ಕೆ ಸಿ ರಘು: ಮಾಸದ ನಗು, ಜ್ಞಾನದ ಬೆರಗು

Date:

ಕೆ ಸಿ ರಘು ಕನ್ನಡ ಪತ್ರಿಕೆಗಳ ಓದುಗರಿಗೆ, ಟಿವಿ ಚಾನೆಲ್‌ಗಳ ವೀಕ್ಷಕರಿಗೆ ಚಿರಪರಿಚಿತ ಹೆಸರು. ಬರಹಗಾರರಾಗಿ, ಅಂಕಣಕಾರರಾಗಿ, ರಾಜಕೀಯ ವಿಶ್ಲೇಷಕರಾಗಿ, ಆರ್ಥಿಕ-ಸಾಮಾಜಿಕ ಸಂಗತಿಗಳ ಕುರಿತ ತಮ್ಮ ಪಾಂಡಿತ್ಯಪೂರ್ಣ ಮಾತುಗಳಿಗಾಗಿ ಹೆಸರಾಗಿದ್ದವರು ರಘು.

ಕಲ್ಮನೆ ಚಂದ್ರೇಗೌಡ ರಘು, ಮೂಲತಃ ಚಿಕ್ಕಮಗಳೂರಿನವರು; ಕಲ್ಮನೆಯ ಪ್ರಸಿದ್ಧ ಕೃಷಿಕ ಕಳಸೇಗೌಡರ ಮೊಮ್ಮಗ. ಮಾನವಿಕ ಶಾಸ್ತ್ರದ ಬಗ್ಗೆ ಅಪಾರ ತಿಳುವಳಿಕೆಯಿದ್ದ ರಘು ಮೂಲತಃ ವಿಜ್ಞಾನದ ವಿದ್ಯಾರ್ಥಿ; ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದರು. ನಂತರ, ಬೆಂಗಳೂರಿನ ಸಹಕಾರನಗರದಲ್ಲಿ 1992ರಲ್ಲಿ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಆರಂಭಿಸುವ ಮೂಲಕ ಸ್ವಂತ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಜನರ ಮತ್ತು ಸಮಾಜದ ಆರೋಗ್ಯ ವೃದ್ಧಿಗೆ ಕೆಲಸ ಮಾಡುವುದು ಅವರ ಗುರಿಯಾಗಿತ್ತು. ಸ್ಟಾರ್ಟಪ್‌ಗಳು ಇಲ್ಲದ ಕಾಲದಲ್ಲಿಯೇ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಸ್ಥಾಪಿಸಿ ಅದರ ಮೂಲಕ ಸಾವಯವ ಆಹಾರ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದರು. ಭಾರತೀಯರು ಹಿಂದೆ ಬಳಸುತ್ತಿದ್ದ ಸಿರಿಧಾನ್ಯ ಮುಂತಾದ ದೇಸಿ ಆಹಾರ ಧಾನ್ಯಗಳಿಗೆ ಮರುಜೀವ ನೀಡುವ ವಿಚಾರದಲ್ಲಿ ಅವರದ್ದು ಮಹತ್ವದ ಕೆಲಸ. ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ (ಎಫ್‌ಎಸ್ಎಸ್‌ಎಐ)ದ ಮಾನ್ಯತೆ ದಕ್ಕುವುದರೊಂದಿಗೆ ಅವರು ಉದ್ಯಮದಲ್ಲಿ ಯಶಸ್ಸು ಕಂಡಿದ್ದರು. ಪ್ರಿಸ್ಟೀನ್ ಆರ್ಗ್ಯಾನಿಕ್ಸ್‌ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಕಂಪನಿಯಾಯಿತು.

ಕೆ ಸಿ ರಘು

ಐಸಿಎಂಆರ್‌ನ ನಿರ್ದೇಶಕರಾಗಿದ್ದ ಡಾ ಸಿ ಗೋಪಾಲನ್ ಅವರನ್ನು ರಘು ಗುರುವೆಂದು ಪರಿಗಣಿಸಿದ್ದರು. ಆಹಾರ ಪೂರಕಗಳೊಂದಿಗೆ ಗರ್ಭಿಣಿಯರು ಮತ್ತು ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವ ಕುರಿತು ಗೋಪಾಲನ್ ಸಂಶೋಧನೆಗಳು ಭಾರತದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಮಧ್ಯಾಹ್ನದ ಊಟದ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಕಾರಣವಾಗಿದ್ದವು. ಅದೇ ಹಾದಿಯಲ್ಲಿ ಹೆಜ್ಜೆಯಿಟ್ಟ ರಘು, ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಮಾರಕ ಕಾಯಿಲೆಗಳನ್ನು ಗುಣಪಡಿಸುವಂಥ ಪೌಷ್ಟಿಕಾಂಶಗಳನ್ನು ತಮ್ಮ ಸಂಶೋಧನೆಯ ಮೂಲಕ ಕಂಡುಕೊಂಡಿದ್ದರು. ತಾವು ಕಂಡುಕೊಂಡದ್ದನ್ನು ದೇಶವಿದೇಶಗಳ ನಿಯತಕಾಲಿಕಗಳಲ್ಲಿ ಬರೆದು ಪ್ರಕಟಿಸಿದ್ದರು.

ರಘು ಮೂಲತಃ ಆಹಾರ ವಿಜ್ಞಾನಿ. ಅದು ಅವರ ವೃತ್ತಿ. ಆದರೆ, ಪ್ರವೃತ್ತಿಯಿಂದ ತತ್ವಶಾಸ್ತ್ರ, ಸಾಹಿತ್ಯ, ಭಾಷೆ, ರಾಜಕಾರಣ, ಸಂಸ್ಕೃತಿ ಇತ್ಯಾದಿ ನೂರೆಂಟು ಜ್ಞಾನಶಾಖೆಗಳ ನಿಸ್ಸೀಮ ವಿದ್ಯಾರ್ಥಿಯಾಗಿದ್ದರು. ಆ ವಿಷಯಗಳಲ್ಲಿ ಅವರ ತಿಳಿವು ಆಯಾ ಕ್ಷೇತ್ರದ ಪರಿಣತರನ್ನೂ ಚಕಿತಗೊಳಿಸುವಂತಿತ್ತು. ಅವರ ಓದಿನ ವಿಸ್ತಾರ ಎಂಥವರನ್ನೂ ಬೆರಗುಗೊಳಿಸುತ್ತಿತ್ತು. ಅನೇಕ ವಿಷಯಗಳ ಬಗ್ಗೆ ಅವರು ಅಥಾರಿಟೇಟಿವ್ ಆಗಿ ಮಾತನಾಡುತ್ತಿದ್ದರು. ನಡೆದಾಡುವ ಜ್ಞಾನಕೋಶ ಎಂದೇ ಅವರನ್ನು ಕೆಲವರು ಕರೆಯುತ್ತಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಹಾರ, ಆರೋಗ್ಯವನ್ನು ಸಮಾಜದ ಆರೋಗ್ಯದೊಂದಿಗೆ ಬೆಸೆದು ವಿಶ್ಲೇಷಣೆ ಮಾಡುವುದು ಕೆ ಸಿ ರಘು ಅವರ ವಿಶಿಷ್ಟ ನೋಟಕ್ರಮ ಹಾಗೂ ಶೈಲಿಯಾಗಿತ್ತು. ಆರೋಗ್ಯದ ಕುರಿತ ಬರಹದಲ್ಲೂ ಅವರು ಶೇಕ್ಸ್‌ಪಿಯರ್ ರೆಫರೆನ್ಸ್ ತರುತ್ತಿದ್ದರು. ಆಹಾರವನ್ನು ನಮ್ಮ ಚಿಂತನೆ, ಬದುಕಿನ ಶೈಲಿಯೊಂದಿಗೆ ಇಟ್ಟು ಸಮಗ್ರವಾಗಿ ನೋಡುತ್ತಿದ್ದರು. ಮೈಸೂರಿನ ಆಹಾರ ತಜ್ಞ ಖಾದರ್ ಗೋಧಿ ತಿಂದರೆ ಆರೋಗ್ಯಕ್ಕೆ ಹಾನಿ ಖಚಿತ ಎಂದು ಪ್ರಚಾರ ಮಾಡಿದರೆ, ಮತ್ತೊಬ್ಬ ತಜ್ಞ ಹಸುವಿನ ಹಾಲು ಮನುಷ್ಯರು ಕುಡಿಯಬಾರದು ಎಂದು ವಾದಿಸಿದರೆ, ಅದಕ್ಕೆಲ್ಲ ರಘು ತಕ್ಕ ಉತ್ತರ ಕೊಡುತ್ತಿದ್ದರು. ನೂರಾರು ವರ್ಷ ಗೋಧಿ ತಿಂದು, ಹಾಲು ಕುಡಿದು ನಮ್ಮ ದೇಹ ಹೇಗೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಗಳಿಸಿದೆ ಎನ್ನವುದನ್ನು ಮನ ಮುಟ್ಟುವಂತೆ ವಿವರಿಸುತ್ತಿದ್ದರು. ಮತ್ತೆ ಕೆಲವರು ತಾಮ್ರದ ಪಾತ್ರೆಗಳಲ್ಲಿ ನೀರು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾಗಲೂ ಅದು ಹೇಗೆ ಸುಳ್ಳು ಎಂದು ರಘು ವಿವರಿಸಿದ್ದರು. ಅದರಿಂದ ಅಗತ್ಯಕ್ಕಿಂತ ಹೆಚ್ಚಿನ ತಾಮ್ರ ದೇಹ ಸೇರುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದ್ದರು. ಹೀಗೆ ಆಹಾರದ ವಿಚಾರದಲ್ಲಿ ಎಲ್ಲ ರೀತಿಯ ಅತಿರೇಕಗಳನ್ನು ತಮ್ಮ ಅಧ್ಯಯನ ಮತ್ತು ಅನುಭವದ ನೆಲೆಯಲ್ಲಿ ನಿರಾಕರಿಸಿ, ಸತ್ಯ ಸಂಗತಿಗಳನ್ನು ಜನರ ಮುಂದಿಡುತ್ತಿದ್ದರು. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಮಿಥ್‌ಗಳನ್ನು ಒಡೆಯುತ್ತಿದ್ದರು. ಪತ್ರಿಕೆ, ಟಿವಿ, ವೆಬ್‌ಸೈಟ್‌, ಯೂಟ್ಯೂಬ್ ಮುಂತಾಗಿ ಸಾಧ್ಯವಿರುವ ಎಲ್ಲ ವೇದಿಕೆಗಳ ಮೂಲಕವೂ ಅವರು ತಮ್ಮ ವಿಚಾರಗಳನ್ನು ಜನರಿಗೆ ಮುಟ್ಟಿಸಲು ಹಾತೊರೆಯುತ್ತಿದ್ದರು.

ರಘು ಸದಾ ಹಸನ್ಮುಖಿ. ಬೆರಗು ಮತ್ತು ನಗು ಅವರ ಮುಖದ ಸ್ಥಾಯಿ ಭಾವಗಳಾಗಿದ್ದವು. ಲೋಕದಲ್ಲಿನ ಜ್ಞಾನ ವೈವಿಧ್ಯಕ್ಕೆ, ವಿಸ್ತಾರಕ್ಕೆ ಬೆರಗುಗೊಂಡಿದ್ದ ಅವರು, ಆ ಬೆರಗನ್ನು ತಮ್ಮೊಂದಿಗೆ ಮಾತನಾಡುವವರಿಗೂ ದಾಟಿಸುತ್ತಿದ್ದರು. ಅವರ ಪ್ರತಿ ಮಾತಿನಲ್ಲಿಯೂ ಜಗತ್ತಿನ ಖ್ಯಾತ ಲೇಖಕರ ಹಾಗೂ ಪುಸ್ತಕಗಳ ಹೆಸರುಗಳು ಚಿಮ್ಮುತ್ತಿದ್ದವು.

ಕೆ ಸಿ ರಘು

ರಘು ಅಪಾರ ಹಾಸ್ಯಪ್ರಜ್ಞೆಯುಳ್ಳವರಾಗಿದ್ದರು. ‘ನೀವು ಸರ್ಕಾರಿ ನೌಕರಿ ಬಿಟ್ಟು ಸ್ವಂತ ಉದ್ಯಮ ಸ್ಥಾಪಿಸಿದ್ದು ಹೇಗೆ’ ಎಂದು ಪತ್ರಕರ್ತರು ಅವರನ್ನೊಮ್ಮೆ ಪ್ರಶ್ನಿಸಿದರು. ಅದಕ್ಕೆ ಅವರು ಮಾರ್ಕ್ ಟ್ವೈನ್‌ನ ‘ನೀವು ಒಬ್ಬ ಯಶಸ್ವಿ ಉದ್ಯಮಿಯಾಗಬೇಕೆಂದರೆ, ನಿಮಗೆ ಬೇಕಿರುವುದು  ಧೈರ್ಯ ಮತ್ತು ಅಜ್ಞಾನ’ ಎನ್ನುವ ಮಾತನ್ನು ಹೇಳಿದ್ದರು. ಅದರ ಜೊತೆಗೆ ಉತ್ತಮ ಕಾದಂಬರಿ ರಚನೆಯ ಸೂತ್ರಗಳೇನು ಎನ್ನುವುದರ ಬಗ್ಗೆ ಖ್ಯಾತ ಲೇಖಕ ಸಾಮರ್‌ಸೆಟ್‌ ಮಾಮ್ ಹೇಳಿದ್ದ ‘ಉತ್ತಮ ಕಾದಂಬರಿ ರಚನೆಗೆ ಮೂರು ಮಾರ್ಗಗಳಿವೆ. ಆದರೆ, ಅವು ಯಾರಿಗೂ ಗೊತ್ತಿಲ್ಲ’ ಎನ್ನುವ ಮಾರ್ಮಿಕ ಉತ್ತರವನ್ನೂ ನೀಡಿದ್ದರು. ಮಗದೊಮ್ಮೆ ಪತ್ರಕರ್ತ ಮಿತ್ರರೊಬ್ಬರು ಅವರೊಂದಿಗೆ ಮನುಷ್ಯನ ವರ್ತನೆಗಳ ಮೂಲದ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ‘ನೀವು ದಿ ನೇಕೆಡ್ ಏಪ್ ಪುಸ್ತಕ ಓದಿದ್ದೀರಾ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ರಘು “ನೇಕೆಡ್ ಅಂತ ಇದ್ದ ಮೇಲೆ ಓದದೇ ಇರುವುದಕ್ಕಾಗುತ್ತದೆಯೇ’ ಎಂದು ಚಟಾಕಿ ಹಾರಿಸಿದ್ದರು.

ಕೆ ಸಿ ರಘು ಭಾರತೀಯ ಸಮಾಜದ ಗಂಭೀರ ವಿಶ್ಲೇಷಕರಾಗಿದ್ದರು; ಚರಿತ್ರೆ, ರಾಜಕಾರಣ, ಸಾಹಿತ್ಯ, ಸಂಸ್ಕೃತಿ, ಆಹಾರ ಎಲ್ಲವನ್ನೂ ಜನಪರ ನೆಲೆಯಲ್ಲಿ ವಿಶ್ಲೇಷಿಸುತ್ತಿದ್ದರು. ತಮ್ಮ ಮಾತಿಗೆ ಪೂರಕವಾಗಿ ಅಂಕಿ ಅಂಶ, ಆಕರಗಳನ್ನು ನೀಡುತ್ತಿದ್ದರು. ಅಮೆರಿಕದ ಆಹಾರ ರಾಜಕಾರಣದಿಂದ ಹಿಡಿದು ಭಾರತದ ಕೋಮು ರಾಜಕಾರಣದವರೆಗೆ, ಆರ್ಥಿಕತೆ, ಸಾಹಿತ್ಯ, ಫ್ಯಾಷನ್ ಲೋಕ ಹೀಗೆ ಎಲ್ಲದರ ಬಗ್ಗೆಯೂ ಅವರ ಬಳಿ ಅಪಾರ ಮಾಹಿತಿ ಇತ್ತು. ಅದರಿಂದಾಗಿಯೇ ಅವರು ಕನ್ನಡ ಟಿವಿ ಚಾನೆಲ್‌ಗಳಿಗೆ ಒಬ್ಬ ಮೌಲ್ಯಯುತವಾದ ಕಾಯಂ ಅತಿಥಿಯಾಗಿದ್ದರು.

ಪುಸ್ತಕ ಪ್ರಿಯರಾಗಿದ್ದ ರಘು ತಮ್ಮ ಮನೆಯಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯ ರೂಪಿಸಿದ್ದರು. ಪ್ರತಿ ವಾರಾಂತ್ಯದಲ್ಲಿ ಪುಸ್ತಕದಂಗಡಿಗಳಿಗೆ ಭೇಟಿ ನೀಡುವುದು ಅವರ ಹವ್ಯಾಸವಾಗಿತ್ತು. ಭಾರತದ ಯಾವ ನಗರದ ಯಾವ ಅಂಗಡಿಯಲ್ಲಿ ಎಂಥ ಪುಸ್ತಕಗಳು ಸಿಗುತ್ತವೆ ಎನ್ನುವುದನ್ನು ಅವರು ಕಂಡುಕೊಂಡಿದ್ದರು. ಬೆಂಗಳೂರಿನ ಅವೆನ್ಯೂ ರಸ್ತೆ, ದೆಹಲಿಯ ದರಿಯಾ ಗಂಜ್‌ ಸಂಡೆ ಬುಕ್ ಬಜಾರ್, ಕೋಲ್ಕತ್ತದ ಕಾಲೇಜ್ ರಸ್ತೆ, ವಾರಾಣಸಿ ಹೀಗೆ ದೇಶದ ಹಲವು ನಗರಗಳಿಂದ ತಂದ ಅಮೂಲ್ಯ ಪುಸ್ತಕಗಳು ಅವರ ಗ್ರಂಥಾಲಯದಲ್ಲಿದ್ದವು. ಹೊರರಾಜ್ಯಗಳಿಗೆ ಪ್ರವಾಸ ಹೋದಾಗ ಹೆಚ್ಚು ಪುಸ್ತಕಗಳನ್ನು ಕೊಂಡು, ವಿಮಾನಗಳಲ್ಲಿ ನಿಗದಿತ ತೂಕಕ್ಕಿಂತ ಹೆಚ್ಚಾಯಿತು ಎಂದು ದಂಡ ಕಟ್ಟುವುದು ಅವರಿಗೆ ಮಾಮೂಲಿಯಾಗಿತ್ತು.

ಈ ಸುದ್ದಿ ಓದಿದ್ದೀರಾ: ಈ ಶತಮಾನದ ಸಾಕ್ಷಿಯಾಗಿ ಬದುಕಿದ ಶಿವರಾಮ ಕಾರಂತ : ಒಂದು ಸಂದರ್ಶನ

ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ತಮಗೆ ತತ್ವಶಾಸ್ತ್ರ ಅತ್ಯಂತ ಇಷ್ಟದ ವಿಷಯ ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಅದರಾಚೆಗೆ ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದ ಪ್ರಮುಖ ಲೇಖಕರನ್ನು ಓದಿಕೊಂಡಿದ್ದರು. ವಚನಕಾರ ಅಲ್ಲಮನ ತಾತ್ವಿಕತೆಯ ಬಗ್ಗೆ ಅವರಿಗೆ ವಿಶೇಷ ಸೆಳೆತ. ಸಾಹಿತ್ಯದ ಬಗ್ಗೆ, ಸಾಹಿತಿಗಳ ಬಗ್ಗೆ ಅನೇಕ ಸಾಹಿತ್ಯ ವಿದ್ಯಾರ್ಥಿಗಳಲ್ಲೂ ಕಾಣದ ಒಳನೋಟ ಮತ್ತು ಮಾಹಿತಿ ಅವರಿಗಿತ್ತು.

ಸ್ವಸ್ಥ ಸಮಾಜ ಮತ್ತು ಸ್ವಸ್ಥ ಮನುಷ್ಯನನ್ನು ರೂಪಿಸುವ ದಿಕ್ಕಿನಲ್ಲಿ ಚಿಂತಿಸುತ್ತಿದ್ದ ಮತ್ತು ಕ್ರಿಯಾಶೀಲರಾಗಿದ್ದ ರಘು, ಭಾರತೀಯರ ಊಟ ಎಂದರೆ, ಅನ್ನದ ಗುಡ್ಡ, ಸಾರಿನ ಹೊಳೆ ಎಂದು ಪ್ರೀತಿಯಿಂದಲೇ ಛೇಡಿಸುತ್ತಿದ್ದರು.  ಸಾವಿರಾರು ಮಕ್ಕಳಿಗೆ ಹುಟ್ಟಿನಿಂದಲೇ ಕಾಡುವ ಮಾರಕ ಕಾಯಿಲೆಗಳ ವಿರುದ್ಧ ಹೋರಾಡಿ ಜೀವಿಸಲು ನೆರವಾಗಿದ್ದ ರಘು ಇನ್ನೂ ಬದುಕಬೇಕಾದ ವಯಸ್ಸಿನಲ್ಲೇ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗೆ ಬಲಿಯಾಗಿದ್ದು ವಿಪರ್ಯಾಸಕರ.

+ posts

ಪೋಸ್ಟ್ ಹಂಚಿಕೊಳ್ಳಿ:

5 COMMENTS

  1. ಉತ್ತಮ ಲೇಖನ, ರಘು ಅವರ ವ್ಯಕ್ತಿ ಚಿತ್ರಣ ಚೆನ್ನಾಗಿ ನಿರೂಪಿಸಲ್ಪಟ್ಟಿದೆ

  2. ರಘು ರವರನ್ನು ಅವರು ಆಸಕ್ತಿ ಹಾಗೂ ಪರಿಣತಿಯನ್ನು ಚೆನ್ನಾಗಿ ತಿಳಿಸಿದ್ದೀರಿ. ನನಗೆ ರಘು ತಮ್ಮ ಸ್ನಾತಕೋತ್ತರ ಪದವಿ ಓದುವಾಗ ನಮ್ಮ ಹಳ್ಳಿ ಈಗ ನಗರವಾಗಿರುವ ನಾಗಶೆಟ್ಟಹಳ್ಳಿಯಲ್ಲಿ ಅವರು ತಮ್ಮ ಶಂಕರನೋಡನೆ ನೆಲೆಸಿದ್ದರು. ನನಗೆ ಪರಿಚಿತರು. ಅಗಾಧ ಜ್ಞಾನವನ್ನು ತಮ್ಮ ಆಳವಾದ ಅಧ್ಯಯನದಿಂದ ಸಂಪಾದಿಸಿದ್ದರು ಹಾಗೂ ಆ ಜ್ಞಾನವನ್ನು ಎಲ್ಲಾ ಮಾಧ್ಯಮಗಳ ಮುಖಾಂತರ ಹಂಚುತ್ತಿದ್ದರು. ಸಮಾಜಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ.
    ಸಾವಿನಲ್ಲೂ ಸಾರ್ಥಕತೆ ತೋರಿಸಿ ವ್ಯಕ್ತಿ ತನ್ನ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನಮಾಡುವ ಮೂಲಕ.
    ಭಾವಪೂರ್ಣ ಶ್ರದ್ಧಾಂಜಲಿ.

  3. ಇದರ ಜೊತೆಗೆ ಅನೇಕ ಹೆಸರಾಂತ ಫುಡ್ ನ್ಯೂಟ್ರಿಷನ್ ಬ್ರಾಂಡ್ ಗಳಿಗೆ ತಂತ್ರಜ್ಞಾನ ರೆಸಿಪಿ ಕೊಟ್ಟಿದ್ದಾರೆ ಎಂದು ಕೇಳಿದ್ದೇನೆ. ರಘು ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟ

  4. ಇದರ ಜೊತೆಗೆ ಅನೇಕ ಹೆಸರಾಂತ ಫುಡ್ ನ್ಯೂಟ್ರಿಷನ್ ಬ್ರಾಂಡ್ ಗಳಿಗೆ ತಂತ್ರಜ್ಞಾನ ರೆಸಿಪಿ ಕೊಟ್ಟಿದ್ದಾರೆ ಎಂದು ಕೇಳಿದ್ದೇನೆ. ರಘು ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟ.

  5. ರಘು ಅಳಿಸಲಾಗದ ನೆನಪು, ನಮ್ಮ ನಡುವೆ ಇದ್ದ ಸದಾ ಹಸನ್ಮುಖಿ, ಅಪ್ರತಿಮ ವಾಗ್ಮಿ, ಅವರಾ ಮಾತಿನ ಮೋಡಿಗೆ ಮರುಲಗದವರು ಇಲ್ಲ, ನಾಡಿಗೆ ಒಬ್ಬ ಚಿಂತಕ, ವಿಜ್ಞಾನಿ , ತಜ್ಞ,, ನಮ್ಮ ಸ್ನೇಹಿತ ಅಗಲಿಕೆಯಿಂದ ನಶ್ಟ ಆಗಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...