ಈ ದಿನ ಸಂಪಾದಕೀಯ | ಬಿಜೆಪಿ ಸರ್ಕಾರ ಕೆಎಂಎಫ್ ಅನ್ನು ಮುಗಿಸುತ್ತಿದೆಯೇ? ವಾಸ್ತವವೇನು?

Date:

ಸರ್ಕಾರ ರೈತರಿಗೆ ನೀಡಬೇಕಿದ್ದ ಸುಮಾರು 1,450 ಕೋಟಿ ರೂಪಾಯಿ ಪ್ರೋತ್ಸಾಹ ಧನ ಸಕಾಲಕ್ಕೆ ನೀಡಲಿಲ್ಲ. ಅದೇ ಕಾಲಕ್ಕೆ ಹಾಲು ಉತ್ಪಾದನೆಯ ಖರ್ಚು ಆಕಾಶ ಮುಟ್ಟಿತು. ರೈತರು ಹಸುಗಳನ್ನು ಮಾರಿ ಹೈನುಗಾರಿಕೆಯಿಂದ ವಿಮುಖರಾದರು. ಇದರಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಇಳಿಮುಖವಾಗತೊಡಗಿತು. ಅದೇ ಸಮಯಕ್ಕೆ ಅಮುಲ್ ರಾಜ್ಯ ಪ್ರವೇಶಿಸಿತು.

ಕರ್ನಾಟಕದಲ್ಲಿ ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್‌ (ಅಮೂಲ್) ಹಾಲು ಮಾರುವುದಕ್ಕೆ ಮುಂದಾಗಿರುವುದು ವಿವಾದಕ್ಕೆ ಗುರಿಯಾಗಿದೆ. ಮೈಸೂರು ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳಿಗಾದ ಗತಿಯೇ ಕೆಎಂಎಫ್‌ಗೂ ಆಗಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ. ಬಂದರುಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಅದಾನಿ, ಅಂಬಾನಿಗಳ ಪಾಲಾದಂತೆ ನಾಳೆ ಕೆಎಂಎಫ್ ಕೂಡ ಅವರ ಪಾಲಾಗಲಿದೆ ಎನ್ನುವ ಕೂಗು ಎದ್ದಿದೆ.

ತನ್ನ ನೀತಿ ನಿಯಮಗಳಿಂದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ನಷ್ಟಕ್ಕೆ ದೂಡಿ, ನಂತರ ನಷ್ಟದ ನೆಪವೊಡ್ಡಿ ಅವುಗಳನ್ನು ಪೂರ್ಣವಾಗಿ ಇಲ್ಲವೇ ಭಾಗಶಃ ಖಾಸಗಿಯವರಿಗೆ ವಹಿಸುವುದು ಬಿಜೆಪಿ ಸರ್ಕಾರದ ಒಂದು ಹಳೆಯ ತಂತ್ರ. ಇಂಧನ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಹೀಗೆ ಹಲವು ವಲಯಗಳಲ್ಲಿ ಈ ಪ್ರಯೋಗ ನಡೆಸಿದ ಪ್ರಧಾನಿ ಮೋದಿ, ಗೃಹ ಮಂತ್ರಿ ಹಾಗೂ ಸಹಕಾರ ಸಚಿವ ಅಮಿತ್ ಶಾ ಜೋಡಿ ಇದೀಗ ಸಹಕಾರ ಕ್ಷೇತಕ್ಕೆ ಕಾಲಿಟ್ಟಿದೆ.

ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಹಾಲು ಒಕ್ಕೂಟ, ರಾಜ್ಯದ 27 ಸಾವಿರ ಹಳ್ಳಿಗಳ 24 ಲಕ್ಷಕ್ಕೂ ಅಧಿಕ ರೈತರ ಬದುಕಿಗೆ ಆಸರೆಯಾಗಿದೆ. ಹಳ್ಳಿ ಹಳ್ಳಿಗಳಲ್ಲಿ ತಮ್ಮ ದಿನನಿತ್ಯದ ಖರ್ಚಿಗೆ, ಸಂಸಾರದ ನಿರ್ವಹಣೆಗೆ ರೈತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು, ಹಾಲಿನ ಬಟವಾಡೆಯನ್ನು ಅವಲಂಬಿಸಿದ್ದಾರೆ. ಜಮೀನಿಲ್ಲದ ಕಡುಬಡವರೂ ಕೂಡ ಗೋಮಾಳಗಳಲ್ಲಿ, ರಸ್ತೆ ಬದುಗಳಲ್ಲಿ ಹಸು, ಎಮ್ಮೆ ಮೇಯಿಸಿ ಮನೆಯ ಮಕ್ಕಳಿಗೂ ಕೊಡದೇ ಡೇರಿಗೆ ಹಾಲು ಹಾಕುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರದಂಥ ಬರಡು ಭೂಮಿಯಲ್ಲೂ ರೈತರು ಮೇವು ಬೆಳೆದು ಹಾಲಿನ ಹೊಳೆಯನ್ನೇ ಹರಿಸುತ್ತಿದ್ದಾರೆ. ಅದರ ಹಿಂದೆ ರೈತಾಪಿಗಳ ಅಪಾರ ಶ್ರಮವಿದೆ. ಒಂದು ಹಂತಕ್ಕೆ ಹೈನುಗಾರಿಕೆ ರೈತರಿಗೆ ಉಸಿರು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಿದೆ.    

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರ ಹಿಡಿದಂದಿನಿಂದ ನಿಧಾನಕ್ಕೆ ಹಾಲು ಒಕ್ಕೂಟ ನಷ್ಟದತ್ತ ಚಲಿಸುತ್ತಿದೆ.  ರೈತರಿಗೆ ಪ್ರತಿ ಲೀಟರ್‌ಗೆ ಸಿಗುತ್ತಿದ್ದ ಹಣದ ಜೊತೆಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸಿದ್ದರಾಮಯ್ಯ ಸರ್ಕಾರ ಎರಡು ರೂಪಾಯಿಯಿಂದ ನಾಲ್ಕು ರೂಪಾಯಿಗೆ ಹೆಚ್ಚಿಸಿತ್ತು. ಅದರಿಂದ ಹಾಲು ಉತ್ಪಾದನೆ ಹೆಚ್ಚಳವಾಗಿತ್ತು. ಕಾಲಕ್ರಮೇಣ ಅದು ಐದು ರೂಪಾಯಿಗೆ ಏರಿಕೆಯಾಗಿತ್ತು. ಬಿಜೆಪಿ ಸರ್ಕಾರ ಬಂದ ನಂತರ ಹೈನೋದ್ಯಮಕ್ಕೆ ಪೆಟ್ಟು ಬೀಳತೊಡಗಿತು. ಮೊದಲಿಗೆ, ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಲೇ ಇಲ್ಲ. ತೀರಾ ಇತ್ತೀಚಿನವರೆಗೆ ರೈತರಿಗೆ ಲೀಟರ್‌ ಹಾಲಿಗೆ ಸಿಗುತ್ತಿದ್ದ ಬೆಲೆ ಕೇವಲ 22 ರೂ. ಜೊತೆಗೆ ಐದು ರೂಪಾಯಿ ಪ್ರೋತ್ಸಾಹ ಧನ. ಆದರೆ, ಬೊಮ್ಮಾಯಿ ಸರ್ಕಾರ ವರ್ಷಾನುಗಟ್ಟಲೇ ರೈತರಿಗೆ ಪ್ರೋತ್ಸಾಹ ಧನ ನೀಡಲೇ ಇಲ್ಲ. ಸರ್ಕಾರ ರೈತರಿಗೆ ನೀಡಬೇಕಿದ್ದ ಸುಮಾರು 1,450 ಕೋಟಿ ರೂಪಾಯಿ ಪ್ರೋತ್ಸಾಹ ಧನ ಸಕಾಲಕ್ಕೆ ನೀಡದೇ ಐದಾರು ತಿಂಗಳು ವಿಳಂಬ ಮಾಡತೊಡಗಿತು. ಅದೇ ಕಾಲಕ್ಕೆ ಹಾಲು ಉತ್ಪಾದನೆಯ ಖರ್ಚು ಆಕಾಶ ಮುಟ್ಟಿತು. 50 ಕೆಜಿ ಬೂಸಾ ಮೂಟೆಯ ಬೆಲೆ 1,300 ರೂ ಇದ್ದರೆ, ಕಡಲೆ ಹಿಂಡಿ 30 ಕೆಜಿಗೆ 1,600 ರೂಪಾಯಿ; ಪಶು ಆಹಾರ 50 ಕೇಜಿಗೆ 1,180 ರೂಪಾಯಿ ಆಯಿತು.

ಹಾಲು ಉತ್ಪಾದನೆಯ ಖರ್ಚೂ ಕೂಡ ಗಿಟ್ಟದೆ ಕಂಗೆಟ್ಟ ಬಹುತೇಕ ರೈತರು ಹಸುಗಳನ್ನು ಮಾರಿ ಹೈನುಗಾರಿಕೆಯಿಂದ ವಿಮುಖರಾದರು. ಇದರಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗತೊಡಗಿತು. 2021ರಲ್ಲಿ ದಿನಕ್ಕೆ ಸುಮಾರು 85 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದ ಕೆಎಂಎಫ್ 2022ರಲ್ಲಿ ಸುಮಾರು 75 ಲಕ್ಷ ಲೀಟರ್‌ಗೆ ಇಳಿಯಿತು. ಹೋಟೆಲ್‌ಗಳಿಗೆ, ಗ್ರಾಹಕರಿಗೆ ಹಾಲು ಪೂರೈಸಲು ಕೂಡ ಕೆಎಂಎಫ್‌ ಪರದಾಡಬೇಕಾಯಿತು. ಹೀಗೆ ಹಂತಹಂತವಾಗಿ, ವ್ಯವಸ್ಥಿತವಾಗಿ ಹಾಲು ಉತ್ಪಾದನೆಯ ಪ್ರಮಾಣವನ್ನು, ಕೆಎಂಎಫ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸಿದ ಬಿಜೆಪಿ ಸರ್ಕಾರ, ಇದೀಗ ಅದಕ್ಕೆ ಪರಿಹಾರವಾಗಿ ಅಮೂಲ್ ಅನ್ನು ಪರಿಚಯಿಸಲು ಹೊರಟಿದೆ. ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಾಗ, ಕೆಲವೇ ತಿಂಗಳ ಹಿಂದೆ ಹಾಲಿನ ಬೆಲೆಯನ್ನು ಲೀಟರ್‌ಗೆ 33 ರೂಪಾಯಿಗೆ ಹೆಚ್ಚಿಸಲಾಗಿದೆ. ಆದರೆ, 2002ರ ಅಕ್ಟೋಬರ್‌ನಿಂದ ಪ್ರತಿ ಲೀಟರ್ ಹಾಲಿಗೆ ನೀಡುವ ಐದು ರೂಪಾಯಿ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.    

ಅಮೂಲ್ ಕೂಡ ಸಹಕಾರಿ ತತ್ವದ ಸಂಘಟನೆಯೇ ಆದರೂ ಅದು ಕೆಎಂಎಫ್‌ಗಿಂತಲೂ ಸ್ವಾಯತ್ತತೆಯುಳ್ಳ ಸಂಸ್ಥೆ. ಕೆಎಂಎಫ್‌ ರೈತರಿಗೆ ನೀಡುವ ಬೆಲೆ ಹೆಚ್ಚಿಸಬೇಕೆಂದರೆ, ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುಮತಿ ಸಿಕ್ಕ ನಂತರ ಮಾತ್ರ ಮಾಡಬಹುದು. ಜೊತೆಗೆ ಅಮೂಲ್‌ನಲ್ಲಿ ರೈತರಿಗೆ ಅದರ ಲಾಭಾಂಶದಲ್ಲೂ ಪಾಲು ಸಿಗುತ್ತದೆ. ಆದರೆ, ಕೆಎಂಎಫ್‌ ರೈತರಿಗೆ ಹಾಲು ಉತ್ಪಾದನೆಗೆ ಖರ್ಚಾದ ಹಣ ನೀಡುವುದೂ ಕಷ್ಟವಾಗಿದೆ. ಅಮೂಲ್ ರೈತರಿಗೆ ಲೀಟರ್‌ಗೆ 45 ರೂಪಾಯಿ ನೀಡುತ್ತದೆ. ಹಾಗಾಗಿಯೇ ಅಮೂಲ್‌ ಹಾಲಿನ ದರ ಲೀಟರ್‌ಗೆ 54 ರೂಪಾಯಿ. ಆದರೆ, ಕೆಎಂಎಫ್‌ ಗುಣಮಟ್ಟದ ಕಿತ್ತಳೆ ಪ್ಯಾಕೆಟ್ ಹಾಲಿನ ಬೆಲೆಯೇ ಲೀಟರ್‌ಗೆ 43 ರೂಪಾಯಿ ಮಾತ್ರ. ಜೊತೆಗೆ ಅಮೂಲ್ ತನ್ನ 70% ಹಾಲನ್ನು ಇತರೆ ಉತ್ಪನ್ನಗಳ ಉತ್ಪಾದನೆಗೆ ಬಳಸುತ್ತದೆ. ಆದರೆ, ಕೆಎಂಎಫ್‌ ತನ್ನ ಉತ್ಪಾದನೆಯ ಬಹುತೇಕ ಪಾಲನ್ನು ಹಾಲಾಗಿಯೇ ಮಾರುತ್ತಿದೆ. ಭ್ರಷ್ಟ ಮತ್ತು ಅದಕ್ಷ ಆಡಳಿತಶಾಹಿಯಿಂದ, ಇಚ್ಛಾಶಕ್ತಿ ಇಲ್ಲದ ರಾಜಕಾರಣಿಗಳಿಂದ ಹಾಲಿನ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಕೆಎಂಎಫ್‌ಗೆ ಸಾಧ್ಯವಾಗಿಯೇ ಇಲ್ಲ. 

ಕೆಎಂಎಫ್‌ ಇಂದಿಗೂ ಲಕ್ಷಾಂತರ ರೈತರ ಆಸರೆಯಾಗಿದೆ. ಅದರ ಸಮಸ್ಯೆಗಳನ್ನು ಬಗೆಹರಿಸಿ, ಅದನ್ನು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿದೆ. ಪ್ರಜ್ಞಾಪೂರ್ವಕವಾಗಿ ಅದರ ಕತ್ತು ಹಿಚುಕುತ್ತಿರುವವರನ್ನು ಹಿಮ್ಮೆಟ್ಟಿಸಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...