ಮಡಿಕೇರಿ ದಸರಾ | ಮೊಗ್ಗಿನಲ್ಲಿಯೇ ಚಿವುಟಿದರೆ ಅರಳುವುದೆಲ್ಲಿ?

Date:

ನಾಡಹಬ್ಬ ದಸರಾ ಕರುನಾಡಿನ ಸಂಸ್ಕೃತಿ, ಕಲೆ ಸಂಪ್ರದಾಯದ ಪ್ರತಿಬಿಂಬ. ನಮ್ಮ ಇತಿಹಾಸದ ವೈಭವವನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸಿಕೊಡುವ ಸಾಂಕೇತಿಕ ರೂಪದ ಪ್ರಯತ್ನ. ಮೈಸೂರು ದಸರಾ ನಾಡಿನ ಪರಂಪರೆಯ ಕೇಂದ್ರಬಿಂದುವಾದರೆ, ಮಡಿಕೇರಿ ದಸರಾ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಮಡಿಕೇರಿ ದಸರಾವಂತೂ ವಿಭಿನ್ನ, ವಿಶೇಷತೆಗಳಿಂದ ಕೂಡಿ ರಂಗು ತುಂಬಿಕೊಳ್ಳುತ್ತಲೇ ಬಂದಿದೆ.

ಧರ್ಮ, ಜಾತಿ, ಪಕ್ಷಭೇದ ಮರೆತು ಸರ್ವ ಧರ್ಮ ಸಹಿಷ್ಣುತಾ ತತ್ತ್ವದ ಪರಿಪಾಲನೆ ಒಂದು ಹೆಮ್ಮೆಯಾದರೆ ನವರಾತ್ರಿಯ ಒಂಬತ್ತು ದಿನಗಳು ಕೂಡ ಒಂದೊಂದು ವಿಶೇಷ ದಿನದ ಆಚರಣೆಗಳು ಮಡಿಕೇರಿಯಲ್ಲಿ ನಡೆಯುತ್ತಿವೆ. ಮಕ್ಕಳು, ಮಹಿಳೆಯರು, ಜನಪದ ಹಾಡುಗಾರರು, ಕವಿ, ಸಾಹಿತಿಗಳು ತಮ್ಮ ಪ್ರತಿಭೆ, ಕಲಾ ಕೌಶಲ್ಯಗಳನ್ನು ತಮ್ಮ ಬಂಧು ಬಾಂಧವರ, ಸ್ನೇಹಿತರ ಸಮ್ಮುಖದಲ್ಲಿ ಅಭಿವ್ಯಕ್ತಗೊಳಿಸುವುದೇ ಹೆಮ್ಮೆಯ ಸಂಗತಿ. ಇಲ್ಲಿ ಪ್ರತಿಭೆಗೆ ತಮ್ಮವರಿಂದ ಸಿಗುವ ಪ್ರೀತಿ ಪೂರ್ವಕ ಚಪ್ಪಾಳೆ, ಮನ್ನಣೆಯೇ ಅತಿ ದೊಡ್ಡ ಗೌರವವಾಗಿರುತ್ತದೆ.

ತಮ್ಮೂರಿನ ದಸರಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಹೆಮ್ಮೆ ಆ ಕಲಾವಿದನಾದವನಿಗೆ ಸ್ಫೂರ್ತಿಯ ನೆನಪಾಗಿ ಉಳಿಯಬೇಕಾದದ್ದು ಅತ್ಯಗತ್ಯ. ಅದರಲ್ಲಿಯೂ ಉತ್ಸಾಹದ ಚಿಲುಮೆಗಳಂತೆ ಸದಾ ಪುಟಿದೇಳುವ, ಇನ್ನೊಬ್ಬರ ಆಕರ್ಷಣೆಯ ಕೇಂದ್ರ ಬಿಂದು ತಾವೇ ಆಗಿರಬೇಕೆಂಬ ನಿಲುವಿಗೆ ಇನ್ನಿಲ್ಲದ ಪ್ರಯತ್ನಕ್ಕೆ, ಹರಸಾಹಸಕ್ಕೆ ಮುಂದಾಗುವ ಯುವ ಮನಸ್ಸುಗಳನ್ನು ಸೆಳೆಯುವ ಯುವ ದಸರಾ ಈ ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಅಭೂತಪೂರ್ವ ಯಶಸ್ಸನ್ನು, ಜನಮನ್ನಣೆಯನ್ನು ಪ್ರತಿವರ್ಷವೂ ಪಡೆದುಕೊಳ್ಳುತ್ತದೆ. ಕಾರಣ ಹದಿಹರೆಯದ ಬಣ್ಣದ ಲೋಕ ತೆರೆದುಕೊಳ್ಳುವುದೇ ವಿಜಯದಶಮಿ ದಿನ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದಿನಾಂಕ 21ರಂದು ನಡೆದ ಯುವದಸರಾದಲ್ಲಿ ಸೇರಿದ್ದ ಇಡೀ ಜನಸಾಗರ ಕಾರ್ಯಕ್ರಮದ ಆಕರ್ಷಕ ಮೋಡಿಗೆ ಕುಣಿದು ಕುಪ್ಪಳಿಸುತ್ತಿದ್ದುದು ಬಹುಶಃ ಯುವ ದಸರಾ ಸಮಿತಿಯ ಕಾರ್ಯಕ್ರಮದ ಆಯೋಜನೆ ಸಾರ್ಥಕತೆ ಪಡೆದುಕೊಂಡಂತೆ ಅನ್ನಿಸಿದಂತೂ ನಿಜ. ಸಾಂಸ್ಕೃತಿಕ ಸಮಿತಿಯ ಚಿಂತನೆ, ದೂರದೃಷ್ಟಿ, ಸ್ಥಳೀಯರ ಮನೋಭಾವಕ್ಕೆ ಪೂರಕವಾಗಿ ಯೋಜಿಸುವ ಕಾರ್ಯಕ್ರಮ, ಕಲಾವಿದರ ಆಯ್ಕೆ ಎಲ್ಲವೂ ಫಲ ಕಾಣುವುದು ಪ್ರೇಕ್ಷಕ ಮಹಾಶಯರ ಚಪ್ಪಾಳೆ, ಶಿಳ್ಳೆಗಳಿಂದ ತುಂಬಿದ ಸಭಾಂಗಣ. ಖಂಡಿತಾ ಯುವದಸರಾ ಅದ್ಭುತ ಯಶಸ್ಸನ್ನು ಕಂಡಿದೆ.

ಆದರೆ, ಯುವ ಪ್ರತಿಭೆಗಳಿಗೆ ಸ್ಫೂರ್ತಿ ತುಂಬಬೇಕಾದ ಯುವದಸರಾ ನೃತ್ಯ ಸ್ಪರ್ಧೆಯಲ್ಲಿ ವಿಫಲವಾಯಿತೇನೋ ಎನ್ನುವುದು ಅನುಭವಸ್ಥರ ಪ್ರಾಮಾಣಿಕ ಅಭಿಪ್ರಾಯ. ಯುವ ಮನಸ್ಸುಗಳನ್ನು ಸೆಳೆಯುವ ರಾಕ್ ಮ್ಯೂಸಿಕ್ ಸ್ಟಾರ್ ಚಂದನ್ ಶೆಟ್ಟಿಯವರು ವೇದಿಕೆಯಲ್ಲಿ ಇದ್ದಷ್ಟೂ ಹೊತ್ತು ಇಡೀ ಸಭಾಂಗಣಕ್ಕೆ ಸಭಾಂಗಣವೇ ಅದ್ಭುತ ಲೋಕದಲ್ಲಿ ತೇಲಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಆದರೆ ಯಾವ ವೇದಿಕೆ ಯುವ ಪ್ರತಿಭೆಗಳಿಗೆ ಸ್ಫೂರ್ತಿಯನ್ನು ತುಂಬಿ ನಿನ್ನಲ್ಲೇನೋ ಪ್ರತಿಭೆಯಿದೆ. ಅದನ್ನು ಸಾಬೀತುಪಡಿಸಲು ಇನ್ನೂ ಅವಕಾಶಗಳಿವೆ. ಪ್ರಯತ್ನ ಆ ನಿಟ್ಟಿನಲ್ಲಿ ಸಾಗಲಿ ಎಂದು ಧನಾತ್ಮಕ ಪ್ರೇರಣೆಯನ್ನು ನೀಡಬೇಕಾಗಿತ್ತು. ಹಾಗಾಗದೆ ನಿರ್ದಾಕ್ಷಿಣ್ಯವಾಗಿ ಈ ವೇದಿಕೆಗೆ ನಿಮ್ಮ ಪ್ರತಿಭೆ ಅರ್ಹವಲ್ಲ ಎಂಬಂತೆ ತೀರ್ಪುಗಾರರ ಖಡಕ್ ಅಭಿಪ್ರಾಯ ನಮ್ಮ ಅರಳು ಪ್ರತಿಭೆಗಳ ಕಣ್ಣಂಚು ತೇವವಾಗುತ್ತಾ ತಲೆತಗ್ಗಿಸಿ ವೇದಿಕೆಯಿಂದ ನಿರ್ಗಮಿಸುವಾಗ ಕರುಳು ಚುರುಕ್ ಎನ್ನಿಸಿತು.

ಇಂತಹ ಭವ್ಯ ವೇದಿಕೆಯಲ್ಲಿ ತಮಗೆ ಸಿಕ್ಕ ಈ ಅಮೂಲ್ಯ ಅವಕಾಶಕ್ಕಾಗಿ ತಮ್ಮ ತಮ್ಮ ಮಟ್ಟಿಗೆ ಸರ್ವ ಪ್ರಯತ್ನವನ್ನೂ ಧಾರೆಯೆರೆದು ಹೊಸ ಹುಮ್ಮಸ್ಸು, ಹುರುಪಿನಿಂದ ವೇದಿಕೆ ಪ್ರವೇಶಿಸಿದ ಪ್ರತಿಭೆಗಳಿಗೆ ತೀರ್ಪುಗಾರರು ಹಾಗೂ ಕಾರ್ಯಕ್ರಮದ ನಿರೂಪಕರ ಅಭಿಪ್ರಾಯಗಳು ಅವರೆಲ್ಲರ ನಿರೀಕ್ಷೆಗಳಿಗೆ ತಣ್ಣೀರೆರಚಿದಂತೆ ಮುಖ ಸಪ್ಪೆಗೊಳಿಸುತ್ತಿದ್ದುದು ಪ್ರತಿಯೊಬ್ಬರ ಗಮನಕ್ಕೆ ಬಂದಿತ್ತು.
ಸಣ್ಣದರಲ್ಲಿಯೇ ಡಾನ್ಸ್ ಕ್ಲಾಸ್ ನಲ್ಲಿ ತರಭೇತಿ ಪಡೆದ ತಂಡಗಳಿಗೂ, ವಿದ್ಯಾ ಸಂಸ್ಥೆಯನ್ನು ಪ್ರತಿನಿಧಿಸಿದ ನೃತ್ಯ ತಂಡಗಳ ತರಭೇತಿಗೂ ಬಹಳಷ್ಟು ವ್ಯತ್ಯಾಸವಿದ್ದೇ ಇರುತ್ತದೆ. ಇದರ ಸಾಮಾನ್ಯ ಅರಿವು ತೀರ್ಪುಗಾರರ ಅಭಿಪ್ರಾಯ ಹಂಚಿಕೆಯಲ್ಲಿ ಇರಬೇಕಿತ್ತು. ಅದು ಬಿಟ್ಟು ನೇರವಾಗಿ ಟೀಕಾ ಪ್ರಹಾರ ವೇದಿಕೆಯಲ್ಲಿಯೇ ಆದದ್ದು ಮುಗ್ದ ಮನಸ್ಸುಗಳನ್ನು ಘಾಸಿಗೊಳಿಸಿತು.

ನೈಜ ಕಲಾವಿದನೊಬ್ಬ ಬಯಸುವುದು ಅಭಿಮಾನ, ಗೌರವಪೂರ್ವಕ ಪ್ರಶಂಸೆಗಳನ್ನೇ ಹೊರತು ಸಾರ್ವಜನಿಕ ತೇಜೋವಧೆಯನ್ನಲ್ಲ. ಅದರಲ್ಲಿಯೂ ಯುವ ಜನಾಂಗದ ಲಕ್ಷ್ಯವಿರುವುದೇ ಪ್ರೇರಣಾತ್ಮಕ ಉತ್ತೇಜನದಲ್ಲಿ. ಈ ನಿಟ್ಟಿನಲ್ಲಿ ಅವಲೋಕಿಸುವುದಾದರೆ ಯುವದಸರಾ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಪ್ರತಿಭೆಗಳೂ ಈ ನಿರಾಸೆಯನ್ನು ಅನುಭವಿಸಿವೆ. ಇದನ್ನು ಕಂಡಾಗ ಅನ್ನಿಸಿದ್ದು ಇಷ್ಟು. ‘ಕಲೆ ಜೀವನೋತ್ಸಾಹದ ಸೆಲೆ’ ಪ್ರತಿ ಮಗುವಿನ ಜೀವನ ಮೌಲ್ಯವನ್ನು ಹೆಚ್ಚಿಸುವ ಶಕ್ತಿ. ಯಾರೂ ಪರಿಪೂರ್ಣರಲ್ಲ. ತೀರ್ಪುಗಾರನಾದವನು ಮಗುವಿನ ಪ್ರತಿಭೆಯ ಉನ್ನತಿಗಾಗಿ ನೀಡುವ ಆವಶ್ಯಕ ಸಲಹೆ ಕಲಾಸಕ್ತಿಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವಂತಿರಬಾರದು. ಸ್ಪರ್ಧೆಯ ತೀರ್ಪುಗಾರರಾದವರು ತೀರಾ ಎಚ್ಚರಿಕೆ ವಹಿಸಬೇಕಾದದ್ದು ಇಲ್ಲಿಯೇ. ಆ ಕಲಾವಿದರ ನ್ಯೂನತೆಗಳಿಗೇ ಹೆಚ್ಚು ಪ್ರಾಶಾಸ್ತ್ಯ ನೀಡುವುದಾದರೆ ಖಂಡಿತಾ ಅಂತಹ ಸ್ಪರ್ಧೆ ಯಾವ ಮಗುವಿನಲ್ಲಿಯೂ ಅಡಗಿರುವ ಸುಪ್ತ ಪ್ರತಿಭೆಯನ್ನೂ ಹೊರತರಲಾರದು. ಇಲ್ಲಿ ವೇದಿಕೆಯ ಪ್ರದರ್ಶನದ ನಂತರ ಪ್ರತಿ ತಂಡವೂ ಕೂಡ ವೇದಿಕೆಯ ಹಿಂಭಾಗಕ್ಕೆ ಬಂದಾಗ ನಿರಾಸೆಯ ಮುಖಭಾವವನ್ನು ಹೊತ್ತುಬರುತ್ತಿದ್ದುದು ಗಮನಿಸಬಹುದಾಗಿತ್ತು. ಕಾರ್ಯಕ್ರಮ ಕಲಾವಿದರ ಪ್ರತಿಭೆಗೆ, ಕಲೆಗೆ ಇಂಬು ನೀಡುವಂತಿರಬೇಕೇ ಹೊರತು ನಿರಾಶೆಯನ್ನಲ್ಲ.

ಸಂಬಂಧ ಪಡದವರಿಗೆ ಇದು ಸಾಮಾನ್ಯ ವಿಚಾರವೆನಿಸಬಹುದು. ಆದರೆ ಅನುಭವಿಗಳಿಗೆ ಸಾಧನೆಯ ಹಾದಿಯಲ್ಲಿ ಎದುರಾಗುವ ಅತೀ ದೊಡ್ಡ ಹಿಂಜರಿತ. ಟಿವಿ ರಿಯಾಲಿಟಿ ಶೋಗಳಲ್ಲಿ ಶಕ್ತಿ ಮೀರಿ ಕಲಾ ಪ್ರದರ್ಶನ ನೀಡುವ ಪುಟಾಣಿಗಳಿಂದ ಹಿಡಿದು ದೊಡ್ಡವರ ವರೆಗೂ ಇಂತಹ ತೀರ್ಪುಗಳು ಕಲಾವಿದರನ್ನು ಸೋಲು, ಅವಮಾನಗಳಿಂದಲೇ ಕುಸಿಯುವಂತೆ ಮಾಡುವುದನ್ನು ನೋಡಿದ್ದೇವೆ. ಕನ್ನಡದ ಹೆಮ್ಮೆಯ ಟಿವಿ ಚಾನೆಲ್ ನ ಸಂಗೀತ ಸ್ಪರ್ಧೆ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದ ಬೆನ್ನೆಲುಬಾಗಿದ್ದ ಎಸ್. ಪಿ. ಬಾಲಸುಬ್ರಮಣ್ಯಂ ಅವರು ತೀರ್ಪುಗಾರರು ಹೇಗೆ ಆ ಸ್ಥಾನವನ್ನು ಗುರುಸ್ಥಾನಕ್ಕೆ ಕೊಂಡೊಯ್ಯಬಹುದು ಎನ್ನುವುದಕ್ಕೆ ಶ್ರೇಷ್ಠ ಆದರ್ಶ.

ಅವರ ಹಿತ ಮಿತ ಪ್ರೀತಿ ತುಂಬಿದ ಮಾರ್ಗದರ್ಶನ ಎಷ್ಟೋ ಕಲಾವಿದರಿಗೆ ಸಾರ್ಥಕತೆಯನ್ನು ತಂದಿತ್ತಿದೆ. ಮುಂದಿನ ನಡೆಗೆ ಬೆಳಕು ತೋರಿದೆ. ಕಲಾ ಪ್ರೋತ್ಸಾಹಕ್ಕೆ ಇಂತಹ ಅದಮ್ಯ ಚೇತನಗಳು ಮುಂದಿನ ತಲೆಮಾರಿಗೆ ಅವಶ್ಯವಾಗಿ ಬೇಕಾಗಿವೆ. ತಮ್ಮ ಕಲಾ ಪ್ರತಿಭೆಗೆ ಆ ಸಾರ್ಥಕತೆಯೇ ಸ್ಫೂರ್ತಿಯಾಗಬೇಕೇ ಹೊರತು ಮುಂದಿನ ಬೆಳವಣಿಗೆಗೆ ಖಡಕ್ ಪ್ರತಿಕ್ರಿಯೆಗಳಾಗಲಿ, ತೇಜೋವಧೆಯ ಮಾತುಗಳಾಗಲೀ ಅಥವಾ ಯಾವ ಪ್ರಶಸ್ತಿ ಪುರಸ್ಕಾರಗಳಾಗಲಿ ಖಂಡಿತವಾಗಿಯೂ ಪ್ರಧಾನ ಪಾತ್ರ ವಹಿಸಲಾರವು. ಈ ನಿಟ್ಟಿನಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸುವ ಮನೋಭಾವ ಸಾಂಸ್ಕೃತಿಕ ರಾಯಭಾರಿಗಳಾಗಿ ಜವಾಬ್ದಾರಿ ತೆಗೆದುಕೊಂಡ ಪ್ರತಿಯೊಬ್ಬಕಲಾ ಪೋಷಕರಲ್ಲಿಯೂ ಇದ್ದು ಅವಕಾಶಗಳನ್ನು ಸೃಷ್ಟಿಸಿ ಪ್ರತಿಭೆಗಳನ್ನು ಬೆಳೆಸಬೇಕು.

ರಾಜ ಮಹಾರಾಜರ ಕಾಲದಲ್ಲಿಯೂ ಕೂಡ ಪ್ರತಿಯೊಬ್ಬ ಕಲಾವಿದನೂ ರಾಜಮನ್ನಣೆಯನ್ನು ಪಡೆಯುವ ಮೂಲಕ ತಮ್ಮ ಕಲಾ ಬದುಕನ್ನು ಪಾವನಗೊಳಿಸಿಕೊಳ್ಳುತ್ತಿದ್ದ. ಕಾಲ ಬದಲಾಗಿರಬಹುದು. ಆದರೆ ನೈಜ ಕಲಾವಿದನ ಅಂತರಂಗ ಬದಲಾಗಲಾರದು. ಅವನಿಗೆ ಬೇಕಾಗಿರುವುದು ಹಾರ, ತುರಾಯಿ, ಪಾರಿತೋಷಕವಲ್ಲ. ಅವನನ್ನು ಪ್ರೇರೇಪಿಸುವುದು ಸಹೃದಯಿ ಪ್ರೇಕ್ಷಕ ಬಂಧುಗಳ ಅಭಿಮಾನ ಪೂರ್ವಕ ಪ್ರೋತ್ಸಾಹವಾಗಿದೆ ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್‌ | ಬ್ಲಾಕ್‌ಮೇಲ್‌ಗಾಗಿ ವಿಡಿಯೋ ಮಾಡಿಕೊಂಡಿದ್ರಾ?; ನ್ಯಾಯಾಂಗ ತನಿಖೆಗೆ ಆಗ್ರಹ

ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕು....

ಶಿವಮೊಗ್ಗ | ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕಾರಣಿಗಳ ಬಳಿ ಅಧಿಕಾರವಿದ್ದು, ಪರಿಹರಿಸಬಹುದಾದ ಸಮಸ್ಯೆಗಳು ಸಾಕಷ್ಟಿವೆ. ಆದರೂ,...

ಫ್ರಿ ಬಸ್ | ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ; ಬಿಜೆಪಿ ಪ್ರಚಾರಕಿ, ನಟಿ ಶೃತಿ ವಿವಾದಾತ್ಮಕ ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ...

ಚಾಮರಾಜನಗರ | ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಬೆಂಬಲಿಸಿ: ಮಾನವ ಬಂಧುತ್ವ ವೇದಿಕೆ

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು...