ಸೇರ್ಪಡೆಗೆ ಕೆಲವು ದಿನಗಳ ಅವಕಾಶ ಕೊಟ್ಟಿದೆ. ಹಳ್ಳಿಗಳಿಂದ ಜನರು ತಮ್ಮ ಮಕ್ಕಳ ಸಮೇತ ಎಲ್ಲ ದಾಖಲೆಗಳನ್ನು ಹಿಡಿದುಕೊಂಡು ಬಂದು ಆನ್‌ಲೈನ್ ಅಂಗಡಿಗಳ ಮುಂದೆ ಬಂದು ಕೂಡ್ರುವುದು ನಡೆದಿದೆ. ಈ ಲೇಖನವನ್ನು ಬರೆಯುತ್ತಿರುವಾಗಲೇ ಹಳ್ಳಿಯ ಕಾರ್ಯಕರ್ತೆಯೊಬ್ಬಳಿಂದ ಫೋನ್… “ಸರ್ವರ್ ಬೀಜಿ ಎಂದೇ ಹೇಳುತ್ತಿದ್ದಾರೆ, ಏನು ಮಾಡೋಣ್ರೀ?” ಏನು ಉತ್ತರವಿದೆ ನನ್ನ ಬಳಿ? ಎಷ್ಟೋ ತಿಂಗಳುಗಳ ನಂತರ ಹೊಸದಾಗಿ ಹೆಸರು ಸೇರಿಸಲು ಸರ್ಕಾರ ಪಡಿತರ ಚೀಟಿದಾರರಿಗೆ ಅವಕಾಶ ಕೊಟ್ಟಿದೆ ನಿಜ. ಆದರೆ, ಆನ್‌ಲೈನ್ ಎಂಬ ಪೆಡಂಭೂತ ಆ ಅವಕಾಶವನ್ನು ಪಡೆಯದಂತೆ ಅಡ್ಡ ನಿಂತಿದೆಯಲ್ಲ? ರಾಜ್ಯದಲ್ಲಿ ಮೂರೂವರೆ ಲಕ್ಶ ಪಡಿತರ ಚೀಟಿದಾರರು ಕಾರ್ಡ್ ಇದ್ದರೂ ಧಾನ್ಯ ಪಡೆಯುತ್ತಿಲ್ಲ ಎಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಪಡಿತರ ಚೀಟಿ ಇದ್ದೂ ಧಾನ್ಯ ಒಯ್ಯಲಿಕ್ಕೂ ಕೂಡ ಬಯೋಮೆಟ್ರಿಕ್ ಎಂಬ ಭಯೋತ್ಪಾದಕ ಅಡ್ಡ ನಿಂತಿರುವುದೇ ಇದಕ್ಕೆ ಕಾರಣ.

‘ದೇವರು ಕೊಟ್ಟರೂ ಪೂಜಾರಿ ಕೊಡಗೊಡ’ ಎಂದು ಗಾದೆ ಮಾತು ಇದೆ. ಆದರಿಲ್ಲಿ ದೇವರೇ ಕೊಡಲಿಕ್ಕೆ ಒಲ್ಲ. ಪೂಜಾರಿ ತನ್ನ ಕೆಲಸವನ್ನು ಯಥಾವತ್ ಮಾಡುತ್ತಿದ್ದಾನೆ. ಹೀಗಾಗಿ, ಭಕ್ತರಿಗೆ ವರವೂ ಇಲ್ಲ, ಪ್ರಸಾದವೂ ಇಲ್ಲವಾಗಿದೆ. ಆದರೆ, ಹಸಿವಿನ ಸೂಚ್ಯಂಕದಲ್ಲಿ ಮೇಲಕ್ಕೇರಲೇಬೇಕಾದ ಸವಾಲು ನಮ್ಮ ಭಾರತದ ಮುಂದಿದೆ. ಹಸಿವಿನ ಸೂಚ್ಯಂಕಗಳನ್ನು ಕಡೆಗಣಿಸದೆ, ದೂಷಿಸದೆ, ಅದನ್ನೇ ಸವಾಲಾಗಿ ಸ್ವೀಕರಿಸಿ ನಮ್ಮ ಆಹಾರ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬೇಕು. ಹಸಿವನ್ನು ಗೆದ್ದು ಅಪೌಷ್ಟಿಕತೆಯನ್ನು ಗೆಲ್ಲಲೇಬೇಕು.

(ಮುಖ್ಯಚಿತ್ರ ಕೃಪೆ: ಮಿತುಲ್ ಗಜೇರಾ)

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಶಾರದಾ ಗೋಪಾಲ
ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...