ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ತಾನು ನೀಡುತ್ತಿರುವ ಅನುದಾನಗಳಿಗೆ ತನ್ನ ಹೆಸರು ಹಾಕಿಕೊಂಡು ಪ್ರಚಾರ ನಡೆದುಕೊಳ್ಳುತ್ತಿದೆ. ಅದರ ಭಾಗವಾಗಿ, ರಾಜ್ಯದಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ವೇಳೆ ಹೊಸದಾಗಿ ಮುದ್ರಿತ ಬಿಲ್ ವ್ಯವಸ್ಥೆ ಜಾರಿ ಮಾಡಿದೆ. ಬಿಲ್ನಲ್ಲಿ ವಿತರಣೆ ಮಾಡುವ ಅಕ್ಕಿಯ ವಿವರದ ಜೊತೆಗೆ ಜನರಿಗೆ ನೀಡುವ ಪಡಿತರ ಅಕ್ಕಿ ಕೇಂದ್ರ ಸರ್ಕಾರದ ಅನುದಾನ ಎಂದು ಮುದ್ರಣ ಮಾಡಲಾಗುತ್ತಿದೆ.
ಸದ್ಯ ಕೋಲಾರ ಸೇರಿದಂತೆ ರಾಜ್ಯಾದ್ಯಂತ ಮುಂದಿನ ತಿಂಗಳಿನಿಂದ ಅಧಿಕೃತವಾಗಿ ಬಿಲ್ ವ್ಯವಸ್ಥೆ ಜಾರಿ ಮಾಡಲಿದೆ. ಈ ಮೊದಲು ಪಡಿತರ ವಿತರಣೆ ವೇಳೆಯಲ್ಲಿ ಕೈನಲ್ಲಿ ಬರೆದಿದ್ದ ಬಿಲ್ ವಿತರಣೆ ಮಾಡಲಾಗುತ್ತಿತ್ತು. ಹೊಸ ಬಿಲ್ ವ್ಯವಸ್ಥೆಯಿಂದಾಗಿ ಅಕ್ಕಿ ವಿತರಣೆಯ ಅಕ್ರಮಕ್ಕೂ ಕೂಡ ಕಡಿವಾಣ ಬೀಳಲಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಉಚಿತವಾಗಿ ಹತ್ತು ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯನ್ನು ಜಾರಿ ತರೋದಾಗಿ ಹೇಳಿತ್ತು. ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈ ಅನ್ನಭಾಗ್ಯ ಯೋಜನೆ ಕೂಡಾ ಒಂದಾಗಿತ್ತು. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ದತಿಯನ್ನು ಜಾರಿಗೆ ತರುವ ಮೂಲಕ ಜನರಿಗೆ ಯಾವ ಸರ್ಕಾರ ಎಷ್ಟು ಅಕ್ಕಿ ಕೊಡ್ತಿದೆ. ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನೊ ಯೋಜನೆ ಅನುದಾನ ಎಷ್ಟು? ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅನುದಾನ ಎಷ್ಟು? ಅನ್ನೋದನ್ನು ಹೊಸ ಬಿಲ್ನಲ್ಲಿ ವಿವರವಾಗಿ ಮುದ್ರಿಸುತ್ತದೆ.
ಜೊತೆಗೆ, ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಕೆಜಿ ಅಕ್ಕಿ, ಎಷ್ಟು ಕೆಜಿ ರಾಗಿ ಅಥವಾ ಜೋಳ ವಿತರಣೆಯಾಗಿದೆ ಅದಕ್ಕೆ ತಗುಲುವ ಮೊತ್ತವೆಷ್ಟು? ಆ ಅನುದಾನ ಎಲ್ಲಿಂದ ಬಂದಿದೆ? ರಾಜ್ಯ ಸರ್ಕಾರದ ಅನುಧಾನ ಎಷ್ಟು? ಅದು ಯಾವ ರೀತಿ ಗ್ರಾಹಕರಿಗೆ ತಲುಪಿದೆ ಅನ್ನೋ ಪ್ರತಿಯೊಂದು ಮಾಹಿತಿಯನ್ನು ಸದ್ಯ ಹೊಸ ಬಿಲ್ನಲ್ಲಿ ದಾಖಲಾಗುವಂತೆ ಮಾಡಿದೆ. ಪಡಿತರ ಅಕ್ಕಿಯಲ್ಲಾಗುತ್ತಿದ್ದ ಸೋರಿಕೆ ಹಾಗೂ ಅವ್ಯವಹಾರವನ್ನು ತಡೆಯಲು ಈ ವ್ಯವಸ್ಥೆ ಅನುಕೂಲವಾಗಲಿದೆ.
ಸದ್ಯ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಜನರಿಗೆ ವಿತರಣೆ ಮಾಡುತ್ತಿರುವ ಅಕ್ಕಿ ಮತ್ತು ರಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯದ್ದು ಅನ್ನೋದನ್ನು ವಿವರವಾಗಿ ಮುದ್ರಿಸಿ ನೀಡುತ್ತಿದೆ. ಹಾಗಾಗಿ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರದ ಪಾಲೂ ಇದೆ ಎಂದು ಜನರಿಗೆ ಅರ್ಥಮಾಡಿಸುವುದು ಕೇಂದ್ರ ಸರ್ಕಾರದ ಈ ಹೊಸ ಪ್ರಿಂಟೆಡ್ ಬಿಲ್ನ ಉದ್ದೇಶ. ಸದ್ಯ ಈ ವ್ಯವಸ್ಥೆಗೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು ಇದು ಅಕ್ಕಿ ವಿತರಣೆಯ ಸೋರಿಕೆಯನ್ನು ತಡೆಯಲಿದೆ ಅನ್ನೋದು ಗ್ರಾಹಕರ ಮಾತು.