‌ವಿಶ್ವಕಪ್‌ ಕ್ರಿಕೆಟ್‌ | ದಾಖಲೆಗಳ ಸರದಾರ ಮೊಹಮ್ಮದ್ ಶಮಿಗೊಂದು ಸಲಾಮ್

Date:

ʼಮರದ ಕೊಂಬೆಯ ಮೇಲೆ ಕೂತ ಹಕ್ಕಿ, ತಾನು ನಂಬಿರುವುದು ಕೂತ ಕೊಂಬೆಯನ್ನಲ್ಲ, ತನ್ನ ರೆಕ್ಕೆಗಳನ್ನುʼ ಎನ್ನುವ ಜನಪ್ರಿಯ ಮಾತೊಂದಿದೆ. ಇದು ಈ ಕ್ಷಣಕ್ಕೆ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಒಪ್ಪುವಂತಹ ಮಾತು. ಆತನ ಬೌಲಿಂಗ್‌ ಶೈಲಿಗೆ ಹೊಂದುವಂತಹ ಮಾತು. ಆತನ ಅಂತಃಕಲಹಕ್ಕೆ ಮದ್ದರೆಯುವ ಮಾತು. ಶಮಿ, ಹಕ್ಕಿ, ತಂಡ, ತೋಳ್ಬಲ, ಅಭಿಮಾನಿಗಳು, ಆತ್ಮಸ್ಥೈರ್ಯವೆಲ್ಲ ರೆಕ್ಕೆಯ ರೂಪಕವನ್ನು ಬಿಡಿಸಿಡುತ್ತದೆ.

ಶಮಿಯ ಬೌಲಿಂಗ್ ಶೈಲಿ ಎಂದರೆ, ಅದು ಬರಿಗಣ್ಣಿಗೆ ನಿಲುಕಿ, ಇಷ್ಟೇ ಎಂದು ನಿರ್ಧರಿಸುವುದಲ್ಲ. ಹಾಗೆ ನಿರ್ಧರಿಸಲೂ ಅದು ಅನುವು ಮಾಡಿಕೊಡುವುದಿಲ್ಲ. ಒಂದು ಓವರ್ ನ ಆರು ಬಾಲ್ ಗಳನ್ನು ಆರು ರೀತಿಯಲ್ಲಿ ಮಾಡುವ ವಿಶಿಷ್ಟ ಬೌಲರ್. ಬಿಡುಬೀಸಾಗಿ ರಿವರ್ಸ್ ಸ್ವಿಂಗ್ ಎನ್ನಬಹುದು. ಆದರೆ ಅದಕ್ಕೂ ಮೀರಿದ ಕೈಚಳಕ ಆ ಬೌಲಿಂಗ್ ನಲ್ಲಿದೆ.

ಮೊನ್ನೆಯ ಶ್ರೀಲಂಕಾ ತಂಡದ ಮೇಲೆ ಬೌಲಿಂಗ್ ದಾಳಿ ಮಾಡಿದ ಶಮಿ, ಶ್ರೀಲಂಕಾದ ಬ್ಯಾಟರ್ ಗಳನ್ನು ಅಕ್ಷರಶಃ ಬೇಟೆಯಾಡಿದ್ದರು. ಶಮಿ, ಎಸೆದ 5 ಓವರ್ ಗಳಲ್ಲಿ ಒಂದು ಮೇಡಿನ್ ಒಳಗೊಂಡಂತೆ ಕೇವಲ 18 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಶಮಿಯ ಬೌಲಿಂಗ್ ವೈಖರಿ ನೋಡಿದ ಪಾಕಿಸ್ತಾನದ ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತನಾದ ಶೋಯಬ್ ಅಖ್ತರ್, ‘ನನ್ನ ಸಹೋದರ ಶಮಿಗೆ ಸೆಲ್ಯೂಟ್. ಭಾರತ ನಿಮ್ಮಿಂದ ಏನನ್ನು ನಿರೀಕ್ಷಿಸಿತ್ತು ಅದನ್ನೇ ಮಾಡಿದ್ದೀರಿ. ನಿಮ್ಮ ಬೌಲಿಂಗಿಗೆ ಫ್ಯಾನ್ ಆಗಿಬಿಟ್ಟೆ’ ಎಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಹೊಗಳಿಕೆ ಮುಸ್ಲಿಂ ಎಂಬ ಕಾರಣಕ್ಕೆ ಬಂದಿರುವುದಲ್ಲ, ಶೋಯಬ್ ಅಖ್ತರ್ ಸುಮ್ಮನೆ ಹೇಳುವವನೂ ಅಲ್ಲ. ಒಬ್ಬ ಬೌಲರ್ ಗೆ ಮತ್ತೊಬ್ಬ ಬೌಲರ್ ನ ಕಷ್ಟ ಮತ್ತು ಖುಷಿಗಳು ಗೊತ್ತಿರುತ್ತವೆ. ಗೊತ್ತಿದ್ದೇ ಆಡಿರುವ ಮಾತು. ಶಮಿಯ ಅಸಲಿ ಪ್ರತಿಭೆಯನ್ನು ಅರಿತೇ ಮೆಚ್ಚಿದ ಮಾತು.

ಇನ್ನು, ಏಕದಿನ ಕ್ರಿಕೆಟ್ ನಲ್ಲಿ ಮೊಹಮ್ಮದ್ ಶಮಿಗೆ ಸಿಕ್ಕ 4ನೇ ಐದು ವಿಕೆಟ್ ಸಾಧನೆ ಇದು. ಆ ಮೂಲಕ ತಲಾ 3 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದ ಭಾರತೀಯ ಬೌಲರ್ ಗಳಾದ ಹರ್ಭಜನ್ ಸಿಂಗ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಶಮಿ ಹಿಂದಿಕ್ಕಿದ್ದಾರೆ. ಅಂದಹಾಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಶಮಿ 3 ಬಾರಿ ಐದು ವಿಕೆಟ್ ಸಾಧನೆ ಮೆರೆದು ಮತ್ತೊಂದು ದಾಖಲೆ ಬರೆದಿದ್ದಾರೆ. ದಾಖಲೆಯ ವೀರ ಎನಿಸಿಕೊಂಡಿದ್ದಾರೆ. ಅಂದಹಾಗೆ, ಕ್ರೀಡಾ ಜಗತ್ತಿನಲ್ಲಿ ದಾಖಲೆಗಳಿರುವುದೇ ಮುರಿಯುವುದಕ್ಕಾಗಿ. ಅದು ಶಮಿಗೂ ಗೊತ್ತಿದೆ.

ಶ್ರೀಲಂಕಾ ವಿರುದ್ಧ ತಮ್ಮ ಸಾಧನೆ ಕುರಿತು ಸ್ವತಃ ಶಮಿ, ‘ವೈಟ್ ಬಾಲ್ ಕ್ರಿಕೆಟ್ ನಲ್ಲಿ ಲಯ ಕಂಡುಕೊಳ್ಳುವುದು ಮತ್ತು ಒಳ್ಳೆಯ ಲೆನ್ತ್ ನಲ್ಲಿ ಬೌಲ್ ಮಾಡುವುದು ತುಂಬಾ ಮುಖ್ಯ. ಹೊಸ ಚೆಂಡಿನಲ್ಲಿ ನೀವು ಒಳ್ಳೆಯ ಜಾಗದಲ್ಲಿ ಪಿಚ್ ಮಾಡಿದರೆ, ಪಿಚ್ ನಿಮಗೆ ಇನ್ನಷ್ಟು ನೆರವು ನೀಡುತ್ತದೆ. ಆದರೆ, ನನಗೆ ಲೆನ್ತ್ ತುಂಬಾ ಮುಖ್ಯವಾಗುತ್ತದೆ. ಬೌಲಿಂಗ್ ವೇಳೆ ಪ್ರೇಕ್ಷಕರಿಂದ ಅದ್ಭುತ ಬೆಂಬಲ ಸಿಕ್ಕಿದೆ, ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದಿದ್ದಾರೆ.

ಮೂವತ್ಮೂರು ವರ್ಷಕ್ಕೇ ಹಿರಿಯನಂತೆ ಕಾಣುವ ಶಮಿ ಹೆಚ್ಚು ಮಾತನಾಡದ ಸಂಕೋಚಜೀವಿ. ಆದರೆ ಫೀಲ್ಡಿಗೆ ಇಳಿದರೆ, ಬಾಲ್ ನೊಂದಿಗೆ ಬೆರಗುಟ್ಟಿಸುವ ಬಗೆಯೇ ಬೇರೆ. ಅದರಲ್ಲೂ ಎದುರಾಳಿ ತಂಡದ ಬ್ಯಾಟರ್ ಗೆ ಯಾವ ಬಾಲ್ ಹಾಕಬೇಕು, ಹೇಗೆ ಆಡಿಸಬೇಕು, ಗೊಂದಲಕ್ಕೀಡು ಮಾಡಬೇಕು, ವಿಕೆಟ್ ಒಪ್ಪಿಸಿ ಹೋಗುವಂತೆ ನೋಡಿಕೊಳ್ಳಬೇಕು ಎಂಬುದನ್ನು ತಮ್ಮ ಅನುಭವದಿಂದ ಅರಿತ ಆಟಗಾರ.

ಮೊಹಮ್ಮದ್ ಶಮಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ತಂಡಕ್ಕೆ ಆಯ್ಕೆಯಾಗಿದ್ದರೂ, 11 ಆಟಗಾರರಲ್ಲೊಬ್ಬರಾಗಿರಲಿಲ್ಲ. ಅಕಸ್ಮಾತ್ ಹಾರ್ದಿಕ್ ಪಾಂಡ್ಯ ನಿರ್ಗಮನದಿಂದ ತಂಡಕ್ಕೆ ಮರಳಿದ ಶಮಿ, ಆಡಿದ 3 ಪಂದ್ಯಗಳಲ್ಲಿ 14 ವಿಕೆಟ್ ಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಒನ್ ಡೇ ವಿಶ್ವಕಪ್ ಅಖಾಡದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಭಾರತ ತಂಡದ ಬೌಲರ್ ಗಳಾದ ಜಹೀರ್ ಖಾನ್ (44), ಜಾವಗಲ್ ಶ್ರೀನಾಥ್ (44) ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಶಮಿ, ವಿಶ್ವಕಪ್ ನಲ್ಲಿ ಆಡಿದ ಕೇವಲ 14 ಪಂದ್ಯಗಳಲ್ಲಿ ದಾಖಲೆಯ ಒಟ್ಟು 45 ವಿಕೆಟ್ ಉರುಳಿಸಿದ್ದಾರೆ.

ಉತ್ತರಪ್ರದೇಶದ ಸಾಹಸಪುರ ಎಂಬ ಸಣ್ಣ ಊರಿನ ರೈತಾಪಿ ಕುಟುಂಬದಿಂದ ಬಂದ ಶಮಿ, ಸ್ಥಿತಿವಂತರಲ್ಲ. ಆದರೆ ಮನೆಯಲ್ಲಿ ಕ್ರಿಕೆಟ್ ಆಟದ ಕಲರವ ಇತ್ತು. ಶಮಿ ಅಪ್ಪ ತೌಸಿಫ್‌ ಅಲಿ ಆ ಕಾಲಕ್ಕೇ ಅತ್ಯುತ್ತಮ ಬೌಲರ್ ಎನ್ನುವ ಹೆಸರು ಪಡೆದಿದ್ದರು. ಅಪ್ಪನನ್ನು ನೋಡಿ ಮಗ ಕಲಿತನೋ ಅಥವಾ ಕ್ರಿಕೆಟ್‌ ರಕ್ತದಲ್ಲಿಯೇ ಕರಗತವಾಗಿತ್ತೋ, ಶಮಿ ಕೂಡ ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿದ್ದರು. ಅದರಲ್ಲೂ ಬೌಲರ್ ಆಗಿಯೇ ತೀರಬೇಕೆಂದು ಹಠಕ್ಕೆ ಬಿದ್ದಿದ್ದರು. ಆತನ ಬೌಲಿಂಗ್ ಶೈಲಿಗೆ ಸ್ವತಃ ಅಪ್ಪನೇ ಮರುಳಾಗಿದ್ದರು. ಭಾರತ ತಂಡವಿರಲಿ, ಜಿಲ್ಲಾ ಮಟ್ಟದ ತಂಡಕ್ಕೂ ನಾನು ಆಡಲಿಲ್ಲ, ಮಗನಾದರೂ ಆಡಲಿ, ಹೆಸರು ಮಾಡಲಿ ಎಂಬ ಮಹತ್ವಾಕಾಂಕ್ಷೆಯಿಂದ ಅಪ್ಪ ಅಲಿ, ಸಿದ್ದಿಕಿ ಎಂಬ ಕೋಚ್‌ ಬಳಿ ಶಮಿಯನ್ನು ಬಿಡುತ್ತಾರೆ. ಶಮಿಯ ಬೌಲಿಂಗ್‌ ಶೈಲಿ ಸಿದ್ದಿಕಿಯಲ್ಲಿ ಹೊಸ ಭರವಸೆ ಹುಟ್ಟಿಸುತ್ತದೆ.

ಆದರೆ, ಜಾತಿ, ಧರ್ಮ, ಪ್ರಭಾವ, ಹಣವಿಲ್ಲದ ಕಾರಣಕ್ಕೆ ಉತ್ತರ ಪ್ರದೇಶದ ಅಂಡರ್‌ 19 ಟೀಮಿಗೆ ಶಮಿ ಆಯ್ಕೆಯಾಗುವುದಿಲ್ಲ. ಹೆಚ್ಚೂಕಡಿಮೆ ಶಮಿ ಕನಸು ಅಲ್ಲಿಗೆ ಕಮರಿಹೋಗಬೇಕಾಗಿತ್ತು. ಅವರ ಕುಟುಂಬದ ಪರಿಸ್ಥಿತಿಯೂ ಹಾಗೆಯೇ ಇತ್ತು. ಆದರೆ ಎದೆಯೊಳಗೆ ಕಿಚ್ಚು ಹಚ್ಚಿಟ್ಟುಕೊಂಡಿದ್ದ ಅಪ್ಪ ಅಲಿಯ ಒತ್ತಡ ಮತ್ತು ಕೋಚ್‌ ಸಿದ್ದಿಕಿಯ ದೂರದೃಷ್ಟಿಯಿಂದಾಗಿ ಶಮಿ, ಉತ್ತರ ಪ್ರದೇಶ ತೊರೆದು ಪ‍ಶ್ಚಿಮ ಬಂಗಾಳದತ್ತ ಹೊರಟರು. ಸಿದ್ದಿಕಿಯ ಸಂಪರ್ಕದಲ್ಲಿದ್ದ ಕೋಲ್ಕೊತ್ತಾದ ಡಾಲ್‌ ಹೌಸಿ ಅಥ್ಲೆಟಿಕ್‌ ಕ್ಲಬ್‌ ಜೊತೆಗೆ ಮಾತಾಡಿ, ಶಮಿಗೆ ಅಲ್ಲಿ ತರಬೇತಿ ಕೊಡಿಸಿದರು. ಅಲ್ಲಿ ಶಮಿಯ ಆಟ ನೋಡಿದ ಕ್ರಿಕೆಟ್‌ ಅಸೋಸಿಯೇಷನ್‌ ಆಫ್‌ ಬೆಂಗಾಲ್‌ ನ ದಾಸ್‌, ಶಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅವರದೇ ಆದ ಟೌನ್‌ ಕ್ಲಬ್‌ ಗೆ ಶಮಿಯನ್ನು ಆಡಿಸಿದರು. ಅಷ್ಟೇ ಅಲ್ಲ, ದಾಸ್‌ ಮನೆಯಲ್ಲಿಯೇ ಶಮಿ ಆಶ್ರಯ ಪಡೆದರು, ಮನೆ ಮಗನಂತಾದರು. ಅನ್ನ, ಆಶ್ರಯ ಮತ್ತು ಮಾರ್ಗದರ್ಶನ ನೀಡುವ ಮೂಲಕ ದಾಸ್‌, ಶಮಿಯ ಉಜ್ವಲ ಭವಿಷ್ಯ ರೂಪಿಸಿದ ಮೆಂಟರ್ ಆದರು.

ಬೆಂಗಾಲ್‌ ಕ್ರೀಡಾ ಜಗತ್ತಿನಲ್ಲಿ ದಾಸ್‌ ಗೆ ಒಳ್ಳೆಯ ಹೆಸರಿರುತ್ತದೆ. ಜೊತೆಗೆ ಶಮಿಯ ಬೌಲಿಂಗ್‌ ಕೂಡ ಉತ್ಕೃಷ್ಟವಾಗಿರುತ್ತದೆ. ಇಷ್ಟಾದರೂ ಶಮಿ ಅಂಡರ್‌ 19 ಕೋಲ್ಕೊತ್ತಾ ತಂಡಕ್ಕೆ ಆಯ್ಕೆಯಾಗುವುದಿಲ್ಲ. ಪಟ್ಟು ಬಿಡದ ದಾಸ್‌, ಶಮಿಯನ್ನು ಕರೆದುಕೊಂಡು ಹೋಗಿ ಬೆಂಗಾಲ್‌ ಸೆಲೆಕ್ಟರ್‌ ಸಮರ್ಬನ್‌ ಬ್ಯಾನರ್ಜಿ ಮುಂದೆ ನಿಲ್ಲಿಸಿ, ಆತನ ಬೌಲಿಂಗ್‌ ಶೈಲಿ ಕುರಿತು ಮನವರಿಕೆ ಮಾಡಿಕೊಡುತ್ತಾರೆ. ಆನಂತರ ಬೆಂಗಾಲ್‌ ಅಂಡರ್‌ 19 ತಂಡಕ್ಕೆ ಶಮಿ ಆಡುವಂತಾಗುತ್ತದೆ. ಅಲ್ಲಿ ನೆಟ್‌ ಪ್ರಾಕ್ಟೀಸಿಗೆ ಬರುತ್ತಿದ್ದ ಸೌರವ್‌ ಗಂಗೂಲಿಗೆ ಶಮಿಯ ವ್ಯಕ್ತಿತ್ವ ಮತ್ತು ಅದಕ್ಕಿಂತ ಆತನ ಬೌಲಿಂಗ್‌ ಇಷ್ಟವಾಗುತ್ತದೆ. ಗಂಗೂಲಿಯ ಶಿಫಾರಸ್ಸಿನ ಮೇರೆಗೆ ಶಮಿ, 2010ರಲ್ಲಿ ಬಂಗಾಳದ ರಣಜಿ ತಂಡಕ್ಕೆ ಆಯ್ಕೆಯಾಗುತ್ತಾರೆ. ರಣಜಿಯಿಂದ ಹಂತ ಹಂತವಾಗಿ ಬೆಳೆದ ಶಮಿ, 2011ರಲ್ಲಿ ಐಪಿಎಲ್ ಮೂಲಕ ಬಹುದೊಡ್ಡ ಮೈದಾನಕ್ಕಿಳಿಯುತ್ತಾರೆ. ಕೋಲ್ಕೊತಾ ನೈಟ್‌ ರೈಡರ್‌ ಗೆ ಆಯ್ಕೆಯಾಗುತ್ತಾರೆ. ಆನಂತರ 2013ರಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾದ ಶಮಿ, ಚೊಚ್ಚಲ ಪಂದ್ಯವನ್ನು ತಮ್ಮ ಮನೆಯಂಗಳವಾದ ಈಡನ್‌ ಗಾರ್ಡನ್‌ ನಲ್ಲಿ ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಆಡಿ, ದೇಶದ ಕ್ರೀಡಾಸಕ್ತರ ಕಣ್ಣಿಗೆ ಬೀಳುತ್ತಾರೆ. ಆನಂತರ ಆಸ್ಟೇಲಿಯಾ, ನ್ಯೂಜಿಲ್ಯಾಂಡ್‌ ತಂಡಗಳ ವಿರುದ್ಧ ಉತ್ತಮವಾಗಿ ಆಡಿ ದೇಶದ ಕ್ರಿಕೆಟ್‌ ಪ್ರಿಯರ ಮನೆಮಾತಾಗುತ್ತಾರೆ.

ಕ್ರಿಕೆಟ್‌ ನಲ್ಲಿ ಬುಡ ಭದ್ರ ಮಾಡಿಕೊಳ್ಳುತ್ತಿದ್ದಾಗಲೇ, 2014ರಲ್ಲಿ ಹಸಿನ್‌ ಜಹಾನ್‌ ರನ್ನು ಶಮಿ ವಿವಾಹವಾಗುತ್ತಾರೆ. ಒಂದು ಮಗುವೂ ಜನಿಸುತ್ತದೆ. ಆದರೆ ಮಡದಿ ಹಸಿನ್‌ ಜಹಾನ್‌, ಶಮಿ ಮತ್ತು ಮನೆಯವರ ಮೇಲೆ ಕೌಟುಂಬಿಕ ಹಿಂಸಾಚಾರ, ಕೊಲೆ ಯತ್ನ, ಬೆದರಿಕೆಗಳಂತಹ ಗಂಭೀರ ಆರೋಪಗಳನ್ನು ಹೊರಿಸುವ ಮೂಲಕ, ಶಮಿ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತಾರೆ. ಮಾಧ್ಯಮಗಳ ಬಾಯಿಗೆ ಬಿದ್ದ ಶಮಿ ಕುಟುಂಬ, ನೂರೆಂಟು ನೋವು, ಅವಮಾನಗಳನ್ನು ಅನುಭವಿಸಬೇಕಾಗುತ್ತದೆ. ಇದು ಶಮಿಯ ಕ್ರಿಕೆಟ್‌ ಕೆರಿಯರ್‌ ಮೇಲೂ ಪರಿಣಾಮ ಬೀರುತ್ತದೆ. ಇಂಡಿಯಾ ದೇಶದಲ್ಲಿ ಮುಸ್ಲಿಮನೊಬ್ಬ ಕ್ರಿಕೆಟ್‌ ಆಟಗಾರನಾಗುವುದು ಎಷ್ಟು ಸುಲಭವೋ, ಆತನ ಆಟ ಮತ್ತು ಆಟಿಟ್ಯೂಡ್ ಮೇಲೆ ಇಡೀ ದೇಶವೇ ಕಣ್ಣಿಡುವುದು, ಕಡು ಕಷ್ಟದ ಕೆಲಸವಾಗಿ ಕಾಣುತ್ತದೆ. ಇಡೀ ದೇಶವೇ ಮೈಯಲ್ಲಾ ಕಣ್ಣಾಗಿ ತಪ್ಪು ಮಾಡುವುದನ್ನು ಕಾಯುತ್ತಿರುತ್ತದೆ. ಅಂತಹವರಿಗೆ ಶಮಿಯ ಈ ಕೌಟುಂಬಿಕ ಕಲಹ ರಸಗವಳವಾಯಿತು. ಕೋರ್ಟು, ಕಚೇರಿ ಅಲೆದಾಟ ಹೆಚ್ಚಾಯಿತು. 2019ರಲ್ಲಿ ಶಮಿ ವಿರುದ್ಧ ಬಂಧನ ವಾರೆಂಟ್‌ ಕೂಡ ಹೊರಬಿತ್ತು.

ಶಮಿ ಕುಟುಂಬ

ಇದೆಲ್ಲಕ್ಕಿಂತ ಹೆಚ್ಚಾಗಿ 2021ರ ಐಸಿಸಿ ಟಿ20 ವಿಶ್ವಕಪ್‌ ಸಮಯದಲ್ಲಿ ಭಾರತ ತಂಡ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ, ಶಮಿ ಬೌಲಿಂಗ್‌ ಭಾರೀ ಚರ್ಚೆಗೆ ಗುರಿ ಮಾಡಿತು. ಐದು ಓವರ್ ಗಳಲ್ಲಿ 43 ರನ್‌ ಬಿಟ್ಟುಕೊಟ್ಟಿದ್ದು ಅನುಮಾನಗಳನ್ನು ಹುಟ್ಟುಹಾಕಿತು. ಇದರಿಂದ ಭಾರತ ತಂಡ ಪಾಕಿಸ್ತಾನದ ಎದುರು ಸೋಲುವಂತಾಯಿತು. ಇದು ಸೋಷಿಯಲ್‌ ಮೀಡಿಯಾದಲ್ಲಿ ಇಸ್ಲಾಮೋಫೋಬಿಕ್‌ ನಿಂದನೆಗೆ ಗುರಿ ಮಾಡಿತು. ದೇಶದ್ರೋಹಿಯ ಪಟ್ಟ ಕಟ್ಟಿತು. ಒಂದು ಕಡೆ ಮಡದಿಯಿಂದ ಮನೆಯ ನೆಮ್ಮದಿ ಹಾಳಾಗಿತ್ತು. ಮತ್ತೊಂದು ಕಡೆ ಸೋಷಿಯಲ್‌ ಮೀಡಿಯಾದಲ್ಲಿ ದೇಶದ್ರೋಹಿಯ ಪಟ್ಟ ಸಿಕ್ಕಿತ್ತು. ಆ ಸಂದರ್ಭದಲ್ಲಿ ಶಮಿಯ ಪರವಾಗಿ ಬ್ಯಾಟಿಂಗ್‌ ಬೀಸಿದವರು ವಿರಾಟ್‌ ಕೊಹ್ಲಿ. ಅಷ್ಟೇ ಅಲ್ಲ, ಇಡೀ ಭಾರತ ಕ್ರಿಕೆಟ್‌ ತಂಡವೇ ಶಮಿ ಪರವಾಗಿ ನಿಂತು ಧೈರ್ಯ ತುಂಬಿತ್ತು. ಅದು ಶಮಿಯಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟಿಸಿತ್ತು.

ಇದನ್ನು ಓದಿದ್ದೀರಾ?: ಕ್ರಿಕೆಟ್ | ಭಾರತ ತಂಡದ ಗೆಲುವು ಕಾಣುತ್ತದೆ; ಕೋಚ್ ದ್ರಾವಿಡ್ ಕಾಣ್ಕೆ ಕಾಣುತ್ತಿಲ್ಲವೇಕೆ?

ಅದೆಲ್ಲದರ ಫಲವಾಗಿ ಇಂದು ಶಮಿಯ ಅತ್ಯುತ್ತಮ ಆಟವನ್ನು ದೇಶವಷ್ಟೇ ಅಲ್ಲ, ಇಡೀ ಪ್ರಪಂಚದ ಕ್ರಿಕೆಟ್‌ ಪ್ರಿಯರು ಬೆರಗುಗಣ್ಣಿನಿಂದ ನೋಡುವಂತಾಗಿದೆ. ಹೊಗಳುವಂತಾಗಿದೆ. ಅದಕ್ಕೆ ಕಾರಣ, ಶಮಿ ತಾನು ನಂಬಿದ ತನ್ನ ತೋಳ್ಬಲ. ಆರಂಭದಿಂದಲೂ ರೂಢಿಸಿಕೊಂಡು ಬಂದ ರಿವರ್ಸ್‌ ಸ್ವಿಂಗ್‌ ಬೌಲಿಂಗ್.‌ ಈ ರಿವರ್ಸ್‌ ಸ್ವಿಂಗ್‌ ಎಲ್ಲರಿಗೂ ಸಿದ್ದಿಸುವ ಅಸ್ತ್ರವಲ್ಲ. ಅದು ಶಮಿಗೆ ಅಪ್ಪ ಅಲಿಯಿಂದ ಬಳುವಳಿಯಾಗಿ ಬಂದ ಬಾಣ. ವರವಾಗಿ ನೆರವಾಗುತ್ತಿದೆ. ಕೌಟುಂಬಿಕ ಕಲಹ, ಇಸ್ಲಾಮೋಫೋಬಿಯಾದ ನಿಂದನೆಗಳ ನಡುವೆಯೂ, ಶಮಿಯನ್ನು, ಆತನ ಬೌಲಿಂಗ್‌ ಕೌಶಲವನ್ನು ಮೆಚ್ಚುವ ಜನ ದೇಶದಾದ್ಯಂತ ಇದ್ದಾರೆ. ಶಮಿ ಕೂಡ ತಾನು ಕಲಿತ, ಕರಗತ ಮಾಡಿಕೊಂಡ ಕ್ರಿಕೆಟ್‌ ಗೆ ಮೋಸ ಮಾಡದೆ, ತನ್ನನ್ನು ಬೆಳೆಸಿದ ದೇಶಕ್ಕೆ ಆತ್ಮಸ್ಥೈರ್ಯವನ್ನು ಒತ್ತೆಯಿಟ್ಟು ಆಡುತ್ತಿದ್ದಾರೆ. ಶಮಿ… ನಿಮಗೊಂದು ಸಲಾಮ್.‌

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡೇಂಜರ್ ಜಾಹೀರಾತು | ಅಕ್ಷರಶಃ ಇದು ಬಿಜೆಪಿಯ ಅಪಾಯಕಾರಿತನವನ್ನು ಪ್ರತಿನಿಧಿಸುತ್ತಿದೆ, ಎಚ್ಚರಿಕೆ!

ಕಾಂಗ್ರೆಸ್‌ಗೆ ವಿರುದ್ದವಾಗಿ ಇಂದು ಬಿಜೆಪಿ ಪ್ರಾಯೋಜಿಸಿರುವ ಜಾಹೀರಾತಿನಲ್ಲಿ ಯಾವುದೇ ಅಭಿವೃದ್ಧಿ ಮತ್ತು...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...