- ರಾಣೇಬೆನ್ನೂರು ಕ್ಷೇತ್ರಕ್ಕೆ ಅರುಣ್ ಕುಮಾರ್ಗೆ ಬಿಜೆಪಿ ಟಿಕೆಟ್ ಘೋಷಣೆ
- ಟಿಕೆಟ್ ಸಿಗದ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ ಆರ್ ಶಂಕರ್
ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ಹಿನ್ನೆಲೆ ಮಾಜಿ ಸಚಿವ ಆರ್ ಶಂಕರ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬುಧವಾರ (ಏ.12) ರಾಜೀನಾಮೆ ನೀಡಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಶಾಸಕ ಅರುಣ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಅಸಮಾಧಾನಗೊಂಡಿರುವ ಆರ್ ಶಂಕರ್, ಬುಧವಾರ ಮಧ್ಯಾಹ್ನದ ವೇಳೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ.
2018ರಲ್ಲಿ ಕೆಪಿಜೆಪಿಯಿಂದ ಗೆದ್ದು ಶಾಸಕರಾಗಿದ್ದ ಆರ್ ಶಂಕರ್ ಅವರು ನಂತರ ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬೆಂಬಲ ಸೂಚಿಸಿ, ಬಿಜೆಪಿ ಸರ್ಕಾರ ರಚನೆಗೂ ಕಾರಣರಾದರು. ಈಗ ಬಿಜೆಪಿ ಟಿಕೆಟ್ ಸಿಗದೇ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಹಾಕಿದಂಗಾಗಿದೆ: ಕಾಗೋಡು ತಿಮ್ಮಪ್ಪ ಬೇಸರ
2019ರ ಉಪಚುನಾವಣೆಯಲ್ಲಿ ಆರ್ ಶಂಕರ್ ಬದಲಾಗಿ ಸ್ಥಳೀಯ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರಿಗೆ ಬಿಜೆಪಿ ಟಿಕೆಟ್ ನೀಡಿ, ಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಈ ಬಾರಿ ಅವರು ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದರು. ಬಿಜೆಪಿ ಟಿಕೆಟ್ ಸಿಗದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ಬಳಿಕ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, “ನನ್ನನ್ನು ಪಕ್ಷಕ್ಕೆ ಕರೆದುಕೊಂಡ ಹೋದವರು ಯಾರು ಈಗ ಮಾತನಾಡುತ್ತಿಲ್ಲ. ಕಮಿಷನ್, ಜೂಜು ಆರೋಪ ಹೊಂದಿರುವವರಿಗೆ ಟಿಕೆಟ್ ಕೊಟ್ಟಿದ್ದಾರೆ. ಸರ್ಕಾರ ಬರೋಕೆ ಕಾರಣವಾದವನು ನಾನು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅನ್ನೋ ಸಂದರ್ಭದಲ್ಲಿ ಕೆಲಸ ಮಾಡಿದ್ದೆ. ಆದರೆ ಈ ರೀತಿ ನಡೆಸಿಕೊಂಡದ್ದು ಬೇಸರ ತಂದಿದೆ” ಎಂದು ಕಿಡಿಕಾರಿದರು.