ವ್ಯಕ್ತಿ ಚಿತ್ರ | ಕಡಕೋಳ ಮಡಿವಾಳಪ್ಪನ ನೆಲಧರ್ಮ ಪಾಲಿಸುವ, ಪ್ರೀತಿಸುವ ಸಂಜೀವಕ್ಕ

Date:

ಅವಳದು ಉತ್ತುವುದು, ಬಿತ್ತುವುದು ಸೇರಿದಂತೆ ಬರೀ ಹೊಲಮನೆಯ ಕೃಷಿ ಕಾಯಕದ ಕೌಶಲ್ಯವಷ್ಟೇ ಆಗಿದ್ದರೆ ಹೆಚ್ಚುಗಾರಿಕೆ ಏನೂ ಆಗಿರಲಿಲ್ಲ. ಅವಳಿಗೆ ಹಣದ ಅಡಚಣೆ ಇಲ್ಲದಿದ್ದರೂ ಹೊಲದಲ್ಲಿ ದುಡಿಯುವ ಆಕೆಯ ಭೂಮ್ತಾಯಿ ಮೇಲಿನ ಕೃಷಿ ಪ್ರೀತಿಯನ್ನು ತಪ್ಪಿಸಲು ಇವತ್ತಿಗೂ ಸಾಧ್ಯವಾಗಿಲ್ಲ. ಎಂಬತ್ತರ ತುಂಬು ವಯಸ್ಸಿನಲ್ಲೂ ಸಂಜೀವಕ್ಕ ಗಟ್ಟಿಮುಟ್ಟಾಗಿದ್ದಾಳೆ. ಮಡಿವಾಳಪ್ಪನ ಜಾತ್ರೆಗೆ ಮಠದ ದಾಸೋಹಕ್ಕೆ ಈಗಲೂ ಕೈಲಾದಷ್ಟು ರೊಟ್ಟಿ ಮಾಡಿ ಕೊಡುತ್ತಾಳೆ. 

ಅಪ್ಪ ಅಮ್ಮ ತೀರಿಹೋದ ಮೇಲೆ ಅಕ್ಕ- ಸಂಜೀವಕ್ಕ ನನಗೆ ಎರಡೂ ಆಗಿದ್ದಾಳೆ. ಅವಳು ಇರೋದರಿಂದ ನನಗೆ ಅಪ್ಪ ಅವ್ವ ಇಬ್ಬರ ಪ್ರೀತಿ, ಕಕ್ಕುಲಾತಿಯ ಕೊರತೆ ನೀಗಿದಂತಿದೆ. ಅಷ್ಟೇ ಯಾಕೆ ಹುಟ್ಟೂರಿನ ನೆಲಧರ್ಮ ಪ್ರೀತಿಯ ನಂಟಿಗೂ ಧಕ್ಕೆ ಬಂದಿಲ್ಲ. ಅಪರೂಪಕ್ಕೆ ಊರಿಗೆ ಹೋದಾಗೆಲ್ಲ ನಮ್ಮೆಲ್ಲರ ರೇಖದೇಖಿ ಅಕ್ಕನದೇ. ಕಡಕೋಳದಲ್ಲಿ ಇರುವಷ್ಟು ದಿನವೂ ಊಟೋಪಚಾರದ ಕಾಳಜಿ ಅವಳದೇ. ಬಿಸಿ ಬಿಸಿಯಾದ ರೊಟ್ಟಿ ಮೂರ್ನಾಲ್ಕು ನಮೂನಿ ಕಾಳುಪಲ್ಯ ಜತೆಗೆ ಮೆಕ್ಕಿಕಾಯಿ, ಇಲ್ಲವೇ ಸೇಂಗಾ ಮತ್ತು ಉಳ್ಳಾಗಡ್ಡಿ ಮಿಶ್ರಿತ ಚಟ್ನಿ. ಸಾಲದೆಂಬಂತೆ ಊಟಕ್ಕೆ ನೆಂಚಿಕೊಳ್ಳಲು ಎಳಸಾದ ತಪ್ಪಲುಭರಿತ ಹಸಿಈರುಳ್ಳಿ, ಮೆಂತೆಸೊಪ್ಪು, ಸೌತೆಕಾಯಿ ಖಾಯಂ. ಅಕ್ಕನದು ಥೇಟ್ ಅವ್ವನದೇ ಕೈ ರುಚಿ. ಬಂಡೆಮೇಲೆ ಹಿಟ್ಟುನಾದಿ ಬಡಿದು ತಟ್ಟಿದ, ಕಟ್ಟಿಗೆ ಒಲೆ ಹಂಚಿನ ಮೇಲೆ ಕಟಿಯಾಗಿ ಸುಟ್ಟರೊಟ್ಟಿ, ಮುಟ್ಟಿಗೆರುಚಿ. ಅದು ಅಕ್ಕನಿಂದ ಮಾತ್ರ ಸಾಧ್ಯ.

ಎಡೊಲೆಯ ಮಣ್ಣಿನ ಹರವಿಯಲ್ಲಿ ಕಾದ ನೀರನ್ನು ಬಚ್ಚಲದ ಬಕೀಟಿಗೂ ತಂದುಹಾಕಿ ಜಳಕ ಮಾಡೆಂದು ಹೇಳಿ “ಬೆನ್ ತಿಕ್ಕಲೇನಪ” ಅಂತ ಕೇಳುವ ಹೊಟ್ಟೆ ಬೆನ್ನು ಕಳಕಳಿಯ ತಾಯ್ತನ ಅವಳದು. ಎಂಬತ್ತರ ತುಂಬು ವಯಸ್ಸಿನಲ್ಲೂ ಅಕ್ಕ ಗಟ್ಟಿಮುಟ್ಟಾಗಿದ್ದಾಳೆ. ಕಟಿರೊಟ್ಟಿ ತಿನ್ನುವಷ್ಟು ಅವಳ ಹಲ್ಲುಗಳು ಗಟ್ಟಿ ಮುಟ್ಟಾಗಿವೆ. ಹರೆಯದಲ್ಲಿ ಮೈಲು ದೂರದ ಹಿರೇಹಳ್ಳದಿಂದ ತಾಮ್ರದ ದೀಡಿ ಕೊಡ ತಲೆಮೇಲೆ ಹೊತ್ತು ನೀರು ತರುತ್ತಿದ್ದಾಕೆ ಈಗೀಗ ನಡೂರಿನ ಅಳಬುರುಕು ನಳಗಳಲ್ಲಿ ಸೋರುವ ನೀರನ್ನು ಪ್ಲಾಸ್ಟಿಕ್ ಬಿಂದಿಗೆಯಲ್ಲಿ ಹೊತ್ತು ತರುತ್ತಾಳೆ. ಪ್ರತಿ ಸೋಮವಾರ ಯಡ್ರಾಮಿ ಸಂತೆಗೆ ಹೋಗಿ ವಾರಕ್ಕೆ ಬೇಕಾಗುವಷ್ಟು ಸಕ್ಕರೆ, ಚಾಪುಡಿ, ಒಳ್ಳೆಣ್ಣೆ ಇತ್ಯಾದಿ ಸಂತೆ ಮಾಡಿಕೊಂಡು ತಲೆಮೇಲೆ ಸಲೀಸಾಗಿ ಸಂತೆಗಂಟು ಹೊತ್ತು ತರುತ್ತಾಳೆ.

ಅವಳ ಬಳಿ ಅದೆಷ್ಟೇ ರೊಕ್ಕವಿದ್ದರೂ ಅದನ್ನೆಲ್ಲ ಅಡಕಲು ಗಡಿಗೆಗಳಂತೆ ಒಟ್ಟಿಕೊಂಡಿರುವ ತೂತುಬಿದ್ದ ಸಿಲಾವರ, ಗಿಲಾಟಿ ಬೋಗುಣಿ, ಗಿಂಡಿಗಳೊಳಗೆ ಬಟ್ಟೆಗಂಟು ಕಟ್ಟಿ ಕೂಡಿಟ್ಟುಕೊಳ್ಳುತ್ತಾಳೆ. ಹಾಗೆ ಸಂಗ್ರಹಿತ ಗಂಟನ್ನು ಆಗಾಗ ತನ್ನ ಕಡುಬಡತನದ ಹೆಣ್ಣುಮಗಳಿಗೆ ಒಯ್ದು ಕೊಡುತ್ತಾಳೆ. ಅದು ಅವಳ ಮಗಳು ಮತ್ತು ಮೊಮ್ಮಕ್ಕಳ ಮೇಲಿನ ಅಕ್ಕರೆ, ಅನುಭೂತಿ. ಅದರಿಂದ ನನಗೇನು ಬೇಸರವಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ಬೇಸರದ ಸಂಗತಿಯೆಂದರೆ, ನಮ್ಮೆಲ್ಲರ ಗಮನಕ್ಕೆ ಬಾರದಂತೆ ಕರೆದವರ ಹೊಲಗಳ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ಅದನ್ನು ಗಮನಿಸಿದ ತಮ್ಮ ಸೀತಾರಾಮ ಫೋನ್ ಮಾಡಿ, “ಅಕ್ಕ ಇವತ್ತು ಕೂಲಿ ಕೆಲಸಕ್ಕೆ ಹೋಗ್ಯಾಳ ನೋಡಣ್ಣ” ಅಂತ ತಿಳಿಸುತ್ತಾನೆ. ಅವಳಿಗೆ ಹಣದ ಅಡಚಣೆ ಇಲ್ಲದಿದ್ದರೂ ಹೊಲದಲ್ಲಿ ದುಡಿಯುವ ಆಕೆಯ ಭೂಮ್ತಾಯಿ ಮೇಲಿನ ಕೃಷಿ ಪ್ರೀತಿಯನ್ನು ತಪ್ಪಿಸಲು ಇವತ್ತಿಗೂ ನಮ್ಮಿಂದ ಸಾಧ್ಯವಾಗಿಲ್ಲ. ಹೊಲದಿಂದ ಮಣಭಾರದ ಹಸಿರು ಹುಲ್ಲಿನ ಹೊರೆ ಹೊತ್ತುತಂದು ಎತ್ತಿನ ಕೊಟ್ಟಿಗೆಯಲ್ಲಿ ಹಾಕುತ್ತಿದ್ದಳು. ಭಲೇ ಭಲೇ ಗಟ್ಟುಳ್ಳ ಯುವಕರಿಗೆ ಅದನ್ನು ಎತ್ತಿಹಾಕಲು ದುಸ್ತರದಷ್ಟು ವಜ್ಜಿ. ನಿರಕ್ಷರಿ ಅಕ್ಕನ ಕೃಷಿ ಕಾಯಕ ಶ್ರದ್ಧೆಯ ಇಂತಹ ಅನೇಕ ಸಂಗತಿಗಳನ್ನು ನನ್ನ ಬಾಲ್ಯ ಕಣ್ತುಂಬಿಸಿಕೊಂಡಿದೆ.

ಇದನ್ನು ಓದಿದ್ದೀರಾ?: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ -1 | ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿವೆ ಆಸ್ಪತ್ರೆಗಳು    

ಅವಳದು ಉತ್ತುವುದು, ಬಿತ್ತುವುದು ಸೇರಿದಂತೆ ಬರೀ ಹೊಲಮನೆಯ ಕೃಷಿ ಕಾಯಕದ ಕೌಶಲ್ಯವಷ್ಟೇ ಆಗಿದ್ದರೆ ಹೆಚ್ಚುಗಾರಿಕೆ ಏನೂ ಆಗಿರಲಿಲ್ಲ. ಅಕ್ಕ ಕಸೂತಿ ಕಲೆಯಲ್ಲಿ ಪರಿಣಿತಳು. ಆಕೆಯ ಕೈ ಕುಶಲ ಕಲೆಯಲ್ಲಿ ಅರಳಿದ ಹೆಣಿಕೆಯ ಕೈಚೀಲ, ಬಾಗಿಲು ತೋರಣ, ಕರವಸ್ತ್ರಗಳು ಮೆಚ್ಚುವಂತಹವು. ಕುಂಡಿಪದರಲ್ಲಿ ಹರಿದ ತನ್ನ ಮತ್ತು ಅವ್ವನ ಹಳೆಯ ಸೀರೆಗಳಿಗೆ ಉದ್ದಕ್ಕೂ ದಿಂಡು ಹಾಕಿ ತುಂಬಾ ಫ್ಯಾಷನೇಟಾಗಿ ಹೊಲಿಯುತ್ತಿದ್ದಳು. ಅಂತಹ ಹರಕು ಸೀರೆ ಕತ್ತರಿಸಲು ಅವಳ ಬಳಿ ಕತ್ತರಿ ಇರುತ್ತಿರಲಿಲ್ಲ. ಅದಕ್ಕಾಗಿ ಅಕ್ಕ ಮೊಂಡಾದ ಈಳಿಗೆ ಬಳಸಿಕೊಳ್ಳುತ್ತಿದ್ದಳು.

ಕಸೆ ಕಟ್ಟುವಂಥ ಅವ್ವನ ಕುಪ್ಪಸಗಳನ್ನು ತನ್ನ ಕೈಯಲ್ಲೇ ಸಲೀಸಾಗಿ ಹೊಲಿಯುತ್ತಿದ್ದಳು. ಕೌದಿ ಹೆಣಿಕೆಯಲ್ಲಿ ಅಕ್ಕನನ್ನು ಮೀರಿಸುವವರೇ ಇರಲಿಲ್ಲ. ನನ್ನ ಹೆಂಡತಿ ಕೇಳಿದಾಗೆಲ್ಲ ವಾರವೊಪ್ಪತ್ತಿನಲ್ಲೇ ಈಗಲೂ ವರ್ಣಮಯ ಕೌದಿ ಹೊಲಿದು ಕೊಡುತ್ತಾಳೆ. ನನ್ನ ಮಕ್ಕಳಿಗೆಲ್ಲ ಸಂಜೆಮ್ಮತ್ತೆ ತಯಾರಿಸಿದ ಕೌದಿಯೆಂದರೆ ಪಂಚಪ್ರಾಣ. ನಾಲ್ಕು ಮಕ್ಕಳ ಮನೆಯಲ್ಲೂ ಅಕ್ಕ ಹೊಲಿದು ಕೊಟ್ಟ ಚಿತ್ತಾರ ಚಿತ್ತಾರದ ಕೌದಿಗಳಿವೆ. ಕೌದಿಗಳ ಒಳಮೈಯಲ್ಲಿ ನವಿಲು, ಗುಬ್ಬಿ, ಪಗಡೆ ಹೀಗೆ ತರಹೇವಾರಿ ಹೆಣಿಕೆ ಚಿತ್ರಗಳನ್ನೇ ಬಿಡಿಸುತ್ತಾಳೆ. ಮೈಸೂರಲ್ಲಿ ವೈದ್ಯೆಯಾಗಿರುವ (ರೇಡಿಯಾಲಜಿಸ್ಟ್) ಮಗಳು ಡಾ. ಬಿಂದುಶ್ರೀ ಇವತ್ತಿಗೂ ಅಕ್ಕ ತಯಾರಿಸಿದ ಕೌದಿಯನ್ನೇ ಬಳಸುತ್ತಾಳೆ.

* *

ಅಕ್ಕ ಎಂಬತ್ತು ವರುಷದ ತನ್ನ ಬದುಕಲ್ಲಿ ಎರಡು ಬಾರಿ ವೈಧವ್ಯದ ಪಟ್ಟ ಕಟ್ಟಿಕೊಂಡಳು. ಪ್ರಧಾನಿ ನೆಹರೂವನ್ನು ಆಕೆ ‘ಮೇರು’ ಅಂತಲೂ, ಇಂದಿರಾಗಾಂಧಿಯನ್ನು ‘ಇಂದ್ರಾಗಾಂಧಿ’ ಅಂತಲೇ ಆಕೆ ಉಚ್ಚರಿಸುತ್ತಾಳೆ. ನಾವೆಷ್ಟೇ ತಿದ್ದಿಹೇಳಿದರೂ ಆಕೆಗೆ ಹಾಗೆ ಹೇಳಿದರೇನೇ ಸಮಾಧಾನ. ಚುನಾವಣೆಯಲ್ಲಿ ಯಾರಿಗೆ ವೋಟ್ ಹಾಕಿಬಂದೆ ಅಂತಾ ಯಾರಾದರೂ ಕೇಳಿದರೆ ಇನ್ಯಾರಿಗೆ ಹಾಕಲಿ ‘ಇಂದ್ರಾಗಾಂಧಿ ಕೈಗೆ’ ಅಂತಾ ಹೇಳುವ ಧಾರ್ಷ್ಟ್ಯ ಅವಳದು. ನಿನ್ನ ಮದುವೆ ಯಾವಾಗ ಆಯ್ತು ಅಂತ ಕೇಳಿದರೆ ‘ಮೇರು ಸತ್ತ ಮಳ್ಳೇ ವರ್ಷ’ ಅಂತಾಳೆ. ನಿನ್ನ ವಯಸ್ಸು, ಯಾವಾಗ ಹುಟ್ಟಿದೆ ಅಂತ ಕೇಳಿದರೆ, ನಾಕಿಪ್ಪತ್ತಿರಬೌದು. ರಜಾಕಾರರ ಸಪಾಟಿ ಮುಜೇತಿ ನಾಕೈದು ವರ್ಷದಾಕಿದ್ದೆ. ಅವಾಗ ಸುಂಬಡದ ದುಬಲಕಮ್ಮನ ಗುಡ್ಡದ ಮ್ಯಾಲ ರಜಾಕಾರರು ಮಿಷಿನ್ ಗನ್ ಇಟ್ಟು ಖೂನಿ ಮಾಡ್ತಿದ್ದುದು ಜರಾ ನೆನಪಾದ. ಬರಗಾಲದ ಮುಜೇತಿ ನನ್ನಗಂಡ ತೀರಿಕೊಂಡ. ಹೀಗೆ ಅಕ್ಕ ಕರಾರುವಾಕ್ಕು ಎಂಬಂಥ ಚಾರಿತ್ರಿಕ ಸಂಗತಿಗಳ ಜೊತೆ ಸಮೀಕರಣ ಮಾಡಿ ತಾರೀಖು ಇಸವಿಗಳ ತರಹ ನೆನಪಿಟ್ಟು ಹೇಳುತ್ತಾಳೆ.

ಜೇವರ್ಗಿ ತಾಲೂಕಿನ ನರಬೋಳಿಯ ಶ್ರೀಮಂತರ ರಾವೂರು ಮನೆತನದ ನರಸಪ್ಪನಿಗೆ ಕೊಟ್ಟು ಅಪ್ಪ ಮದುವೆ ಮಾಡಿದ್ದರು. ಮನೆ ಮಾತ್ರವಲ್ಲ ಹಾದಿ ಬೀದಿಗೆಲ್ಲ ಹಂದರ ಹಾಕಿ ಐದು ದಿವಸಗಳ ಕಾಲ ಜರುಗಿದ ಆ ಕಾಲದ ಅದ್ದೂರಿ ಮದುವೆ. ನರಬೋಳಿ ನಮ್ಮೂರಿಂದ ಹನ್ನೆರಡು ಹರದಾರಿ ದೂರ. ಆರೇಳು ವರ್ಷದ ನನಗೆ ನೆನಪಿರುವಂತೆ ನಡುರಾತ್ರಿಯಲ್ಲೇ ನಮ್ಮೂರಿಂದ ಹದಿನೈದು ಚಕ್ಕಡಿ ಗಾಡಿಗಳಲ್ಲಿ ಅವಳ ಲಗ್ನಕ್ಕೆ ಹೋಗಿದ್ದೆವು. ರಾತ್ರಿಹೊರಟು ಮರುದಿನ ಮುಂಜಾನೆ ಆಂದೇಲಿಯ ನಡುದಾರಿ ಹಳ್ಳದ ಹತ್ತಿರ ಗಾಡಿಗಳನ್ನು ತರುಬಿ ಎತ್ತುಗಳಿಗೆ ನೀರು ಮೇವು ಉಣಿಸಿ ನಾವೂ ರೊಟ್ಟಿಬುತ್ತಿ ಉಂಡ ನೆನಪು.

ಐದು ದಿನದ ಮದುವೆ. ಹಬ್ಬದ ಸಂಭ್ರಮ. ಒಂದೊಂದು ದಿನವೂ ಒಂದೊಂದು ಬಗೆಯ ಭಕ್ಷ್ಯ ಭೋಜನದಂತಹ ಊಟ. ಒಂದು ದಿನ ಊರ್ತುಂಬಾ ಮೆರವಣಿಗೆ. ಮೆರವಣಿಗೆ ಹೋಗುವ ಒಂದು ಜಾಗದಲ್ಲಿ ಭಾಜಾ ಭಜಂತ್ರಿಗಳು ಸ್ತಬ್ಧಗೊಂಡವು. ಅದು ರಾಣಿಯ ಬಂಗಲೆ. ಅಲ್ಲಿ ಮಹಡಿಯ ಮೇಲಿರುವ ರಾಣಿಯ ಅಘೋಷಿತ ಆಜ್ಞೆಯ ಪರಿಪಾಲನೆ ಅದಾಗಿತ್ತು. ಸುತ್ತ ಹತ್ತಾರು ಹಳ್ಳಿಗಳಲ್ಲಿ ಆಕೆಯ ಮಾತು ಮೀರುವವರೇ ಇರಲಿಲ್ಲ. ಆಕೆ ಆ ಕಾಲದ ಪ್ರಖರ ಸ್ತ್ರೀ ಸಬಲೀಕರಣದ ಪ್ರತಿಪಾದಕಿ. ಸುಭೇಧಾರ ರಾಣಿ ಪಾರ್ವತಮ್ಮ ಅಂದರೆ‌ ಎಂಥ ಗಂಡಸಿನ ಎದೆಯಲ್ಲಿ ಥರಗುಟ್ಟುವ ನಡುಕ. ನನಗೀಗಲೂ ಅಂತಹದ್ದೊಂದು ಹೆಣ್ಣಾಳ್ವಿಕೆ ಮಹಿಳೆಯ ವರ್ಚಸ್ಸನ್ನು ನಮ್ಮ ಕಾಲದಲ್ಲಿ ನೋಡಿದ ನೆನಪಿಲ್ಲ.

ಅಕ್ಕನ ಗಂಡ ನರಸಪ್ಪ ಮಾವ ಕುಸ್ತಿ ಆಡಿ ಬೆಳ್ಳಿಖಡೆಗಳನ್ನು ಗೆದ್ದ ಪೈಲ್ವಾನ್. ಅಕ್ಕನ ಜೊತೆ ಅನ್ಯೋನ್ಯವಾಗಿದ್ದ. ಆದರೆ ಅವನಿಗೆ ಹೊರಚ್ಯಾಳಿ, ಚಟ ತುಸು ಸುಮಾರ. ಎಂಟು ವರ್ಷಗಳ ಅವರ ದಾಂಪತ್ಯದಲ್ಲಿ ಎರಡು ಮಕ್ಕಳಾದವು. ಅದ್ಯಾವ ಮಾಯದಲ್ಲೋ ಮಾವನಿಗೆ ಕ್ಷಯರೋಗ ತಗುಲಿತು. ಅವನು ಆಕಳ ಹಸಿಹಾಲು ಕಾಯಿಸದೇ ಕುಡಿಯುತ್ತಿದ್ದ. ಸಾಮಾನ್ಯವಾಗಿ ಪೈಲ್ವಾನರು ಹಾಗೇ ಕುಡಿಯೋದು. ಅಕಸ್ಮಾತ್ ಹಸುವಿಗೆ ಟೀಬಿ ಕಾಯಿಲೆ ಇದ್ರೆ ಅಂತಹ ಹಸುವಿನ ಹಸಿಹಾಲು ಚೆನ್ನಾಗಿ ಕಾಯಿಸದೇ ಕುಡಿದರೆ ಟೀಬಿ ಬರುವ ಸಾಧ್ಯತೆ ಅಧಿಕ. ಅವನಿಂದ ಮಕ್ಕಳಿಗೂ ಕ್ಷಯ ತಗುಲಿ ಎರಡು ಮಕ್ಕಳು ‌ತೀರಿಹೋದವು. ಕೆಲಕಾಲದ ನಂತರ ಅಕ್ಕನ ಗಂಡ ನರಸಪ್ಪ ಮಾವನೂ ತೀರಿಹೋದ. ಹಾಸಿಗೆ‌ ಪಥ್ಯ‌ ಮಾಡದ್ದಕ್ಕೆ ಅವನು ತೀರಿಹೋದನೆಂದು ನಾಟೀ ವೈದ್ಯರ ಹೇಳಿಕೆಯಾಗಿತ್ತು. ಅದಾದ ಕೆಲವು ದಿನ ವಿಧವೆ ಅಕ್ಕ ಗಂಡನ ಮನೆಯಲ್ಲೇ ಇದ್ದಳು. ನಾನಾಗ ಹತ್ತನೇ ಈಯತ್ತೆಯಲ್ಲಿ ಓದುತ್ತಿದ್ದೆ.

ಇದನ್ನು ಓದಿದ್ದೀರಾ?: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಯೋಜನೆ-2 | ತಮಿಳುನಾಡಿನಲ್ಲಿದೆ ಮಾದರಿ ಆರೋಗ್ಯ ವ್ಯವಸ್ಥೆ

ಅದೇಕೋ ಅಕ್ಕನಿಗೆ ಮತ್ತೊಂದು ಮದುವೆ ಮಾಡಿಸಬೇಕೆಂಬ ಬಯಕೆ ಹುಟ್ಟಿತು. ಅಪ್ಪ ಅಮ್ಮಗೆ ಪ್ರಬಲ ಬೇಡಿಕೆ ಮಂಡಿಸುತ್ತಲೇ ಇದ್ದೆ. ಸುರಪುರ ತಾಲೂಕು ಮಸಬಿನ ಪ್ರದೇಶದ ಮಧ್ಯಮ ವರ್ಗದ ಶಖಾಪುರ ಭೀಮರಾಯ ಗೌಡರ ಕುಟುಂಬದ ಫಕೀರಪ್ಪಗೌಡಗೆ ಕೊಟ್ಟು ಮದುವೆ ಮಾಡಲಾಯಿತು. ಎಂಟ್ಹತ್ತು ವರುಷಗಳ ಕಾಲ ದೊಡ್ಡ ಮನೆತನದ ಶ್ರೀಮಂತ ರಾವೂರ ಕುಟುಂಬದಲ್ಲಿ ಬಾಳುವೆ ಮಾಡಿಬಂದ ಅಕ್ಕಗೆ ಗೌಡರ ಬಡ ಕುಟುಂಬದ ಸಂಬಂಧಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟವೇ ಆಯಿತು. ಎರಡನೇ ಗಂಡ ಮತ್ತು ಅವರ ಕುಟುಂಬ ಪರಿಸರ ಅಶಿಸ್ತಿನ ಆಗರ. ಕುಡಿತದಿಂದಾಗಿ ಅವರ ಕುಟುಂಬದ ಬದುಕು ದಿನೇ ದಿನೇ ಹದಗೆಟ್ಟಿತು. ಇರುವ ಇಪ್ಪತ್ತೆಕರೆ ಹೊಲವನ್ನು ಹಂತ ಹಂತವಾಗಿ ಮಾರತೊಡಗಿದರು. ಅಕ್ಕಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳು. ಸೋಜಿಗವೆಂದರೆ ಅಕ್ಕನ ಎರಡನೇ ಪತಿ ಫಕೀರಪ್ಪಗೌಡ ಕೂಡಾ ಕುಸ್ತಿಪಟುವಾಗಿದ್ದ. ಅವನು ಕರಡಿಗಳ ಜೊತೆ ಕುಸ್ತಿ ಆಡಿ ಬೆಳ್ಳಿ ಪದಕಗಳನ್ನು ಗೆದ್ದಿದ್ದ.

ಕುಡಿತದ ದೆಸೆಯಿಂದ ಆತನ ಆರೋಗ್ಯ ಹದಗೆಟ್ಟು ಕರುಳು ಮತ್ತು ಯಕೃತ್ತಿನ ರೋಗ ಉಲ್ಬಳಿಸಿತು. ಕಲಬುರ್ಗಿ, ದಾವಣಗೆರೆ, ದವಾಖಾನೆಗಳ ಚಿಕಿತ್ಸೆ ಫಲಿಸದೇ ಮಣಿಪಾಲ ಆಸ್ಪತ್ರೆಯಲ್ಲಿ ಮರಣವನ್ನಪ್ಪಿದ. ಅಲ್ಲಿಂದ ಆತನ ಮಗ ಭೀಮನಗೌಡ ಅಪ್ಪನ‌ ಪಾರ್ಥೀವ ಶರೀರ ತಮ್ಮೂರಿಗೆ ಕರೆತಂದ. ಆ ಮೂಲಕ ಅಕ್ಕ ಎರಡನೇ ಬಾರಿಗೆ ವಿಧವೆ ಪಟ್ಟ ಧರಿಸಿದಳು. ದವಾಖಾನೆಗೆಂದು ಲಕ್ಷಗಟ್ಟಲೇ ಮಾಡಿದ ಸಾಲ ತೀರಿಸಲು ಕೋಟಿಯಷ್ಟು ಬೆಲೆ ಬಾಳುವ ನೀರಾವರಿ ಜಮೀನು ಅಡ್ಡದುಡ್ಡಿಗೆ ಮಾರಿ ಒಂದೆರಡು ಎಕರೆಯಷ್ಟು ಅಕ್ಕನ ಪಾಲಿನ ಜಮೀನು ಆಕೆ ಮಕ್ಕಳಿಗೆ ಕೊಟ್ಟು ನಮ್ಮೂರಲ್ಲೇ ಇರುತ್ತಾ ಮಕ್ಕಳ ಹತ್ತಿರ ಆಗಾಗ ಹೋಗಿ ಬರುವುದನ್ನು ಮಾಡುತ್ತಾಳೆ. ಇವತ್ತಿಗೂ ಅಪ್ಪಟ ಮನುಷ್ಯ ಪ್ರೀತಿಯ, ಕಠಿಣ ಪರಿಶ್ರಮದ ಮತ್ತು ಪ್ರಾಮಾಣಿಕ ಬಾಳು ಬದುಕಿದ್ದಾಳೆ. ಬಾಳ ಬುತ್ತಿಯಲ್ಲಿ ಸಂತಸಗಳಿಗಿಂತ ಅಕ್ಕ ಕಂಡುಂಡ ಸಂಕಟಗಳೇ ಖಂಡುಗ. ತನ್ನ ಎಂಬತ್ತು ವರುಷಗಳ ಸುದೀರ್ಘ ಬದುಕಿನಲ್ಲಿ ದೇವರು ನಿನಗೆ ಸುಖವನ್ನೇ ಕೊಡಲಿಲ್ಲ ಅಂತ ಸಹಜವಾಗಿ ಯಾರಾದರೂ ಕೇಳುತ್ತಾರೆ.

ಆದರೆ ಆಕೆಗೆ ಯಾವತ್ತೂ ಹಾಗನಿಸುವುದೇ ಇಲ್ಲ. ಅದಕ್ಕೆಲ್ಲ ಪಡಕೊಂಡು ಬರಬೇಕು. ತಾ ಪಡದದ್ದು ತನ್ನ ಸಂಗಾಟ/ ಶಿವನಿಗ್ಯಾಕ ಬೈಯ್ತಿದಿ ನಿನ್ನ ಸಂಕಟಕ// ಎಂದು ಮಡಿವಾಳಪ್ಪನ ತತ್ವಪದ ಉಲ್ಲೇಖಿಸಿ ಬದುಕಿನ ಸಂವೇದನೆಗಳನ್ನು ಎಳ್ಳರ್ಧ ಕಾಳಷ್ಟು ಕಳಕೊಳ್ಳದೇ ನಿಜದ ನೆಮ್ಮದಿ ಪಡುತ್ತಾಳೆ. ಮಲಗಿದರೆ ಚಿಕ್ಕಮಕ್ಕಳ ಮುಗ್ಧತೆಯಲ್ಲಿ ನಿದ್ದೆ ಮಾಡುತ್ತಾಳೆ. ಇದುವರೆಗೆ ಬಿ.ಪಿ. ಷುಗರ್ ಕಾಯಿಲೆಗಳು ಅವಳ ಬಳಿ ಸುಳಿದಿಲ್ಲ.

ಕಡಕೋಳ ಮಡಿವಾಳಪ್ಪನ ನೆಲಧರ್ಮದ ಅದಮ್ಯ ಪ್ರೀತಿಯ ಆಕೆ ಇಪ್ಪತ್ತು ವರ್ಷಗಳ ಹಿಂದೆಯೇ ‘ಗುರುಪುತ್ರಿ’ ಆಗಿದ್ದಾಳೆ. ನಿತ್ಯವೂ ಜಳಕ, ವಿಭೂತಿ ಧರಿಸಿದ ಮೇಲೆಯೇ ಬಾಳಿನ ಬೆಳಗು ಆರಂಭ. ಮಡಿವಾಳಪ್ಪನ ಜಾತ್ರೆಯ ಸಂದರ್ಭದಲ್ಲಿ ಮಠದ ದಾಸೋಹಕ್ಕೆ ಕೈಲಾದಷ್ಟು ರೊಟ್ಟಿ ಮಾಡಿ ಕೊಡುತ್ತಾಳೆ. ಜಾತ್ರೆಯ ಖಾಂಡದ ರಾತ್ರಿ ಮತ್ತು ಮರುದಿನ ತೇರು ಎಳೆಯುವವರೆಗೆ ಪ್ರಸಾದವಲ್ಲ ಹನಿ ನೀರುಸಹಿತ ಸೇವಿಸದೇ ಅಕ್ಕ ಉಪವಾಸ ವೃತ ಮಾಡುತ್ತಾಳೆ.

ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧ್ಯಯನ ಪೀಠ ಬೇಡ, ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ

ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ...

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...