ಈ ದಿನ ಸಂಪಾದಕೀಯ | ಉತ್ತರಕಾಶಿ ಸುರಂಗ ಕುಸಿತದಲ್ಲಿವೆ ಹಿಂದು-ಮುಸ್ಲಿಮ್ ಏಕತೆ ಪಾಠಗಳು

Date:

ದ್ವೇಷದ ವಿಷವನ್ನು ಹರಡದೆ ನಾವೆಲ್ಲ ಸಾಮರಸ್ಯದಿಂದ ಬದುಕಬೇಕಿದೆ. ದೇಶಕ್ಕಾಗಿ ನಮ್ಮ ನೂರಕ್ಕೆ ನೂರು ಪಾಲನ್ನು ನೀಡಲು ನಾವು ತಯಾರು. ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ’ ಎಂದಿದ್ದಾರೆ ವಕೀಲ್ ಹಸನ್

 

ಉತ್ತರಕಾಶಿಯ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹಿಂದುಗಳು ಮತ್ತು ಮುಸಲ್ಮಾನರು ಕೈ ಕೈ ಕಲೆಸಿ ಕಾಪಾಡಿದ್ದಾರೆ. ʼಒಗ್ಗಟ್ಟಿನಲ್ಲಿ ಬಲವಿದೆ, ಒಡಕಿನಲ್ಲಿ ವಿನಾಶವಡಗಿದೆʼ ಎಂಬ ಸಂದೇಶವನ್ನು ರುಜುವಾತು ಮಾಡಿ ತೋರಿದ್ದಾರೆ.

ಈ ಹೀರೋಗಳ ಹೆಸರುಗಳು ಮುನ್ನಾ ಖುರೇಶಿ, ಮೋನು ಕುಮಾರ್, ಫಿರೋಜ್ ಖುರೇಶಿ, ನಾಸಿರ್ ಖಾನ್, ಜತಿನ್, ದೇವೇಂದರ್ ಕುಮಾರ್, ವಕೀಲ್ ಹಸನ್, ಇರ್ಷಾದ್ ಅನ್ಸಾರಿ, ರಾಶಿದ್ ಅನ್ಸಾರಿ, ನಸೀಮ್ ಮಲ್ಲಿಕ್, ಸೌರಭ್ ಹಾಗೂ ಅಂಕುರ್.

ಕೇವಲ 800 ಮಿಲಿಮೀಟರ್ ಸುತ್ತಳತೆಯ ಇಕ್ಕಟ್ಟಿನ ಉಕ್ಕಿನಕೊಳವೆ ಕಾಲುವೆಯಲ್ಲಿ ಮೊಣಕಾಲು ಮಡಿಚಿ ಕುಳಿತು, ಕತ್ತು ಬಗ್ಗಿಸಿ, ದೇಹದ ಎಲ್ಲ ಭಾರವನ್ನು ಪಾದಗಳ ಮೇಲೆ ಹೇರಿ, ಮಣ ಭಾರದ ಡ್ರಿಲ್ಲಿಂಗ್ ಮಷೀನನ್ನು ಎದೆಗೆ ಒತ್ತಿ ಹಿಡಿದು ‘ಅಡಚಣೆ’ಯನ್ನು ಕೊರೆದು ತುಂಡರಿಸಿದ್ದಾರೆ ಇವರು. ಕಡುಕಠಿಣ ಭಂಗಿಯಲ್ಲಿ, ಆಮ್ಲಜನಕದ ಕೊರತೆಯಲ್ಲಿ ಹಗಲಿರುಳು ನಡೆಸಿದ ಸರದಿ ಕಾರ್ಯಾಚರಣೆಯಿದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಕ್ಕಟ್ಟಿನಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಿದ ಅನುಭವಉಳ್ಳ ‘ಇಲಿಬಿಲ ಗಣಿಗಾರರು’ (Rat hole miners) ಇವರು ಹನ್ನೆರಡು ಮಂದಿ. ‘ಉಕ್ಕಿನ ಕೊಳವೆ ಕಾಲುವೆ’ಯನ್ನು ಸ್ವಚ್ಛಗೊಳಿಸಿದರು. ಆನಂತರವೇ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ದಳದವರು ಸಿಕ್ಕಿ ಹಾಕಿಕೊಂಡ ಕಾರ್ಮಿಕರನ್ನು ಹೊರತಂದರು.

ಯಂತ್ರಗಳ ಮೂಲಕ ಕೈಗೊಂಡಿದ್ದ ಸುರಕ್ಷತಾ ಕಾರ್ಯ ನಡುವಿನಲ್ಲೇ ಭಂಗಗೊಂಡಿತ್ತು. ಕಲ್ಲು, ಮರಳು, ಜಜ್ಜಿ ಅಂಕುಡೊಂಕಾಗಿ ವಿರೂಪಗೊಂಡಿದ್ದ ಉಕ್ಕಿನ ತುಂಡುಗಳು ಹಾಗೂ ಜಾಲಪಟ್ಟಿಗಳ ರಾಶಿ ತುಂಬಿಕೊಂಡು ಕೊಳವೆ ಮಾರ್ಗ ಮುಚ್ಚಿ ಹೋಗಿತ್ತು. ಯಂತ್ರಗಳ ಸ್ಥಾನವನ್ನು ಮನುಷ್ಯರು ತುಂಬಬೇಕಾಗಿತ್ತು. ಇಬ್ಬಿಬ್ಬರಾಗಿ ಕೊಳವೆ ಪ್ರವೇಶಿಸಿದರು. ತಾಸುಗಟ್ಟಲೆ ‘ಕಸ’ವನ್ನು ಹೆಕ್ಕಿ ತೆಗೆದು ಬಕೆಟುಗಳಿಗೆ ತುಂಬಿ ‘ದಾರಿ’ ಮಾಡಿದರು. ಹದಿನಾರು ದಿನಗಳ ಕಾಲ ಭೂಗರ್ಭದ ಕತ್ತಲ ಕೂಪದಲ್ಲಿ ಜೀವ ಹಿಡಿದಿದ್ದವರನ್ನು ತಲುಪಿ ಮೊತ್ತಮೊದಲು ಅವರ ಕೈ ಕುಲುಕಿದವರು ದೇವೇಂದ್ರಕುಮಾರ್ ಮತ್ತು ಫಿರೋಜ್ ಖುರೇಶಿ.

ಝಾರ್ಖಂಡ್, ಛತ್ತೀಸಗಢ ಹಾಗೂ ಪಶ್ಚಿಮ ಉತ್ತರಪ್ರದೇಶದವರು ಇವರು. ‘ನಾವು ಕಾರ್ಮಿಕರು, ಸಿಕ್ಕಿ ಹಾಕಿಕೊಂಡಿದ್ದ ನಮ್ಮದೇ ಕಾರ್ಮಿಕ ಬಂಧುಗಳನ್ನು ಕಾಪಾಡಿದ್ದೇವೆ. ಮುಂದೊಮ್ಮೆ ನಾವು ಹೀಗೆಯೇ ಸಿಕ್ಕಿ ಹಾಕಿಕೊಳ್ಳಬಹುದು. ಆಗ ಈ ಕಾರ್ಮಿಕರು ನಮ್ಮನ್ನು ಕಾಪಾಡುವರು’ ಎಂಬುದು ಇವರ ಬಂಧುತ್ವ ತತ್ವ. ಈ ತತ್ವವನ್ನು ಒಡೆದು ಹಂಚಿ ಹೋಗಿರುವ ಭಾರತದ ಸಾಮಾಜಿಕ ಬದುಕಿಗೆ ತುರ್ತಾಗಿ ಅನ್ವಯಿಸಬೇಕಿದೆ.

ನನ್ನನ್ನು ಕೊಂದು ಹಾಕಿದರೂ ರಾಮ ಮತ್ತು ರಹೀಮನ ಹೆಸರುಗಳ ಹೇಳುವುದ ಬಿಡೆನು. ನನ್ನ ಪಾಲಿಗೆ ಇಬ್ಬರೂ ಒಂದೇ ದೈವ. ಈ ಎರಡು ಹೆಸರುಗಳು ನನ್ನ ತುಟಿಗಳ ಮೇಲೆ ನಲಿಯುತ್ತಿದ್ದರೆ ನಗು ನಗುತ್ತ ಸಾಯುವೆ’ ಎಂದಿದ್ದರು ಗಾಂಧೀಜಿ. ಹಿಂದೂಮುಸ್ಲಿಮರಿಬ್ಬರೂ ಒಂದಾಗಿ ಬಾಳಬೇಕೆಂದ ಅವರನ್ನು ಮೂಲಭೂತವಾದಿಗಳು ದ್ವೇಷಿಸಿದರು. ಈ ಮೂಲಭೂತವಾದದ ಪ್ರತಿನಿಧಿ ನಾಥೂರಾಮ ಗೋಡ್ಸೆ ಗಾಂಧೀಜಿಯನ್ನು ಕೊಂದ.

ನಾವೊಂದು ಒಡೆದ ಮನೆಯಾಗಿಬಿಟ್ಟಿದ್ದೇವೆ ಎಂದು ಒಪ್ಪಿಕೊಳ್ಳಲು ನಾಚಿಕೆಯೆನಿಸುತ್ತಿದೆ. ಹೆದರಿ ಹೇಡಿಗಳಾಗಿ ಪರಸ್ಪರರ ಕುತ್ತಿಗೆಯತ್ತ ಕೈಚಾಚಿದ್ದೇವೆ. ಈ ಅಪನಂಬಿಕೆಯ ಹಿಂದೆ ಭಯ ಮತ್ತು ಹೇಡಿತನಗಳು ಅಡಗಿವೆ. ನಮ್ಮ ನೆರಳನ್ನೇ ಶಂಕಿಸಿ ಹೆದರುವಷ್ಟು ಕೆಳಜಾರಿದ್ದೇವೆಯೇ ನಾವು’ ಎಂದಿದ್ದರು. ಅವರ ಈ ಪ್ರಶ್ನೆ ಇಂದಿಗೂ ಜೀವಂತ ಉಳಿದಿರುವುದು ದೇಶದ ದುರಂತ.

ಹಿಂದೂಮುಸ್ಲಿಂಪಾರ್ಸಿಕ್ರೈಸ್ತಯಹೂದಿ ಏಕತೆಯಲ್ಲಿ ನಂಬಿಕೆಯಿಲ್ಲದವರಿಗೆ ಮತ ನೀಡಬಾರದೆಂಬುದು ಗಾಂಧೀಜಿಯ ಗಟ್ಟಿ ನಿಲುವಾಗಿತ್ತು. ಆದರೆ ಕಳೆದ 10-15 ವರ್ಷಗಳಿಂದ ವಿಶೇಷವಾಗಿ ಹಿಂದೂಮುಸಲ್ಮಾನರ ನಡುವೆ ಪರಸ್ಪರ ಅಪನಂಬಿಕೆಯ ವಿಷ ಹಿಂಡಿ, ಒಡೆದು ಬಹುಸಂಖ್ಯಾತವಾದವನ್ನು ಪ್ರತಿಷ್ಠಾಪಿಸುವ ದ್ವೇಷದ ದಳ್ಳುರಿಯನ್ನು ಹಬ್ಬಿಸಲಾಗುತ್ತಿದೆ. ಈ ದಳ್ಳುರಿಗೆ ‘ದೇಶಪ್ರೇಮ’ ಮತ್ತು ‘ರಾಷ್ಟ್ರೀಯತೆ’ಯ ಹೆಸರು ಇರಿಸಿರುವುದು ಬಹುದೊಡ್ಡ ವಿಡಂಬನೆ. ಮಹಾತ್ಮನ ನಂಬಿಕೆಗಳಿಗೆ ದೇಶದೊಳಗೆ ಈ ಪರಿ ಬೆಂಕಿ ಇಟ್ಟು, ದೇಶವಿದೇಶಗಳಲ್ಲಿ ಆತನ ಪ್ರತಿಮೆಗೆ ಶಿರಬಾಗಿ ನಮಿಸಿ ಆರಾಧಿಸುವುದು ಅದ್ವಿತೀಯ ಆತ್ಮವಂಚನೆ ಅಲ್ಲವೇ?

ಮುಸಲ್ಮಾನರನ್ನು ನಿರಂತರವಾಗಿ ಹೊರಗಿನವರೆಂದೂ ಇತರರೆಂದೂ ಕಾಣಲಾಗುತ್ತಿದೆ. ಮೂರನೆಯ ದರ್ಜೆಯ ಪ್ರಜೆಗಳಂತೆ ಬಿದ್ದಿರಬೇಕೆಂಬ ಸಂದೇಶಗಳನ್ನು ಬಗೆಬಗೆಯಾಗಿ ಅವರಿಗೆ ರವಾನಿಸುತ್ತ ಬರಲಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಹಾಡಹಗಲೇ ದಾರಿ ಹೆದ್ದಾರಿಗಳಲ್ಲಿ ಅವರನ್ನು ಜಜ್ಜಿ ಕೊಲ್ಲಲಾಗಿದೆ. ಕೊಂದವರನ್ನು ಕೊಂಡಾಡಲಾಗಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತು, ಹತ್ತು ಹಲವು ನಿರ್ಬಂಧಗಳ ವಿಧಿಸಿ ಮುಕ್ಕಾಲು ಕೋಟಿ ಜನಸಂಖ್ಯೆಯ ಕಾಶ್ಮೀರ ಕಣಿವೆಗೆ ತಿಂಗಳುಗಟ್ಟಲೆ ಬೀಗ ಜಡಿಯಲಾಯಿತು. ಈ ದೇಶದ ನಾಗರಿಕರೇ ಅಲ್ಲ ಎಂಬ ತಳಮಳಕ್ಕೆ ಮುಸಲ್ಮಾನರನ್ನು ತಳ್ಳಲಾಯಿತು. ಜನಮಾನಸದಲ್ಲಿ ಪೂರ್ವಗ್ರಹ ಮತ್ತು ದ್ವೇಷವನ್ನು ಅವರ ವಿರುದ್ಧ ಬಡಿದೆಬ್ಬಿಸಲಾಯಿತು. ದೆಹಲಿ ಕೋಮುಗಲಭೆಯಲ್ಲಿ ಅವರನ್ನು ಬೇಟೆಯಾಡಿದ ಪರಿ 2002ರ ಗುಜರಾತ್ ಭೀಭತ್ಸವನ್ನು ನೆನಪಿಸಿತ್ತು. ಮುಸಲ್ಮಾನರೊಂದಿಗೆ ಕೈ ಕಲೆಸಿ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳನ್ನು ಮಟ್ಟ ಹಾಕುವುದು ಮುಂದುವರೆದಿದೆ. ಅವರ ಕುರಿತು ಸಹಾನುಭೂತಿ ತೋರುವವರು ದೇಶದ್ರೋಹಿಗಳೆಂದೂ ಅವರಿಗೆ ಗುಂಡಿಕ್ಕಬೇಕೆಂದೂ ಕೇಂದ್ರ ಮಂತ್ರಿಗಳು ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಿದ್ದಾರೆ.

ದೇಶದಲ್ಲಿಂದು ಅನುದಿನವೂ ಕೋಮುವಾದದ ಹೊಸ ಕೊಳ್ಳಿಗಳನ್ನು ಹಚ್ಚಲಾಗುತ್ತಿದೆ. ಆದರೆ ಹಚ್ಚಲಾಗುವ ಈ ಕಿಚ್ಚಿಗೆ ಹಿಂದೂಗಳುಮುಸಲ್ಮಾನರು ಎಂಬ ಧರ್ಮ ಇರುವುದಿಲ್ಲ. ಉರಿ ಉರಿದು, ಕಂಡದ್ದನ್ನೆಲ್ಲ ಬೂದಿ ಮಾಡುವುದೊಂದೇ ಕಿಚ್ಚಿನ ನಿಜ ಧರ್ಮ. ಮನೆಯನ್ನೇ ಹೊತ್ತಿಸಿ ಉರಿಸಿ ಬೂದಿ ಆಗಿಸಿದ ನಂತರ ಬದುಕಿ ಬಾಳಲುಂಟೇ?

ಹನ್ನೆರಡು ಮಂದಿ ಇಲಿಬಿಲ ಗಣಿಗಾರರು ದೆಹಲಿಯ ರಾಕ್ವೆಲ್ ಎಂಟರ್ ಪ್ರೈಸಸ್ ಎಂಬ ಕಂಪನಿಗೆ ಸೇರಿದವರು. ಈ ಕಂಪನಿಯ ಮಾಲೀಕ ವಕೀಲ್ ಹಸನ್.

ನಮ್ಮ ತಂಡದಲ್ಲಿ ಹಿಂದುಗಳು ಮುಸ್ಲಿಮರಿಬ್ಬರೂ ಇದ್ದಾರೆ. 41 ಕಾರ್ಮಿಕರ ಪ್ರಾಣಗಳನ್ನು ಕಾಪಾಡಲು ಇಬ್ಬರೂ ಶ್ರಮಿಸಿದ್ದಾರೆ. ಯಾರೊಬ್ಬರಿಂದ ಮಾತ್ರವೇ ಆಗುತ್ತಿದ್ದ ಕೆಲಸವಲ್ಲ ಇದು. ದ್ವೇಷದ ವಿಷವನ್ನು ಹರಡದೆ ನಾವೆಲ್ಲ ಸಾಮರಸ್ಯದಿಂದ ಬದುಕಬೇಕಿದೆ. ದೇಶಕ್ಕಾಗಿ ನಮ್ಮ ನೂರಕ್ಕೆ ನೂರು ಪಾಲನ್ನು ನೀಡಲು ನಾವು ತಯಾರು. ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ’ ಎಂದಿದ್ದಾರೆ ವಕೀಲ್ ಹಸನ್.

ಹಿಂದೂ ಮುಸ್ಲಿಮ್ ಏಕತೆಯು ಭಾರತ ರಾಷ್ಟ್ರೀಯತೆಯ ಅವಿಭಾಜ್ಯ ಅಂಗ ಎಂಬುದು ಮಹಾತ್ಮನ ಮಾತುಗಳು. ಗಾಂಧಿ ಮತ್ತು ವಕೀಲ್ ಹಸನ್ ಅನಿಸಿಕೆಗಳನ್ನು ಆತ್ಮಶುದ್ಧಿಯಿಂದ ಮನನ ಮಾಡಬೇಕಿದೆ ಸಮಾಜ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು

ಅಚ್ಛೇ ದಿನಗಳು ಬರಲಿಲ್ಲ ಎಂಬುದು ಜನರ ಅಭಿಪ್ರಾಯಗಳಿಂದ ಸ್ಪಷ್ಟವಾಗುತ್ತದೆ. ದೇಶಭಕ್ತಿಯ ಹೆಸರಲ್ಲಿ...

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...