ಇಂದಿರಾ ಗಾಂಧಿ ಯಾರನ್ನೂ ದೇಶದ್ರೋಹಿ ಎಂದಿರಲಿಲ್ಲ: ಸುಧೀಂದ್ರ ಕುಲಕರ್ಣಿ

Date:

“ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಯದಿದ್ದರೆ ನಾವು ಇಂದು ನೋಡುತ್ತಿರುವ ಅನಾಹುತಗಳಿಗಿಂತ ನೂರು ಪಟ್ಟು ಹೆಚ್ಚಿನ ದುರಂತಗಳನ್ನು ನೋಡಬೇಕಾಗುತ್ತದೆ”

“ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಜಯಪ್ರಕಾಶ್ ನಾರಾಯಣ ಅವರನ್ನಾಗಲೀ, ಎಲ್.ಕೆ.ಅಡ್ವಾನಿ, ಅಟಲ್‌ ಬಿಹಾರಿ ವಾಜಪೇಯಿ ಅವರನ್ನಾಗಲೀ ಇಂದಿರಾ ಗಾಂಧಿಯವರು ದೇಶದ್ರೋಹಿ ಎನ್ನಲಿಲ್ಲ” ಎಂದು ರಾಜಕೀಯ ವಿಶ್ಲೇಷಕ, ವಾಜಪೇಯಿ ಒಡನಾಡಿ ಸುಧೀಂದ್ರ ಕುಲಕರ್ಣಿ ಹೇಳಿದರು.

ಸಮಾಜವಾದಿ ಸ್ನೇಹಿತರ ಬಳಗ, ಸೃಷ್ಟಿ ಪಬ್ಲಿಕೇಷನ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ “ಡಾ.ಪರಕಾಲ ಪ್ರಭಾಕರ ಅವರ ’ದಿ ಕ್ರೂಕಡ್‌ ಟಿಂಬರ್‌ ಆಫ್ ನ್ಯೂ ಇಂಡಿಯಾ’ ಕೃತಿಯ ಅನುವಾದ ’ಹೆಣವಾಗುತ್ತಿರುವ ಗಣರಾಜ್ಯ- ವಿಕಾರಗೊಳ್ಳುತ್ತಿರುವ ಭಾರತದ ಭೀಭತ್ಸ ಮುಖಕ್ಕೊಂದು ಬಿಲ್ಜಿಯಮ್ ಕನ್ನಡಿ’ ಕೃತಿ ಬಿಡುಗಡೆ ಕಾರ್ಯಕ್ರಮ”ದಲ್ಲಿ ಅವರು ಮಾತನಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೇಶದಲ್ಲಿ ಈವರೆಗೆ 17 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಸರ್ಕಾರಗಳು ಬಂದಿವೆ, ಸರ್ಕಾರಗಳು ಹೋಗಿವೆ. ತುರ್ತು ಪರಿಸ್ಥಿತಿಯ ಅವಧಿಯನ್ನು ಬಿಟ್ಟರೆ ಪ್ರಜಾಪ್ರಭುತ್ವ ಮತ್ತು ಗಣತಂತ್ರಕ್ಕೆ ಅಪಾಯ ಬಂದಿದ್ದು ಈಗ ಮಾತ್ರ. ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ವೇಳೆ ಸಾವಿರಾರು ರಾಜಕೀಯ ಕಾರ್ಯಕರ್ತರನ್ನು ಬಂಧಿಸಿದರು. ವಾಜಪೇಯಿ, ಅಡ್ವಾನಿ, ಜೆ.ಪಿ, ಮೊರಾರ್ಜಿ ದೇಸಾಯಿ, ಚಂದ್ರಶೇಖರ್ ಮೊದಲಾದ ನಾಯಕರು ಜೈಲು ವಾಸ ಕಂಡರು. ದೇಶದಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಆದರೆ ಇಂದು ಅಂತಹದೇ ಕ್ರಮಗಳನ್ನು ಮೋದಿಯವರು ಅನುಸರಿಸುತ್ತಿದ್ದಾರೆ. ಆದರೆ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಿಲ್ಲವಷ್ಟೇ. ಇಂದಿರಾ ಗಾಂಧಿಯವರ ವಿರುದ್ಧ ಅಂದು ಬಿಜೆಪಿಯವರು (ಜನಸಂಘದವರು) ಹೋರಾಟ ಮಾಡಿದ್ದರು. ಇಂದು ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ವಿಕಸಿತ ಭಾರತ ಆಗಿದೆ ಎನ್ನುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗಿದೆ, ಪಾರ್ಲಿಮೆಂಟ್ ಚುನಾವಣೆಗಳು ನಡೆದರೂ, ಪಾರ್ಲಿಮೆಂಟ್‌ಗೆ ಯಾವುದೇ ಮೌಲ್ಯ ಇಲ್ಲವಾಗಿದೆ. ಇಂತಹದ್ದು ತುರ್ತು ಪರಿಸ್ಥಿತಿ ಬಿಟ್ಟರೆ ಯಾವತ್ತೂ ಆಗಿರಲಿಲ್ಲ. ಪಾರ್ಲಿಮೆಂಟಿನಲ್ಲಿ ಯಾವುದೇ ಚರ್ಚೆಯಾಗಲ್ಲ, ವಿರೋಧಿ ಪಕ್ಷಗಳ ಮಾತುಗಳನ್ನು ಸರ್ಕಾರ ಕೇಳುತ್ತಿಲ್ಲ. 150 ಎಂಪಿಗಳನ್ನು ಅಮಾನತು ಮಾಡಲಾಗಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಅವರ ’ಹೆಣವಾಗುತ್ತಿರುವ ಗಣರಾಜ್ಯ’ (ಅನುವಾದಿತ) ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು

ಮೋದಿಯವರು ಪ್ರಧಾನಿಯಾಗುವ ಮುಂಚೆ, “ನಾನು ಟೀಮ್ ಇಂಡಿಯಾ ಕಟ್ಟುತ್ತೇನೆ. ಎಲ್ಲ ಸಿಎಂಗಳನ್ನು ಒಟ್ಟುಗೂಡಿಸಿ ಹೊಸ ಭಾರತ ನಿರ್ಮಿಸುತ್ತೇನೆ” ಎಂಬ ಉದಾತ್ತವಾದ ಮಾತುಗಳನ್ನು ಆಡಿದ್ದರು. ಆದರೆ ರಾಜ್ಯ ಸರ್ಕಾರಗಳಿಗೆ ಯಾವುದೇ ಗೌರವ ಇಲ್ಲವಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಇಷ್ಟೊಂದು ಬಿರುಕು ಯಾವತ್ತೂ ಮೂಡಿರಲಿಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ನಾನು ಅವರ ಕಚೇರಿಯಲ್ಲಿ ಕೆಲಸ ಮಾಡಿದ್ದೇನೆ. ವಾಜಪೇಯಿಯವರು ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸುತ್ತಿದ್ದರು. ಯಾವುದೇ ಪಕ್ಷದ ಮುಖ್ಯಮಂತ್ರಿ ನೀಡಿದ ಸಲಹೆಯನ್ನು ಸ್ವೀಕರಿಸುತ್ತಿದ್ದರು. ಈಗ ಇದ್ಯಾವುದೂ ನಡೆಯುತ್ತಿಲ್ಲ” ಎಂದು ಟೀಕಿಸಿದರು.

ವಿರೋಧಿ ಪಕ್ಷಗಳು ಅಧಿಕಾರದಲ್ಲಿದ್ದರೆ ಸರ್ಕಾರವನ್ನು ಹೇಗೆ ಉರುಳಿಸುತ್ತಾರೆ ಎಂಬುದನ್ನು ನೋಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವವೇ? ನಿತೀಶ್ ಕುಮಾರ್‌ಗೆ ಇನ್ನೆಂದೂ ಬಾಗಿಲು ತೆರೆಯಲ್ಲ ಎಂದಿದ್ದವರೇ ಇಂದು ನಿತೀಶ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇಡಿ, ಸಿಬಿಐ, ಐಟಿಗಳ ದುರುಪಯೋಗ ಆಗುತ್ತಿದೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಚುನಾವಣೆ ವೇಳೆ ಜೈಲಿನಲ್ಲಿದ್ದಾರೆ. ಈ ರೀತಿಯಲ್ಲಿ ಯಾವತ್ತೂ ಆಗಿರಲಿಲ್ಲ. ಈಗ ಐಪಿಎಲ್‌ ನಡೆಯುತ್ತಿದೆ. ನಿರ್ದಿಷ್ಟ ತಂಡವೊಂದನ್ನು ಗೆಲ್ಲಿಸಬೇಕೆಂದು ಅಂಪೈರ್‌ ನಿರ್ಧರಿಸಿದರೆ, ಏನು ಆಗಬಹುದೋ ಅಂತಹದ್ದೇ ಸನ್ನಿವೇಶ ಈಗ ಸೃಷ್ಟಿಯಾಗಿದೆ ಎಂದು ಎಚ್ಚರಿಸಿದರು.

ರಾಜಕೀಯ ವಿಶ್ಲೇಷಕ, ವಾಜಪೇಯಿ ಅವರ ಒಡನಾಡಿ ಸುಧೀಂದ್ರ ಕುಲಕರ್ಣಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು

ಎಲೆಕ್ಟೋರಲ್‌ ಬಾಂಡ್‌ ವಿವರಗಳನ್ನು ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿತ್ತು. ಆದರೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ ಮೇಲೆ ಸತ್ಯಗಳು ಹೊರಬಿದ್ದಿವೆ. ಪ್ರಧಾನಿಯವರು ತಮಿಳುನಾಡಿನ ಚಾನೆಲ್‌ ಒಂದಕ್ಕೆ ಇತ್ತೀಚೆಗೆ ಸಂದರ್ಶನ ನೀಡುತ್ತಾ, “ಎಲೆಕ್ಟೋರಲ್ ಬಾಂಡ್‌ಗಳು ಪಾರದರ್ಶಕತೆಯನ್ನು ತಂದಿವೆ. ಯಾರಿಗೆ ಎಷ್ಟು ಕೊಟ್ಟಿದ್ದಾರೆಂದು ತಿಳಿಯುತ್ತದೆ” ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಚುನಾವಣೆಯಲ್ಲಿ ಪ್ರಜಾತಂತ್ರ ಉಳಿಯಬೇಕಾದರೆ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಯಬೇಕು. ಆದರೆ ಈ ಚುನಾವಣೆ ಹಾಗೆ ಇರುತ್ತದೆಯೋ ಇಲ್ಲವೋ ಎಂಬ ಗುಮಾನಿ ಮೂಡಿದೆ. ಮುಕ್ತ ಮತ್ತು ನ್ಯಾಯೋಚಿತವಾಗಿ ಚುನಾವಣೆ ನಡೆಯದಿದ್ದರೆ ನಾವು ಇಂದು ನೋಡುತ್ತಿರುವ ಅನಾಹುತಗಳಿಗಿಂತ ನೂರು ಪಟ್ಟು ಹೆಚ್ಚು ದುರಂತಗಳನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

“ಪರಕಾಲ ಪ್ರಭಾಕರ ಅವರು ತಮ್ಮ ಕೃತಿಯಲ್ಲಿ ಒಂದು ಕಡೆ, ಮೊದಲೆಲ್ಲ ತಾವು ಹಿಂದೂ ಪರ ಎಂದು ಬಿಜೆಪಿ ಹೇಳುವಾಗಲೂ ಸೆಕ್ಯುಲರಿಸಂ ಬಗ್ಗೆ ಹೇಳಿಕೊಳ್ಳುವ ಸನ್ನಿವೇಶವಿತ್ತು. ಆದರೆ ಇಂದು ಕಾಂಗ್ರೆಸ್ ಕೂಡ ನಾವು ಹಿಂದೂಗಳು ಎಂದು ಹೇಳಿಕೊಳ್ಳುವ ಒತ್ತಡಕ್ಕೆ ಒಳಗಾಗಿದೆ ಎಂದು ಬರೆದಿದ್ದಾರೆ. ಆದರೆ ಹಿಂದೂ ಎಂದು ಹೇಳಲು ಒತ್ತಡ ಏಕೆ ಬೇಕು? ಕಾಂಗ್ರೆಸ್‌ನ ಹಿರಿಯ ನಾಯಕ ಮಹಾತ್ಮ ಗಾಂಧಿಯವರಾಗಲೀ, ಸುಭಾಷ್ ಚಂದ್ರ ಬೋಸ್ ಅವರಾಗಲೀ ಹಿಂದೂ ವಿರೋಧಿಯಾಗಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿಂದೂ ವಿರೋಧಿ ಎಂಬ ಇಮೇಜ್ ಕೊಡಲಾಗಿದೆ. ಅದನ್ನು ನಿವಾರಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನಿಸಬೇಕು. ಸೆಕ್ಯುಲರ್ ಭಾರತಕ್ಕೆ ಹಿಂದೂಯಿಸಂ ಭದ್ರ ಬುನಾದಿ ಎಂದು 1999ರಲ್ಲಿ ಕಾಂಗ್ರೆಸ್ ಹೇಳಿತ್ತು. ಈ ರೀತಿಯ ಮಾತನ್ನು ಬಿಜೆಪಿ ಕೂಡ ಈವರೆಗೆ ಆಡಿಲ್ಲ. ಅಂತಹ ಬದ್ಧತೆಯನ್ನು ಕಾಂಗ್ರೆಸ್‌ ಮತ್ತೆ ತೋರಬೇಕಿದೆ. ಬಿಜೆಪಿಯ ಹೇಳುವ ಹಿಂದೂಯಿಸಂ ಪೊಳ್ಳು ಎಂದು ತೋರಿಸುವ ಪ್ರಯತ್ನವನ್ನು ಕಾಂಗ್ರೆಸ್ ಯಾಕೆ ಮಾಡುತ್ತಿಲ್ಲ?” ಎಂದು ಪ್ರಶ್ನಿಸಿದರು.

“ಡೆಮಾಕ್ರಸಿ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಇಂಡಿಯಾ ಒಕ್ಕೂಟವನ್ನು ಗೆಲ್ಲಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಈ ಕೃತಿ ಬಿಡುಗಡೆಯಾಗಿರುವುದು ಮಹತ್ವದ ಸಂಗತಿ” ಎಂದು ಬಣ್ಣಿಸಿದರು.

“ಪರಕಾಲ ಅವರು ನನ್ನ ಸ್ನೇಹಿತರು. ನಾನು ಪ್ರಧಾನಿಯವರ ಕಚೇರಿಯಲ್ಲಿದ್ದಾಗ, ಅವರು ಹೈದ್ರಾಬಾದ್‌ನಲ್ಲಿ ಬಿಜೆಪಿಯ ವಕ್ತಾರರಾಗಿದ್ದರು. ಅವರ ಮನೆಯವರು (ಅರ್ಥಸಚಿವೆ ನಿರ್ಮಲಾ ಸೀತಾರಾಮನ್‌) ಆಗ ಬಿಜೆಪಿಯಲ್ಲಿ ಇರಲಿಲ್ಲ ಎಂದು ನೆನೆದರು.

ಕೃತಿಯ ಅನುವಾಕರಾದ ಆರ್‌.ಕೆ.ಹುಡಗಿ (ರಾಹು) ಅವರು ಮಾತನಾಡಿ, “ಮನುಷ್ಯತ್ವದ ಬರಗಾಲದಲ್ಲಿ ನಾವು ಬದುಕುತ್ತಿದ್ದೇವೆ. ರೈತರು ದೆಹಲಿಯಲ್ಲಿ ಮಳೆ ಗಾಳಿ ಚಳಿ ಎನ್ನದೆ ಹೋರಾಟ ನಡೆಸಿದರು. 754 ರೈತರು ಹುತಾತ್ಮರಾದರು. ಕರಾಳ ಕಾನೂನು ರಚಿಸಿದ ನಾಯಕರು ಅರ್ಧ ನಿಮಿಷ ಎದ್ದು ನಿಂತು ಪಾರ್ಲಿಮೆಂಟ್‌ನಲ್ಲಿ ಕಣ್ಣೀರು ಸುರಿಸಲಿಲ್ಲ. ಜೈ ಜವಾನ್‌ ಜೈ ಕಿಸಾನ್ ಎಂಬ ಘೋಷಣೆ ಕೂಗಿದ ದೇಶದಲ್ಲಿ ರೈತರಿಗಾಗಿ ಮರುಗಲಿಲ್ಲ. ಮಾತೃದೇವೋಭವ ಎನ್ನುವ ದೇಶದಲ್ಲಿ ಮಣಿಪುರದ ಮಹಿಳೆಯರನ್ನು ಹಾಡಹಗಲೇ ಬೆತ್ತಲು ಮಾಡಿ ಮೆರವಣಿಗೆ ಮಾಡಲಾಯಿತು. ಆಗಲೂ ಕಣ್ಣೀರು ಹಾಕಲಿಲ್ಲ. ಬೇಟಿ ಬಚಾವೋ ಬೇಟಿ ಪಢಾವೋ ಎಂದು ಘೋಷಣೆ ಮಾಡಿದ ದೇಶದಲ್ಲಿ ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಅವಧಿಗೂ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಅಪರಾಧಿಗಳು ಹೊರಗೆ ಬಂದಾಗ ಮೆರವಣಿಗೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು. ಮನುಷ್ಯತ್ವ ಈ ದೇಶದಲ್ಲಿ ಇದೆಯಾ?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಕೃತಿ ಕುರಿತು ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ರಾಜಪ್ಪ ದಳವಾಯಿ, “ಮೋದಿ ವರ್ಸಸ್ ಮೋದಿ ಎಂಬ ಚಾಪ್ಟರ್‌ನಲ್ಲಿ ಪರಕಾಲ ಅವರು ನರೇಂದ್ರ ಮೋದಿಯವರಲ್ಲಿ ಆಗಿರುವ ಬದಲಾವಣೆಗಳನ್ನು ದಾಖಲಿಸಿದ್ದಾರೆ. ಕೆಂಪು ಕೋಟೆಯಲ್ಲಿ ನಿಂತು ಆರಂಭದಲ್ಲಿ ಮೋದಿಯವರು ಮಾಡಿದ ಭಾಷಣಗಳಿಗೂ ಆನಂತರದಲ್ಲಿ ಅದೇ ಕೆಂಪುಕೋಟೆಯಲ್ಲಿ ಮಾಡಿದ ಭಾಷಣಗಳಿಗೂ ಇರುವ ವ್ಯತ್ಯಾಸಗಳನ್ನು ಉಲ್ಲೇಖಿಸಿದ್ದಾರೆ. ಮೊದಮೊದಲು ತಮ್ಮ ಹಿಂದಿನ ನಾಯಕರನ್ನು ನೆನೆಯುತ್ತಿದ್ದ ಮೋದಿ, ನಂತರದ ದಿನಗಳಲ್ಲಿ ಆ ಸಂಪ್ರದಾಯ ಕೈಬಿಟ್ಟರು ಎನ್ನುತ್ತಾರೆ ಪ್ರಭಾಕರ. ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಳದ ಕುರಿತು ಬಿಜೆಪಿ ಹೇಳುವ ಸುಳ್ಳುಗಳನ್ನು ಅಂಕಿ-ಅಂಶಗಳ ಸಹಿತ ಬಯಲು ಮಾಡಿದ್ದಾರೆ. ಧರ್ಮ ಮತ್ತು ರಾಜಕಾರಣವನ್ನು ಮಿಶ್ರ ಮಾಡುವ ಬಗೆಯನ್ನು, ಅದರ ಹುನ್ನಾರವನ್ನು ಅವರು ಇಲ್ಲಿ ಚರ್ಚಿಸಿದ್ದಾರೆ” ಎಂದು ತಿಳಿಸಿದರು.

“ಮೋದಿಯವರು ಯಾವುದೇ ಯೋಜನೆಗಳನ್ನು ಪ್ರಕಟಿಸುವಾಗ ವೈಭವೀಕರಣದಿಂದ ಮಾಡುತ್ತಾರೆ, ಆದರೆ ಆರು ತಿಂಗಳು ಅಥವಾ ಮೂರು ತಿಂಗಳಲ್ಲಿ ಆ ಯೋಜನೆಗಳೇ ಕಾಣೆಯಾಗಿರುತ್ತವೆ. ಯಾಕೆಂದರೆ ಯಾವುದೂ ಯೋಜಿತವಾಗಿರುವುದಿಲ್ಲ. ಬೇಟಿ ಬಚಾವೋ, ಅಚ್ಚೇದಿನ್ ಮೊದಲಾದವು ಇಂದು ಅಡ್ರೆಸ್‌ ಇಲ್ಲ ಎಂಬುದನ್ನು ಪರಕಾಲ ಅವರು ತೆರೆದಿಟ್ಟಿದ್ದಾರೆ” ಎಂದು ವಿವರಿಸಿದರು.

ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಿದರು. ಆದರೆ ಅನಾರೋಗ್ಯದ ನಿಮಿತ್ತ ಭಾಷಣ ಮಾಡದೆ ಸಭಾಂಗಣದಿಂದ ಹೊರನಡೆದರು. ಶಾಸಕ ಬಿ.ಆರ್‌.ಪಾಟೀಲ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ನಾಗರಾಜ್‌ ಸ್ವಾಗತ ಕೋರಿದರು. ಸೃಷ್ಟಿ ಪಬ್ಲಿಕೇಷನ್‌ನ ನಾಗೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನರೇಂದ್ರ ಮೋದಿ ಸರಿಗಟ್ಟುವ ಮತ್ತೊಬ್ಬ ರಾಜಕಾರಣಿ ನನಗಂತೂ ಕಂಡು ಬರುತ್ತಿಲ್ಲ: ಹೆಚ್‌ ಡಿ ದೇವೇಗೌಡ

ಭಾರತದಲ್ಲಿ ನರೇಂದ್ರ ಮೋದಿಯವರನ್ನು ಸರಿಗಟ್ಟುವ ಮತ್ತೊಬ್ಬ ರಾಜಕಾರಣಿ ನನಗಂತೂ ಕಂಡು ಬರುತ್ತಿಲ್ಲ....

ಪ್ರಧಾನಿ ಮೋದಿಯವರ ಹಲವು ಹೇಳಿಕೆಗಳು ನೀತಿ ಸಂಹಿತೆ ಉಲ್ಲಂಘಿಸುತ್ತವೆ: ಸೀತಾರಾಮ್ ಯೆಚೂರಿ

"ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ...

ಪಿಎಸ್​ಐ ಕೇಸ್​​ನಲ್ಲಿ ಅರೆಸ್ಟ್ ಆಗಿದ್ದ ದಿವ್ಯಾ ಹಾಗರಗಿ ಜೊತೆ ಕಾಣಿಸಿಕೊಂಡ ಉಮೇಶ್‌ ಜಾದವ್‌

ಪಿಎಸ್​ಐ ಕಿಂಗ್ ಪಿನ್​​ ಆರ್ ​ಡಿ ಪಾಟೀಲ್ ನಿವಾಸಕ್ಕೆ ಕಲಬುರಗಿ ಬಿಜೆಪಿ...

ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ; ಕಿಶೋರ್ ಬರಹ ಇಲ್ಲಿದೆ!

ಪರಿವಾರವಾದ.. ಸ್ವಜನಪಕ್ಷಪಾತ.. ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮೋದಿ...