ಕಸಾಪ ‘ಕನ್ನಡದ ಧ್ರುವತಾರೆ’: ಅಧ್ಯಕ್ಷ ಮಹೇಶ್ ಜೋಶಿ ಜನಪ್ರಿಯ ಸಿನಿಮಾ ನಟರ ಹಿಂದೆ ಬಿದ್ದಿರುವುದ್ಯಾಕೆ?

Date:

ಕನ್ನಡ ಬದುಕು ಮತ್ತು ಕನ್ನಡ ಸಾಹಿತ್ಯ ಇಂದು ವಿಚಿತ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಹಿಂದಿ ಹೇರಿಕೆ, ಕನ್ನಡ ಶಾಲೆಗಳ ಮುಚ್ಚುವಿಕೆ, ಕನ್ನಡ ಮಾಧ್ಯಮಕ್ಕೆ ಹಿನ್ನಡೆ ಹೀಗೆ ಸಾಲು ಸಾಲು ಸಮಸ್ಯೆಗಳು ಇಡುಕಿರಿದಿವೆ. ಇಂಥ ಸಮಸ್ಯೆಗಳ ಬಗ್ಗೆ ಕೇವಲ ಔಪಚಾರಿಕ ಪ್ರತಿಕ್ರಿಯೆ ನೀಡುವ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, 'ಕನ್ನಡದ ಧ್ರುವತಾರೆ' ಎನ್ನುವ ಹೆಸರಿನಲ್ಲಿ ಸಿನಿಮಾ ನಟನನ್ನು ಕರೆದು ಸಂವಾದ ನಡೆಸಿರುವುದು ಖಂಡನೀಯವಾಗಿದೆ

ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷರಾದ ಮಹೇಶ್ ಜೋಶಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರು ಕಸಾಪ ವತಿಯಿಂದ ‘ಕನ್ನಡದ ಧ್ರುವತಾರೆ’ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಅವರೇ ಹೇಳಿಕೊಂಡಂತೆ, ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತೆ, ಅಜ್ಞಾತವಾಗಿ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವುದು. ಕನ್ನಡಿಗರಿಗೆ ಸಾಧಕರನ್ನು ನೇರವಾಗಿ ನೋಡುವ ಅವಕಾಶ ಕಲ್ಪಿಸುವುದು; ಅವರೊಂದಿಗೆ ಸಂವಾದ ನಡೆಸುವುದು ಈ ಕಾರ್ಯಕ್ರಮದ ಗುರಿ.

ಮಹೇಶ್ ಜೋಶಿಯವರ ಆಶಯವೇನೋ ಸರಿ. ಆದರೆ, ಅವರು ‘ಕನ್ನಡದ ಧ್ರುವತಾರೆ’ಯಾಗಿ ಆಯ್ಕೆ ಮಾಡಿದ ಮೊದಲ ವ್ಯಕ್ತಿಯ ಹೆಸರು ಬಹಿರಂಗವಾದೊಡನೆಯೇ ಕನ್ನಡಿಗರು ಬೆಚ್ಚಿಬಿದ್ದರು. ಆ ವ್ಯಕ್ತಿ ರಮೇಶ್ ಅರವಿಂದ್. ಖಾಸಗಿ ವಾಹಿನಿಯೊಂದರಲ್ಲಿ ಸಾಧಕರನ್ನು ಪರಿಚಯ ಮಾಡಿಕೊಡುವ ‘ವೀಕೆಂಡ್ ವಿತ್ ರಮೇಶ್’ ಎನ್ನುವ ಜನಪ್ರಿಯ ಕಾರ್ಯಕ್ರಮದ ನಿರೂಪಕರನ್ನೇ ಕರೆತಂದು ಸಾಧಕರ ಕುರ್ಚಿಯಲ್ಲಿ ಕೂರಿಸುವ ಮೂಲಕ ಮಹೇಶ್ ಜೋಶಿ ಹಾಸ್ಯಾಸ್ಪದ ರೀತಿಯಲ್ಲಿ ವರ್ತಿಸಿದ್ದಾರೆ. ಇಲ್ಲೊಂದು ವ್ಯಂಗ್ಯವಿದೆ; ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಿನಿಮಾದವರನ್ನೇ ಸಾಧಕರನ್ನಾಗಿ ಹೆಚ್ಚಾಗಿ ತೋರಿಸಲಾಗುತ್ತದೆ ಎನ್ನುವ ವ್ಯಾಪಕ ಟೀಕೆಗಳಿವೆ. ಆದರೆ, ಅದು ಖಾಸಗಿ ವಾಹಿನಿಯ ತೀರ್ಮಾನವಾದ್ದರಿಂದ ಜನರು ಒಂದು ಹಂತಮೀರಿ ಅದನ್ನು ಪ್ರಶ್ನಿಸುವಂತಿಲ್ಲ. ಆದರೆ, ಸಾಹಿತ್ಯ, ಸಂಸ್ಕೃತಿಗಳ ಪ್ರಾತಿನಿಧಿಕ ಸಂಸ್ಥೆಯಂತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಾಧಕರ ಮೊದಲ ಕಾರ್ಯಕ್ರಮಕ್ಕೇ ಸಿನಿಮಾ ನಟನನ್ನು ಕರೆತಂದು ಸಾಧಕನ ಕುರ್ಚಿಯಲ್ಲಿ ಕೂರಿಸಲಾಗಿದೆ. ಇದಕ್ಕೆ ಕಾರಣಕರ್ತರು ಮಹೇಶ್ ಜೋಶಿ. ಅವರ ಪಕ್ಷಪಾತ ದೃಷ್ಟಿಕೋನ ಮತ್ತು ಜನಪ್ರಿಯತೆಯ ಬೆನ್ನು ಹತ್ತುವ ಚಾಳಿ ಇದರ ಹಿಂದಿದೆ.

‘ಕನ್ನಡದ ಧ್ರುವತಾರೆ’ ಕಾರ್ಯಕ್ರಮದ ಎಲ್ಲ ಘೋಷಿತ ಆಶಯಗಳಿಗೆ ವಿರುದ್ಧವಾದ ವ್ಯಕ್ತಿ ರಮೇಶ್ ಅರವಿಂದ್. ಅವರೊಬ್ಬ ಜನಪ್ರಿಯ ಸಿನಿಮಾ ನಟ. ಸಿನಿಮಾ ಕ್ಷೇತ್ರದಲ್ಲಿಯೂ ಅವರ ಸಾಧನೆ ಅತ್ಯಂತ ಸೀಮಿತವಾದುದು. ತಮ್ಮ ನಟನೆ, ನಿರ್ದೇಶನ, ನಿರೂಪಣೆಯ ಆಚೆಗೆ ಯಾವುದರ ಬಗ್ಗೆಯೂ ಎಂದೂ ಕಾಳಜಿ ತೋರದ ವ್ಯಕ್ತಿ. ಅದು ಅವರ ಆಯ್ಕೆ. ಅದರ ಬಗ್ಗೆ ಯಾರದೇನೂ ತಕರಾರು ಇಲ್ಲ. ಆದರೆ, ತಕರಾರು ಇರುವುದು ಮಹೇಶ್ ಜೋಶಿ ಅವರ ಆಯ್ಕೆಯ ಬಗ್ಗೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತೆ, ಅಜ್ಞಾತವಾಗಿ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವುದು’ ಕಾರ್ಯಕ್ರಮದ ಗುರಿ ಎಂದಿದ್ದವರು ಮಹೇಶ್ ಜೋಶಿ. ಅಂಥ ಸಾಧಕರನ್ನು ಕನ್ನಡಿಗರು ನೇರವಾಗಿ ನೋಡುವ ಅವಕಾಶವನ್ನೂ ಕಲ್ಪಿಸುವುದು; ಅವರೊಂದಿಗೆ ಸಂವಾದ ನಡೆಸುವುದು ಕಾರ್ಯಕ್ರಮದ ಉದ್ದೇಶ ಎಂದು ಹೇಳಿಕೊಂಡಿದ್ದರು. ಹಾಗೆ ಹೇಳಿದ್ದವರು ಕೊನೆಗೆ ಮಾಡಿದ್ದೇನು? ಕನ್ನಡಿಗರು ಹಿರಿತೆರೆ ಮತ್ತು ಕಿರುತೆರೆಯಲ್ಲಿ ಬೇಸರವಾಗುವಷ್ಟು ನೋಡಿರುವ ರಮೇಶ್ ಅರವಿಂದ್ ಅವರನ್ನು ಕರೆತಂದರು.

ನಟರಾಗಿ ಕೇವಲ ‘ಎ’ ಸೆಂಟರ್‌ಗಳಿಗೆ ಮಾತ್ರ ಸೀಮಿತವಾಗಿದ್ದ ರಮೇಶ್ ಅರವಿಂದ್, ನಂತರ ಟಿವಿ ಮೂಲಕ ಕರ್ನಾಟಕದಾದ್ಯಂತ ಪರಿಚಿತರಾದರು, ಪ್ರಖ್ಯಾತಿ ಗಳಿಸಿದರು. ಅಂಥವರನ್ನು ಕನ್ನಡಿಗರಿಗೆ ಹೊಸದಾಗಿ ಪರಿಚಯಿಸುವ ಅಗತ್ಯವೇನಿತ್ತೋ ಮಹೇಶ್ ಜೋಶಿಯವರೇ ಹೇಳಬೇಕು.

ಕಸಾಪಸಾಧಕರ ಜೊತೆ ಸಂವಾದ ಎನ್ನುವುದು ಕೂಡ ಮೊದಲ ‘ಕನ್ನಡದ ಧ್ರುವತಾರೆ’ ಕಾರ್ಯಕ್ರಮದಲ್ಲಿ ನಗೆಪಾಟಲಾಗಿದೆ. ‘ಧ್ರುವತಾರೆ’ ರಮೇಶ್ ಅರವಿಂದ್, ತಮ್ಮ ಸಾಧನೆಯ ಬಗ್ಗೆ ಮಾತನಾಡುತ್ತಾ ‘ಕಲಾವಿದನಾಗಿದ್ದು ನನ್ನ ಅದೃಷ್ಟ’ ಎಂದಿದ್ದಾರೆ. ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಬೇಕಾದ ಶ್ರಮ, ಬದ್ಧತೆ, ನಿರಂತರ ಪ್ರಯತ್ನಗಳ ಬಗ್ಗೆ ಒತ್ತು ನೀಡಿ ಮಾತನಾಡದ ರಮೇಶ್ ಅರವಿಂದ್, ಕಣ್ಣಿಗೆ ಕಾಣದ ‘ಅದೃಷ್ಟ’ದ ಬಗ್ಗೆ ಮಾತನಾಡಿ ತಮ್ಮ ಬೌದ್ಧಿಕ ಮಟ್ಟವನ್ನು ತೋರ್ಪಡಿಸಿಕೊಂಡಿದ್ದಾರೆ.

ವಿಶೇಷ ಅಂದರೆ, ಅದೇ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕುಗ್ರಾಮದಲ್ಲಿ ಹುಟ್ಟಿ, ಹೃದ್ರೋಗ ತಜ್ಞರಾಗಿ ಬೆಳೆದು, ಲಕ್ಷಾಂತರ ಮಂದಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿ, ಜಯದೇವ ಹೃದ್ರೋಗ ಸಂಸ್ಥೆಯನ್ನು ಅತ್ಯಂತ ದಕ್ಷತೆಯಿಂದ ಬೆಳೆಸಿದ ಮಂಜುನಾಥ್ ಅವರು ರಮೇಶ್ ಅರವಿಂದ್ ಬದಲು ಸಾಧಕರ ಕುರ್ಚಿಯಲ್ಲಿ ಕೂತಿದ್ದರೂ ಕಾರ್ಯಕ್ರಮ ಅರ್ಥಪೂರ್ಣವಾಗಿರುತ್ತಿತ್ತು. ಆದರೆ, ಮಹೇಶ್ ಜೋಶಿಯವರ ‘ಅಜೆಂಡಾ’ ಏನಾಗಿತ್ತೋ, ಬಲ್ಲವರಾರು?

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಅದಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದವರು ಬಹುಕಾಲ ಸಾಹಿತಿಗಳೇ ಆಗಿರುತ್ತಿದ್ದರು. ಸಾಹಿತ್ಯ ಸಂಘಟಕರೆಂದು ಕರೆಯಲ್ಪಡುವ ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿ ಆಯ್ಕೆಯಾದಾಗ ಮೊದಲ ಬಾರಿಗೆ ಸಾಹಿತ್ಯೇತರ ವ್ಯಕ್ತಿಯೊಬ್ಬರು ಅಧ್ಯಕ್ಷ ಗಾದಿಯ ಮೇಲೆ ಕೂತ ಬಗ್ಗೆ ಅಪಸ್ವರಗಳು ಎದ್ದಿದ್ದವು. ಆದರೆ, ತಮ್ಮ ಅಧ್ಯಕ್ಷಾವಧಿಯಲ್ಲಿ ಪುನರೂರು ದಕ್ಷತೆಯಿಂದ ಆಡಳಿತ ನಡೆಸಿದರು. ಸಾಹಿತ್ಯ ಸಮ್ಮೇಳನಗಳನ್ನು ಯಾವುದೇ ರೀತಿಯ ಹಣಕಾಸಿನ ಅವ್ಯವಹಾರಗಳಿಗೆ ಆಸ್ಪದ ನೀಡದಂತೆ ಅಚ್ಚುಕಟ್ಟಾಗಿ ನೆರವೇರಿಸಿದ್ದರು. ತಾವು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತಮ್ಮ ಕಾರಿನಲ್ಲಿ ಪುಸ್ತಕಗಳನ್ನು ತುಂಬಿಕೊಂಡು ಹೋಗುತ್ತಿದ್ದ ಹರಿಕೃಷ್ಣ ಪುನರೂರು, ಅವನ್ನು ಕಾರ್ಯಕ್ರಮದ ಸಭಾಂಗಣದಲ್ಲಿ ಮಾರಾಟಕ್ಕೆ ಇಡುತ್ತಿದ್ದರು. ಅಷ್ಟರ ಮಟ್ಟಿಗೆ ತಮ್ಮ ಆಯ್ಕೆಯನ್ನು ಅವರು ತಮ್ಮ ಕೆಲಸದ ಮೂಲಕ ಸಮರ್ಥಿಸಿಕೊಂಡಿದ್ದರು.

ಹಾಲಿ ಕಸಾಪ ಅಧ್ಯಕ್ಷರಾಗಿರುವ ಮಹೇಶ್ ಜೋಶಿಯವರು ಕೂಡ ಸಾಹಿತ್ಯೇತರ ವ್ಯಕ್ತಿಯೇ. ಆದರೆ, ಮಹೇಶ್ ಜೋಶಿ ತಾವು ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದಲೂ ತಪ್ಪು ದಾರಿಯಲ್ಲೇ ಸಾಗುತ್ತಿದ್ದಾರೆ. ಒಂದು ಸ್ವಾಯತ್ತ ಸಂಸ್ಥೆಯ ಅಧ್ಯಕ್ಷರಾಗಿರುವ ಅವರು, ಸರ್ಕಾರದಿಂದ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನಗಳನ್ನು ಪಡೆದುಕೊಂಡರು. ಅದು ಅನಗತ್ಯವಾಗಿದ್ದ ಮತ್ತು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲದ ನಡೆಯಾಗಿತ್ತು. ನಂತರ ಬೈಲಾ ತಿದ್ದುಪಡಿ, ಅದ್ದೂರಿ ಸಾಹಿತ್ಯ ಸಮ್ಮೇಳನ, ಸಮ್ಮೇಳನಗಳಲ್ಲಿ ಭೂರಿ ಭೋಜನಕ್ಕೆ ಹತ್ತಾರು ಕೋಟಿ ರೂಪಾಯಿ ಖರ್ಚು, ಸಮ್ಮೇಳನಕ್ಕೆ ದಾಖಲೆ ವೆಚ್ಚ ಮಾಡಿದ್ದು.. ಮಹೇಶ್ ಜೋಶಿಯವರ ಅವಧಿಯಲ್ಲಿ ನಡೆಯುತ್ತಿರುವುದು ಹೆಚ್ಚಿನ ಪಾಲು ಇಂಥವೇ ಕೆಲಸಗಳು.

ಕನ್ನಡ ಬದುಕು ಮತ್ತು ಕನ್ನಡ ಸಾಹಿತ್ಯ ಇಂದು ವಿಚಿತ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಹಿಂದಿ ಹೇರಿಕೆ, ಕನ್ನಡ ಶಾಲೆಗಳ ಮುಚ್ಚುವಿಕೆ, ಕನ್ನಡ ಮಾಧ್ಯಮಕ್ಕೆ ಹಿನ್ನಡೆ ಹೀಗೆ ಸಾಲು ಸಾಲು ಸಮಸ್ಯೆಗಳು ಇಡುಕಿರಿದಿವೆ. ಇಂಥ ಸಮಸ್ಯೆಗಳ ಬಗ್ಗೆ ಕೇವಲ ಔಪಚಾರಿಕ ಪ್ರತಿಕ್ರಿಯೆ ನೀಡುವ ಕಸಾಪ ಅಧ್ಯಕ್ಷರು, ‘ಕನ್ನಡದ ಧ್ರುವತಾರೆ’ ಎನ್ನುವ ಹೆಸರಿನಲ್ಲಿ ಸಿನಿಮಾ ನಟನನ್ನು ಕರೆದು ಸಂವಾದ ನಡೆಸಿರುವುದು ಖಂಡನೀಯವಾಗಿದೆ.

ಕನ್ನಡದ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಕಾಳಜಿಯಿಂದ ಕೆಲಸ ಮಾಡುತ್ತಿರುವವರ ಸಂಖ್ಯೆ ಇಂದಿಗೂ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಕನ್ನಡದ ಸಾಕ್ಷಿಪ್ರಜ್ಞೆಯಾಗಿರುವ ದೇವನೂರ ಮಹಾದೇವ, ಅನಾರೋಗ್ಯದ ನಡುವೆಯೂ ತಮ್ಮ ಮಾತು ಹಾಗೂ ಬರಹಗಳಿಂದ ಬಂಡಾಯದ ಪ್ರಜ್ಞೆ ಹರಡುತ್ತಿರುವ ಬರಗೂರು ರಾಮಚಂದ್ರಪ್ಪ, ಕನ್ನಡ ನೆಲದ ವಿವೇಕದಂತಿರುವ ರಹಮತ್ ತರೀಕೆರೆ, ಇಳಿವಯಸ್ಸಿನಲ್ಲೂ ಸೆಕ್ಯುಲರ್ ಕರ್ನಾಟಕಕ್ಕಾಗಿ ಕನವರಿಸುತ್ತಿರುವ ಕೆ ಮರುಳಸಿದ್ದಪ್ಪ, ಕನ್ನಡ ವ್ಯಾಕರಣ ಕ್ಷೇತ್ರದಲ್ಲಿ ತಮ್ಮ ಅನನ್ಯ ಶೋಧನೆ, ವಿದ್ವತ್ಪೂರ್ಣ ಕೃತಿ ರಚನೆಗಳಿಂದ ಅಪಾರ ಕೆಲಸ ಮಾಡಿದ ಡಿ ಎನ್ ಶಂಕರ್ ಭಟ್, ಸಾಹಿತ್ಯ, ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿರುವ ಬಿ ಟಿ ಲಲಿತಾ ನಾಯಕ್, ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಗಮನಾರ್ಹ ಕೆಲಸ ಮಾಡಿರುವ ಸವಿತಾ ನಾಗಭೂಷಣ, ಕನ್ನಡ ಮಾಧ್ಯಮ ಹಾಗೂ ಕನ್ನಡ ಶಾಲೆಗಳನ್ನು ಉಳಿಸಲು ಶ್ರಮಿಸುತ್ತಿರುವ ನಿರಂಜನಾರಾಧ್ಯ, ದೆಹಲಿಯಂಥ ನಗರದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದ ಪುರುಷೋತ್ತಮ ಬಿಳಿಮಲೆ… ಹೀಗೆ ಕನ್ನಡದ ಬದುಕನ್ನು, ಬನಿಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವವರ ದಂಡು ದೊಡ್ಡದಿದೆ. ಇವರಂಥವರನ್ನು ಬಿಟ್ಟು ಮಹೇಶ್ ಜೋಶಿಯವರಿಗೆ ಕನ್ನಡದ ಧ್ರುವತಾರೆಯಾಗಿ ಸಿನಿಮಾ ನಟ ರಮೇಶ್ ಅರವಿಂದ್ ಕಾಣುತ್ತಾರೆ ಎಂದರೆ, ಅವರ ಮನಸ್ಸು ಮತ್ತು ಮೆದುಳು ಇನ್ನೆಷ್ಟು ಮಲಿನಗೊಂಡಿರಬಹುದು? ಹೀಗೇ ಬಿಟ್ಟರೆ ಅವರು ನಟ ಉಪೇಂದ್ರನನ್ನೂ ‘ಕನ್ನಡದ ಧ್ರುವತಾರೆ’ಯನ್ನಾಗಿ ಮಾಡುವ ಸಾಧ್ಯತೆ ಇಲ್ಲದಿಲ್ಲ.

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಕರ್ನಾಟಕದ ಮಾದರಿಯಿಂದ ಜನರ ಬದುಕು ಸಂಪನ್ನವಾಗಲಿ

ಮಹೇಶ್ ಜೋಶಿಯವರು ಕಸಾಪ ಅಧ್ಯಕ್ಷರಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. ಕಸಾಪ ಪದಾಧಿಕಾರಿಗಳು, ಸಿಬ್ಬಂದಿ ಎಲ್ಲರಲ್ಲೂ ಒಂದು ರೀತಿಯ ಭಯದ ವಾತಾವರಣ ಮೂಡಿಸಿ, ತಮಗೆ ತೋಚಿದಂತೆ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನಲಾಗಿದೆ.

ಕಸಾಪ ಕನ್ನಡಿಗರ ಹಣದಲ್ಲಿ ನಡೆಯುತ್ತಿರುವ ಸಂಸ್ಥೆ ಎನ್ನುವ ಪ್ರಜ್ಞೆ ಮಹೇಶ್ ಜೋಶಿ ಅವರಿಗೆ ಇರಬೇಕಾಗಿದೆ. ವ್ಯಕ್ತಿಯಾಗಿ ಯಾರನ್ನು ಬೇಕಾದರೂ ಅವರು ಆರಾಧಿಸಿಕೊಳ್ಳಲಿ, ಸನ್ಮಾನಿಸಲಿ. ಆದರೆ, ಕಸಾಪ ಅಧ್ಯಕ್ಷರಾಗಿ ಅವರಿಗೆ ನಿರ್ದಿಷ್ಟವಾದ ಜವಾಬ್ದಾರಿ, ಹೊಣೆಗಾರಿಕೆಗಳು ಇವೆ. ಅವರು ಅದನ್ನು ಅರಿತು ನಡೆಯಬೇಕಾಗಿದೆ. ಮಹೇಶ್ ಜೋಶಿಯವರು ತಮ್ಮ ನಡೆಯನ್ನು ಬದಲಿಸಿಕೊಳ್ಳಲೇಬೇಕಿದೆ. ಕಸಾಪ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅದು ಅತ್ಯಂತ ಅವಶ್ಯಕ. ಇಲ್ಲದಿದ್ದರೆ ಕನ್ನಡಿಗರ ಸಹನೆಯ ಕಟ್ಟೆ ಒಡೆದೀತು.       

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿಎಂ ಸಿದ್ದರಾಮಯ್ಯ

"ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ...

ಲೋಕಸಭಾ ಚುನಾವಣೆ | ಬಿಜೆಪಿ ಭದ್ರಕೋಟೆ ಬೆಂ. ದಕ್ಷಿಣದ ಮತದಾರರು ಹೇಳುತ್ತಿರೋದೇನು?

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26 ರಂದು...

ಬಿಜೆಪಿಯಿಂದ ಪಿಕ್ ಪಾಕೆಟ್ ಕಾಂಗ್ರೆಸ್, ಕನ್ನಡಿಗರ ಕೈಗೆ ಚಿಪ್ಪು ಪೋಸ್ಟರ್ ಬಿಡುಗಡೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು,...

ನೇಹಾ ಕೊಲೆ | ನಿರಂಜನ್ ಮನೆಗೆ ಸಚಿವ ಎಚ್‌ ಕೆ ಪಾಟೀಲ್ ಭೇಟಿ, ನಿರಂಜನ್‌ ಜೊತೆ ಸಿಎಂ ಮಾತು

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ...