ಕ್ರಿಕೆಟ್ | ಭಾರತ ತಂಡದ ಗೆಲುವು ಕಾಣುತ್ತದೆ; ಕೋಚ್ ದ್ರಾವಿಡ್ ಕಾಣ್ಕೆ ಕಾಣುತ್ತಿಲ್ಲವೇಕೆ?

Date:

ರಾಹುಲ್ ದ್ರಾವಿಡ್ ಎಂದಾಕ್ಷಣ ಎಲ್ಲರೂ ಹೇಳುವ ಮಾತು ಒಂದೆ- ಜಂಟಲ್ ಮನ್. ಮೃದು ಮಾತಿನ, ಸೌಮ್ಯ ಸ್ವಭಾವದ, ಅಪಾರ ತಾಳ್ಮೆ, ಸಹನೆಯ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರತಿಮ ಕ್ರಿಕೆಟಿಗ. ಈಗ ಭಾರತ ಕ್ರಿಕೆಟ್ ತಂಡ ಗೆಲುವಿನ ನಾಗಾಲೋಟದಲ್ಲಿರುವಾಗ, ಸುದ್ದಿಮಾಧ್ಯಮಗಳಿಗೆ, ಸೋಷಿಯಲ್ ಮೀಡಿಯಾದ ಮಿಟಕಲಾಡಿಗಳಿಗೆ ಆ ಗೆಲುವಿನ ಹಿಂದಿನ ರೂವಾರಿ ರಾಹುಲ್ ದ್ರಾವಿಡ್ ಕಾಣ್ಕೆ ಕಾಣುತ್ತಿಲ್ಲವೇಕೆ?

ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂಡಿಯಾ ತಂಡ ಸದ್ಯಕ್ಕೆ ಗೆಲುವಿನ ನಾಗಾಲೋಟದಲ್ಲಿದೆ. ಇದು, ಭಾರತದ ಬ್ಯಾಂಟಿಂಗ್ ಬಲ, ಬೌಲರ್‍‌ಗಳ ಕೈಚಳಕ, ಟೈಟ್ ಫೀಲ್ಡಿಂಗ್, ಆಟಗಾರರ ಫಿಟ್‌ನೆಸ್, ಹೋಂ ಗ್ರೌಂಡ್, ನಾಯಕತ್ವದ ಬಗ್ಗೆ ಮಾತನಾಡುವಂತೆ ಮಾಡಿದೆ. ಹಾಗೆಯೇ ಸುದ್ದಿಮಾಧ್ಯಮಗಳಲ್ಲಿ ಸುದ್ದಿಯಾಗುವುದಕ್ಕಿಂತ ಹೆಚ್ಚಾಗಿ, ಜನಬಳಕೆಯ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚೆಚ್ಚು ಚರ್ಚೆಯಾಗುತ್ತಿದೆ.

ಆದರೆ ಇಂಡಿಯಾ ಕ್ರಿಕೆಟ್ ತಂಡದ ಜಯದ ಹಿಂದಿನ ರೂವಾರಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕುರಿತು ಯಾರೂ ಮಾತನಾಡುತ್ತಿಲ್ಲ. ಇವತ್ತಿನ ಗೆಲುವಿನ ಹಿಂದೆ ದ್ರಾವಿಡ್‌ರ ಶ್ರಮ, ಶ್ರದ್ಧೆ ಮತ್ತು ಅಪಾರ ಅನುಭವವಿದೆ ಎಂಬುದು ಯಾರ ಗಮನಕ್ಕೂ ಬರುತ್ತಿಲ್ಲ. ಅದನ್ನವರು ಹೇಳಿಕೊಳ್ಳುವುದಿಲ್ಲ. ಸದ್ದು-ಸುದ್ದಿ ಮಾಡುವುದಿಲ್ಲ. ಮಾಡಬೇಕಾದ ಸುದ್ದಿ ಮಾಧ್ಯಮಗಳು ಸುದ್ದಿ, ಚರ್ಚೆ ಮಾಡುತ್ತಿಲ್ಲ. ಸೋಷಿಯಲ್ ಮೀಡಿಯಾದ ಮಿಟಕಲಾಡಿಗಳಿಗೂ ಅದು ಬೇಕಾಗಿಲ್ಲ.

ಏಕೆಂದರೆ, ಭಾರತದಲ್ಲಿ ಕ್ರಿಕೆಟ್ ಇಂದು ಕೇವಲ ಆಟವಾಗಿ ಉಳಿದಿಲ್ಲ. ಕ್ರಿಕೆಟ್ ಎನ್ನುವುದು ಇವತ್ತಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ, ಕ್ಯಾಚ್ ಹಿಡಿಯುವ ಮೆಷಿನ್ ಆಗಿದ್ದಾನೆ. ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ, ದೇಶಪ್ರೇಮಿಗಳಾಗಿ ರೂಪಾಂತರಗೊಂಡಿದ್ದಾರೆ. ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನ; ಅದನ್ನೊಂದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಮೈದಾನಕ್ಕಿಳಿಯಬೇಕಾದ ಸ್ಥಿತಿ ಎದುರಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಎಲ್ಲ ಭಯೋತ್ಪಾದಕರೂ ಮುಸ್ಲಿಮರಲ್ಲ ಎನ್ನುವ ಸತ್ಯವನ್ನು ನಂಬದವರು

ಆದರೆ ರಾಹುಲ್ ದ್ರಾವಿಡ್ ಎಂಬ ಆಟಗಾರನೂ ಬೇರೆ, ಆಟವೂ ಬೇರೆ. ವ್ಯಕ್ತಿತ್ವವಂತೂ ಅದಕ್ಕಿಂತ ಭಿನ್ನ. ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಮತ್ತು ಅಜರುದ್ದೀನ್- ಇಬ್ಬರ ಶೈಲಿಯನ್ನು ಬ್ಯೂಟಿಫುಲ್ಲಾಗಿ ಬ್ಲೆಂಡ್ ಮಾಡಿದ, ಅಳವಡಿಸಿಕೊಂಡ ಆಟವೇ ದ್ರಾವಿಡ್ ಬ್ಯಾಟಿಂಗ್ ಶೈಲಿ. ಅವರ ಒಂದೊಂದು ಸ್ಟ್ರೋಕ್ ಅನ್ನು ಕ್ರಿಕೆಟ್ ಪ್ರೇಮಿಗಳು ಆಸ್ವಾದಿಸುವಂತೆ, ಎದುರಾಳಿ ತಂಡ ಕೂತು ನೋಡಿ ಕಲಿಯುವಂತೆ, ಯೋಚಿಸುವಂತೆ ಹೊಡೆಯುತ್ತಿದ್ದರು. ಸೆಂಚುರಿ ಹೊಡೆಯಲಿ, ಪಂದ್ಯ ಗೆಲ್ಲಲಿ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದಿಲ್ಲ, ಮೆರೆದಾಡಿದ್ದಂತೂ ಇಲ್ಲವೆ ಇಲ್ಲ. ಅವರಲ್ಲಿನ ಶಿಸ್ತು, ಶ್ರದ್ಧೆ ಮತ್ತು ತನ್ಮಯತೆ ಮಿಕ್ಕವರಿಗೆ ಮಾದರಿಯಾಗುವಂಥದ್ದು. ಆಶ್ಚರ್ಯವೆಂದರೆ, ಅವರು ಆಡುವಾಗಲೂ ಅಭಿಮಾನಿಗಳಿದ್ದರು. ಆದರೆ ಅವರಾರೂ ಇವತ್ತಿನ ಅಂದಾಭಿಮಾನಿಗಳಾಗಿರಲಿಲ್ಲ. ಭಕ್ತರಂತೂ ಅಲ್ಲವೇ ಅಲ್ಲ.

ರಾಹುಲ್ ದ್ರಾವಿಡ್ ಎಂದಾಕ್ಷಣ ಎಲ್ಲರೂ ಹೇಳುವ ಮಾತು ಒಂದೆ- ಜಂಟಲ್ ಮನ್. ಮೃದು ಮಾತಿನ, ಸೌಮ್ಯ ಸ್ವಭಾವದ, ಅಪಾರ ತಾಳ್ಮೆ, ಸಹನೆಯ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರತಿಮ ಕ್ರಿಕೆಟಿಗ. ಆಟದಲ್ಲೂ ಅಷ್ಟೆ, ಕಲಾತ್ಮಕ ಶೈಲಿಯ ಹೊಡೆತಕ್ಕೆ ಹೆಸರಾದ, ತಂಡವಾಗಿ ತುಡಿಯುವ, ದೇಶಕ್ಕಾಗಿ ಆಡುವ, ಜವಾಬ್ದಾರಿಯನ್ನೆಂದೂ ಮರೆಯದ ಆಟಗಾರ. ಗೆದ್ದಾಗ ಮೆರೆಯದ, ಸೋತಾಗ ಸೊರಗದ ಸ್ಥಿತಪ್ರಜ್ಞ. ಮೈದಾನದಿಂದ ಹೊರಗೆ, ಸಾಮಾಜಿಕ ಬದುಕಿನಲ್ಲೂ ಅದೇ ಸಂಯಮದ ನಡೆ-ನುಡಿಗೆ ಹೆಸರಾದವರು. ತಾನೊಬ್ಬ ಸ್ಟಾರ್ ಎಂಬ ಅಹಂನಿಂದ ಆಚೆಗೆ ನಿಂತವರು. ಹಾಗಾಗಿ ರಾಹುಲ್ ದ್ರಾವಿಡ್ ರ ಆಟ ಮತ್ತು ಅವರು ಮೈಗೂಡಿಸಿಕೊಂಡ ವಿನಯವಂತ ವ್ಯಕ್ತಿತ್ವವೇ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಎಲ್ಲರಿಂದ ಪ್ರಶಂಸೆಗೆ ಒಳಗಾಗಿದೆ.

ಇಂತಹ ದ್ರಾವಿಡ್ ರನ್ನು ಕ್ರಿಕೆಟ್ ಜಗತ್ತಿನಲ್ಲಿ ‘ದಿ ವಾಲ್’ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯಲ್ಲಿ ಪ್ರಶಂಸೆಯೂ ಹೌದು, ಕೆಲವೊಂದು ಸಲ ಗೇಲಿಗೆ ಬಳಕೆಯಾದ ಪದವೂ ಹೌದು. ಆದರೆ ಭಾರತ ಕ್ರಿಕೆಟ್ ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ದ್ರಾವಿಡ್ ಗೋಡೆಯಂತೆಯೇ ನಿಂತು, ಸೋಲಿನಿಂದ ಪಾರುಮಾಡಿದ್ದಿದೆ. ರಾಹುಲ್ ದ್ರಾವಿಡ್ ಸಾಧನೆಯನ್ನು ನೆನಪಿಸುವ ಗೋಡೆಯೊಂದನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿ ಗೌರವಿಸಲಾಗಿದೆ. 15 ಅಡಿ ಎತ್ತರ, 27 ಅಡಿ ಅಗಲವಿದ್ದು, ಇದರ ನಿರ್ಮಾಣಕ್ಕಾಗಿ 10 ಸಾವಿರ ಇಟ್ಟಿಗೆಗಳನ್ನು ಬಳಸಲಾಗಿದೆ. ಗೋಡೆಗೆ ‘ದಿ ವಾಲ್’ ಎಂದೇ ಹೆಸರಿಡಲಾಗಿದೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ವಿಶೇಷವೆಂದರೆ, ಈ ಬೃಹತ್ ಕಲಾಕೃತಿಯನ್ನು ದ್ರಾವಿಡ್ ರ ಅಮ್ಮ ಡಾ.ಪುಷ್ಪಾ ದ್ರಾವಿಡ್ ರಚಿಸಿದ್ದು, ಕೆಎಸ್‌ಸಿಎ ಸ್ಟೇಡಿಯಂನಲ್ಲಿ ಶಾಶ್ವತವಾಗಿ ನೆಲೆಯೂರಿದೆ.

ಇಷ್ಟೆಲ್ಲ ಸಾಧನೆಗೈದಿರುವ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದರೂ, ಸುಮ್ಮನೆ ಕೂರದೆ, ಹೊಸ ಪ್ರತಿಭೆಗಳ ಶೋಧದಲ್ಲಿ ತೊಡಗಿಕೊಂಡು, ಹೊಸ ತಂಡವನ್ನು ತರಬೇತುಗೊಳಿಸುವಲ್ಲಿ, ದೇಶಕ್ಕೆ ಕೊಡುಗೆಯಾಗಿ ನೀಡುವಲ್ಲಿ ನಿರತರಾದರು. ಭಾರತದ ಅಂಡರ್ 19 ತಂಡಕ್ಕೆ ಕೋಚ್ ಆದ ದ್ರಾವಿಡ್, ತಂಡ ಸತತ ನಾಲ್ಕನೇ ಬಾರಿ ವಿಶ್ವಕಪ್ ಕ್ರಿಕೆಟ್ ಕಿರೀಟ ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಷ್ಟೆಲ್ಲ ಅನುಭವದ ಆಧಾರದ ಮೇಲೆಯೇ ದ್ರಾವಿಡ್ 2021ರ ನವೆಂಬರ್‍‌ನಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ- ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ, ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿ, ಏಷ್ಯಾ ಕಪ್, ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ ಸರಣಿಗಳಿಗೆ ತಂಡವನ್ನು ಸಜ್ಜುಗೊಳಿಸಿದ್ದಾರೆ. ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿದ್ದಾರೆ. ಮುಂದಿನ ಮ್ಯಾಚಿಗೆ ಬೇಕಾದ ಬಗೆಯಲ್ಲಿ ತಂಡಕ್ಕೆ ಶಕ್ತಿ ತುಂಬುತ್ತಲೇ ಬಂದಿದ್ದಾರೆ.

ಇದರ ಜೊತೆಗೆ ದ್ರಾವಿಡ್​ ಸತತ ಎರಡು ವರ್ಷಗಳಿಂದಲೂ ಟೀಮ್ ಇಂಡಿಯಾ ಜೊತೆಗೆ ಸತತ ಪ್ರಯಾಣ ನಡೆಸುತ್ತಿದ್ದಾರೆ. ಇದರಿಂದಾಗಿ ತಮ್ಮ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗದ ಕಾರಣ ಕೊಂಚ ಕಸಿವಿಸಿಗೊಳಗಾಗಿದ್ದಾರೆ. ಕೋಚ್​ ಸ್ಥಾನಕ್ಕೇರುವ ಸಂದರ್ಭದಲ್ಲಿ ಕುಟುಂಬಕ್ಕೆ ಸಮಯ ನೀಡಬೇಕು ಎಂದು ಹೇಳಿ ನಿರಾಕರಿಸಿದ್ದೂ ಉಂಟು. ಆದರೆ ಅಂದಿನ ಬಿಸಿಸಿಐ ಅಧ್ಯಕ್ಷ, ಸ್ನೇಹಿತ ಸೌರವ್ ಗಂಗೂಲಿಯ ಒತ್ತಡಕ್ಕೆ ಮಣಿದು ಕೋಚ್ ಹುದ್ದೆ ಒಪ್ಪಿದ್ದರು.

ಆ ಒಪ್ಪಂದಕ್ಕೆ ಬೆಲೆ ಬರುವಂತೆ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ, ಒಂದು ತಂಡವಾಗಿ ಆಡುವಲ್ಲಿ ತಮ್ಮೆಲ್ಲ ಬುದ್ಧಿವಂತಿಕೆಯನ್ನು ಬಸಿದು ಬಳಸಿದ್ದಾರೆ. ಪಂದ್ಯಗಳಿಂದ ಪಂದ್ಯಗಳಿಗೆ ತಂಡವನ್ನು ತರಬೇತುಗೊಳಿಸಿ, ಗೆಲುವಿನ ಓಟದಲ್ಲಿ ಮುಂದುವರೆಸಿದ್ದಾರೆ.

ಕ್ರೀಡಾಪಟುಗಳು ಬೇರೆ ಕ್ಷೇತ್ರಗಳ ಸಾಧಕರಂತಲ್ಲ. ಸೋಲು-ಗೆಲುವನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸುವ ಮನೋಭಾವದವರು. ಅದರಲ್ಲೂ ರಾಹುಲ್ ದ್ರಾವಿಡ್‌ರಂತೂ, ವಿಜಯದ ಉತ್ತುಂಗದಲ್ಲಿದ್ದಾಗಲೇ ನಿವೃತ್ತರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ನಿವೃತ್ತರಾದ ನಂತರ ತರಬೇತುದಾರರಾಗಿ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ತಲೆಮಾರನ್ನು ತಂದು ತಂಡವನ್ನು ಸದೃಢಗೊಳಿಸಿದವರು. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟದಲ್ಲಿರುವಾಗಲೇ, ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯುವುದಾಗಿ ಆಪ್ತವಲಯದಲ್ಲಿ ಹೇಳಿಕೊಂಡಿದ್ದಾರೆ. ಇತರರಿಗಿಂತ ಭಿನ್ನವಾಗಿ ಕಾಣುತ್ತಿದ್ದಾರೆ.

 

ಇಂತಹ ಅಪರೂಪದ, ಅಪ್ಪಟ ಪ್ರತಿಭೆಯ, ಅಸಲಿ ಆಟಗಾರನನ್ನು; ಅವರ ಸಾಧನೆಯನ್ನು ಇಡೀ ದೇಶವೇ ಸ್ಮರಿಸುವಂಥಾದ್ದು. ಆದರೆ ಈ ಹೊಸಗಾಲದ ಸೋಷಿಯಲ್ ಮೀಡಿಯಾದ ಮಿಟಕಲಾಡಿಗಳಿಗೆ, ಗೆದ್ದೆತ್ತಿನ ಬಾಲ ಹಿಡಿಯುವವರಿಗೆ ಶರ್ಮಾ, ಕೊಹ್ಲಿಗಳು ಮಾತ್ರ ಕಾಣಿಸಿ; ಮೌನಿಯ ಮಾನವಂತ ಕೆಲಸ ಕಾಣುವುದಿಲ್ಲ. ರಾಹುಲ್ ದ್ರಾವಿಡ್ ಅದಾವುದನ್ನೂ ತಲೆಗೆ ತೆಗೆದುಕೊಳ್ಳುವುದಿಲ್ಲ. ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

4 COMMENTS

  1. ಇಲ್ಲಿ ದ್ರಾವಿಡ್ ಅವರ ಕೊಡುಗೆ ಅಪಾರ ಅವರನ್ನು ಹೊಗಳುವುದು ಬೇಡ ಅವರ ಕೆಲಾ ಅವರು ಮಾಡಿ‌ಮುಗಿಸುತ್ತಾರೆ. ಸೆಂಚುರಿಗೋಸ್ಕರ ಅವರೆಂದೂ ಆಡಲಿಲ್ಲ, ಅವರನ್ನು ಬಹಳ ಅವಮಾನಿಸಿದ್ದಾರೆ ಇಂಡಿಯನ್ ಕ್ರಿಕೆಟರ್ಸ್ ಅದರಲ್ಲೂ selectors

  2. Yes sir ನೀವು ಹೇಳಿದ್ದು ಎಲ್ಲವೂ ಸರಿ.ಒಳ್ಳೆಯ ಕೆಲಸ ಮಾಡಿದವನಿಗೆ ಸಮಾಜ ಇಷ್ಟೇ ಗೌರವ ಕೊಡುವುದು.ಒಂದು ಕಾಲ ಇತ್ತು ಟೀಮ್ ಗಾಗಿ ಆಡಿ,ದೇಶಕ್ಕಾಗಿ ಆಡಿ ಎಂದು,ಆದರೆ ಇಂದು ದ್ರಾವಿಡ್ ಕಂದುಕೊಂಡಿದ್ದು ಏನೆಂದರೆ ಟೀಮ್ ದೇಶ ಕ್ಕಿಂತ ಮೊದಲು ನಿಮಗಾಗಿ ಆಡಿ,ಟೀಮೂ ಗೆಲ್ಲುತ್ತೆ ದೇಶ ವೂ ಗೆಲ್ಲುತ್ತೆ.ಮುಂಚೆ ಟೀಮ್ ಇಂಡಿಯಾದಲ್ಲಿ ಸಾಮರಸ್ಯ ಒಗ್ಗಟ್ಟು ಅನ್ನುವುದೇ ಇರಲಿಲ್ಲ ಆದರೆ ಈಗ ಹೇಗಿದ್ದಾರೆ ನೋಡಿ ಇದೇ ದ್ರಾವಿಡ್ ಗ್ರೇಟ್ ವಾಲ್ ಅನ್ನುವುದಕ್ಕೆ ಸಾಕ್ಷಿ good luck ದ್ರಾವಿಡ್

  3. Your article absolutely truth . Rahul Dravid is legendary cricketer,coach and great human.Long back, Cricket great,Sachin Tendulkar himself praised Dravid in this way, those who want to become great cricketer, just watch his playing technique,this is more than enough,like that.He is true all rounder and committed person for his profession.I am sure, under his coaching stint,India will win this year World Cup with record.This is fact,based on my observation of current team unity,I am predicting future.All players body language is positive, when they are playing,when batting firs or chasing, except England match.All the best for Indian team to lift this year World Cup with great record.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ʼಧರ್ಮ ರಾಜಕಾರಣʼಕ್ಕೊಂದು ಶವ ಬೇಕಾಗಿತ್ತು; ಫಯಾಜ್‌ ಕೊಟ್ಟುಬಿಟ್ಟ

ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಭಂಗ ತರುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವುದನ್ನೇ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...